ದೆಹಲಿಯ ವಿದ್ಯಾರ್ಥಿ ಚಳವಳಿಯಲ್ಲಿ ಸಿಕ್ಕ ʼಇರ್ಫಾನ್‌ ಹುಸೇನ್ʼ ಎಂಬ ʼಒರಟು ವಜ್ರʼ

Date:

ಒಂದು ಪ್ರತಿಭಟನೆ ಕೆಲವೊಮ್ಮೆ ಸರ್ಕಾರಗಳನ್ನು ನಡುಗಿಸುತ್ತದೆ. ಕೆಲವೊಮ್ಮೆ ಹೊಸ ನಾಯಕರನ್ನು ಹುಟ್ಟಿಸುತ್ತದೆ. ಮತ್ತೆ ಕೆಲವೊಮ್ಮೆ, ಯಾವ ವೇದಿಕೆಯೂ ಹುಡುಕದ, ಯಾವ ರಾಜಕೀಯ ಪಕ್ಷವೂ ಬೆಳೆಸದ, ಯಾವ ವಿಶ್ವವಿದ್ಯಾಲಯವೂ ರೂಪಿಸದ ವ್ಯಕ್ತಿಯೊಬ್ಬನನ್ನು ದೇಶದ ಮುಂದೆ ತಂದು ನಿಲ್ಲಿಸುತ್ತದೆ. ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಐತಿಹಾಸಿಕ ಚಳವಳಿ ಅಂತಹದ್ದೇ ಒಂದು ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.

- Advertisement -

ಭಾರತದಲ್ಲಿ ಯಾರನ್ನಾದರೂ ತಿಳಿವಳಿಕೆ ಇರುವ ವ್ಯಕ್ತಿ, ವಿವೇಕವಂತ, ಬುದ್ಧಿವಂತೆ ಎಂದು ಒಪ್ಪಿಸಿಕೊಳ್ಳಬೇಕಾದರೆ ಕೆಲವು ಅನಧಿಕೃತ ಅರ್ಹತೆಗಳಿವೆ. ಅವ ಒಳ್ಳೆಯ ವಿಶ್ವವಿದ್ಯಾಲಯದ ಪದವೀಧರನಾಗಿರಬೇಕು. ಆಕೆಯ ಇಂಗ್ಲಿಷ್ ನಿರರ್ಗಳವಾಗಿರಬೇಕು. ಅವರು ದೊಡ್ಡ ಪುಸ್ತಕಗಳನ್ನು ಉಲ್ಲೇಖಿಸಬೇಕು. ಟಿವಿ ಚರ್ಚೆಗಳಲ್ಲಿ ಕಾಣಿಸಿಕೊಳ್ಳಬೇಕು. ಈ ಎಲ್ಲವೂ ಇಲ್ಲದ ಒಬ್ಬ ಸಾಮಾನ್ಯ ಯುವಕ/ಯುವತಿಯ ಮಾತನ್ನು ನಾವು ಸಾಮಾನ್ಯವಾಗಿ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಆದರೆ ದೆಹಲಿಯ ಜಂತರ್ ಮಂತರ್‌ ಆ ಅನಧಿಕೃತ ಅರ್ಹತೆಗಳನ್ನ ಸಲೀಸಾಗಿ ಮರೆತು ಒಪ್ಪಿಕೊಳ್ಳುವಂತ ಒಬ್ಬ ದೃಢಕಾಯ ಯುವಕನನ್ನು ಪರಿಚಯಿಸಿದೆ. ಅವರೇ ಇರ್ಫಾನ್ ಹುಸೇನ್.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಬ್ರೆಜಿಲ್‌ನಲ್ಲಿ ಒಂದೇ ಹುದ್ದೆಗೆ ಎರಡು ಬಾರಿ ಚುನಾವಣೆ: ಏನಿದು...

ಭಾರತಕ್ಕೂ ಎರಡನೇ ಸುತ್ತಿನ ಪದ್ಧತಿ ಅಗತ್ಯವಿದೆಯೇ ಎಂಬ ಚರ್ಚೆ ಆಗಿಂದಾಗ್ಗೆ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಲವು ಅಭ್ಯರ್ಥಿಗಳು ಕಣದಲ್ಲಿರುವಾಗ ಮತಗಳು ಹಂಚಿಹೋಗಿ, ಕೇವಲ ಶೇ 30 ಅಥವಾ 40ರಷ್ಟು ಮತ ಪಡೆದವರೂ ನಮ್ಮಲ್ಲಿ...

ಬೆಂಗಳೂರು ಪೌರಕಾರ್ಮಿಕರ ಶ್ವಾಸಕೋಶ ಹಿಂಡುತ್ತಿದೆ ಮಾಲಿನ್ಯ; BMTC ಸಿಬ್ಬಂದಿ,...

