ಸರ್ಕಾರ ಇಂತಹ ಮೀಮ್ ಕ್ರಾಂತಿಗಳನ್ನು ಸುಮ್ಮನೆ ಬಿಟ್ಟರೆ ಅಥವಾ ಇದಕ್ಕೆ ಸಮ್ಮತಿ ಕೊಟ್ಟರೆ ತಾನು ದುರ್ಬಲ ಎಂದು ಒಪ್ಪಿಕೊಂಡಂತಾಗುತ್ತದೆ, ಒಂದು ವೇಳೆ ಇಂಟರ್ನೆಟ್ ಟ್ರೋಲ್ ಪಡೆಗಳನ್ನು ಬಳಸಿ ಅದನ್ನು ನಿಷೇಧಿಸಲು ಹೋದರೆ ಸಾರ್ವಜನಿಕರ ಕಣ್ಣಿಗೆ ಹಾಸ್ಯಾಸ್ಪದವಾಗಿ ಕಾಣುತ್ತದೆ. ಪ್ರಾಯಶಃ ತಿಳಿಯದೆಯೇ, CJP ಇಂತಹದೊಂದು ‘ಡಿಲೆಮಾ ಆಕ್ಷನ್’ ಮಾದರಿಯನ್ನು ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಹೋರಾಡುವವರಿಗೆ ಉಡುಗೊರೆಯಾಗಿ ನೀಡಿದೆ ಎನಿಸುತ್ತದೆ.
ರಾಜಕೀಯ ವಿಶ್ಲೇಷಕರು ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಯನ್ನು ಸಾಮಾನ್ಯ ರಾಜಕೀಯ ದೃಷ್ಟಿಕೋನದಿಂದಲೇ ನೋಡುತ್ತಾ ಅದರ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅವರೆಲ್ಲ CJP ಎಂಬುದು ನೋಂದಾಯಿತ ರಾಜಕೀಯ ಪಕ್ಷವೇ ಅಲ್ಲ, ಅದೊಂದು ವ್ಯವಸ್ಥಿತ ಸೈದ್ಧಾಂತಿಕ ಚಳವಳಿಯೂ ಅಲ್ಲ. ಇದೊಂದು ಅಲೆಯೇ ಹೊರತು ಸುನಾಮಿಯಲ್ಲ. ಅದು ಪ್ರಸ್ತುತ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಜನರಲ್ಲಿ ಮೂಡಿರುವ ಆಕ್ರೋಶದ ಸ್ಫೋಟವಷ್ಟೇ ಎನ್ನುವುದನ್ನು ಮರೆತಂತಿದೆ.
ಇತಿಹಾಸದಲ್ಲಿ ಪ್ರಬಲ ಬಹುಮತ ಹೊಂದಿರುವ ಸರ್ಕಾರಗಳು ತಮ್ಮ ಆಡಳಿತದ ಮಧ್ಯಾವಧಿಗೆ ಬಂದಾಗ ಇಂತಹ ದಿಢೀರ್ ಆಂದೋಲನಗಳನ್ನು ಎದುರಿಸಿವೆ. ಅಂದರೆ, ಎಲ್ಲಿಂದಲೋ ಹುಟ್ಟಿಕೊಂಡ ಪ್ರತಿಭಟನಾ ಆಂದೋಲನಗಳು ಅಧಿಕಾರದ ಕರಾಳ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟ ಸಂದರ್ಭಗಳಂತೆ ಭಾಸವಾಗುತ್ತದೆ. 