ಸರ್ಕಾರಿ ಆಸ್ಪತ್ರೆಗಳನ್ನು ಕಟ್ಟುವುದು ಅಸಹಾಯಕರಿಗೆ ಉತ್ತಮ ಆರೋಗ್ಯ ಸೇವೆ ಸಿಗಲೆಂಬ ಉದ್ದೇಶದಿಂದ. ಇದೇ ಉದ್ದೇಶದಿಂದಲೇ ಬಳ್ಳಾರಿಯಲ್ಲಿ ದುಬಾರಿ ವೆಚ್ಚದಲ್ಲಿ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಸ್ತುತ ಪಾಳು ಬಿದ್ದಿದ್ದು, ನಿರ್ಮಾಣವಾಗಿ ನಾಲ್ಕೈದು ವರ್ಷಗಳು ಕಳೆದರೂ ಕನಿಷ್ಠ ಸೌಕರ್ಯಗಳಿಂದ ವಂಚಿತರಾಗಿರುವ ಆಸ್ಪತ್ರೆಯ ಸ್ಥಿತಿ ಗತಿ, ರೋಗಿಗಳ ಗೋಳು ಕೇಳುವವರಿಲ್ಲದಂತಾಗಿದೆ.
ಬಳ್ಳಾರಿ ಲೋಕಸಭೆ ಕ್ಷೇತ್ರವನ್ನು ಸಂಸದ ಈ. ತುಕಾರಾಂ ಪ್ರತಿನಿಧಿಸುತ್ತಿದ್ದು , ಇತ್ತ ಸಂಡೂರು ವಿಧಾನಸಭಾ ಕ್ಷೇತ್ರವನ್ನು ಅವರ ಪತ್ನಿ ಅನ್ನಪೂರ್ಣ ತುಕಾರಾಂ ಪ್ರತಿನಿಧಿಸುತ್ತಿದ್ದಾರೆ. ಇವರಿಬ್ಬರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸ್ವಾಮಿಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 2020-2021ನೇ ಸಾಲಿನಲ್ಲೇ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಜಿಲ್ಲಾ ಖನಿಜ ನಿಮಗದಿಂದ 1 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಗ್ರಾಮಸ್ಥರೇ 12 ಲಕ್ಷ ರೂಪಾಯಿ ಕೊಟ್ಟು ಆಸ್ಪತ್ರೆಗೆ ಭೂಮಿ ಖರೀದಿಸಿ ಕೊಟ್ಟಿದ್ರು. ಈ ಪ್ರದೇಶದಲ್ಲಿ ಮೈನಿಂಗ್ ಹೆಚ್ಚಾಗಿರುವುದರಿಂದ ಅವಘಡಗಳು ಸಂಭವಿಸಿ, ಜನರು ಆಗಾಗ ಆಪತ್ತಿಗೆ ಈಡಾಗುತ್ತಾರೆ. ಅವರಿಗೆ ನೆರವಾಗಲಿ, ಉಚಿತವಾಗಿ ಆರೋಗ್ಯ ಸೇವೆ ಸಿಗಲಿ ಅಂತಾ ಆಸ್ಪತ್ರೆ ನಿರ್ಮಿಸಲಾಗಿದೆ. ದುರಂತ ಎಂದರೆ ಬೃಹತ್ ಆಸ್ಪತ್ರೆ ತಲೆ ಎತ್ತಿ 4 ವರ್ಷಗಳೇ ಕಳೆದರೂ ಇದುವರೆಗೂ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ.
ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ತಲೆ ಎತ್ತಿರುವ ಈ ಆಸ್ಪತ್ರೆ ಈಗ ಉದ್ಘಾಟನೆಗೊಂಡು ಜನರ ಸೇವೆಗೆ ಮುಕ್ತವಾಗಬೇಕಿತ್ತು. ಈಗಲೂ ಜನರು ರಾತ್ರಿ ಹೊತ್ತು ಏನಾದರೂ ಅನಾರೋಗ್ಯಕ್ಕೀಡಾದರೆ ದೂರದ ಆಸ್ಪತ್ರೆಗಳಿಗೆ ಹೋಗಬೇಕು. ಅದರಲ್ಲೂ ಈ ಭಾಗದಲ್ಲಿ ಮೈನಿಂಗ್ ಹೆಚ್ಚಾಗಿರುವುದರಿಂದ ಅಪಘಾತಗಳು ಸಂಭವಿಸುತ್ತವೆ. ಆಗ ತುರ್ತು ಚಿಕಿತ್ಸೆ ಸಿಕ್ಕರೆ ರೋಗಿಗಳ ಜೀವ ರಕ್ಷಣೆಗೆ ಅನುಕೂಲ ಆಗುತ್ತದೆ. ಇಂತಹ ಹಲವು ಸಂದರ್ಭಗಳಲ್ಲಿ ಸ್ಥಳೀಯವಾಗಿ ಚಿಕಿತ್ಸೆ ಸಿಗದೇ ಅನಾಹುತಗಳು ಸಂಭವಿಸಿದ ಅನೇಕ ಉದಾಹರಣೆಗಳಿವೆ.
