ಹದಿಹರೆಯದವರನ್ನು ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿಯಾಗಿಸಿ, ಅವರ ಆರೋಗ್ಯಕ್ಕೆ ಹಾನಿ ಉಂಟುಮಾಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಅಮೆರಿಕದ ಮಹತ್ವದ ಪ್ರಕರಣವನ್ನು ಇತ್ಯರ್ಥಪಡಿಸಲು ಮೆಟಾ ಒಪ್ಪಿಕೊಂಡಿದೆ. ಇದರ ಭಾಗವಾಗಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹದಿಹರೆಯದವರ ಬಳಕೆಗೆ ಹಲವು ಕಠಿಣ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಕಂಪನಿ ಸಮ್ಮತಿಸಿದ್ದು, ಪ್ರಕರಣದ ಇತ್ಯರ್ಥಕ್ಕಾಗಿ ಗರಿಷ್ಠ 18 ಬಿಲಿಯನ್ ಡಾಲರ್ (ಸುಮಾರು ₹1.72 ಲಕ್ಷ ಕೋಟಿ) ಪಾವತಿಸಲಿದೆ.
ಕ್ಯಾಲಿಫೋರ್ನಿಯಾ ಸೇರಿದಂತೆ ಅಮೆರಿಕದ 29 ರಾಜ್ಯಗಳು ಮೆಟಾ ವಿರುದ್ಧ ದಾಖಲಿಸಿದ್ದ ಈ ಪ್ರಕರಣದಲ್ಲಿ, ಯುವಜನರನ್ನು ಆಕರ್ಷಿಸಿ ವ್ಯಸನಿಯಾಗಿಸುವ ಉದ್ದೇಶದಿಂದ ಮೆಟಾ ತನ್ನ ಉತ್ಪನ್ನಗಳನ್ನು ವಿನ್ಯಾಸಗೊಳಿಸಿದೆ ಎಂದು ಆರೋಪಿಸಲಾಗಿತ್ತು. ಇದರಿಂದ ಮಕ್ಕಳಲ್ಲಿ ಆತಂಕ, ಖಿನ್ನತೆ ಹಾಗೂ ಆತ್ಮಹತ್ಯೆಯಂತಹ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಗಳು ಉಂಟಾಗಿವೆ ಎಂದು ರಾಜ್ಯಗಳು ವಾದಿಸಿದ್ದವು. ಜತೆಗೆ, 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪೋಷಕರ ಅನುಮತಿಯಿಲ್ಲದೆ ಅವರ ವೈಯಕ್ತಿಕ ಮಾಹಿತಿಯನ್ನು ಮೆಟಾ ಸಂಗ್ರಹಿಸಿದೆ ಎಂಬ ಆರೋಪವೂ ಇತ್ತು. ಆದರೆ ಮೆಟಾ ಮಾತ್ರ ಈ ಆರೋಪವನ್ನು ನಿರಾಕರಿಸಿದೆ.
ಅಮೆರಿಕದಲ್ಲಿ ಮೆಟಾ ವಿರುದ್ಧದ ಪ್ರಕರಣವೊಂದರ ಇತ್ಯರ್ಥದಲ್ಲಿ, ಬಳಕೆದಾರರ ದೈನಂದಿನ ಅನುಭವದ ಪ್ರಮುಖ ವೈಶಿಷ್ಟ್ಯಗಳನ್ನು ಬದಲಿಸಲು ಕಂಪನಿ ಒಪ್ಪಿಕೊಂಡಿರುವುದು ಇದೇ ಮೊದಲ ಬಾರಿ ಎಂದು ವರದಿಯಾಗಿದೆ. ಒಪ್ಪಂದದಂತೆ ಅಮೆರಿಕದಾದ್ಯಂತ ಹದಿಹರೆಯದ ಬಳಕೆದಾರರಿಗೆ ದಿನನಿತ್ಯದ ಬಳಕೆಗೆ ಮಿತಿ, ರಾತ್ರಿ ವೇಳೆ ಆ್ಯಪ್ ಬಳಕೆಗೆ ನಿರ್ಬಂಧ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗುತ್ತದೆ. ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ರಾಬ್ ಬೊಂಟಾ ಅವರ ಪ್ರಕಾರ, ಹೊಸ ಕ್ರಮಗಳಲ್ಲಿ ಬಳಕೆ ಸಮಯದ ಮಿತಿ, ಶಾಲಾ ಅವಧಿಯಲ್ಲಿ ನೋಟಿಫಿಕೇಷನ್ ಸ್ಥಗಿತಗೊಳಿಸುವುದು, ರಾತ್ರಿ ವೇಳೆ ಆ್ಯಪ್ ಬಳಕೆಗೆ ತಡೆ, ಪ್ಲಾಸ್ಟಿಕ್ ಸರ್ಜರಿ ಫಿಲ್ಟರ್‌ಗಳ ನಿಷೇಧ ಸೇರಿದಂತೆ ಹಲವು ಬದಲಾವಣೆಗಳು ಸೇರಿವೆ.
