‘ವಿಶ್ವಗುರು’ ಪಟ್ಟದ ಬೆನ್ನೇರಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಧರ್ಮ ಆಧಾರಿತ ರಾಜಕಾರಣ ಮತ್ತು ಹಿಂದುತ್ವದ ಏಕ ಚಕ್ರಾಧಿಪತ್ಯ ಸ್ಥಾಪನೆಯಲ್ಲಿ ಮಗ್ನವಾಗಿರುವ ಹೊತ್ತಿನಲ್ಲೇ, ದೇಶದ ಬಡತನದ ಕಟು ವಾಸ್ತವವೊಂದು ಬೆತ್ತಲಾಗಿದೆ. ಕೋಮು ಧ್ರುವೀಕರಣದ ಅಬ್ಬರದಲ್ಲಿ, ಶೇ.26.8ರಷ್ಟು ಜನರು ಬಡತನದ ರೇಖೆಗಿಂತ ಕೆಳಗೆ (ಬಿಪಿಎಲ್) ನರಳುತ್ತಿರುವ ದಾರುಣ ಸ್ಥಿತಿಯನ್ನು ಮರೆಮಾಚಲಾಗುತ್ತಿದೆ. ಭಾವನಾತ್ಮಕ ವಿಷಯಗಳೇ ಮುನ್ನೆಲೆಗೆ ಬರುತ್ತಿರುವ ಇಂದಿನ ದಿನಗಳಲ್ಲಿ, ಹಸಿವು ಮತ್ತು ಆರ್ಥಿಕ ಸಂಕಷ್ಟದ ಕೂಗಿಗೆ ಆಡಳಿತ ಯಂತ್ರದ ಕಿವುಡಾಗಿರುವುದು ಪ್ರಜಾಪ್ರಭುತ್ವದ ದೊಡ್ಡ ಅಣಕ
ಇತ್ತೀಚಿನ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ವರದಿ ಹಾಗೂ ರಂಗರಾಜನ್ ಸಮಿತಿಯ ಮಾನದಂಡಗಳ ಆಧಾರದ ಮೇಲೆ ವಿಶ್ಲೇಷಿಸಿದರೆ, ದೇಶದಲ್ಲಿ ಬರೋಬ್ಬರಿ 37.4 ಕೋಟಿ ಜನರು ಕಡುಬಡವರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ.29ರಷ್ಟು ಜನರು ಬಡತನದ ಬೇಗೆಯಲ್ಲಿದ್ದರೆ, ನಗರ ಪ್ರದೇಶಗಳಲ್ಲಿ ಶೇ.22 ರಷ್ಟು ಜನರಿಗೆ ಕನಿಷ್ಠ ಜೀವನ ನಿರ್ವಹಣೆಯೂ ಕಷ್ಟಸಾಧ್ಯವಾಗಿದೆ. ಕಾರ್ಪೋರೇಟ್ ಅಭಿವೃದ್ಧಿಯ ಹೊಳೆಯುವ ಅಂಕಿ-ಅಂಶಗಳ ನಡುವೆ ಈ ದೊಡ್ಡ ಶ್ರಮಿಕ ವರ್ಗ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ.
ಬಡತನವನ್ನು ಅಳೆಯುವ ಮಾನದಂಡಗಳು ಕಳವಳಕಾರಿಯಾಗಿವೆ. ಗ್ರಾಮೀಣ ಭಾಗದಲ್ಲಿ ದಿನಕ್ಕೆ ಕನಿಷ್ಠ 93.4 ರೂ. (ತಿಂಗಳಿಗೆ 2,802 ರೂ.) ಹಾಗೂ ನಗರ ಪ್ರದೇಶದಲ್ಲಿ ದಿನಕ್ಕೆ 126 ರೂ. (ತಿಂಗಳಿಗೆ 3,778 ರೂ.) ತಲಾ ಆದಾಯ ಹೊಂದಿರದವರನ್ನು ಬಡವರೆಂದು ಪರಿಗಣಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಈ ಕಾಲದಲ್ಲಿ ಇಷ್ಟು ಮೊತ್ತವೂ ಕೈಗೆಟಕುವ ಕೋಟ್ಯಂತರ ಕುಟುಂಬಗಳು, ಒಂದು ಹೊತ್ತಿನ ಊಟಕ್ಕೂ ದಿನನಿತ್ಯ ಪರದಾಡುತ್ತಿವೆ ಎಂಬುದು ಆರ್ಥಿಕತೆಯ ದಾರುಣ ನೈಜ ಚಿತ್ರಣವಾಗಿದೆ.
