ನಮ್ಮ ನಾಡಿನ ಕಲೆ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಕಲಾವಿದರಿಗೆ ಆರ್ಥಿಕ ಭದ್ರತೆ ಕಲ್ಪಿಸುವುದರ ಜೊತೆಗೆ ಅವರ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ‘ಹರ್ ಘರ್ ತಿರಂಗಾ’ ಹಾಗೂ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಜಿಲ್ಲೆಯ ಕಲಾವಿದರಿಗೆ ಗುರುತಿನ ಚೀಟಿ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ಜಾನಪದ ಸಾಹಿತ್ಯವು ನಮ್ಮ ಪೂರ್ವಜರಿಂದ ಬಾಯಿಂದ ಬಾಯಿಗೆ, ತಲೆಮಾರಿನಿಂದ ತಲೆಮಾರಿಗೆ ಹರಿದುಬಂದಿರುವ ಅಮೂಲ್ಯ ಪರಂಪರೆಯಾಗಿದೆ. ನಮ್ಮ ಹಿರಿಯರು ಹಂತಿ ಪದ, ಸೋಬಾನೆ, ತತ್ವಪದ ಸೇರಿದಂತೆ ಹಲವು ಜಾನಪದ ಸಾಹಿತ್ಯ ಪ್ರಕಾರಗಳನ್ನು ರಚಿಸಿ, ಹಾಡುವ ಮೂಲಕ ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ. ಪ್ರತಿಯೊಬ್ಬರೂ ಕಲಾವಿದರಾಗಲು ಸಾಧ್ಯವಿಲ್ಲ. ಕಲೆ ಎಂಬುದು ದೇವರು ಕೊಟ್ಟ ವರವಾಗಿದ್ದು, ಅಂತಹ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ” ಎಂದರು.
“ಜಿಲ್ಲೆಯಲ್ಲಿ 1,406 ಕಲಾವಿದರಿಗೆ ಗುರುತಿನ ಚೀಟಿ ವಿತರಿಸುವ ಕಾರ್ಯ ಶ್ಲಾಘನೀಯ. ಜಿಲ್ಲೆಯ ಕಲಾವಿದರನ್ನು ಗುರುತಿಸುವುದರ ಜೊತೆಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಅರ್ಹ ಕಲಾವಿದರಿಗೆ ತಲುಪಿಸಲು ಸಹಕಾರಿಯಾಗಲಿದೆ. ವಸತಿ ಸೌಲಭ್ಯವಿಲ್ಲದ ಕಲಾವಿದರು ಅರ್ಜಿ ಸಲ್ಲಿಸಬೇಕು. ಕಲಾವಿದರ ಬಹುದಿನಗಳ ಬೇಡಿಕೆಯಾಗಿರುವ ‘ಕಲಾವಿದರ ಬಡಾವಣೆ’ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಲಾವಿದರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ” ಎಂದು ಭರವಸೆ ನೀಡಿದರು.
“ಆಧುನಿಕತೆಯ ಭರಾಟೆಯಲ್ಲಿ ಯುವ ಸಮೂಹ ಸೇರಿದಂತೆ ಬಹುತೇಕರು ಆಧುನಿಕ ಜೀವನಶೈಲಿಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಸಾಂಪ್ರದಾಯಿಕ ಕಲೆ, ಸಂಸ್ಕೃತಿ ಹಾಗೂ ಮೌಲ್ಯಗಳು ನಿಧಾನವಾಗಿ ಮರೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ತಡೆಯಲು ಜಾನಪದ ಗೀತೆಗಳು, ತತ್ವಪದಗಳು ಹಾಗೂ ಸತ್ಸಂಗದಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜನರು ಹೆಚ್ಚು ತೊಡಗಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮಾತನಾಡಿ, “ಕರ್ನಾಟಕ ಸರ್ಕಾರ ರಚಿಸಿರುವ 32 ಟ್ರಸ್ಟ್‌ಗಳ ಪೈಕಿ ಬೀದರ್ ಜಿಲ್ಲೆಯಲ್ಲಿ ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ್ ಕಂಬಳಿವಾಲೆ ಟ್ರಸ್ಟ್‌ಗಳು ರಚನೆಯಾಗಿರುವುದು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿ. ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ್ ಕಂಬಳಿವಾಲೆ ಟ್ರಸ್ಟ್ ಮೂಲಕ ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ದೊರೆಯಲಿದ್ದು, ಕಲಾವಿದರು, ಸಾಹಿತ್ಯಾಸಕ್ತರಿಗೆ ಉತ್ತಮ ವೇದಿಕೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
“ಬೀದರ್ ಶರಣರ ನಾಡಾಗಿದ್ದು, ವಚನ ಸಾಹಿತ್ಯ ಹಾಗೂ ಶರಣ ಪರಂಪರೆಗೆ ಜಿಲ್ಲೆಯಲ್ಲಿ ವಿಶೇಷ ಸ್ಥಾನವಿದೆ. ಈ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿದೆ” ಎಂದು ಹೇಳಿದರು.