ಕೆಲವೊಮ್ಮೆ ಹೃದಯಾಘಾತ ಸಂಭವಿಸಿ ದೂರದ ಆಸ್ಪತ್ರೆಗೆ ಹೋಗುವ ಮಾರ್ಗಮಧ್ಯೆ ಕೊನೆಯುಸಿರೆಳೆದ ಹೃದಯ ವಿದ್ರಾವಕ ಘಟನೆಗಳೂ ಜರುಗಿವೆ. ಇಂತಹ ತುರ್ತು ಸಂದರ್ಭದಲ್ಲಿ ಜನರ ಸೇವೆಗಾಗಬೇಕಿದ್ದ ಆಸ್ಪತ್ರೆ ಈಗ ಪಾಳು ಬಿದ್ದಿದೆ. ಕಿಟಕಿ ಗಾಜುಗಳು ಒಡೆದಿವೆ. ಆಸ್ಪತ್ರೆಯೊಳಗಿನ ಕೊಠಡಿಗಳು ಧೂಳು ತುಂಬಿವೆ. ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಸಂಜೆ ಹೊತ್ತಾದರೆ ಸಾಕು ಕುಡುಕರು ಇಲ್ಲಿಗೆ ಬಂದು, ಗುಂಡು ತುಂಡು ಪಾರ್ಟಿ ಮಾಡಿ ಎಲ್ಲೆಂದರಲ್ಲಿ ಬಾಟಲಿಗಳೇ ಕಾಣಿಸುತ್ತವೆ.
ಸ್ವಾಮಿಹಳ್ಳಿಯ ಈ ಆಸ್ಪತ್ರೆ ಪಾಳು ಬಿದ್ದಿದ್ದರೂ ಜನಪ್ರತಿನಿಧಿಗಳು ಜಾಣ ಮೌನ ವಹಿಸಿದ್ದಾರೆ. ವಿಪರ್ಯಾಸ ಸಂಸದ ತುಕಾರಾಂ ಈ ಕ್ಷೇತ್ರದ ಶಾಸಕರಾಗಿದ್ದಾಗಲೇ ಈ ಆಸ್ಪತ್ರೆ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧವಾಗಿತ್ತು. ಆದರೆ, ಲೋಕಸಭೆ ಚುನಾವಣೆಯಲ್ಲಿ ಗೆದ್ದು ತುಕಾರಾಂ ಅವರು ಸಂಡೂರು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರಿಂದ ಅವರ ಪತ್ನಿ ಅನ್ನಪೂರ್ಣ ಅವರು ಬೈ ಎಲೆಕ್ಷನ್‌ನಲ್ಲಿ ಗೆದ್ದು ಶಾಸಕಿಯಾಗಿದ್ದಾರೆ. ಅನ್ನಪೂರ್ಣ ಅವರು ಶಾಸಕರಾಗಿ ಎರಡು ವರ್ಷ ಕಳೆದರೂ ಈ ಆಸ್ಪತ್ರೆ ಉದ್ಘಾಟನೆ ಮಾಡಲು ಮನಸು ಮಾಡಿಲ್ಲ ಎನ್ನುವುದೇ ಬೇಸರದ ಸಂಗತಿ.
ಈ ಕುರಿತು ಈ ದಿನ.ಕಾಮ್ ಜೊತೆಗೆ ಸ್ಥಳೀಯ ನಿವಾಸಿ ಚಂದ್ರು ಮಾತನಾಡಿ, “ಸಂಜೆಯಾದರೆ ಸಾಕು ಈ ಆಸ್ಪತ್ರೆ ಕುಡುಕರ ಅಡ್ಡವಾಗುತ್ತದೆ. ರಾತ್ರಿ ಕುಡಿದ ಮೇಲೆ ಕಿಟಕಿ, ಗಾಜುಗಳಿಗೆ ಕಲ್ಲು ಹೊಡೆದು ಹಾನಿ ಮಾಡುತ್ತಿದ್ದಾರೆ. ಶೀಘ್ರವೇ ಅಧಿಕಾರಿಗಳು ಎಚ್ಚೆತ್ತುಕೊಂಡು, ಆಸ್ಪತ್ರೆಯನ್ನು ನಮ್ಮ ಸೇವೆಗೆ ಮುಕ್ತ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.
