ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಗರಣ ಪ್ರಕರಣದಲ್ಲಿ ದಿನದೊಂದು ಹೊಸ ಸ್ಫೋಟಕ ಅಂಶಗಳು ಬೆಳಕಿಗೆ ಬರುತ್ತಿವೆ. ಇದೀಗ, ರಾಮಮಂದಿರಕ್ಕೆ ಭಕ್ತರೊಬ್ಬರು ನೀಡಿದ್ದ ಸುಮಾರು 5 ಕೋಟಿ ರೂ. ಮೌಲ್ಯದ ಚಿನ್ನ ಲೇಪಿತ ‘ತುಳಸಿ ರಾಮಾಯಣ’ (ರಾಮಚರಿತಮಾನಸ) ಗ್ರಂಥ ನಾಪತ್ತೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮಿನಾರಾಯಣನ್ ಅವರು ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಚಿನ್ನದ ಲೇಪನವಿರುವ ‘ರಾಮಚರಿತಮಾನಸ’ ಗ್ರಂಥವನ್ನು ದಾನವಾಗಿ ನೀಡಿದ್ದರು. ಈಗ, ರಾಮಮಂದಿರ ಲೂಟಿ ಹಗರಣ ಬೆಳಕಿಗೆ ಬಂದ ಬಳಿಕ, ಆ ಗ್ರಂಥವು ರಾಮಮಂದಿರದಲ್ಲಿ ಸುರಕ್ಷಿತವಾಗಿದೆಯೇ ಎಂದು ನೆಟ್ಟಿಗರು ಪ್ರಶ್ನಿಸಲಾರಂಭಿಸಿದ್ದರು. ಆದರೆ, ಈವರೆಗೆ ರಾಮಮಂದಿರ ಟ್ರಸ್ಟ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಆ ಪುಸ್ತಕವೂ ಲೂಟಿಯಾಗಿದೆ ಎಂದು ದಾನಿ ಲಕ್ಷಿನಾರಾಯಣನ್ ಆರೋಪಿಸಿದ್ದಾರೆ.
“ಆರಂಭದಲ್ಲಿ ಭಕ್ತರ ದರ್ಶನಕ್ಕಾಗಿ ಇಡಲಾಗಿದ್ದ ಈ ಪವಿತ್ರ ಗ್ರಂಥವನ್ನು ಕೆಲ ದಿನಗಳ ನಂತರ ಏಕಾಏಕಿ ತೆರವುಗೊಳಿಸಲಾಗಿತ್ತು. ಈ ಬಗ್ಗೆ ದೇವಸ್ಥಾನದ ಅಧಿಕಾರಿಗಳನ್ನು ಪದೇ-ಪದೇ ಪ್ರಶ್ನಿಸಿದರೂ, ಯಾರಿಂದಲೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ” ಎಂದು ಲಕ್ಷ್ಮಿನಾರಾಯಣನ್ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.
ಲಕ್ಷ್ಮಿನಾರಾಯಣನ್ ಅವರ ಪ್ರಕಾರ, “ಈ ಚಿನ್ನದ ಲೇಪನದ ರಾಮಚರಿತಮಾನಸವು ಕೇವಲ ಒಂದು ಉಡುಗೊರೆಯಷ್ಟೇ ಅಲ್ಲ, ಇದು ನಮ್ಮ ಇಡೀ ಕುಟುಂಬವು ನಡೆಸಿದ ದೀರ್ಘಕಾಲದ ಆಧ್ಯಾತ್ಮಿಕ ಜೀವನದ ಫಲವಾಗಿದೆ. ನಮ್ಮ ದಿವಂಗತ ತಾಯಿಯವರು ತಮ್ಮ ಜೀವಿತಾವಧಿಯ ಸುಮಾರು 15 ರಿಂದ 18 ವರ್ಷಗಳನ್ನು ಭಗವಾನ್ ಶ್ರೀರಾಮನ ನಾಮಸ್ಮರಣೆ ಮತ್ತು ಬರವಣಿಗೆಯಲ್ಲಿ ಕಳೆದಿದ್ದರು. ಅಷ್ಟೇ ಅಲ್ಲದೆ, ನಮ್ಮ ಕುಟುಂಬವು ದಶಕಗಳಿಂದ ರಾಮಜನ್ಮಭೂಮಿ ಚಳವಳಿಯೊಂದಿಗೆ ನಿಕಟ ಒಡನಾಟ ಹೊಂದಿತ್ತು. ಈ ಆಂದೋಲನಕ್ಕಾಗಿ ಕನ್ಯಾಕುಮಾರಿಯಿಂದ ಕಳುಹಿಸಲಾದ ಮೊದಲ ಇಟ್ಟಿಗೆ ನಮ್ಮ ಮಾವನವರ ಮನೆಯಿಂದಲೇ ಹೋಗಿತ್ತು. ನಿವೃತ್ತಿಯ ನಂತರ ನಮಗೆ ದೇವರು ಕರುಣಿಸಿದ ಸಂಪತ್ತಿನಲ್ಲಿ ಸ್ವಲ್ಪ ಭಾಗವನ್ನು ಶ್ರೀರಾಮನ ಸೇವೆಗೇ ಸಮರ್ಪಿಸಲು ನಿರ್ಧರಿಸಿದ್ದೆವು. ಅದರಂತೆ, ಈ ಅಪರೂಪದ ಉಡುಗೊರೆಯನ್ನು ರಾಮಮಂದಿರಕ್ಕೆ ನೀಡಿದ್ದೆವು” ಎಂದು ಅವರು ಹೇಳಿಕೊಂಡಿದ್ದಾರೆ.