ಬೆಂಗಳೂರಿನಲ್ಲಿ ಮಾಲಿನ್ಯವು ಹೊಸ ತಂಬಾಕಾಗಿ ಪರಿಣಮಿಸಿದೆ. ಜನರ ಶ್ವಾಸಕೋಶವನ್ನು ಹಿಂಡುತ್ತಿದೆ. ಮಾಸ್ಕ್, ಕೈಗವಸು, ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಸೌಲಭ್ಯಗಳ ಕೊರತೆಗಳಿಂದಾಗಿ ಪೌರಕಾರ್ಮಿಕರು, ಬಿಎಂಟಿಸಿ ನೌಕರರು, ಸಂಚಾರ ಪೊಲೀಸರು ಹಾಗೂ ಕಟ್ಟಡ ಕಾರ್ಮಿಕರು...

ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್‌ ಹುಸೇನ್‌ ಅವರ ವೈರಲ್‌ ವಿಡಿಯೋ ಸಿಗುತ್ತದೆ. ಒಮ್ಮೆ ಚೆಕ್‌ ಮಾಡಿ ನೋಡಿ. ಅದರಲ್ಲಿ ಮೇಲ್ನೋಟಕ್ಕೆ ಆತ ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕನಂತೆ ಕಾಣಿಸುತ್ತಾರೆ. ಆದರೆ ಮಾತನಾಡಲು ಆರಂಭಿಸಿದ ಕೆಲವೇ ಕ್ಷಣಗಳಲ್ಲಿ, ಅವರೊಳಗೆ ಅಡಗಿರುವ ರಾಜಕೀಯ ಪ್ರಜ್ಞೆ, ಸಾಮಾಜಿಕ ಅರಿವು ಮತ್ತು ಪ್ರಜಾಪ್ರಭುತ್ವದ ಮೇಲಿನ ಬದ್ಧತೆ ನಿಮ್ಮನ್ನ ಖಂಡಿತ ಬೆರಗುಗೊಳಿಸುತ್ತದೆ. ರಾಜಕೀಯ ವಿಜ್ಞಾನ ಓದಿದ ವಿದ್ಯಾರ್ಥಿಯೊಬ್ಬನ ಭಾಷಣವನ್ನೇ ಕೇಳುತ್ತಿದ್ದೇವೆಯೇ ಎಂಬ ಭಾವನೆ ಮೂಡುತ್ತದೆ. ಇಲ್ಲೂ ಒಂದು ದೊಡ್ಡ ಅಚ್ಚರಿ ಇದೆ.

ಇರ್ಫಾನ್ ಯಾವುದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲ. ಶಾಲೆಗೇ ಸರಿಯಾಗಿ ಹೋಗಿಲ್ಲ. ದಿನಗೂಲಿ ಮಾಡಿ ಬದುಕುವ ಕುಟುಂಬದ ಮಗ. ದೆಹಲಿಯ ಹೊರವಲಯದ ಜೋಪಡಿಯೊಂದರಲ್ಲಿ ತಂದೆಯ ಜೊತೆ ವಾಸಿಸುತ್ತಾ, ರಸ್ತೆ ಬದಿಯಲ್ಲಿ ಐಸ್‌ ಮಾರುವ ಕೆಲಸ ಮಾಡುತ್ತಾರೆ. ಅವರ ಬದುಕನ್ನೇ ಒಂದು ವಿಶ್ವವಿದ್ಯಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಅವರ ಅನುಭವಗಳೇ ನಿತ್ಯದ ಪಾಠಗಳು. ಒಬ್ಬ ವ್ಯಕ್ತಿ ಭಾರತದಂತಹ ದೇಶದಲ್ಲಿ, ಮೂಲ ಸೌಕರ್ಯಗಳಿಗೂ ಪರಿತಪಿಸುವ ಕೌಟುಂಬಿಕ ಹಿನ್ನೆಲೆ ಹೊಂದಿರುವ ವ್ಯಕ್ತಿಯೊಬ್ಬ ಹೀಗೂ ವಿವೇಕವಂತನಾಗಬಹುದೇ ಎಂಬುದು ನಿಜಕ್ಕೂ ದಂಗುಬಡಿಸುತ್ತದೆ.

