ʼನಫ್ರತ್ ಕೆ ಬಜಾರ್ ಮೆ ಮೊಹಬ್ಬತ್ ಕಿ ದುಕಾನ್ʼ (ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ) ಎಂಬ ವಾಕ್ಯಕ್ಕೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ರಾಜಕೀಯ ಬೆಳವಣಿಗೆಗೂ ಅವಿನಾಭಾವ ಸಂಬಂಧವಿದೆ. ಅವರೇ ಪರಿಚಯಿಸಿದ ಈ ʼಪ್ರೀತಿʼಯ ಸಂದೇಶ 2022ರಲ್ಲಿ ಆರಂಭವಾದ ಭಾರತ್ ಜೋಡೋ ಯಾತ್ರೆಯಿಂದ ಹಿಡಿದು, 2024ರ ಲೋಕಸಭೆ ಚುನಾವಣೆ ಪ್ರಚಾರ, ಸಂಸತ್ತಿನ ಭಾಷಣಗಳು ಹಾಗೂ ಸಾರ್ವಜನಿಕ ಸಭೆಗಳವರೆಗೆ ಸಾಗಿಬಂದಿದೆ. ಅವರು ಈ ಸಂದೇಶವನ್ನು ಪುನರುಚ್ಚರಿಸುತ್ತಲೇ ಇದ್ದಾರೆ. ಜತೆಗೆ ಅವರ ನಡವಳಿಕೆಯಲ್ಲೂ ಅದು ಪ್ರತಿಬಿಂಬಿಸುತ್ತದೆ. ಅದೇ ಸಂದೇಶಕ್ಕೆ ಮತ್ತೊಂದು ದೃಶ್ಯರೂಪದಂತಿದೆ ರಾಹುಲ್ ಹಾಗೂ ಮೊಹಮ್ಮದ್ ಇರ್ಫಾನ್ ಭೇಟಿ.
ಜಂತರ್ ಮಂತರ್‌ನಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ ದೇಶದ ಗಮನ ಸೆಳೆದಿದ್ದ ಇರ್ಫಾನ್, ದೆಹಲಿಯ ಕೊಳಗೇರಿ ಪ್ರದೇಶದಲ್ಲಿ ಬೆಳೆದ ಯುವಕ. ಅಸಂಘಟಿತ ಕಾರ್ಮಿಕರ ಬದುಕು, ಶಿಕ್ಷಣದ ಅಸಮಾನತೆ, ಆರೋಗ್ಯ ಸೇವೆಗಳ ಕೊರತೆ ಮತ್ತು ಬಡ ವಿದ್ಯಾರ್ಥಿಗಳ ಅವಕಾಶಗಳ ಬಗ್ಗೆ ಆತ ತಮ್ಮದೇ ಅನುಭವದ ಮೂಲಕ ಮಾತನಾಡಿದ್ದರು. ಅವರ ಮಾತುಗಳಲ್ಲಿ ವಯೋ ಸಹಯ ಆಕ್ರೋಶಕ್ಕಿಂತ ಸಂವಿಧಾನದ ಮೇಲಿನ ನಂಬಿಕೆ ಹೆಚ್ಚು ಕಾಣಿಸಿತ್ತು. ಅದಕ್ಕಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೊ ಲಕ್ಷಾಂತರ ಜನರನ್ನು ತಲುಪಿತ್ತು.



ಇದೀಗ ಇರ್ಫಾನ್ ಅವರನ್ನು ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ. ಭೇಟಿಯ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, “ಪರಿಸ್ಥಿತಿಗಳು ಇರ್ಫಾನ್‌ನ ಚಿಂತನೆಗೆ ಮಿತಿಯಾಗಿಲ್ಲ. ಸಂವಿಧಾನದ ಬಗ್ಗೆ ಅವರಿಗಿರುವ ಅರಿವು, ದೇಶವನ್ನು ನೋಡುವ ಅವರ ದೃಷ್ಟಿಕೋನ ಮತ್ತು ಕಲಿಯುವ ಹಂಬಲವೇ ಭಾರತದ ಅತಿದೊಡ್ಡ ಶಕ್ತಿ ಅದರ ಯುವಜನತೆ ಎಂಬುದನ್ನು ತೋರಿಸುತ್ತದೆ. ಇರ್ಫಾನ್‌ನಂತಹ ಲಕ್ಷಾಂತರ ಯುವಕರೇ ಭಾರತದ ನಿಜವಾದ ಆಶಾಕಿರಣ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ದೆಹಲಿಯ ವಿದ್ಯಾರ್ಥಿ ಚಳವಳಿಯಲ್ಲಿ ಸಿಕ್ಕ ʼಇರ್ಫಾನ್ ಹುಸೇನ್ʼ ಎಂಬ ʼಒರಟು ವಜ್ರʼ



