ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ರಾಜ್ಯಾದ್ಯಂತ ನಡೆಯುತ್ತಿರುವ ಸಂದರ್ಭದಲ್ಲಿ, ಚುನಾವಣಾ ಆಯೋಗದ ಉದ್ದೇಶ ಮತದಾರರ ಪಟ್ಟಿಯನ್ನು ನಿಖರಗೊಳಿಸುವುದಾದರೂ, ಅದರ ಅನುಷ್ಠಾನದ ಹಂತದಲ್ಲಿ ಅನೇಕ ಗೊಂದಲಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ಎನ್ಯುಮರೇಷನ್ ಫಾರಂ ಭರ್ತಿ ಮಾಡುವ ವೇಳೆ ‘ಸಂಬಂಧ’ (Relationship) ಆಧಾರಿತ ಮಾಹಿತಿ ನೀಡಬೇಕಾಗಿರುವುದು ಅನೇಕ ಮತದಾರರಿಗೆ ಸಂಕೀರ್ಣ ಸಮಸ್ಯೆಯಾಗಿ ಪರಿಣಮಿಸಿದೆ.
ಕಾಗದದ ಮೇಲಿನ ನಿಯಮಗಳು ಸರಳವಾಗಿ ಕಂಡರೂ, ಜೀವನದ ನೈಜ ಪರಿಸ್ಥಿತಿಗಳು ಅದಕ್ಕಿಂತ ಭಿನ್ನವಾಗಿರುತ್ತವೆ. ಪ್ರತಿಯೊಬ್ಬರ ಕುಟುಂಬದ ಇತಿಹಾಸ, ಮತದಾನದ ಹಿನ್ನೆಲೆ, ವಾಸಸ್ಥಳ ಬದಲಾವಣೆ, ಉದ್ಯೋಗದ ಸ್ವರೂಪ, ಕುಟುಂಬದ ರಚನೆ-ಇವೆಲ್ಲವೂ ವಿಭಿನ್ನವಾಗಿರುವುದರಿಂದ ಒಂದೇ ಮಾದರಿಯ ನಿಯಮ ಎಲ್ಲರಿಗೂ ಅನ್ವಯಿಸುವುದಿಲ್ಲ. ಈ ಕಾರಣದಿಂದಲೇ ಅನೇಕ ಅಪರೂಪದ ಪ್ರಕರಣಗಳಲ್ಲಿ ಬಿಎಲ್ಒಗಳಿಗೂ ಸ್ಪಷ್ಟ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಈ ಗೊಂದಲಕ್ಕೆ ಜೀವಂತ ಉದಾಹರಣೆಯಾಗಿ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿರುವ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಯೊಬ್ಬರ ಪ್ರಕರಣ ಗಮನ ಸೆಳೆಯುತ್ತದೆ. ಅವರು ಮೂಲತಃ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯವರು. ದೇಶಕ್ಕಾಗಿ ಹಲವು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅವರು, ಸೇವಾ ಅವಧಿಯ ನಂತರವೇ ನಾಗರಿಕ ಬದುಕಿನಲ್ಲಿ ನೆಲೆಸಿದ್ದಾರೆ.
ಅವರ ಜೀವನದ ವಿಶೇಷತೆ ಏನೆಂದರೆ, ಸೇನಾ ಸೇವೆಯಲ್ಲಿದ್ದ ಕಾರಣ ನಿವೃತ್ತಿಯಾಗುವವರೆಗೆ ಅವರು ಒಮ್ಮೆಯೂ ಮತದಾನ ಮಾಡಿರಲಿಲ್ಲ. ನಿವೃತ್ತಿಯ ನಂತರ ಮೈಸೂರಿನಲ್ಲಿ ವಾಸಿಸುವಾಗ ಮೊದಲ ಬಾರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ಮತದಾನ ಮಾಡಿದ್ದರು. ನಂತರ ಹುಣಸೂರಿಗೆ ಸ್ಥಳಾಂತರವಾದಾಗ ತಮ್ಮ ಮತದಾರರ ಗುರುತಿನ ಚೀಟಿಯ ವಿಳಾಸವನ್ನೂ ಅಲ್ಲಿಗೆ ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಪ್ರಸ್ತುತ ಅವರು ಮಾನ್ಯ ಮತದಾರರಾಗಿದ್ದು, ಎಪಿಕ್ (EPIC) ಸಂಖ್ಯೆಯೂ ಹೊಂದಿದ್ದಾರೆ.