“ಪ್ರಜಾಪ್ರಭುತ್ವದಲ್ಲಿ ಅಹಂಕಾರ ಇರಬಾರದು. ಸಂವಾದ ಇರಬೇಕು. ಸಂವಾದದ ಬಾಗಿಲು ಎರಡೂ ಕಡೆಯಿಂದ ತೆರೆದಿರಬೇಕು” ಎಂದು ಹೇಳುವ ಇರ್ಫಾನ್‌ನ ತಿಳಿವಳಿಕೆ ಎಲ್ಲ ಎಲ್ಲೆಗಳನ್ನೂ ಮೀರಿದ್ದು ಎನಿಸುತ್ತದೆ. ವಿಡಯೋದಲ್ಲಿ ಅವರು, ಸೋನಂ ವಾಂಗ್ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸವನ್ನು ಬಲವಂತವಾಗಿ ಅಂತ್ಯಗೊಳಿಸಿದ ಕ್ರಮವನ್ನು ಉಲ್ಲೇಖಿಸುತ್ತಾ, ಸರ್ಕಾರ ಬಯಸಿದ್ದರೆ ಒಂದು ಎಳನೀರು ಕೊಟ್ಟು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಬಹುದಿತ್ತು ಆದರೆ, ಅದು ಹಾಗೆ ಮಾಡಲಿಲ್ಲ ಎಂದು ಹೇಳುತ್ತಾರೆ. ಇದು ಒಬ್ಬ ಪ್ರತಿಭಟನಾಕಾರನ ಆಕ್ರೋಶದಂತೆ ಕಾಣುವುದಿಲ್ಲ. ಅಧಿಕಾರ ಮತ್ತು ನಾಗರಿಕರ ನಡುವಿನ ಸಂಬಂಧ ಹೇಗಿರಬೇಕು ಎಂಬ ರಾಜಕೀಯ ತತ್ವವನ್ನೇ ಆತ ಮಂಡಿಸುತ್ತಿದ್ದರು. ಅದರಲ್ಲೂ ಸಂವಿಧಾನದ ಪೀಠಿಕೆಯಲ್ಲಿ ಬರುವ ವ್ಯಕ್ತಿಯ ಘನತೆ (Dignity of the Individual) ಎಂಬ ಪದವನ್ನು ಆತ ಪದೇ ಪದೇ ಉಲ್ಲೇಖಿಸುವ ರೀತಿ ಗಮನ ಸೆಳೆಯುತ್ತದೆ.

“ಸಂವಿಧಾನದಲ್ಲಿ ವ್ಯಕ್ತಿಯ ಘನತೆಯನ್ನು ಕಾಪಾಡುವುದಾಗಿ ನಾವು ಪ್ರತಿಜ್ಞೆ ಮಾಡಿದ್ದೇವೆ. ಇಪ್ಪತ್ತು ದಿನಗಳಿಂದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಉಪವಾಸ ಮಾಡುತ್ತಿದ್ದ ವ್ಯಕ್ತಿಯನ್ನು ಮಧ್ಯರಾತ್ರಿ ಎಳೆದುಕೊಂಡು ಹೋಗುವುದು ಆ ಘನತೆಗೆ ಧಕ್ಕೆ ತರುವ ಕೆಲಸವಲ್ಲವೇ?” ಎಂದು ಆತ ಪ್ರಶ್ನಿಸುತ್ತಾರೆ. ಆ ಪ್ರಶ್ನೆಯಲ್ಲಿ ರಾಜಕೀಯಕ್ಕಿಂತ ಹೆಚ್ಚು ಮಾನವೀಯತೆ ಕಾಣುತ್ತದೆ. ಇರ್ಫಾನ್‌ಗೆ ಸೋನಂ ವಾಂಗ್ಚುಕ್ ಕೇವಲ ಪರಿಸರ ಹೋರಾಟಗಾರರಲ್ಲ. ದೇಶಕ್ಕಾಗಿ ಕೆಲಸ ಮಾಡಿದ ವಿಜ್ಞಾನಿ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗ ಮಾಡಿದ ಶಿಕ್ಷಕ. ಅಂತಹ ವ್ಯಕ್ತಿಯನ್ನು ಅಪರಾಧಿಯಂತೆ ಬಂಧಿಸುವುದು, ಒಬ್ಬ ವ್ಯಕ್ತಿಯನ್ನು ಅವಮಾನಿಸುವುದು ಮಾತ್ರವಲ್ಲ; ಪ್ರಜಾಪ್ರಭುತ್ವದ ಮೌಲ್ಯವನ್ನೇ ಕುಗ್ಗಿಸುವುದು ಎಂಬುದು ಅವರ ವಾದ. ಇರ್ಫಾನ್ ಸರ್ಕಾರವನ್ನು ಟೀಕಿಸುತ್ತಾರೆ, ಪೊಲೀಸರ ಕ್ರಮವನ್ನೂ ಪ್ರಶ್ನಿಸುತ್ತಾರೆ. ಆದರೆ ಎಲ್ಲಿಯೂ ದ್ವೇಷದ ಭಾಷೆ ಬಳಸುವುದಿಲ್ಲ. “ಅಸಮ್ಮತಿ ಅಪರಾಧವಲ್ಲ. ನಮ್ಮ ಸಂವಿಧಾನವೇ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಟ್ಟಿದೆ. ಯಾರಾದರೂ ನಮ್ಮೊಂದಿಗೆ ಒಪ್ಪದಿದ್ದ ಮಾತ್ರಕ್ಕೆ ಅವರ ವಿರೋಧವನ್ನು ಅಪರಾಧ ಎನ್ನಲಾಗಲ್ಲ. ಅವರೊಂದಿಗೆ ಮಾತುಕತೆ ನಡೆಸಬೇಕು, ಅದೇ ಸಂವಿಧಾನ” ಎಂದು ಹೇಳುತ್ತಾರೆ. ಇದು ಇಂದಿನ ರಾಜಕೀಯ ವಾತಾವರಣದಲ್ಲಿ ಅಪರೂಪದ ಧ್ವನಿ.

