ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಮೌಲ್ಯ ಕುಸಿಯುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. “ಯಾರು ಮೊದಲು ಕೆಳಗೆ ಬೀಳುತ್ತಾರೆಂಬ ವಿಷಯದಲ್ಲಿ ರೂಪಾಯಿ ಮತ್ತು ಬಿಜೆಪಿಯ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ” ಎಂದು ಲೇವಡಿ ಮಾಡಿದ್ದಾರೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯವು ಐತಿಹಾಸಿಕ ಕುಸಿತ ಕಂಡು 95 ರೂ. ಗಡಿಯನ್ನು ದಾಟಿದೆ. ಇರಾನ್ ಯುದ್ಧದ ಭೀತಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಚಂಚಲತೆಯೇ ಈ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ನಿರಂತರ ರೂಪಾಯಿ ಕುಸಿತದ ಕಾರಣಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ಅಖಿಲೇಶ್ ಯಾದವ್ ಟೀಕಾಪ್ರಹಾರ ನಡೆಸಿದ್ದಾರೆ. ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, “ಬಿಜೆಪಿ ನಾಯಕರ ಹಗರಣಗಳು ಮತ್ತು ಭ್ರಷ್ಟಾಚಾರದ ಪ್ರಕರಣಗಳಿಂದಾಗಿ ಬಿಜೆಪಿ ವರ್ಚಸ್ಸು ದಿನದಿಂದ ದಿನಕ್ಕೆ ಹದಗೆಡುತ್ತಿದೆ” ಎಂದು ಆರೋಪಿಸಿದ್ದಾರೆ.
“ಬಿಜೆಪಿ ನಾಯಕರ ದುಷ್ಕೃತ್ಯಗಳು ಮತ್ತು ಬೃಹತ್ ಹಗರಣಗಳು ಸತತವಾಗಿ ಬಯಲಾಗುತ್ತಿವೆ. ಇದು ಪಕ್ಷದ ವರ್ಚಸ್ಸನ್ನು ಪಾತಾಳಕ್ಕೆ ತಳ್ಳುತ್ತಿದೆ. ಪಕ್ಷದ ಸದಸ್ಯರು ಮತ್ತು ಅವರ ಸಹಚರರ ಭ್ರಷ್ಟಾಚಾರದ ವಿಚಾರಗಳು ಒಂದೊಂದಾಗಿ ಹೊರಬರುತ್ತಿದ್ದರೂ, ನೈತಿಕ ಹೊಣೆ ಹೊತ್ತು ಯಾರೂ ರಾಜೀನಾಮೆ ನೀಡುತ್ತಿಲ್ಲ” ಎಂದು ಅವರು ಕಿಡಿಕಾರಿದ್ದಾರೆ.



