ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಪ್ರಧಾನಿಯವರ ಈ ಧೋರಣೆಯನ್ನು “ಸ್ವಯಂ ಘೋಷಿತ ಹಾಗೂ ಪ್ರಶಸ್ತಿ ಹಪಾಹಪಿಯ ವಿಶ್ವಗುರುವಿನ ಮೌನ” ಎಂದು ಬಣ್ಣಿಸಿರುವ ಕಾಂಗ್ರೆಸ್, ಇದು ಭಾರತದ ನಾಗರಿಕ ಮೌಲ್ಯಗಳು ಮತ್ತು ವಿದೇಶಾಂಗ ನೀತಿಯ ಪರಂಪರೆಗೆ ಬಗೆದ ದ್ರೋಹ ಎಂದು ಟೀಕಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇತ್ತೀಚೆಗೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, “ಇಸ್ರೇಲ್‌ಗೆ ಭಾರತದಂತಹ 140 ಕೋಟಿ ಜನಸಂಖ್ಯೆಯ ದೇಶದ ಬಲವಾದ ಬೆಂಬಲವಿದೆ” ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಈ ಗಂಭೀರ ಆಕ್ಷೇಪ ಎತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಗ್ರೇಟ್ ನಿಕೋಬಾರ್ ಯೋಜನೆ ‘ಪರಿಸರ ವಿಪತ್ತು’ – ರಾಜನಾಥ್ ಸಿಂಗ್‌ಗೆ ಪತ್ರ ಬರೆದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್
ಇಸ್ರೇಲ್ ಪ್ರಧಾನಿಯವರ ವಾದವನ್ನು ತಿರಸ್ಕರಿಸಿರುವ ಕಾಂಗ್ರೆಸ್, “ನೆತನ್ಯಾಹು ಅವರ ಹೇಳಿಕೆ ತಪ್ಪು. ಇಸ್ರೇಲ್ ದೇಶವು ಮೋದಿ-ಅದಾನಿ ಕಾರ್ಪೊರೇಟ್ ಸಾಮ್ರಾಜ್ಯದೊಂದಿಗೆ ನಿಕಟ ನಂಟು ಹೊಂದಿರಬಹುದು ಮತ್ತು ಪ್ರಧಾನಿ ಮೋದಿ ಅವರು ನೆತನ್ಯಾಹುಗೆ ಕುರುಡು ಭಕ್ತಿ ತೋರುತ್ತಿರಬಹುದು. ಆದರೆ ಕೋಟ್ಯಂತರ ಭಾರತೀಯರು ಇಸ್ರೇಲ್‌ನ ಈ ಕೃತ್ಯಗಳನ್ನು ಒಪ್ಪುವುದಿಲ್ಲ” ಎಂದು ಹೇಳಿದೆ.
“ಪ್ಯಾಲೆಸ್ತೀನ್ ಪರವಾಗಿದ್ದ ಭಾರತದ ಐತಿಹಾಸಿಕ ವಿದೇಶಾಂಗ ನೀತಿಯನ್ನು ಮೋದಿ ಸರ್ಕಾರ ಬದಲಾಯಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ. “ತಮ್ಮನ್ನು ತಾವು ‘ಸ್ವಘೋಷಿತ ವಿಶ್ವಗುರು’ ಎಂದು ಬಿಂಬಿಸಿಕೊಳ್ಳುವ ಪ್ರಧಾನಿ, ಇಂತಹ ದೊಡ್ಡ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಮೌನವಾಗಿರುವುದು ಅವರ ನಾಯಕತ್ವದ ವೈಫಲ್ಯ” ಎಂದು ಜರೆದಿದ್ದಾರೆ.
“ಗಾಜಾದಲ್ಲಿ ಮುಗ್ಧ ಮಕ್ಕಳು ಸೇರಿದಂತೆ ನಾಗರಿಕರ ಹತ್ಯಾಕಾಂಡ, ವೆಸ್ಟ್ ಬ್ಯಾಂಕ್‌ನಲ್ಲಿ ಪ್ಯಾಲೆಸ್ತೀನಿಯರ ಬಲವಂತದ ಒಕ್ಕಲೆಬ್ಬಿಸುವಿಕೆ, ಇರಾನ್ ಮೇಲಿನ ವೈಮಾನಿಕ ದಾಳಿಗಳು ಮತ್ತು ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಭೀಕರ ಮಿಲಿಟರಿ ದಾಳಿಗಳನ್ನು ಭಾರತೀಯರು ಬಲವಾಗಿ ಖಂಡಿಸುತ್ತಾರೆ. ಇವೆಲ್ಲವೂ ಮಾನವೀಯತೆಯ ಮೇಲಿನ ದಾಳಿಗಳಾಗಿವೆ” ಎಂದು ಜೈರಾಮ್ ರಮೇಶ್ ಆಕ್ರೋಶ ಹೊರಹಾಕಿದ್ದಾರೆ.
“ಜಾಗತಿಕವಾಗಿ ಒಂಟಿಯಾಗಿರುವ ಮತ್ತು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸಮಾಧಾನಕ್ಕೆ ಕಾರಣವಾಗಿರುವ ನೆತನ್ಯಾಹು ಅವರಿಂದ ಪ್ರಶಂಸಾಪತ್ರ ಅಥವಾ ಬೆಂಬಲದ ಸರ್ಟಿಫಿಕೇಟ್ ಪಡೆಯುವುದು ಭಾರತಕ್ಕೆ ಯಾವುದೇ ಹೆಮ್ಮೆಯ ವಿಷಯವಲ್ಲ” ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.