1973-74ರ ಗುಜರಾತ್ ಮತ್ತು ಬಿಹಾರ ಚಳವಳಿಗಳು, 1983ರ ಅಸ್ಸಾಂ ಚಳವಳಿ, 2012ರ ಅಣ್ಣಾ ಆಂದೋಲನ ಮತ್ತು 2021ರ ಬೃಹತ್ ರೈತ ಚಳವಳಿಗಳಂತೆ, ಪ್ರಸ್ತುತ ಸರ್ಕಾರದ ತೀವ್ರ ನಿಯಂತ್ರಣದ ನಡುವೆಯೂ ಈ CJP ಆಡಳಿತದ ಮೇಲಿರುವ ಅಸಮಾಧಾನವನ್ನು ಹೊರಹಾಕುತ್ತಿದೆ. ಬಿಜೆಪಿ 2024ರಲ್ಲಿ ಹೇಗೋ ಮುಗ್ಗರಿಸಿ ಅಧಿಕಾರಕ್ಕೆ ಬಂದಿತಾದರೂ, ಕಳೆದ ಒಂದು ದಶಕದ ಕಾಲ ಇದ್ದ ಪ್ರಾಬಲ್ಯ ಅಥವಾ ಸಾರ್ವಜನಿಕ ನಂಬಿಕೆಯನ್ನು ಉಳಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಲಿಲ್ಲ. ಇತ್ತೀಚಿನ ಬಂಗಾಳ ಚುನಾವಣೆ ನಂತರ ಸರ್ಕಾರ ತನ್ನ ಪಾರುಪತ್ಯವನ್ನು ಮರಳಿ ಸ್ಥಾಪಿಸಿಕೊಂಡಿದ್ದೇನೆಂದು ಬೀಗುತ್ತಿರುವಾಗಲೇ, NEET ಪರೀಕ್ಷಾ ಅಕ್ರಮ, ಮತ್ತು ಸಿಜೆಐ (CJI) ಅವರ ಅವಲೋಕನಗಳು ಎದುರುಗೊಂಡು ಯುವ ಜನರ ಆಕ್ರೋಶದ ಕಟ್ಟೆ ಒಡೆಯುತ್ತಿದೆ. ಈ ಪ್ರಕರಣಗಳು ಆ ಕ್ಷಣದ ನೆಪವಾಗಿವೆಯಷ್ಟೆ, ನಿಜವಾದ ಕಾರಣ ಬೇರೆಯದೇ.
ಈ ವಿದ್ಯಮಾನದ ಅತ್ಯಂತ ವಿಶೇಷ ಅಂಶವೆಂದರೆ ಅದು ಆಡಳಿತಗಾರರನ್ನು ಇಕ್ಕಟ್ಟಿಗೆ ಸಿಲುಕಿಸಲು ಬಳಸುತ್ತಿರುವ ‘ಡಿಲೆಮಾ ಆಕ್ಷನ್’ (Dilemma Action) ಎಂಬ ತಂತ್ರ. ಜಿರಳೆಯ (Cockroach) ಮೀಮ್ ಬಳಸಿ ಇಡೀ ವ್ಯವಸ್ಥೆಯನ್ನು ಅಣಕಿಸುವ ಈ ಪ್ರವೃತ್ತಿ ಸರ್ವಾಧಿಕಾರಿ ಧೋರಣೆಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಸರ್ಕಾರ ಇಂತಹ ಮೀಮ್ಗಳನ್ನು ಸುಮ್ಮನೆ ಬಿಟ್ಟರೆ ಅಥವಾ ಇದಕ್ಕೆ ಸಮ್ಮತಿ ಕೊಟ್ಟರೆ ತಾನು ದುರ್ಬಲ ಎಂದು ಒಪ್ಪಿಕೊಂಡಂತಾಗುತ್ತದೆ, ಅದೇ ಒಂದು ವೇಳೆ ಇಂಟರ್ನೆಟ್ ಟ್ರೋಲ್ ಪಡೆಗಳನ್ನು ಬಳಸಿ ಅದನ್ನು ನಿಷೇಧಿಸಲು ಹೋದರೆ ಸಾರ್ವಜನಿಕರ ಕಣ್ಣಿಗೆ ಕ್ರೂರವಾಗಿ ಹಾಗೂ ಹಾಸ್ಯಾಸ್ಪದವಾಗಿ ಕಾಣುತ್ತದೆ. ಪ್ರಾಯಶಃ ತಿಳಿಯದೆಯೇ, CJP ಇಂತಹದೊಂದು ‘ಡಿಲೆಮಾ ಆಕ್ಷನ್’ ಮಾದರಿಯನ್ನು ಪ್ರಜಾಪ್ರಭುತ್ವದ ಮರುಸ್ಥಾಪನೆಗಾಗಿ ಹೋರಾಡುವವರಿಗೆ ಉಡುಗೊರೆಯಾಗಿ ನೀಡಿದೆ ಎನಿಸುತ್ತದೆ.