ಮೆಟಾ ಪಾವತಿಸಲಿರುವ 18 ಬಿಲಿಯನ್ ಡಾಲರ್ ಮೊತ್ತವನ್ನು ಸುಮಾರು 10 ವರ್ಷಗಳ ಅವಧಿಯಲ್ಲಿ ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಈ ಒಪ್ಪಂದಕ್ಕೆ ನ್ಯಾಯಾಲಯದ ಅನುಮೋದನೆ ಅಗತ್ಯವಿದೆ. ಕ್ಯಾಲಿಫೋರ್ನಿಯಾಗೆ ಸುಮಾರು 1.5ರಿಂದ 2.1 ಬಿಲಿಯನ್ ಡಾಲರ್ (₹1.43 ಲಕ್ಷ ಕೋಟಿಯಿಂದ ₹2.01 ಲಕ್ಷ ಕೋಟಿ.), ಕೊಲರಾಡೊಗೆ ಸುಮಾರು 615 ಮಿಲಿಯನ್ ಡಾಲರ್(ಸುಮಾರು ₹5,870 ಕೋಟಿ) ದೊರೆಯಲಿದೆ ಎಂದು ವರದಿಯಾಗಿದೆ. ಕೊಲರಾಡೊ ಅಟಾರ್ನಿ ಜನರಲ್ ಫಿಲ್ ವೈಸರ್ ಮಾತನಾಡಿ, ಮಕ್ಕಳನ್ನು ರಕ್ಷಿಸುವ ದೃಷ್ಟಿಯಿಂದ ಈ ಒಪ್ಪಂದದ ಮೂಲಕ ದೊರೆಯುತ್ತಿರುವ ಕ್ರಮಗಳು ಮಹತ್ವದ್ದಾಗಿವೆ ಎಂದು ಹೇಳಿದ್ದಾರೆ.
ಆದರೆ, ಸಾಮಾಜಿಕ ಮಾಧ್ಯಮ ವ್ಯಸನದ ಸಮಸ್ಯೆಗೆ ಕೇವಲ ಮೆಟಾದ ಬದಲಾವಣೆಗಳಿಂದ ಪರಿಹಾರ ಸಿಗುವುದಿಲ್ಲ ಎಂದು ಕಂಪನಿ ಹೇಳಿದೆ. ಹದಿಹರೆಯದವರು ಒಂದೇ ಆ್ಯಪ್‌ನಲ್ಲಿ ಉಳಿಯದೆ ಹಲವು ಸಾಮಾಜಿಕ ಮಾಧ್ಯಮ ವೇದಿಕೆಗಳ ನಡುವೆ ನಿರಂತರವಾಗಿ ಸಂಚರಿಸುವುದರಿಂದ ಉದ್ಯಮದಾದ್ಯಂತ ಒಂದೇ ರೀತಿಯ ಸುರಕ್ಷತಾ ವ್ಯವಸ್ಥೆ ಅಗತ್ಯ ಎಂದು ಮೆಟಾ ಅಭಿಪ್ರಾಯಪಟ್ಟಿದೆ. ಮೆಟಾದ ಮುಖ್ಯ ಕಾನೂನು ಅಧಿಕಾರಿ ಸಿಜೆ ಮಹೋನಿ, ಟಿಕ್‌ಟಾಕ್, ಸ್ನ್ಯಾಪ್ ಮತ್ತು ಯೂಟ್ಯೂಬ್ ಕೂಡ ಇದೇ ರೀತಿಯ ಸುರಕ್ಷತಾ ಚೌಕಟ್ಟನ್ನು ತಕ್ಷಣ ಜಾರಿಗೆ ತರಬೇಕು ಎಂದು ಕರೆ ನೀಡಿದ್ದಾರೆ.