ಇನ್ನೂ ಒಂದು ವಿಚಾರ ಆಶ್ಚರ್ಯ ಹುಟ್ಟಿಸುತ್ತದೆ. ಮಾತನಾಡುವ ಮಧ್ಯೆ ಇರ್ಫಾನ್ ಏಕಾಏಕಿ ಖ್ಯಾತ ಕವಿ ಗೋಪಾಲದಾಸ್ ‘ನೀರಜ್’ ಅವರ ಸಾಲುಗಳನ್ನು ಉಲ್ಲೇಖಿಸುತ್ತಾರೆ. ಕನಸುಗಳು ಒಂದೊಂದಾಗಿ ಕುಸಿಯುತ್ತಿರುವ ಯುವಜನರ ಹತಾಶೆಯನ್ನು ವಿವರಿಸಲು ಆ ಕವಿತೆಯನ್ನು ರೂಪಕವಾಗಿ ಬಳಸುತ್ತಾರೆ. ಕವಿತೆಯ ಸಾಲುಗಳನ್ನು ಹೇಳಿದ ನಂತರ, “ಇದು ಕೇವಲ ಒಬ್ಬ ಕವಿಯ ದುಃಖವಲ್ಲ, ಅವಕಾಶಗಳಿಗಾಗಿ ಕಾಯುತ್ತಾ ಜೀವನವನ್ನೇ ಕಳೆದುಕೊಳ್ಳುತ್ತಿರುವ ಯುವಕರ ನೋವು” ಎಂದು ವಿವರಿಸುತ್ತಾರೆ.

ಹಾಗಾದರೆ, ಶಾಲೆಯನ್ನೇ ಸರಿಯಾಗಿ ಓದದ ಈ ಯುವಕನಿಗೆ ಇಷ್ಟೊಂದು ರಾಜಕೀಯ ಅರಿವು ಹೇಗೆ ಬಂತು? ಸಂವಿಧಾನದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ, ಸಾಮಾಜಿಕ ನ್ಯಾಯದ ಬಗ್ಗೆ ಅವರು ಕಲಿತದ್ದು ಎಲ್ಲಿ? ಹಿಂದಿಯ ಲಲ್ಲನ್‌ ಟಾಪ್ ಮಾಧ್ಯಮ ತಂಡ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕ್ಯಾಮೆರಾ ಹಿಡಿದು ಇರ್ಫಾನ್‌ ಮನೆ ಹುಡುಕಿಕೊಂಡು ಹೊರಟಿತು…

ಇರ್ಫಾನ್ ಮಾತನಾಡಿದ್ದ ವಿಡಿಯೋ ವೈರಲ್ ಆದ ಬಳಿಕ ಇಷ್ಟೊಂದು ಪ್ರಬುದ್ಧವಾಗಿ ಮಾತನಾಡುವ ಈ ಯುವಕ ಯಾರು? ರಾಜಕೀಯ ವಿಜ್ಞಾನ ವಿದ್ಯಾರ್ಥಿಯೇ? ಯಾವುದಾದರೂ ಸಂಘಟನೆಯ ತರಬೇತಿ ಪಡೆದ ಕಾರ್ಯಕರ್ತನೇ? ಎಂದು ಹಲವರು ಕೇಳಿದ್ದರೆ, ಭಾಷಣಗಳನ್ನು ಕಂಠಪಾಠ ಮಾಡಿಕೊಂಡು ಬಂದವನೇ ಇರಬೇಕು? ಎಂದು ಹಲವರು ಮೂದಲಿಸಿದ್ದರು.