ಆದರೆ SIR ಎನ್ಯುಮರೇಷನ್ ಫಾರಂ ಭರ್ತಿ ಮಾಡುವ ಹಂತದಲ್ಲಿ ಅವರ ಮುಂದೆ ಅನಿರೀಕ್ಷಿತ ಸಮಸ್ಯೆ ಎದುರಾಗಿದೆ. ಕಾರಣ, 2002ರ ಹಿಂದಿನ ಮತದಾರರ ದಾಖಲೆಗಳಲ್ಲಿ ಅವರ ಹೆಸರೇ ಇಲ್ಲ. ಅಷ್ಟೇ ಅಲ್ಲ, ಅವರ ಕುಟುಂಬದ ಬಹುತೇಕ ಸದಸ್ಯರೂ ಅಂದಿನವರೆಗೆ ಮತದಾರರ ಪಟ್ಟಿಯಲ್ಲಿ ಇರಲಿಲ್ಲ.
ಅವರ ಕುಟುಂಬದಲ್ಲಿ ಐದು ಮಂದಿ ಸಹೋದರರು. ಅವರಲ್ಲಿ ಒಬ್ಬ ಹಿರಿಯ ಸಹೋದರರನ್ನು ಹೊರತುಪಡಿಸಿದರೆ ಉಳಿದ ಯಾರೂ ಮತದಾನ ಮಾಡಿರಲಿಲ್ಲ. ಇನ್ನೂ ಅಚ್ಚರಿಯ ಸಂಗತಿ ಎಂದರೆ, ಈಗ 99 ವರ್ಷ ವಯಸ್ಸಿನ ಅವರ ತಾಯಿಯೂ ತಮ್ಮ ಜೀವನದಲ್ಲಿ ಒಮ್ಮೆಯೂ ಮತದಾನ ಮಾಡಿಲ್ಲ. ತಂದೆ ಹಾಗೂ ಅಜ್ಜ ಕೂಡ ಮತದಾರರಾಗಿರಲಿಲ್ಲ ಎನ್ನಲಾಗಿದೆ. ಬಹುಶಃ ಅವರ ಜೀವನದ ಪರಿಸ್ಥಿತಿಗಳು ಅಥವಾ ಕಾಲಘಟ್ಟದ ಕಾರಣದಿಂದ ಅವರು ಮತದಾರರ ಪಟ್ಟಿಯಲ್ಲಿ ಸೇರಿರಲಿಲ್ಲ ಎಂಬುದು ಕುಟುಂಬದ ಅಭಿಪ್ರಾಯ.
ಇದರಿಂದ SIR ಪ್ರಕ್ರಿಯೆಯಲ್ಲಿ ಎದುರಾಗಿರುವ ಗೊಂದಲ ಮತ್ತಷ್ಟು ಗಂಭೀರವಾಗುತ್ತದೆ. ಏಕೆಂದರೆ, ಎನ್ಯುಮರೇಷನ್ ಫಾರಂನಲ್ಲಿ ಸಂಬಂಧದ ಆಧಾರದ ಮೇಲೆ ತಂದೆ, ತಾಯಿ, ಅಜ್ಜ ಅಥವಾ ಅಜ್ಜಿಯ ಮಾಹಿತಿಯನ್ನು ಉಲ್ಲೇಖಿಸುವ ಅವಕಾಶವಿದೆ. ಆದರೆ ಇವರು ಯಾರೂ ಮತದಾರರಾಗಿರದಿದ್ದರೆ, ಅವರ ಎಪಿಕ್ ಸಂಖ್ಯೆ, ಮತದಾರರ ಭಾಗ ಸಂಖ್ಯೆ, ಕ್ರಮ ಸಂಖ್ಯೆ ಅಥವಾ ವಿಧಾನಸಭಾ ಕ್ಷೇತ್ರದ ವಿವರಗಳನ್ನು ನೀಡುವುದು ಅಸಾಧ್ಯ. ಮನಬಂದಂತೆ ಭರ್ತಿ ಮಾಡಿದರೆ ಡಿಲೀಟ್ ಆಗುವ ಸಾಧ್ಯತೆ.