“ನಾವು ಕೊಟ್ಟಿದ್ದ ಈ ರಾಮಚರಿತಮಾನಸ ಗ್ರಂಥದ ಮೌಲ್ಯ ಸುಮಾರು 4.5 ರಿಂದ 5 ಕೋಟಿ ರೂಪಾಯಿ ಮೌಲ್ಯದ್ದು. ಬಂಗಾರ, ಬೆಳ್ಳಿ ಹಾಗೂ ತಾಮ್ರದಿಂದ ತಯಾರಿಸಲಾದ ಈ ಹಸ್ತಪ್ರತಿಯು ಒಟ್ಟು 147 ಕೆಜಿ ತೂಕವಿದೆ. ಇದರಲ್ಲಿ ತುಳಸೀದಾಸರ ರಾಮಚರಿತಮಾನಸದ ಎಲ್ಲ 10,902 ಶ್ಲೋಕಗಳನ್ನು 522 ಚಿನ್ನದ ಲೇಪಿತ ಪುಟಗಳಲ್ಲಿ ಕೆತ್ತಲಾಗಿದೆ. ಇದನ್ನು 2024ರ ಏಪ್ರಿಲ್ ತಿಂಗಳಿನಲ್ಲಿ ರಾಮಮಂದಿರ ಟ್ರಸ್ಟ್‌ಗೆ ಹಸ್ತಾಂತರಿದ್ದೆವು” ಎಂದು ವಿವರಿಸಿದ್ದಾರೆ.
ಆರಂಭದಲ್ಲಿ ಈ ಗ್ರಂಥವನ್ನು ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಪ್ರತಿದಿನ ಭಕ್ತರು ಇದನ್ನು ನೋಡಿ ಪೂಜಿಸುತ್ತಿದ್ದರು. ಇದನ್ನು ನಿರಂತರವಾಗಿ ಗರ್ಭಗುಡಿಯ ಸಮೀಪದಲ್ಲೇ ಇಡುವುದಾಗಿ ಆಡಳಿತ ಮಂಡಳಿ ಭರವಸೆ ನೀಡಿತ್ತು. ಆದರೆ, ನಂತರದ ದಿನಗಳಲ್ಲಿ ಅಲ್ಲಿ ಜಾಗವಿಲ್ಲದ ಕಾರಣ ಬೇರೆಡೆ ಇಡುವುದಾಗಿ ಹೇಳಿತು. ಕೊನೆಗೆ ಆ ಭರವಸೆಯನ್ನೂ ಉಳಿಸಿಕೊಳ್ಳದೆ, ಸುಮಾರು ಐದು ತಿಂಗಳ ಕಾಲ ಪ್ರದರ್ಶನದಲ್ಲಿದ್ದ ಗ್ರಂಥವನ್ನು ಅಲ್ಲಿಂದ ತೆಗೆಯಲಾಯಿತು. ಈಗ ಎಲ್ಲಿದೆ ಎಂಬುದೇ ಗೊತ್ತಿಲ್ಲ” ಎಂದು ಅವರು ದೂರಿದ್ದಾರೆ.