ಲಲ್ಲನ್‌ ಟಾಪ್ ದೆಹಲಿಯ ಝಗಮಗಿಸುವ ರಸ್ತೆಗಳನ್ನ ಬಿಟ್ಟು ನಗರದ ಅಂಚಿನತ್ತ ಪ್ರಯಾಣ ಬೆಳೆಸಿತು. ದೊಡ್ಡ ಅಪಾರ್ಟ್‌ಮೆಂಟ್‌ಗಳು, ಕಚೇರಿಗಳು, ಅಗಲ ರಸ್ತೆಗಳು ಹಿಂದೆ ಸರಿಯುತ್ತಿದ್ದಂತೆ ಕಿರಿದಾದ ಬೀದಿಗಳು, ಟಿನ್‌ಶೀಟ್‌ಗಳಿಂದ ಮುಚ್ಚಿದ ಮನೆಗಳು, ಮಣ್ಣಿನ ದಾರಿಗಳು ಕಾಣಿಸಿಕೊಳ್ಳತೊಡಗಿದವು. ಅಲ್ಲೇ ಒಂದು ಪುಟ್ಟ ಪ್ಲಾಸ್ಟರಿಂಗ್‌ ಕೂಡ ಮಾಡದ ಮನೆ ಇರ್ಫಾನ್ ಅವರದ್ದು. ಮನೆಗೆ ಟಾರ್ಪಲಿನ್‌ನ ಹೊದಿಕೆ, ಸಣ್ಣ ಪುಟ್ಟ ಸಿಮೆಂಟ್‌ ಚೀಲಗಳ ಕಿಟಕಿ. ಬದುಕಿಗೆ ಬೇಕಾದ ಮೂರು ಮತ್ತೊಂದು ವಸ್ತುಗಳಷ್ಟೇ ಅಲ್ಲಿದ್ದವು. ಅವರ ಆರ್ಥಿಕ ಪರಿಸ್ಥಿತಿಯನ್ನ ಆ ಮನೆ ಸ್ಪಷ್ಟವಾಗಿ ತೋರಿಸುತ್ತಿತ್ತು.

ಇರ್ಫಾನ್ ತಂದೆ ದಿನಗೂಲಿ ಕಾರ್ಮಿಕ. ಕುಟುಂಬದ ಬದುಕು ದಿನದ ದುಡಿಮೆಯ ಮೇಲೆ ನಿಂತಿದೆ. ಇರ್ಫಾನ್ ಕೂಡ ರಸ್ತೆ ಬದಿಯಲ್ಲಿ ಐಸ್ ಮಾರುತ್ತಾರೆ. ಒಂದು ದಿನ ಕೆಲಸ ಮಾಡಿದರೆ ಆ ದಿನದ ಊಟ. ಇಲ್ಲದಿದ್ದರೆ ಮತ್ತೊಂದು ದಿನಕ್ಕಾಗಿ ಕಾಯುವ ಜೀವನ. ಆದರೆ ಈ ಬಡತನ ಅವರನ್ನು ಕುಗ್ಗಿಸಿಲ್ಲ. ಸಮಾಜವನ್ನು ಅರ್ಥಮಾಡಿಕೊಳ್ಳುವ ಕಣ್ಣು ಕೊಟ್ಟಿದೆ.

ಸಂದರ್ಶನದ ವೇಳೆ ಪತ್ರಕರ್ತರು ನೇರವಾಗಿ ಒಂದು ಪ್ರಶ್ನೆ ಕೇಳುತ್ತಾರೆ.

“ನೀನು ಎಲ್ಲಿಯವರೆಗೆ ಓದಿದ್ದೀಯ?”

ಇದಕ್ಕೆ ಇರ್ಫಾನ್‌, ʼನಾನು ಸರಿಯಾಗಿ ಓದಿಲ್ಲ.ʼ

ಅಷ್ಟೇ. ಒಂದು ಕ್ಷಣ ಸಂದರ್ಶನ ನಡೆಸುತ್ತಿದ್ದವರು ಮೌನವಾಗುತ್ತಾರೆ. ಕೆಲವೇ ದಿನಗಳ ಹಿಂದೆ ಜಂತರ್‌ ಮಂತರ್‌ನಲ್ಲಿ ಇದೇ ಯುವಕ ಭಾರತೀಯ ಸಂವಿಧಾನದ ಪೀಠಿಕೆಯನ್ನು ಉಲ್ಲೇಖಿಸಿದ್ದ. “ವ್ಯಕ್ತಿಯ ಘನತೆ”, “ಅಭಿವ್ಯಕ್ತಿ ಸ್ವಾತಂತ್ರ್ಯ”, “ಪ್ರಜಾಪ್ರಭುತ್ವದಲ್ಲಿ ಸಂವಾದ” ಎಂಬ ಪರಿಕಲ್ಪನೆಗಳ ಬಗ್ಗೆ ಅತ್ಯಂತ ಸಹಜವಾಗಿ ಮಾತನಾಡಿದ್ದ. ಇಂತಹ ಭಾಷೆಯನ್ನು ಬಳಸುವ ವ್ಯಕ್ತಿ ಶಾಲೆಗೇ ಸರಿಯಾಗಿ ಹೋಗಿಲ್ಲ ಎಂದರೆ ಅದನ್ನು ನಂಬುವುದು ಕಷ್ಟ!