ಅಧಿಕಾರಸ್ಥರು ಚುನಾವಣಾ ಯಶಸ್ಸಿನ ಸುತ್ತ ಎಷ್ಟೇ ಡೋಲು ಬಾರಿಸಿದರೂ, ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಜನರಲ್ಲಿ ಹೆಚ್ಚುತ್ತಿರುವ ಆತಂಕ ಮತ್ತು ಸಂಕಟವನ್ನು ಮರೆಮಾಚಲು ಸಾಧ್ಯವಿಲ್ಲ. ಸರ್ವಶಕ್ತವಾದ ಆಡಳಿತವೊಂದು ಒಂದು ಸಣ್ಣ ಮೀಮ್ ಅನ್ನು ನಿಷೇಧಿಸಲು ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಬೇಕಾಗಿ ಬಂದರೆ ಮತ್ತು ಸೋಷಿಯಲ್ ಮೀಡಿಯಾ ಟ್ರೆಂಡ್ ಅನ್ನು ಅಪಖ್ಯಾತಿಗೊಳಿಸಲು ತನ್ನ ಟ್ರೋಲ್ ಸೈನ್ಯವನ್ನು ನಿಯೋಜಿಸಬೇಕಾಗಿ ಬಂದರೆ, ಅದು ಒಳಗಿನಿಂದ ತುಂಬಾ ದುರ್ಬಲವಾಗಿದೆ ಎಂದೇ ಅರ್ಥ. ಅದರ ವಿಜಯಗಳು ಎಷ್ಟು ಹೆಚ್ಚುತ್ತವೆಯೋ, ಅದು ಅಷ್ಟೇ ಬೇಗನೆ ಪತನದ ಅಂಚಿಗೆ ತಲುಪುತ್ತದೆ. ವಿರೋಧ ಪಕ್ಷಗಳು ಈ ಜವಾಬ್ದಾರಿಯನ್ನು ಹೊರಲು ಪೂರ್ಣವಾಗಿ ಸಿದ್ಧವಾಗಿಲ್ಲ. CJPಯ ಸುಮಾರು 2.3 ಕೋಟಿ ಅನುಯಾಯಿಗಳು ಎಲ್ಲಾ ವಿರೋಧ ಪಕ್ಷಗಳಿಗೆ “ನೀವು ಮೊದಲು ನಿಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳಿ ಮತ್ತು ಒಟ್ಟಾಗಿ ಕೆಲಸ ಮಾಡಿ” ಎನ್ನುವ ಸಂದೇಶವನ್ನಂತೂ ನೀಡಿದ್ದಾರೆ.
ಹಾಗಾಗಿ ನಾವು ಕಾಕ್ರೋಚ್ ಜನತಾ ಪಾರ್ಟಿಗೆ ಪ್ರತಿಕ್ರಿಯಿಸಲು ಹೊಸ ಮಾರ್ಗ ಕಂಡುಕೊಳ್ಳಬೇಕಾಗಿದೆ. ಎಂದಿನ ರಾಜಕೀಯ ಸಿನಿಕತನ ಅಥವಾ ರಾಜಕೀಯವಾಗಿ ಬಳಸಿಕೊಳ್ಳುವ ಆಲೋಚನೆಗಳಿಂದ ದೂರವಿರಬೇಕಿದೆ. ಇದನ್ನ ಅರ್ಥ ಮಾಡಿಕೊಳ್ಳಲು ವಿನೋದ್ ಕುಮಾರ್ ಶುಕ್ಲಾ ಅವರ ಕವಿತೆಯೊಂದ ಗುನುಗಿದರೆ ಆಗಬಹುದೇನೋ. ಕವಿತೆಯ ಅರ್ಥ ಹೀಗಿದೆ… “ಈ ಕಠಿಣ ದಿನಗಳಲ್ಲಿ ನಾವೆಲ್ಲರೂ ಪರಸ್ಪರ ಪರಿಚಯವಿಲ್ಲದ ಅಪರಿಚಿತರಾಗಿದ್ದರೂ, ನಮ್ಮ ದೌರ್ಬಲ್ಯ ಮತ್ತು ಕಾಳಜಿಯ ಆಧಾರದ ಮೇಲೆ ಒಬ್ಬರಿಗೊಬ್ಬರು ಕೈಹಿಡಿದು ಜೊತೆಯಾಗಿ ನಡೆಯುವ ಹೊಸ ರಾಜಕೀಯ ಒಗ್ಗಟ್ಟನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ.”
