ರಾಮಮಂದಿರದ ಆಡಳಿತ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಆಂತರಿಕ ಸಂಘರ್ಷ ತೀವ್ರಗೊಂಡಂತೆ ಕಾಣುತ್ತಿದೆ. ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಅಯೋಧ್ಯೆಯಲ್ಲಿನ ಚಟುವಟಿಕೆಗಳು ಹೆಚ್ಚಾಗಿರುವುದು ಹಾಗೂ ಮಾಜಿ ಟ್ರಸ್ಟ್ ಆಡಿಟರ್ ಮಹಿಪಾಲ್ ಸಿಂಗ್ ಬರೆದಿರುವ ಪತ್ರ ಈ ಬೆಳವಣಿಗೆಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಜೂನ್ 27ರಂದು ರಾಮಮಂದಿರದ ಕಾಣಿಕೆ ಮತ್ತು ದೇಣಿಗೆಗಳ ಕಳ್ಳತನದ ಹಿನ್ನೆಲೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಚಂಪತ್, ಬಳಿಕ ಸಾರ್ವಜನಿಕವಾಗಿ ಹೆಚ್ಚು ಸಕ್ರಿಯವಾಗಿರಲಿಲ್ಲ. ಆಗಸ್ಟ್ 19ರಿಂದ ಅವರ ಚಟುವಟಿಕೆಗಳು ಮತ್ತೆ ಹೆಚ್ಚಾಗಿವೆ. ಜತೆಗೆ ಇದೇ ಸೆಪ್ಟೆಂಬರ್ 2ರಂದು ನಡೆಯಲಿರುವ ಟ್ರಸ್ಟ್‌ನ ಮಹತ್ವದ ಸಭೆಗೂ ಮುನ್ನ ಚಂಪತ್ ರಾಯ್ ಅವರು ಟ್ರಸ್ಟ್ ಸದಸ್ಯರು, ಸ್ಥಳೀಯ ಸಾಧುಗಳು, ಆರ್‌ಎಸ್‌ಎಸ್, ವಿಎಚ್‌ಪಿ ಮುಖಂಡರು ಹಾಗೂ ಅಯೋಧ್ಯೆಯ ಸ್ಥಳೀಯರನ್ನು ಭೇಟಿಯಾಗುತ್ತಿದ್ದಾರೆ. ಅಯೋಧ್ಯೆಯ ಸ್ಥಳೀಯ ಕುಟುಂಬಗಳ ಕಾರ್ಯಕ್ರಮಗಳಲ್ಲೂ ಚಂಪತ್ ರಾಯ್ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಈಗ ರಾಯ್ ಹಾಗೂ ಮಿಶ್ರಾ ನಡುವೆ ಅಧಿಕಾರದ ಜಟಾಪಟಿ ಶುರುವಾಗಿರಬಹುದು ಎನ್ನಲಾಗುತ್ತಿದೆ. ಈ ಬೆಳವಣಿಗೆಗಳ ನಡುವೆ, ನೃಪೇಂದ್ರ ಮಿಶ್ರಾ ಅವರ ಪ್ರಭಾವವನ್ನು ತಡೆಯಲು ರಾಯ್ ಮೂಲಕ ಟ್ರಸ್ಟ್ ಮೇಲೆ ತನ್ನ ಹಿಡಿತವನ್ನು ಬಲಪಡಿಸಲು ಆರ್‌ಎಸ್‌ಎಸ್ ಮುಂದಾಗಿದೆ ಎಂಬ ಮಾತುಗಳು ಅಯೋಧ್ಯೆಯಲ್ಲಿ ಕೇಳಿಬರುತ್ತಿವೆ. ಇದಕ್ಕೆ ಮತ್ತಷ್ಟು ಪೂರಕ ಎಂಬಂತೆ ಟ್ರಸ್ಟ್‌ನ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಅವರಿಗೆ ಆಗಸ್ಟ್ 18ರಂದು ಪತ್ರ ಬರೆದಿದ್ದ ರಾಯ್, ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ಹಾಗೂ ಟ್ರಸ್ಟ್‌ನ ಪದನಿಮಿತ್ತ ಸದಸ್ಯರಾಗಿರುವ ನೃಪೇಂದ್ರ ಮಿಶ್ರಾ ಅವರು ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು ಎಂದು ಆರೋಪಿಸಿದ್ದರು.
ಮಣಿ ರಾಮ್ ಛಾವಣಿ ಆಶ್ರಮದ ಮೂಲವೊಂದರ ಪ್ರಕಾರ, ಚಂಪತ್ ರಾಯ್ ಅವರನ್ನು ಮತ್ತೆ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಜಿ ಆಡಿಟರ್ ಮಹಿಪಾಲ್ ಸಿಂಗ್ ತಮ್ಮ ಪತ್ರದಲ್ಲಿ ಆರೋಪಿಸಿದ್ದಾರೆ. ಆದರೆ, ದೇವಾಲಯದ ಕಾಣಿಕೆಗಳ ಕಳ್ಳತನಕ್ಕೆ ಸಂಬಂಧಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿರುವ ಸಂದರ್ಭದಲ್ಲಿ ರಾಯ್ ಅವರನ್ನು ಮರುನೇಮಕ ಮಾಡುವುದು ಸೂಕ್ತವಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಕಾಣಿಕೆಗಳ ಕಳ್ಳತನವು ಹಿರಿಯ ಟ್ರಸ್ಟ್ ಸದಸ್ಯರ ಗಮನದಲ್ಲೇ ನಡೆಯುತ್ತಿತ್ತು ಎಂಬುದನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರಚಿಸಿದ್ದ ಎಸ್‌ಐಟಿ ದೃಢಪಡಿಸಿದೆ ಎಂದು ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸೆಪ್ಟೆಂಬರ್ 2ರ ಟ್ರಸ್ಟ್ ಸಭೆಯಲ್ಲಿ ಈ ಪತ್ರವನ್ನು ಸದಸ್ಯರ ಮುಂದೆ ಮಂಡಿಸುವಂತೆ ಅವರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ಲೂಟಿ; ಹಿಂದೂಗಳಿಗೆ ‘ದ್ರೋಹ’ ಬಗೆದ ಬಿಜೆಪಿ: ಉದ್ಧವ್ ಠಾಕ್ರೆ
ಮಹಿಪಾಲ್ ಸಿಂಗ್ ಅವರು ನೃಪೇಂದ್ರ ಮಿಶ್ರಾ ಅವರಿಗೆ ಆಪ್ತರು ಎಂಬ ಅಭಿಪ್ರಾಯವೂ ಅಯೋಧ್ಯೆಯಲ್ಲಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಮಿಶ್ರಾ, ಪ್ರಸ್ತುತ ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಸೆಪ್ಟೆಂಬರ್ 2ರಂದು ನಡೆಯಲಿರುವ ಟ್ರಸ್ಟ್ ಸಭೆ ಮಹತ್ವ ಪಡೆದುಕೊಂಡಿದೆ. ಚಂಪತ್ ರಾಯ್ ಅವರನ್ನು ಮತ್ತೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ತರಲಾಗುತ್ತದೆಯೇ, ನೃಪೇಂದ್ರ ಮಿಶ್ರಾ ಅವರ ಪಾತ್ರದ ಕುರಿತು ಚರ್ಚೆಯಾಗುತ್ತದೆಯೇ ಅಥವಾ ಟ್ರಸ್ಟ್‌ನೊಳಗಿನ ಅಧಿಕಾರ ಸಮೀಕರಣದಲ್ಲಿ ಯಾವುದಾದರೂ ಬದಲಾವಣೆಯಾಗುತ್ತದೆಯೇ ಎಂಬುದು ಸಭೆಯ ಬಳಿಕ ಸ್ಪಷ್ಟವಾಗಲಿದೆ.
ರಾಮಮಂದಿರ ನಿರ್ಮಾಣದ ಪ್ರಮುಖ ಹಂತ ಬಹುತೇಕ ಪೂರ್ಣಗೊಂಡಿರುವ ಸಂದರ್ಭದಲ್ಲಿ ಟ್ರಸ್ಟ್‌ನ ಆಡಳಿತ, ಹಣಕಾಸು ನಿರ್ವಹಣೆ ಹಾಗೂ ನಿರ್ಧಾರ ಕೈಗೊಳ್ಳುವ ಅಧಿಕಾರದ ವಿಚಾರದಲ್ಲಿ ಉಂಟಾಗಿರುವ ಈ ಆಂತರಿಕ ಸಂಘರ್ಷ ಇದೀಗ ಚರ್ಚೆಯ ಕೇಂದ್ರವಾಗಿದೆ.