ಹಾಗಾದರೆ, ಸಂವಿಧಾನದ ಬಗ್ಗೆ ನಿಮಗೆ ತಿಳಿದದ್ದು ಹೇಗೆ? ಅದಕ್ಕೂ ಉತ್ತರ ಸರಳವೇ.

ಇರ್ಫಾನ್ ತನ್ನ ಹಳೆಯ ಮೊಬೈಲ್ ಫೋನ್ ತೋರಿಸುತ್ತಾರೆ. “ಇದೇ ನನ್ನ ಶಾಲೆ” ಎನ್ನುವಂತೆ.

ಗೂಗಲ್, ಯೂಟ್ಯೂಬ್, ಸಾಮಾಜಿಕ ಜಾಲತಾಣಗಳು… ಅವರಿಗೆ ಇವೇ ವಿಶ್ವವಿದ್ಯಾಲಯ. ಹುಡುಕಲು ಟೈಪ್ ಮಾಡುವುದೂ ಕೂಡ ಸರಿಯಾಗಿ ಬರುವುದಿಲ್ಲ. ವಾಯ್ಸ್‌ ಮೂಲಕ ಪ್ರಶ್ನೆ ಕೇಳುತ್ತಾರೆ. ಒಂದು ವಿಷಯ ಅರ್ಥವಾಗದಿದ್ದರೆ ಮತ್ತೆ ಕೇಳುತ್ತಾರೆ. ಒಂದು ಭಾಷಣ ಇಷ್ಟವಾದರೆ ಹತ್ತಾರು ಬಾರಿ ನೋಡುತ್ತಾರೆ. ಸಂವಿಧಾನದ ಬಗ್ಗೆ ಕೇಳುತ್ತಾರೆ. ಕಾರ್ಮಿಕರ ಹಕ್ಕುಗಳ ಬಗ್ಗೆ ಕೇಳುತ್ತಾರೆ. ರೈತರ ಹೋರಾಟದ ಬಗ್ಗೆ ಕೇಳುತ್ತಾರೆ. ಅಂಬೇಡ್ಕರ್ ಭಾಷಣಗಳನ್ನೂ ಕೇಳುತ್ತಾರೆ. ಭಗತ್‌ಸಿಂಗ್ ಬರಹಗಳ ಬಗ್ಗೆಯೂ ತಿಳಿದುಕೊಳ್ಳುತ್ತಾರೆ. ಕವಿತೆಗಳನ್ನು ಕೇಳುತ್ತಾರೆ. ಹೀಗೆ ಕೇಳುತ್ತಾ ನೋಡುತ್ತಾ, ತನ್ನದೇ ಆದ ರಾಜಕೀಯ ಪ್ರಜ್ಞೆಯನ್ನು ರೂಪಿಸಿಕೊಳ್ಳುತ್ತಾರೆ. ಅವರ ಮಾತುಗಳಲ್ಲಿ ಒಂದು ಕೃತಕತೆಯೂ ಕಾಣಿಸದಿರುವುದಕ್ಕೆ ಇದೇ ಕಾರಣ. ಬದುಕಿನಲ್ಲಿ ತಾನೇ ಅರ್ಥ ಮಾಡಿಕೊಂಡ ವಿಚಾರಗಳನ್ನು ತನ್ನದೇ ಭಾಷೆಯಲ್ಲಿ ವ್ಯಕ್ತಪಡಿಸುತ್ತಾರೆ. ಬಹುಶಃ ಇದೇ ಕಾರಣಕ್ಕೆ ಇರ್ಫಾನ್‌ ಅವರ ಮಾತುಗಳು ಯುವಜನರನ್ನು ಇಷ್ಟು ಆಳವಾಗಿ ತಟ್ಟಿವೆ.

ಇರ್ಫಾನ್‌ ತಮ್ಮ ಸುತ್ತಲಿನ ಪ್ರದೇಶದ ಬಗ್ಗೆಯೂ ಮಾತನಾಡುತ್ತಾರೆ. ತಾವು ವಾಸಿಸುವ ಜೋಪಡಿ ಪ್ರದೇಶದಲ್ಲಿ ಸಾವಿರಾರು ಕುಟುಂಬಗಳು ಇನ್ನೂ ಶುದ್ಧ ಕುಡಿಯುವ ನೀರು, ಸಮರ್ಪಕ ಚರಂಡಿ, ಆರೋಗ್ಯಕರ ವಾತಾವರಣ ಮತ್ತು ಗೌರವಯುತ ವಸತಿ ಇಲ್ಲದೆ ಬದುಕುತ್ತಿರುವುದನ್ನು ಅವರು ವಿವರಿಸುತ್ತಾರೆ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಬೇಸಿಗೆಯಲ್ಲಿ ಟಿನ್‌ ಛಾವಣಿಯ ಕೆಳಗೆ ಬದುಕುವುದೇ ಕಷ್ಟವಾಗುತ್ತದೆ. ಅನೇಕ ಮಕ್ಕಳು ಇಂತಹ ಪರಿಸ್ಥಿತಿಯಲ್ಲೇ ಬೆಳೆದು ದೊಡ್ಡವರಾಗಬೇಕು. ದೇಶದ ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಭಾಷಣಗಳು ನಡೆಯುತ್ತವೆ. ಆದರೆ ಆ ಅಭಿವೃದ್ಧಿ ಇನ್ನೂ ತಮ್ಮ ಜೋಪಡಿಗಳ ಬಾಗಿಲಿಗೆ ತಲುಪಿಲ್ಲ ಎಂದು ಹೇಳುತ್ತಾರೆ.