ಈ ಪರಿಸ್ಥಿತಿಯಲ್ಲಿ ನಿವೃತ್ತ ಸೇನಾಧಿಕಾರಿ ಹಲವು ಕಡೆಗಳಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾರೆ. ಮೂಲ ಗ್ರಾಮವಾದ ಬಿರುನಾಣಿಯ ಬಿಎಲ್ಒರನ್ನು ಸಂಪರ್ಕಿಸಿದ್ದಾರೆ. ಪ್ರಸ್ತುತ ವಾಸವಾಗಿರುವ ಹುಣಸೂರಿನ ಬಿಎಲ್ಒರನ್ನೂ ಸಂಪರ್ಕಿಸಿದ್ದಾರೆ. ಇತರ ಚುನಾವಣಾ ಸಿಬ್ಬಂದಿಯನ್ನೂ ವಿಚಾರಿಸಿದ್ದಾರೆ. ಆದರೆ ಯಾರಿಂದಲೂ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎನ್ನುವುದು ಅವರ ಬೇಸರ.
ಇದರಿಂದ ದೊಡ್ಡ ಪ್ರಶ್ನೆಯೊಂದು ಉದ್ಭವಿಸುತ್ತದೆ. ಕುಟುಂಬದ ಹಿರಿಯರು ಎಂದಿಗೂ ಮತದಾರರಾಗಿರದಿದ್ದರೆ ಅಥವಾ ತಂದೆ-ತಾಯಿ ಈಗ ಜೀವಂತವಾಗಿರದಿದ್ದರೆ, ಜೀವಂತವಾಗಿದ್ದರೂ ಮತ ಹಾಕದಿದ್ದರೆ, ಅನಾಥರಾಗಿದ್ದರೆ, ಪಾಲಕರಿಲ್ಲದಿದ್ದರೆ, ದತ್ತು ಸ್ವೀಕರಿಸಿದ್ದರೆ ಅಥವಾ ಕುಟುಂಬದ ಯಾವುದೇ ದಾಖಲೆಗಳು ಲಭ್ಯವಿಲ್ಲದಿದ್ದರೆ, ಅಂತಹ ನಾಗರಿಕರು ಎನ್ಯುಮರೇಷನ್ ಫಾರಂ ಅನ್ನು ಯಾವ ಆಧಾರದ ಮೇಲೆ ಭರ್ತಿ ಮಾಡಬೇಕು?
ಇದು ಕೇವಲ ಒಬ್ಬ ನಿವೃತ್ತ ಸೇನಾಧಿಕಾರಿಯ ಸಮಸ್ಯೆಯಲ್ಲ. ದೇಶದ ವಿವಿಧ ಭಾಗಗಳಲ್ಲಿ ಉದ್ಯೋಗದ ಕಾರಣದಿಂದ ಮತದಾರರ ಪಟ್ಟಿಯಲ್ಲಿ ತಡವಾಗಿ ಹೆಸರು ಸೇರಿಸಿಕೊಂಡವರು, ಸೈನಿಕರು, ಕೇಂದ್ರ ಸರ್ಕಾರದ ಸೇವೆಯಿಂದ ನಿವೃತ್ತರಾದವರು, ವಲಸೆ ಕುಟುಂಬಗಳು, ಅನಾಥರು, ದತ್ತು ಪಡೆದ ಮಕ್ಕಳು, ಹಿರಿಯ ನಾಗರಿಕರು ಹಾಗೂ ಕುಟುಂಬದ ದಾಖಲೆಗಳಿಲ್ಲದ ಅನೇಕ ಜನರು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುವ ಸಾಧ್ಯತೆಯಿದೆ.
ಇಂತಹ ಅಪರೂಪದ ಪ್ರಕರಣಗಳಿಗೆ ಚುನಾವಣಾ ಆಯೋಗದಿಂದ ಸ್ಪಷ್ಟ ಮಾರ್ಗಸೂಚಿ ಸಾರ್ವಜನಿಕರಿಗೆ ತಲುಪದಿದ್ದರೆ, ಬಿಎಲ್ಒ ಮಟ್ಟದಲ್ಲಿಯೂ ಗೊಂದಲ ಮುಂದುವರಿಯುತ್ತದೆ. ಪರಿಣಾಮವಾಗಿ ಮತದಾರರೇ ಅನಗತ್ಯ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕೊನೆಗೆ, ಸ್ಪಷ್ಟ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಸಂಬಂಧಿತ ಅನುಭವಿಯೊಬ್ಬರ ಸಲಹೆಯಂತೆ ಅವರು ಫಾರಂನ ಮೂರನೇ ಆಯ್ಕೆಯನ್ನು ಬಳಸಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಬಳಿ ಇರುವ ಸೇನಾ ಸೇವೆಯ ದಾಖಲೆಗಳು, ನಿವೃತ್ತಿಯ ದಾಖಲೆಗಳು, ಪ್ರಸ್ತುತ ಎಪಿಕ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳ ಮೂಲಕ ತಮ್ಮ ಮತದಾರರ ಹಕ್ಕನ್ನು ಸಾಬೀತುಪಡಿಸಬಹುದು ಎಂಬ ವಿಶ್ವಾಸದಿಂದಲೇ ಈ ಕ್ರಮ ಕೈಗೊಂಡಿದ್ದಾರೆ. ಏಕೆಂದರೆ ಒಂದನೇ ಅಂಕಣ, ಎರಡನೇ ಅಂಕಣ ಮಾಹಿತಿ ಅಪೂರ್ಣ ಆಗುವುದರಿಂದ ಡಿಲೀಟ್ ಆಗುವ ಸಾಧ್ಯತೆಯೇ ಹೆಚ್ಚು. ನೋಟೀಸ್ ಆದರೆ ಸಾಬೀತು ಮಾಡಬಹುದು ಎಂಬ ಆಶಯದಿಂದ.
