2021ರಲ್ಲಿ ಒಂದೇ ಒಂದು ‘ಝೂಮ್’ ವಿಡಿಯೋ ಕಾಲ್ ಮೂಲಕ ಸುಮಾರು 900 ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿ ವಿಶ್ವಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಅಮೆರಿಕ ಮೂಲದ ‘ಬೆಟರ್ ಹೋಮ್ ಅಂಡ್ ಫೈನಾನ್ಸ್’ ಕಂಪನಿಯ ಸಿಇಒ ವಿಶಾಲ್ ಗರ್ಗ್ ಅವರನ್ನು ಆಡಳಿತ ಮಂಡಳಿಯು ಹುದ್ದೆಯಿಂದ ಕಿತ್ತೊಗೆದಿದೆ.
ಗರ್ಗ್ ಅವರ ಹಠಾತ್ ನಿರ್ಧಾರಗಳು, ಅವರ ನಡವಳಿಕೆ, ತೀರ್ಮಾನ ತೆಗೆದುಕೊಳ್ಳುವ ಶೈಲಿ ಹಾಗೂ ಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಬೋರ್ಡ್ ನಿರ್ದೇಶಕರು ಸರ್ವಾನುಮತದಿಂದ ಅವರನ್ನು ವಜಾಗೊಳಿಸಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ : ಕೆಲಸದಿಂದ ವಜಾ ಮಾಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
2022ರಿಂದೀಚೆಗೆ ಕಂಪನಿಯು 1.5 ಬಿಲಿಯನ್ ಡಾಲರ್‌ಗೂ (ಸುಮಾರು 12,500 ಕೋಟಿ ರೂ.) ಹೆಚ್ಚು ನಷ್ಟ ಅನುಭವಿಸಿದೆ. ವಿಶಾಲ್ ನಾಯಕತ್ವದಲ್ಲಿ ಕಂಪನಿಯ ಷೇರು ಮೌಲ್ಯ ಶೇಕಡ 90ಕ್ಕಿಂತ ಹೆಚ್ಚು ಕುಸಿದಿತ್ತು. ಆಡಳಿತಾತ್ಮಕ ನಿಯಮಗಳನ್ನು ಪಾಲಿಸದಿರುವುದು ಮತ್ತು ವರದಿ ಸಲ್ಲಿಕೆಯಲ್ಲಿ ವಿಳಂಬ ಮಾಡಿದ್ದೂ ಸಹ ಅವರ ವಜಾಕ್ಕೆ ಪ್ರಮುಖ ಕಾರಣವಾಗಿದೆ.
ಕೋವಿಡ್ ಸಮಯದ ಕ್ರಿಸ್‌ಮಸ್ ರಜೆಗೆ ಕೆಲವೇ ದಿನಗಳಿದ್ದಾಗ ವಿಶಾಲ್ ಗರ್ಗ್, 3 ನಿಮಿಷಗಳ ಝೂಮ್ ಕಾಲ್‌ನಲ್ಲಿ “ಈ ಕರೆ ವೀಕ್ಷಿಸುತ್ತಿರುವ ನೀವು ದುರಾದೃಷ್ಟವಂತರು, ನಿಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾ ಮಾಡಲಾಗಿದೆ” ಎಂದು 900 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದರು. ಅಂದಿನಿಂದ ಅವರ ಆಡಳಿತ ವೈಖರಿ ಉದ್ಯೋಗಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಕಂಪನಿಯ ಮಂಡಳಿಯು ಡೇನಿಯಲ್ ಲೂಯಿಸ್ ಅವರನ್ನು ನೂತನ ಮಧ್ಯಂತರ ಸಿಇಒ ಆಗಿ ನೇಮಿಸಿದೆ.
ಆಡಳಿತ ಮಂಡಳಿಯ ನಿರ್ಧಾರವನ್ನು ಪ್ರಶ್ನಿಸಿರುವ ವಿಶಾಲ್ ಗರ್ಗ್, ತಮ್ಮ ವಜಾವನ್ನು ಕಾನೂನಾತ್ಮಕವಾಗಿ ಎದುರಿಸಲು ಮುಂದಾಗಿದ್ದಾರೆ. ಪ್ರಖ್ಯಾತ ವಕೀಲರನ್ನು ನೇಮಿಸಿಕೊಂಡಿರುವ ಅವರು, ಕಂಪನಿ ಮತ್ತೆ ಲಾಭದಾಯಕವಾಗುವವರೆಗೆ ವರ್ಷಕ್ಕೆ ಕೇವಲ $1 (ಒಂದು ಡಾಲರ್) ವೇತನಕ್ಕೆ ದುಡಿಯಲು ಸಿದ್ಧವೆಂದು ಪತ್ರ ಬರೆದಿದ್ದಾರೆ. ಆದರೆ, ಬೋರ್ಡ್ ಮಾತ್ರ ಅವರಿಗೆ ಮತ್ತೆ ಅಧಿಕಾರ ನೀಡಲು ನಿರಾಕರಿಸಿದೆ.