ಭಾರತದ ರಾಜಕೀಯದಲ್ಲಿ ಸಾಮಾನ್ಯವಾಗಿ ಎರಡು ಬಗೆಯ ನಾಯಕರು ಕಾಣಸಿಗುತ್ತಾರೆ. ಚುನಾವಣೆಗೆ ಸ್ಪರ್ಧಿಸಿಕೊಂಡು, ಗೆದ್ದು, ಗೆಲ್ಲಲು ಸುರಿದಿದ್ದ ಹಣವನ್ನ ವಾಪಸ್‌ ಸಂಪಾದಿಸುವ ಮಂದಿ, ಇನ್ನೊಬ್ಬರು ನೇರವಾಗಿ ಜನರ ಬದುಕಿನಿಂದ ಹೊರಬರುವವರು. ಇರ್ಫಾನ್ ಎರಡನೇ ಸಾಲಿಗೆ ಸೇರಿದ ಯುವಕ. ಅವರಿಗೆ ರಾಜಕೀಯವೆಂದರೆ ಪ್ರತಿದಿನದ ಬದುಕಿನ ಅನುಭವ. ಅದಕ್ಕಾಗಿಯೇ ಆತ ಮಾತನಾಡುವಾಗ, ನಿರುದ್ಯೋಗ, ಶಿಕ್ಷಣ, ಕಾರ್ಮಿಕರ ಬದುಕು, ಸಂವಿಧಾನ, ಪ್ರಜಾಪ್ರಭುತ್ವ… ಇವೆಲ್ಲವೂ ಪ್ರತ್ಯೇಕ ವಿಷಯಗಳಾಗಿ ಬರುವುದಿಲ್ಲ. ಒಂದೇ ಜೀವನದ ಬೇರೆ ಬೇರೆ ಮುಖಗಳಾಗಿ ಕಾಣಿಸುತ್ತವೆ.

“ಸಂವಿಧಾನ ಎಲ್ಲರಿಗೂ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ, ರಾಜಕೀಯ ನ್ಯಾಯ, ಸಮಾನ ಅವಕಾಶ ಮತ್ತು ವ್ಯಕ್ತಿಯ ಘನತೆಯ ಭರವಸೆ ನೀಡಿದೆ. ಹಾಗಿದ್ದರೆ ಇಷ್ಟು ದೊಡ್ಡ ಜನಸಂಖ್ಯೆ ಇನ್ನೂ ಅಮಾನವೀಯ ಬದುಕು ಯಾಕೆ ಬದುಕುತ್ತಿದೆ? ದೇಶದ ಆರ್ಥಿಕ ಬೆಳವಣಿಗೆಯ ಬಗ್ಗೆ ಮಾತನಾಡುವವರಿಗೂ ಆತ ಸವಾಲು ಹಾಕುತ್ತಾರೆ. “ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯೆಂದು ನಾವು ಹೆಮ್ಮೆಪಡುತ್ತೇವೆ. ಆದರೆ ಅದೇ ದೇಶದಲ್ಲಿ ಲಕ್ಷಾಂತರ ಜನರಿಗೆ ಕನಿಷ್ಠ ಮಾನವೀಯ ಬದುಕು ಕೂಡ ಸಿಕ್ಕಿಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ಕಾರ್ಮಿಕ ಕಾನೂನು. ಒಂದೊಂದು ಕಡೆ ಒಂದೊಂದು ಕೂಲಿ. ಕಾನೂನಿನ ಮುಂದೆ ಎಲ್ಲರೂ ಸಮಾನ ಎಂದು ಹೇಳುತ್ತೇವೆ; ಆದರೆ ಬದುಕಿನಲ್ಲಿ ಸಮಾನತೆ ಎಲ್ಲಿದೆ?” ಎಂದು ಪ್ರಶ್ನಿಸುತ್ತಾರವರು.