ಆದರೆ ಇಲ್ಲಿ ಮೂಲ ಪ್ರಶ್ನೆ ಬದಲಾಗುವುದಿಲ್ಲ. ನಿಯಮಗಳ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಕ್ಷೇತ್ರಮಟ್ಟದ ಸಿಬ್ಬಂದಿಯಲ್ಲಿಯೂ ಸಮರ್ಪಕ ಮಾಹಿತಿ ಇಲ್ಲದಿದ್ದರೂ, ಇಂತಹ ಸಾವಿರಾರು ಪ್ರಕರಣಗಳಿಗೆ ಉತ್ತರ ನೀಡದೇ, ಯಾವುದೇ ಗೊಂದಲಗಳಿಲ್ಲದೆ ಶೇ.100ರಷ್ಟು ಎನ್ಯುಮರೇಷನ್ ಪೂರ್ಣಗೊಂಡಿದೆ ಎಂದು ಹೇಗೆ ಹೇಳಬಹುದು?.
ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಗುರಿಯ ಜೊತೆಗೆ, ಅಪರೂಪದ ಪ್ರಕರಣಗಳಿಗೂ ಸ್ಪಷ್ಟ, ಲಿಖಿತ ಹಾಗೂ ಸಾರ್ವಜನಿಕ ಮಾರ್ಗಸೂಚಿಗಳನ್ನು ಪ್ರಕಟಿಸುವುದು ಅಗತ್ಯವಾಗಿದೆ. ಸಂಬಂಧಿತ ಮಾಹಿತಿಯನ್ನು ಒದಗಿಸಲು ಸಾಧ್ಯವಾಗದ ನಾಗರಿಕರಿಗಾಗಿ ಪರ್ಯಾಯ ವ್ಯವಸ್ಥೆ, ದಾಖಲೆಗಳ ಆಧಾರದ ಪರಿಶೀಲನೆ ಹಾಗೂ ಬಿಎಲ್ಒಗಳಿಗೆ ಏಕರೂಪದ ತರಬೇತಿ ನೀಡುವುದು ಅತ್ಯಗತ್ಯವಾಗಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ? SIR ಪ್ರಕ್ರಿಯೆಯೇ ಗೊಂದಲದ ಗೂಡು: ಮತದಾರರ ಪಟ್ಟಿಯೇ ಒಂದು, ನೆಲಮಟ್ಟದ ವಾಸ್ತವವೇ ಇನ್ನೊಂದು!
ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಲ್ಲ; ಅದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕು. ಆ ಹಕ್ಕು ಕೇವಲ ತಾಂತ್ರಿಕ ಗೊಂದಲಗಳಿಂದ ಪ್ರಶ್ನಾರ್ಥಕವಾಗಬಾರದು. SIR ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ನಿಖರಗೊಳಿಸುವುದಾಗಿದ್ದರೆ, ಮೊದಲು ಪ್ರತಿಯೊಬ್ಬ ನಾಗರಿಕನಿಗೆ ಆ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಡುವ ಜವಾಬ್ದಾರಿಯೂ ಚುನಾವಣಾ ಆಯೋಗದ ಮೇಲಿದೆ. ಗೊಂದಲಗಳಿಗೆ ಉತ್ತರ ಸಿಕ್ಕಾಗ ಮಾತ್ರ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸ ಮತ್ತಷ್ಟು ಬಲವಾಗಲಿದೆ.
ಸಂಚಿಕೆ ಮುಂದುವರೆಯಲಿದೆ…