ಆರ್ಥಿಕ ವೈಫಲ್ಯ, ನಿರುದ್ಯೋಗ ಮತ್ತು ಬಡತನದಂತಹ ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರವು ವ್ಯವಸ್ಥಿತವಾಗಿ ಹಿಂದೂ- ಮುಸ್ಲಿಮ್ ದ್ವೇಷವನ್ನು ಭುಗಿಲೆಬ್ಬಿಸುತ್ತಿದೆ ಎಂಬ ಟೀಕೆಗಳು ದಟ್ಟವಾಗಿವೆ. ಜೊತೆಗೆ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಆಧಾರಸ್ತಂಭಗಳಾದ ಸಾಂವಿಧಾನಿಕ ಸಂಸ್ಥೆಗಳನ್ನು ಕೈವಶ ಮಾಡಿಕೊಂಡು, ಪ್ರಶ್ನಿಸುವ ಧ್ವನಿಯನ್ನು ಅತ್ತಿಕ್ಕಲಾಗುತ್ತಿದೆ. ಆರ್ಥಿಕ ಬಿಕ್ಕಟ್ಟಿನ ಈ ಸಮಯದಲ್ಲಿ, ಧರ್ಮದ ಅಮಲನ್ನು ಬಿತ್ತಿ ಅಧಿಕಾರ ಉಳಿಸಿಕೊಳ್ಳುವ ರಾಜಕೀಯ ತಂತ್ರಗಾರಿಕೆಗೆ ಸಾಮಾನ್ಯರ ಬದುಕು ಬಲಿಯಾಗುತ್ತಿದೆ.
ಬಡತನದ ಹಂಚಿಕೆಯನ್ನು ಭೌಗೋಳಿಕವಾಗಿ ಗಮನಿಸಿದರೆ, ದೇಶದ ಶೇ.80ರಷ್ಟು ಬಡವರು ಕೇವಲ 10 ರಾಜ್ಯಗಳಲ್ಲಿ ಕೇಂದ್ರೀಕೃತರಾಗಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲೇ ದೇಶದ ಒಟ್ಟು ಬಡವರ ಪೈಕಿ ಶೇ. 48 ರಷ್ಟು ಜನರಿದ್ದಾರೆ. ಈ ತೀವ್ರತರವಾದ ಪ್ರಾದೇಶಿಕ ಅಸಮಾನತೆಯು ಕೇವಲ ಆರ್ಥಿಕ ಹಿನ್ನಡೆಯನ್ನಷ್ಟೆ ಅಲ್ಲ, ಸರ್ಕಾರಗಳ ಆಡಳಿತಾತ್ಮಕ ಮತ್ತು ನೀತಿ ನಿರೂಪಣೆಯ ವೈಫಲ್ಯವನ್ನೂ ಎತ್ತಿ ತೋರಿಸುತ್ತದೆ.