ಇರ್ಫಾನ್‌ ಹುಸೇನ್‌ ಒಬ್ಬ ವ್ಯಕ್ತಿ ಮಾತ್ರವಲ್ಲ. ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ನಾವೇ ಕಟ್ಟಿಕೊಂಡಿರುವ ಕೆಲ ಪೂರ್ವಗ್ರಹಗಳಿಗೆ ಎದುರಾಗಿರುವ ಪ್ರಶ್ನೆ. ಭಾರತದ ಯುವಜನರು ರಾಜಕೀಯದಿಂದ ದೂರವಾಗಿದ್ದಾರೆ ಎನ್ನುವುದು ಬಹುಶಃ ತಪ್ಪು ಕಲ್ಪನೆ. ಅವರು ರಾಜಕೀಯದ ಬಗ್ಗೆ ಯೋಚಿಸುತ್ತಿಲ್ಲ ಎಂದಲ್ಲ; ಬದಲಾಗಿ, ರಾಜಕೀಯವನ್ನು ನೋಡುವ ಅವರ ದೃಷ್ಟಿಕೋನ ಬದಲಾಗಿದೆ ಎಂದರ್ಥ. ಉದ್ಯೋಗ, ಶಿಕ್ಷಣ, ಗೌರವ, ಸಂವಿಧಾನ, ಸಮಾನತೆ… ಇವು ಅವರ ರಾಜಕೀಯದ ವಿಷಯಗಳು. ಅವಕ್ಕೆ ಧ್ವನಿ ಸಿಕ್ಕಾಗ, ಜಂತರ್‌ ಮಂತರ್‌ಗಳಂತ ಜಾಗಗಳೂ ತುಂಬುತ್ತವೆ, ಇರ್ಫಾನ್‌ರಂತಹ ಯುವಕರೂ ದೇಶದ ಗಮನ ಸೆಳೆಯುತ್ತಾರೆ. ಪ್ರಜಾಪ್ರಭುತ್ವದ ದೊಡ್ಡ ಸೌಂದರ್ಯ ಇದೇ ಇರಬೇಕು.. ಕೆಲವೊಮ್ಮೆ ಅಧಿಕಾರಸ್ಥ ಬಂಗಲೆಗಳಲ್ಲಿ ಹುಟ್ಟದ ಧ್ವನಿಗಳೇ ಇತಿಹಾಸದ ಪುಟಗಳಲ್ಲಿ ಹೆಚ್ಚು ಕಾಲ ಪ್ರತಿಧ್ವನಿಸುತ್ತವೆ.

ಬಹುಶಃ, ಇರ್ಫಾನ್‌ ಹುಸೇನ್‌ ಕೂಡ ಅಂತಹ ಧ್ವನಿಯಾಗುವ ಸಾಧ್ಯತೆಯನ್ನು ತೋರಿಸುತ್ತಿರುವ ಮತ್ತೊಬ್ಬ ಸಾಮಾನ್ಯ ಭಾರತೀಯ ಯುವಕ. ಆ ಸಾಧ್ಯತೆಯನ್ನು ಈ ದೇಶ ಯಾವ ರೂಪದಲ್ಲಿ ಸ್ವೀಕರಿಸುತ್ತದೆ ಎಂಬುದನ್ನು ಮಾತ್ರ ಕಾಲವೇ ಉತ್ತರಿಸಬೇಕು.

WhatsApp Image 2025 05 16 at 6.54.26 PM
Sub Editor at Eedina.com | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಎಸ್.ವಿ ಸಂಕನೂರ ಜಯಭೇರಿ

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಪಶ್ಚಿಮ...

ಯುಪಿ ಚುನಾವಣೆ | ಮತದಾರರ ಮನಗೆಲ್ಲಲು ಯೋಗಿ ಸಂಪುಟದ ಮೆಗಾ ಪ್ಲ್ಯಾನ್; ಹಸು ಖರೀದಿಗೆ ಸಬ್ಸಿಡಿ, ಉಚಿತ ಕೋಳಿ ಮರಿ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ (2027ರ ಫೆಬ್ರವರಿ–ಮಾರ್ಚ್‌ನಲ್ಲಿ ನಡೆಯುವ ನಿರೀಕ್ಷೆಯಿದೆ)...

ಬ್ರೆಜಿಲ್‌ ಚುನಾವಣೆ | ಸೋಲುಂಡ ಬೆನ್ನಲ್ಲೇ‌ ಪ್ಲೇವಿಯೋ ಬೊಲ್ಸೊನಾರೊ ಅಮೆರಿಕಗೆ ಪಲಾಯನ!

ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೊಲ್ಸೊನಾರೊ ಅವರ ಪುತ್ರ, ಹಾಲಿ ಸೆನೆಟರ್...

ಕಲಬುರಗಿ | ಎಸ್ಐಆರ್ ಅಂತಿಮ ಪಟ್ಟಿ ಪ್ರಕಟ: ಜಿಲ್ಲೆಯಲ್ಲಿ 18,94,144 ಮತದಾರರು:

ರಾಜ್ಯದಲ್ಲಿ ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್ಐಆರ್) ಚುನಾವಣಾ ಆಯೋಗದ...