ಇದನ್ನೂ ಓದಿ: ಭಾರತದಲ್ಲೂ GEN-Z ಕ್ರಾಂತಿ? ನೆರೆಹೊರೆಯ ತಲ್ಲಣಗಳೂ, ʼಕಾಕ್ರೋಚ್ʼ ನೀಡುತ್ತಿರುವ ಎಚ್ಚರಿಕೆಯೂ!
ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಜನ ಸೇರಿ ಈಗಾಗಲೇ ಸೆಟ್ ಆಗಿರುವ ಒಂದು ಟ್ರೆಂಡ್ ಅನ್ನು ಬೆಂಬಲಿಸುವುದು ಸುಲಭ (ಇದನ್ನು ಡಿಜಿಟಲ್ ಜಗತ್ತಿನಲ್ಲಿ ‘Slacktivism’ ಎನ್ನಲಾಗುತ್ತದೆ). ಆದರೆ, ಈ ವರ್ಚುವಲ್ ಆಕ್ರೋಶ ನೆಲದ ಮೇಲಿನ ನೈಜ ಹೋರಾಟವಾಗಿ ರೂಪಾಂತರಗೊಳ್ಳದಿದ್ದರೆ, ಅದು ತಾತ್ಕಾಲಿಕವಾಗುತ್ತದೆ. ಹೀಗೆ ಬಂದು ಹಾಗೆ ಹೋಗುವ ಹಿಮದಂತೆ ಕರಗಿಹೋಗುತ್ತದೆ. ಯುವ ಪೀಳಿಗೆ ಇಂಟರ್ನೆಟ್ನಲ್ಲಿ ಆಕ್ರೋಶ ವ್ಯಕ್ತಪಡಿಸುವುದನ್ನು ನಿಲ್ಲಿಸಿ, ಅದನ್ನು ವ್ಯವಸ್ಥಿತ ರಾಜಕೀಯ ಬದಲಾವಣೆಯನ್ನಾಗಿ ಮಾಡದ ಹೊರತು ದೇಶದ ಚುನಾವಣೆ, ಆಡಳಿತ ವೈಖರಿ ಹಾಗೂ ವ್ಯವಸ್ಥೆಯ ಚಿತ್ರಣ ಬದಲಾಗುವುದಿಲ್ಲ.
ಇತಿಹಾಸದುದ್ದಕ್ಕೂ ರಾಜಪ್ರಭುತ್ವ ಮತ್ತು ಸರ್ವಾಧಿಕಾರವನ್ನು ಅಲುಗಾಡಿಸಲು ‘ವ್ಯಂಗ್ಯ’ ಮತ್ತು ‘ಹಾಸ್ಯ’ ಪ್ರಮುಖ ಪಾತ್ರ ವಹಿಸಿವೆ. ಗಂಭೀರವಾದ ರಾಜಕೀಯ ಭಾಷಣಗಳು ಮಾಡಲಾಗದ ಕೆಲಸವನ್ನು ಒಂದು ಸಣ್ಣ ಮೀಮ್ ಮಾಡಬಲ್ಲದು, ಏಕೆಂದರೆ ಅದು ಪ್ರಭುತ್ವದ ಮೇಲಿರುವ ಭಯವನ್ನು ಸಾರ್ವಜನಿಕರ ಮನಸ್ಸಿನಿಂದ ಕಿತ್ತೊಗೆಯುತ್ತದೆ. ಸಾರ್ವಜನಿಕರಲ್ಲಿ ಭಯ ಕಡಿಮೆಯಾದಾಗ, ಆಳುವವರ ಅಹಂಕಾರ ಮತ್ತು ಸರ್ವಾಧಿಕಾರಿ ಧೋರಣೆಗಳು ತಾನಾಗಿಯೇ ಕುಸಿಯತೊಡಗುತ್ತವೆ ಎಂಬುದಕ್ಕೆ ಈ CJP ಕ್ರಾಂತಿಯೇ ಉತ್ತಮ ಉದಾಹರಣೆ.
ಇದು ಖ್ಯಾತ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರ ಲೇಖನವೊಂದರ ಒಳತಿರುಳು
https://indianexpress.com/article/opinion/columns/best-of-both-sides-cockroach-janta-party-frames-raw-energy-undercurrent-10713065/