“ಗ್ರಂಥವನ್ನು ಪ್ರದರ್ಶನದ ಸ್ಥಳದಿಂದ ತೆಗೆದ ಬಳಿ, ಅದನ್ನು ಎಲ್ಲಿ ಇರಲಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಭಾರೀ ಹರಸಾಹಸ ಪಟ್ಟಿದ್ದೇನೆ. ದೇವಾಸ್ಥಾನಕ್ಕೆ ಸಂಬಂಧಪಟ್ಟವರನ್ನು ಭೇಟಿಯಾಗಲು ಪ್ರಯತ್ನಿಸಿದ್ದೇನೆ. ಆದರೆ, ಈವರೆಗೆ ಯಾವುದೇ ಉತ್ತರ ದೊರೆತಿಲ್ಲ. ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಭೇಟಿ ಮಾಡುವುದಕ್ಕಾಗಿ ಸುಮಾರು 9 ಗಂಟೆಗಳ ಕಾಲ ಕಾದು ಕುಳಿತಿದ್ದೆ. ಆದರೂ, ಅವರು ನನಗೆ ಸಿಗಲಿಲ್ಲ. ಯಾವುದೇ ಉತ್ತರ ನೀಡಲಿಲ್ಲ. ನಮಗೆ ಯಾವುದೇ ಪ್ರಚಾರ ಬೇಡ. ಆದರೆ, ಭಕ್ತಿಯಿಂದ ನೀಡಿದ ಕಾಣಿಕೆಯ ವಿಷಯದಲ್ಲಿ ಪಾರದರ್ಶಕತೆ ಇರಬೇಕಲ್ಲವೇ” ಎಂದು ಅವರು ಪ್ರಶ್ನಿಸಿದ್ದಾರೆ.

“ಇತ್ತೀಚೆಗೆ ಮಾಧ್ಯಮಗಳಲ್ಲಿ ದೇವಸ್ಥಾನದ ದೇಣಿಗೆ ಹಗರಣದ ಸುದ್ದಿಗಳು ಬರಲಾರಂಭಿಸಿದಾಗ, ಪರಿಚಿತರು ಮತ್ತು ಸಾರ್ವಜನಿಕರು ಆ ಗ್ರಂಥ ಸುರಕ್ಷಿತವಾಗಿದೆಯೇ ಎಂದು ನಮ್ಮನ್ನು ಕೇಳಲಾರಂಭಿಸಿದರು. ಇದು ನಮ್ಮ ಮನಸ್ಸಿಗೆ ತೀವ್ರ ಆಘಾತವನ್ನುಂಟು ಮಾಡಿತು. ಈ ಹಿನ್ನೆಲೆಯಲ್ಲಿ ಆ ಗ್ರಂಥದ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರನ್ನು ಸಂಪರ್ಕಿಸಿ, ತಕ್ಷಣವೇ ಆಡಿಟ್ (ಲೆಕ್ಕ ಪರಿಶೋಧನೆ) ನಡೆಸಿ ಕಾಣಿಕೆಗಳು ಎಲ್ಲಿವೆ ಮತ್ತು ಅವು ಸರಿಯಾಗಿ ದಾಖಲಾಗಿವೆಯೇ ಎಂಬುದನ್ನು ಪತ್ತೆಹಚ್ಚುವಂತೆ ವಿನಂತಿಸಿದೆ. ಆದರೆ, ಯಾವುದೇ ಫಲಿದೊರೆತಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: 20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?
“ಗ್ರಂಥದ ಕುರಿತು ಮಾಹಿತಿ ಪಡೆಯಲು ಸ್ಥಳೀಯ ಮಟ್ಟದಲ್ಲಿ ನಾನು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದವು. ಬಳಿಕ, ಕೆಲವರ ಸಲಹೆಯಂತೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿ ವಿಷಯವನ್ನು ವಿವರಿಸಿದೆ. ಮೋಹನ್ ಭಾಗವತ್ ಅವರು ನಮ್ಮ ಭಕ್ತಿಯನ್ನು ಶ್ಲಾಘಿಸಿ, ಖಂಡಿತವಾಗಿಯೂ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ, ಆ ಭೇಟಿಯ ನಂತರವೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ವಿಷಯದಲ್ಲಿ ಸಹಾಯ ಮಾಡಲು ಪ್ರಯತ್ನಿಸಿದ ಇತರರ ಮಾತಿಗೂ ಮನ್ನಣೆ ಸಿಗುತ್ತಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
“ಈ ಇಡೀ ಹಗರಣವು ಸಂಪೂರ್ಣವಾಗಿ ತಡೆಗಟ್ಟಬಹುದಾದಂತಹದ್ದಾಗಿತ್ತು. ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿ ಹೊತ್ತವರು ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಬೇಕಾಗಿತ್ತು. ಅಲ್ಲಿ ಸಂಪೂರ್ಣ ಮೇಲ್ವಿಚಾರಣೆಯ ವೈಫಲ್ಯ ಎದ್ದು ಕಾಣುತ್ತಿದೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.



