ತೀರ್ಪುಗಳನ್ನು ಪ್ರಕಟಿಸುವಲ್ಲಿ ವಿಳಂಬ ಮಾಡುವುದರಿಂದ ಅರ್ಜಿದಾರರಿಗೆ ಸರಿಪಡಿಸಲಾಗದ ನಷ್ಟವನ್ನುಂಟುಮಾಡುತ್ತದೆ. ಆದ್ದರಿಂದ ಆದೇಶಗಳನ್ನು ಕಾಯ್ದಿರಿಸಿದ ಮೂರು ತಿಂಗಳೊಳಗೆ ತೀರ್ಪುಗಳನ್ನು ಪ್ರಕಟಿಸಿ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಎಲ್ಲ ಹೈಕೋರ್ಟ್ಗಳಿಗೆ ನಿರ್ದೇಶನ ನೀಡಿದೆ.
ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತ್ವರಿತ ನಿರ್ಧಾರಗಳ ಅಗತ್ಯವಿದೆ ಎಂದು ಒತ್ತಿ ಹೇಳಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಜಾಮೀನು ಅರ್ಜಿಗಳನ್ನು ಅದೇ ದಿನ ತೀರ್ಮಾನಿಸಬೇಕು ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಅಲಹಾಬಾದ್ ಹೈಕೋರ್ಟ್ನ ಕಾರ್ಯನಿರ್ವಹಣೆ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ
ಆದೇಶಗಳನ್ನು ದೀರ್ಘಕಾಲ ಕಾಯ್ದಿರಿಸಿದ್ದರೆ, ಅವುಗಳನ್ನು ರ್ಶೀಘ್ರ ಪ್ರಕಟಿಸಬೇಕು. ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು. ಜಾಮೀನು ನೀಡುವ ಅಥವಾ ಶಿಕ್ಷೆಯನ್ನು ಅಮಾನತುಗೊಳಿಸುವ ಆದೇಶಗಳನ್ನು ಜೈಲು ಅಧಿಕಾರಿಗಳಿಗೆ ತ್ವರಿತವಾಗಿ ತಿಳಿಸಬೇಕು. ವಿಚಾರಣಾಧೀನ ಅಥವಾ ಅಪರಾಧಿಯನ್ನು ಅದೇ ದಿನ ಅಥವಾ ಹೆಚ್ಚಿನದಾಗಿ ಮರುದಿನ ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆದೇಶ ಕಾಯ್ದಿರಿಸಿದ ನಾಲ್ಕು ತಿಂಗಳೊಳಗೆ ತೀರ್ಪು ಪ್ರಕಟಿಸದಿದ್ದರೆ, ಕಕ್ಷಿದಾರರು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳನ್ನು ಸಂಪರ್ಕಿಸಿ ಈ ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸಬಹುದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಹಾಗೆಯೇ ಮುಕ್ತ ನ್ಯಾಯಾಲಯದಲ್ಲಿ ತೀರ್ಪು ನೀಡಿದಾಗ 24 ಗಂಟೆಗಳ ಒಳಗೆ ತೀರ್ಪನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಪೀಠವು ಹೇಳಿದೆ.