ಖನಿಜ ಸಂಪತ್ತಿನಿಂದ ಶ್ರೀಮಂತವಾಗಿರುವ ಜಾರ್ಖಂಡ್, ಛತ್ತೀಸ್ಗಢ ಮತ್ತು ಒಡಿಶಾದಂತಹ ರಾಜ್ಯಗಳಲ್ಲಿ ಶೇ.45ಕ್ಕಿಂತ ಹೆಚ್ಚು ಜನಸಂಖ್ಯೆ ಬಡತನದ ಕೂಪದಲ್ಲಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಕಾರ್ಪೋರೇಟ್ ವಲಯಕ್ಕೆ ಧಾರೆಯೆರೆಯುವ ನೀತಿಗಳಿಂದಾಗಿ, ಸ್ಥಳೀಯ ಆದಿವಾಸಿಗಳು ಮತ್ತು ಶ್ರಮಿಕರು ಅಭಿವೃದ್ಧಿಯ ಫಲದಿಂದ ವಂಚಿತರಾಗಿದ್ದಾರೆ. ವಿಪುಲ ಸಂಪನ್ಮೂಲಗಳಿದ್ದರೂ ಬಡತನ ತಾಂಡವವಾಡುತ್ತಿರುವುದು ಆಳುವ ಸರ್ಕಾರದ ಆರ್ಥಿಕ ನೀತಿಗಳ ಅತಿದೊಡ್ಡ ವೈಫಲ್ಯವಾಗಿದೆ.
ಇದನ್ನು ಓದಿದ್ದೀರಾ? ಯಾರಿಗೆ ಕೊಕ್, ಯಾರಿಗೆ ಅವಕಾಶ; ನೂತನ ಸಂಪುಟದಲ್ಲಿ ಶುರುವಾಗಲಿದೆಯೆ ಮತ್ತಷ್ಟು ಪೀಕಲಾಟ?
ಇದಕ್ಕೆ ವ್ಯತಿರಿಕ್ತವಾಗಿ, ದಕ್ಷಿಣ ಭಾರತದ ರಾಜ್ಯಗಳು ಹಾಗೂ ಪಂಜಾಬ್, ಹರಿಯಾಣದಂತಹ ಕೃಷಿ ಪ್ರಧಾನ ರಾಜ್ಯಗಳಲ್ಲಿ ಬಡತನದ ಪ್ರಮಾಣ ಕೇವಲ ಶೇ.8ರಷ್ಟಿದೆ. ಬಡತನ ಪೀಡಿತ ರಾಜ್ಯಗಳಲ್ಲಿನ ಸಮಸ್ಯೆಯು ಕೇವಲ ಆದಾಯದ ಅಸಮಾನತೆಯಲ್ಲ; ಬದಲಾಗಿ ಅಲ್ಲಿನ ಕೃಷಿ ಬಿಕ್ಕಟ್ಟು, ಕೌಶಲ್ಯರಹಿತ ದುಡಿಯುವ ವರ್ಗ ಮತ್ತು ರಚನಾತ್ಮಕ ಆರ್ಥಿಕ ಅಡೆತಡೆಗಳು (Structural constraints) ಜನರನ್ನು ಶಾಶ್ವತ ಬಡತನದ ಸುಳಿಯಲ್ಲಿಯೇ ಸಿಲುಕಿಸಿವೆ.
ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲೂ ಸಹ ಖನಿಜಭರಿತ ಮತ್ತು ಹಿಂದುಳಿದ ಕೃಷಿ ಪ್ರದೇಶಗಳಲ್ಲೇ ಬಡವರ ಸಂಖ್ಯೆ ದಟ್ಟವಾಗಿದೆ. ಈ ಪ್ರದೇಶಗಳಲ್ಲಿ ಬಡತನವು ಕೇವಲ ಆರ್ಥಿಕ ಕೊರತೆಯಾಗಿರದೆ, ಆಳವಾಗಿ ಬೇರೂರಿರುವ ‘ರಚನಾತ್ಮಕ ದೋಷ’ವಾಗಿದೆ. ಉದ್ಯೋಗ ಅರಸಿ ಕಾರ್ಮಿಕರು ಕೈಗಾರಿಕಾ ನಗರಗಳಿಗೆ ನಿರಂತರವಾಗಿ ವಲಸೆ ಹೋಗುತ್ತಿದ್ದರೂ, ಈ ಮೂಲ ನೆಲೆಗಳಲ್ಲಿ ಬಡತನ ಕಡಿಮೆಯಾಗುತ್ತಿಲ್ಲ. ಕಾರ್ಮಿಕ ಬಲ ಸಮೀಕ್ಷೆಯ (PLFS 2023-24) ಅಂಕಿ-ಅಂಶಗಳ ಪ್ರಕಾರ, ಉತ್ತಮ ಸ್ಥಿತಿಯಲ್ಲಿರುವ ರಾಜ್ಯಗಳಲ್ಲಿ ‘ಅವಲಂಬಿತರ ಅನುಪಾತ’ ಶೇ.42ಕ್ಕಿಂತ ಕಡಿಮೆಯಿದ್ದರೆ, ಬಡತನ ಪೀಡಿತ ರಾಜ್ಯಗಳಲ್ಲಿ ಅದು ಶೇ.47ರಷ್ಟಿದೆ. ಅಲ್ಲದೆ, ಬಡತನ ಹೆಚ್ಚಿರುವ ಈ ಪ್ರದೇಶಗಳಲ್ಲಿ ಕೈಗಾರಿಕೆ, ಐಟಿ, ಬ್ಯಾಂಕಿಂಗ್, ವೃತ್ತಿಪರ ಸೇವೆಗಳು ಮತ್ತು ಸಾರ್ವಜನಿಕ ಆಡಳಿತದಲ್ಲಿ ಕಾರ್ಯನಿರ್ವಹಿಸುವವರ ಪ್ರಮಾಣ ಕೇವಲ ಶೇ.11ರಷ್ಟಿದ್ದು, ಇದು ಮುಂದುವರಿದ ರಾಜ್ಯಗಳಿಗಿಂತ ಭಾರಿ ಪ್ರಮಾಣದಲ್ಲಿ (ಅರ್ಧದಷ್ಟು) ಕಡಿಮೆಯಿದೆ ಎಂಬುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ.
ಈ ಬಿಕ್ಕಟ್ಟಿನಿಂದ ಹೊರಬರಲು ಕೇವಲ ಭಾವನಾತ್ಮಕ ಭಾಷಣಗಳು ಸಾಲದು. ಕೃಷಿ ವಲಯದ ಪುನಶ್ಚೇತನ, ಜಿಲ್ಲಾ ಖನಿಜ ನಿಧಿ (DMF) ಹಾಗೂ ಸಿಎಸ್ಆರ್ ನಿಧಿಗಳ ಸಮರ್ಪಕ ಬಳಕೆಯ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯಾಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕಿದೆ. ಕೇವಲ ವಲಸೆಯನ್ನು ನೆಚ್ಚಿಕೊಳ್ಳದೆ, ಸ್ಥಳೀಯ ಮಟ್ಟದಲ್ಲಿ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಸದೆ ಬಡತನವನ್ನು ಬೇರುಸಹಿತ ಕಿತ್ತೊಗೆಯಲು ಅಸಾಧ್ಯ.
ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪ್ರವೃತ್ತಿ ದೇಶದ ಆರ್ಥಿಕ ಪ್ರಗತಿಗೆ ಮಾರಕವಾಗಿದೆ. ‘ವಿಶ್ವಗುರು’ ಎಂಬ ಭ್ರಮೆಯಿಂದ ಹೊರಬಂದು, ಶೇ.26.8ರಷ್ಟಿರುವ ಬಡವರ ಹಸಿವು ನೀಗಿಸುವತ್ತ ಮೋದಿ ನೇತೃತ್ವದ ಸರ್ಕಾರ ತುರ್ತಾಗಿ ದೃಷ್ಟಿ ಹರಿಸಬೇಕಿದೆ. ಧರ್ಮಕಾರಣದ ನಶೆಯಲ್ಲಿ ತಳವರ್ಗದ ಜನರ ಬದುಕನ್ನು ಕಡೆಗಣಿಸದೆ, ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವುದೇ ನಿಜವಾದ ರಾಷ್ಟ್ರ ನಿರ್ಮಾಣ ಎಂಬುದನ್ನು ಆಳುವವರು ಅರಿತುಕೊಳ್ಳಬೇಕಾದ ಅಗತ್ಯವಿದೆ.




