2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಸ್ಪೋಟಕ ಮಾಹಿತಿಯೊಂದು ಹೊರಬಂದಿದೆ. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖ್ಯಾತ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್, ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಭಾರಿ ಅಕ್ರಮಗಳನ್ನು ಅಂಕಿಅಂಶಗಳ ಸಮೇತ ಬಿಚ್ಚಿಟ್ಟಿದ್ದಾರೆ.
ಪರಕಾಲ ಪ್ರಭಾಕರ್ ಅವರ ವಾದದ ಪ್ರಕಾರ, ಆಂಧ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಸುಮಾರು ಶೇ.4.16 ರಷ್ಟು ಮತಗಳು ರಾತ್ರಿ 11:45 ರಿಂದ ಬೆಳಗಿನ ಜಾವ 2 ಗಂಟೆಯ ನಡುವೆ ದಾಖಲಾಗಿವೆ. ಸುಮಾರು 3,500 ಮತಗಟ್ಟೆಗಳಲ್ಲಿ ಈ ಅಸಹಜ ಪ್ರಕ್ರಿಯೆ ನಡೆದಿದ್ದು, ಕೇವಲ ಮಧ್ಯರಾತ್ರಿಯ ನಂತರವೇ 17 ಲಕ್ಷಕ್ಕೂ ಅಧಿಕ ಮತಗಳು ಚಲಾವಣೆಯಾಗಿವೆ ಎಂಬ ಆಘಾತಕಾರಿ ಅಂಶವನ್ನು ಅವರು ಎತ್ತಿ ತೋರಿಸಿದ್ದಾರೆ. ರಾತ್ರಿ 8 ಗಂಟೆಯಿಂದ 2 ಗಂಟೆಯ ಅವಧಿಯಲ್ಲಿ ಒಟ್ಟು 52 ಲಕ್ಷ ಮತಗಳು ದಾಖಲಾಗಿದ್ದು, ಇವೆಲ್ಲವೂ ಎನ್‌ಡಿಎ ಮೈತ್ರಿಕೂಟದ ಪಾಲಾಗಿವೆ ಎಂದು ಅವರು ಆರೋಪಿಸಿದ್ದಾರೆ.

6 ಸೆಕೆಂಡಿಗೊಂದು ಮತದಾನ?
ಮತದಾನದ ವೇಗದ ಬಗ್ಗೆ ಪ್ರಶ್ನೆ ಎತ್ತಿರುವ ಪ್ರಭಾಕರ್, “ಇವಿಎಂ (EVM) ಯಂತ್ರವೊಂದು ಮರುಹೊಂದಾಣಿಕೆ ಆಗುವುದಕ್ಕೆ ಕನಿಷ್ಠ 14 ಸೆಕೆಂಡ್ ಬೇಕಾಗುತ್ತದೆ. ಹಾಗಿರುವಾಗ ಕೇವಲ 6 ರಿಂದ 20 ಸೆಕೆಂಡುಗಳ ಅಂತರದಲ್ಲಿ ಒಂದು ಮತ ಚಲಾಯಿಸಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ. ಒಬ್ಬ ಮತದಾರ ಮತಗಟ್ಟೆಯೊಳಗೆ ಪ್ರವೇಶಿಸಿ, ಸಹಿ ಮಾಡಿ, ಗುಂಡಿ ಒತ್ತಿ ಹೊರಬರಲು ಇಷ್ಟು ಕಡಿಮೆ ಸಮಯ ಸಾಕೇ? ಎಂದು ಕೇಳುವ ಮೂಲಕ ಇವಿಎಂ ತಿರುಚುವಿಕೆಯ ಕಡೆಗೆ ಬೊಟ್ಟು ಮಾಡಿದ್ದಾರೆ.

ಪಾರದರ್ಶಕತೆಯ ಕೊರತೆ
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಚುನಾವಣಾ ಆಯೋಗ ಫಾರ್ಮ್ 17ಸಿ (ಪ್ರತಿ ಬೂತ್‌ನಲ್ಲಿ ಚಲಾವಣೆಯಾದ ಮತಗಳ ವಿವರ) ಅಂಕಿಅಂಶಗಳನ್ನು ಸಾರ್ವಜನಿಕಗೊಳಿಸದಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. “ಪ್ರಜಾಪ್ರಭುತ್ವವನ್ನು ಕತ್ತಲೆಯಲ್ಲಿಡಲಾಗಿದೆ” ಎಂದು ಆರೋಪಿಸಿದ್ದಲ್ಲದೇ, ವಿವಿಪ್ಯಾಟ್ (VVPAT) ಚೀಟಿಗಳ ಸಂಪೂರ್ಣ ಎಣಿಕೆಗೆ ಆಗ್ರಹಿಸಿದ್ದಾರೆ. ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಷಿ ಅವರೂ ಈ ಅಸಹಜ ಅಂಕಿಅಂಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಚುನಾವಣಾ ದಾಖಲೆಗಳ ಸಮಗ್ರ ಆಡಿಟ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಚುನಾವಣೆ 2026 | ಹಿಮಂತ, ಮಮತಾ, ಸ್ಟಾಲಿನ್, ಪಿಣರಾಯಿ – ಯಾರಿಗೆ ಉಳಿಯಲಿದೆ ಅಧಿಕಾರ?
ಚುನಾವಣಾ ದಿನದಂದು ಸಂಜೆ 5 ಗಂಟೆಗೆ ಶೇ. 68.04 ರಷ್ಟಿದ್ದ ಮತದಾನದ ಪ್ರಮಾಣ, ನಾಲ್ಕು ದಿನಗಳ ನಂತರ ಅಂತಿಮವಾಗಿ ಶೇ.81.79ಕ್ಕೆ ಏರಿಕೆಯಾಗಿದ್ದು ಹೇಗೆ ಎನ್ನುವುದು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಬಾರಿ ವ್ಯತ್ಯಾಸ ಕಂಡುಬಂದಿರುವುದು ವ್ಯವಸ್ಥಿತವಾಗಿ ನಡೆದ ಚುನಾವಣಾ ಅಕ್ರಮದ ಸಂಕೇತ ಎಂದು ವಿರೋಧ ಪಕ್ಷಗಳು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಎನ್‌ಡಿಎ ಮೈತ್ರಿಕೂಟವು 175 ಸ್ಥಾನಗಳ ಪೈಕಿ 164 ಸ್ಥಾನಗಳನ್ನು ಗೆದ್ದು ಬೀಗಿತ್ತು.