ಮಕ್ಕಳ ಸಾಮಾಜಿಕ ಮಾಧ್ಯಮ ಬಳಕೆ ಮತ್ತು ವ್ಯಸನಕ್ಕೆ ಸಂಬಂಧಿಸಿದಂತೆ ಮೆಟಾ, ಯೂಟ್ಯೂಬ್, ಟಿಕ್‌ಟಾಕ್ ಹಾಗೂ ಸ್ನ್ಯಾಪ್ ವಿರುದ್ಧ ಅಮೆರಿಕದಲ್ಲಿ ಇನ್ನೂ ಸಾವಿರಾರು ಪ್ರಕರಣಗಳು ಬಾಕಿ ಇವೆ. ಪೋಷಕರು, ವೈಯಕ್ತಿಕ ದಾವೆದಾರರು, ಶಾಲಾ ಕಾಲೇಜುಗಳು ಹಾಗೂ ವಿವಿಧ ರಾಜ್ಯಗಳ ಅಟಾರ್ನಿ ಜನರಲ್‌ಗಳು ಈ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ಪೈಕಿ ವಿಚಾರಣೆಗೆ ಹೋದ ಮೊದಲ ಪ್ರಕರಣದಲ್ಲಿ ಫೆಬ್ರವರಿಯಲ್ಲಿ ಮೆಟಾ ಮತ್ತು ಯೂಟ್ಯೂಬ್ ಸೋತಿದ್ದವು. ಸಾಮಾಜಿಕ ಮಾಧ್ಯಮದಿಂದ ಬಾಲ್ಯದಲ್ಲೇ ವ್ಯಸನಕ್ಕೆ ಒಳಗಾದ ಆರೋಪ ಮಾಡಿದ್ದ ಯುವತಿಗೆ 6 ಮಿಲಿಯನ್ ಡಾಲರ್ ಪರಿಹಾರ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಟಿಕ್‌ಟಾಕ್ ಮತ್ತು ಸ್ನ್ಯಾಪ್ ವಿಚಾರಣೆ ಆರಂಭಕ್ಕೂ ಮುನ್ನವೇ ಪ್ರಕರಣ ಇತ್ಯರ್ಥಪಡಿಸಿಕೊಂಡಿದ್ದವು.
ಇದನ್ನೂ ಓದಿ: ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ ಗೆಲುವು ಅಸಿಂಧುಗೊಳಿಸಲು ಆಧಾರವಲ್ಲ: ಮದ್ರಾಸ್ ಹೈಕೋರ್ಟ್‌ಗೆ ಸಿಎಂ ವಿಜಯ್ ವಾದ
ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲೂ ಮೆಟಾಗೆ ಹಿನ್ನಡೆಯಾಗಿದೆ. ನ್ಯೂ ಮೆಕ್ಸಿಕೊ ಅಟಾರ್ನಿ ಜನರಲ್ ದಾಖಲಿಸಿದ್ದ ಪ್ರಕರಣದಲ್ಲಿ, ತನ್ನ ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆಗೆ ಅವಕಾಶ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮೆಟಾಗೆ ರಾಜ್ಯಕ್ಕೆ ಸುಮಾರು 1 ಬಿಲಿಯನ್ ಡಾಲರ್ (ಸುಮಾರು ₹9,550 ಕೋಟಿ) ಪಾವತಿಸುವಂತೆ ಆದೇಶಿಸಲಾಗಿದೆ. ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ನ ಫೆಡರಲ್ ನ್ಯಾಯಾಲಯದಲ್ಲಿ ನಡೆದ ಮೆಟಾ ಪ್ರಕರಣದ ವಿಚಾರಣೆ ಹಲವು ವಾರಗಳ ಕಾಲ ನಡೆಯುವ ನಿರೀಕ್ಷೆಯಿತ್ತು. ಹಲವು ಸಾಕ್ಷಿಗಳು ವಿಚಾರಣೆಗೆ ಹಾಜರಾಗಬೇಕಾಗಿತ್ತು. ಆದರೆ, ಪ್ರಕರಣ ಇತ್ಯರ್ಥಗೊಂಡ ಹಿನ್ನೆಲೆಯಲ್ಲಿ ಕೇವಲ ನಾಲ್ಕು ದಿನಗಳ ವಿಚಾರಣೆಯಲ್ಲೇ ಪ್ರಕ್ರಿಯೆ ಅಂತ್ಯಗೊಂಡಿದೆ.
ಮಕ್ಕಳ ಸಾಮಾಜಿಕ ಮಾಧ್ಯಮ ವ್ಯಸನ, ಸ್ಕ್ರೀನ್ ಟೈಮ್ ಹಾಗೂ ಆನ್‌ಲೈನ್ ಸುರಕ್ಷತೆ ಕುರಿತು ಜಾಗತಿಕ ಮಟ್ಟದಲ್ಲಿ ಕಳವಳ ಹೆಚ್ಚುತ್ತಿರುವ ಸಂದರ್ಭದಲ್ಲಿ ಮೆಟಾದ ಈ ಒಪ್ಪಂದ ಮಹತ್ವ ಪಡೆದಿದೆ. ಸಾಮಾಜಿಕ ಮಾಧ್ಯಮ ಕಂಪನಿಗಳ ಉತ್ಪನ್ನ ವಿನ್ಯಾಸವೇ ಹದಿಹರೆಯದವರ ಬಳಕೆಯ ಸ್ವರೂಪದ ಮೇಲೆ ಪರಿಣಾಮ ಬೀರುತ್ತಿದೆಯೇ ಎಂಬ ಪ್ರಶ್ನೆಯನ್ನೂ ಈ ಪ್ರಕರಣ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.