ಮತ್ತೊಬ್ಬ ನಿವಾಸಿ ಮಾತನಾಡಿ, “ಈ ಹಿಂದೆ ಒಬ್ಬರಿಗೆ ಹೃದಯಾಘಾತವಾಗಿ, ಇದೇ ಆಸ್ಪತ್ರೆ ಮುಂದೆಯೇ ಹಾದು ಕರೆದುಕೊಂಡು ಹೋದೆವು. ಆದರೆ ಆಸ್ಪತ್ರೆ ತಲುಪುವ ಮೊದಲೇ ಜೀವ ಬಿಟ್ಟ. ಸಮಸ್ಯೆಯ ಬಗ್ಗೆ ತುಕಾರಾಂ ಅವರಿಗೂ ತಿಳಿಸಲಾಗಿದೆ. ಈ ಕ್ಷೇತ್ರದ ಶಾಸಕಿ ಅನ್ನಪೂರ್ಣ ಕೂಡ ವಿಧಾನಸಭೆಯ ಕಲಾಪದಲ್ಲಿ ಈ ಕುರಿತು ಚರ್ಚೆ ಮಾಡಿದ್ದಾರೆ. ಆದರೂ, ವಿಳಂಬ ಯಾಕಾಗಿ ಎಂಬುದು ತಿಳಿಯದು” ಎಂದರು.
ಸಮಸ್ಯೆಯ ಕುರಿತು ಬಳ್ಳಾರಿ ಜಿಲ್ಲಾ ಆರೋಗ್ಯಧಿಕಾರಿ ರಮೇಶ್ ಬಾಬು ಅವರನ್ನು ಪ್ರಶ್ನಿಸಲಾಗಿ “ಈಗಾಗಲೇ ಆಸ್ಪತ್ರೆ ಶುರು ಮಾಡಲು ಎಲ್ಲಾ ವ್ಯವಸ್ಥೆ ನಡೆಯುತ್ತಿದೆ. ಇನ್ನೆರಡು ತಿಂಗಳಲ್ಲಿ ಆಸ್ಪತ್ರೆಯ ಸುತ್ತಲೂ ಕಂಪೌಂಡ್ ನಿರ್ಮಿಸಿ ಆಸ್ಪತ್ರೆ ಆರಂಭಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿನ ಸಂಜೀವಿನಿ. ಜೀವನ ಸಾಗಿಸಲು ಕಷ್ಟವಾದ ಅದೆಷ್ಟೋ ಜನರಿಗೆ ದುಡ್ಡಿಲ್ಲದೇ ಆರೋಗ್ಯ ಸೇವೆ ಸಿಗುತ್ತವೆ. ದುಡ್ಡಿದ್ದವರೇನೋ ಖಾಸಗಿ ಆಸ್ಪತ್ರೆಗೆ ಹೋಗಿ ಲಕ್ಷ ಲಕ್ಷ ರೂಪಾಯಿಗಟ್ಟಲೇ ಕೊಟ್ಟು ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡವರು ಎಲ್ಲಿಗೆ ಹೋಗಬೇಕು? ಆದ್ದರಿಂದ ಸಂಡೂರಿನ ಸ್ವಾಮಿಹಳ್ಳಿಯಲ್ಲಿರುವ ಈ ಆಸ್ಪತ್ರೆಯನ್ನು ಆದಷ್ಟು ಬೇಗ ಜನರ ಸೇವೆಗೆ ಮುಕ್ತವಾಗಿಸಬೇಕಿದೆ. ಇಲ್ಲವಾದಲ್ಲಿ ಮುಂದಾಗಬಹುದಾದ ಅನಾಹುತಗಳಿಗೆ ಆಳುವವರೇ ಹೊಣೆಯಾಗಬೇಕಾಗುತ್ತದೆ.

ವಿಜಯಕುಮಾರ್ ಎಂ
ವಿಜಯನಗರ ಕೋಆರ್ಡಿನೇಟರ್