ಈ ಮಾತುಗಳು ರಾಹುಲ್ ಗಾಂಧಿ ಹಲವು ವರ್ಷಗಳಿಂದ ಕಟ್ಟಲು ಪ್ರಯತ್ನಿಸುತ್ತಿರುವ ಪ್ರೀತಿಯ ಅಂಗಡಿಯ ತಳಪಾಯಕ್ಕೆ ಇನ್ನಷ್ಟು ಬಲ ನೀಡಿವೆ. ಅವರು ತಮ್ಮ ಭಾಷಣಗಳಲ್ಲಿ ಪದೇಪದೇ, “ದ್ವೇಷದ ವಿರುದ್ಧದ ಕೊಡಬಹುದಾದ ಉತ್ತರ ದ್ವೇಷವಲ್ಲ; ಪ್ರೀತಿಯೇ” ಎಂದು ಹೇಳುತ್ತಾ ಬಂದಿದ್ದಾರೆ. ಅದಕ್ಕಾಗಿಯೇ ಭಾರತ್ ಜೋಡೋ ಯಾತ್ರೆಯಲ್ಲಿ ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕರು, ಸಂತ್ರಸ್ತ ಕುಟುಂಬಗಳು, ಧಾರ್ಮಿಕ ಅಲ್ಪಸಂಖ್ಯಾತರು, ವಿವಿಧ ಸಮುದಾಯಗಳ ಜನರೊಂದಿಗೆ ಸಂವಾದ ನಡೆಸಿದ್ದರು. ಇಲ್ಲದವರ ಪರವಾಗಿ ನಿಂತಿದ್ದರು. ದೀನ ದಲಿತರೊಂದಿಗೆ ಬೆರೆತು ದೇಶ ಕಟ್ಟುವ ಹೊಸ ಪರಿಗೆ ನಾಂದಿ ಹಾಡಿದ್ದರು. ರಾಹುಲ್ ಅಂದ್ರೇನೇ ಒಬ್ಬ ಆಪ್ತ ಗೆಳೆಯ, ಅಕ್ಕರೆಯ ಅಣ್ಣ, ಧೈರ್ಯ ತುಂಬುವ ಅಪ್ಪನ ಹಾಗೆ ಎನ್ನುವುದು ಇಂದಿಗೂ ಅನೇಕ ಯುವ ಮನಸ್ಸುಗಳ ಅಭಿಪ್ರಾಯ.

ಎಲ್ಲದಕ್ಕೂ ಧರ್ಮವನ್ನೇ ಲೇಪಿಸುವ, ದ್ವೇಷದ ವಿಷಬೀಜ ಬಿತ್ತುವ, ಕೋಮು ಧ್ರುವೀಕರಣ, ವಿಭಜನೆಯನ್ನೇ ಬಂಡವಾಳವಾಗಿಸಿಕೊಂಡಿರುವವರು ಅವರನ್ನೊಮ್ಮೆ ನೋಡಿ ಕಲಿಯಬೇಕಿದೆ. ಈ ದೇಶದ ಮುಸ್ಲಿಮರನ್ನೆಲ್ಲ ಭಯೋತ್ಪಾದಕರು ಎಂದು ಬಿಂಬಿಸುವ ʼಪರಿವಾರʼದ ಕುತಂತ್ರದ ಮಧ್ಯೆ ಎಲ್ಲ ಧರ್ಮಗಳನ್ನ ಮಾನವ ಧರ್ಮದ ನೆರಳಿನಲ್ಲಿಯೇ ನೋಡುವ ರಾಹುಲ್ ನಿಜಕ್ಕೂ ಒಬ್ಬ ಜನನಾಯಕ.