“ಸಾಮಾಜಿಕ ಚಳವಳಿಯ ಮೂಲಕ ವಚನ ಸಾಹಿತ್ಯದ ಸಂದೇಶವನ್ನು ಜನರಿಗೆ ತಲುಪಿಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಬೀದರ್ ಜಿಲ್ಲೆಯಲ್ಲಿ ‘ವಚನ ಸಂಗೀತ ಉತ್ಸವ’ ಆಯೋಜಿಸಲು ಸರ್ಕಾರ ಉದ್ದೇಶಿಸಿದೆ. ವಚನಗಳ ಸಾರವನ್ನು ಸಂಗೀತದ ಮೂಲಕ ಜನರಿಗೆ ತಲುಪಿಸುವುದು, ಯುವಜನರನ್ನು ಸಾಹಿತ್ಯ, ಸಂಸ್ಕೃತಿ ಹಾಗೂ ಶರಣ ಪರಂಪರೆಯತ್ತ ಸೆಳೆಯುವುದು ಉತ್ಸವದ ಉದ್ದೇಶವಾಗಿದೆ” ಎಂದು ತಿಳಿಸಿದರು.
ಕಲಾವಿದ ಸಂಗಮೇಶ್ ಬೆಲ್ದಾಳ ಮತ್ತು ತಂಡ ಸುಗಮ ಸಂಗೀತ ಪ್ರಸ್ತುತಪಡಿಸಿ ಸಂಗೀತಾಸಕ್ತರನ್ನು ರಂಜಿಸಿದರು. ವಿವಿಧ ಸುಮಧುರ ಗೀತೆಗಳ ಮೂಲಕ ತಂಡವು ಕಾರ್ಯಕ್ರಮಕ್ಕೆ ಮೆರುಗು ತಂದಿತು. ಬೀದರ್‌ನ ದಿಲೀಪ್ ಕಾಡವಾದ ಮತ್ತು ತಂಡ ದೇಶ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿ ಸ್ವಾತಂತ್ರ‍್ಯೋತ್ಸವದ ಸಂಭ್ರಮ ಮತ್ತಷ್ಟು ಹೆಚ್ಚಿಸಿದರು. ದೇಶಪ್ರೇಮ ಸಾರುವ ಗೀತೆಗಳಿಗೆ ನೆರೆದಿದ್ದ ಕಲಾವಿದರು, ಸಾಹಿತ್ಯಾಸಕ್ತರು ಹಾಗೂ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಯ ವಿವಿಧ ಕಲಾವಿದರಿಗೆ ಗುರುತಿನ ಚೀಟಿ ವಿತರಿಸಿದರು. ಸುಗಮ ಸಂಗೀತ ಹಾಗೂ ದೇಶಭಕ್ತಿಗೀತೆ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು, ಸಾಹಿತ್ಯಾಸಕ್ತರು ಹಾಗೂ ನಾಗರಿಕರು ಭಾಗವಹಿಸಿದ್ದರು.
ಇದನ್ನೂ ಓದಿ : ಬೀದರ್ | ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಲು ಕ್ರಮ: ಸಚಿವ ಈಶ್ವರ ಖಂಡ್ರೆ
ಮಾಜಿ ಸಚಿವ, ಶಾಸಕ ರಹೀಮ್ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಬೀದರ್ ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್, ಅಪರ ಜಿಲ್ಲಾಧಿಕಾರಿ ಕು. ಸುರೇಖಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾಂತ ಪ್ರಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ ಉಪಸ್ಥಿತರಿದ್ದರು. ಚನ್ನಬಸವ ಹೇಡೆ ಕಾರ್ಯಕ್ರಮ ನಿರೂಪಿಸಿದರು. ಕ್ಲೆಮೆಂಟಿನಾ ವಂದಿಸಿದರು.




