ಬಿಜೆಪಿ ರಾಷ್ಟ್ರೀಯ ನಾಯಕ ರಾಮ್ ಮಾಧವ್ ಅವರ ಗೌರವಕ್ಕೆ ಧಕ್ಕೆ ತರುವಂತಹ ಅವಹೇಳನಕಾರಿ ಆರೋಪಗಳನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅದಕ್ಕಾಗಿ, ಹರಿಪ್ರಸಾದ್ ಅವರಿಗೆ ರಾಮ್ ಮಾಧವ್ ಅವರ ವಕೀಲರು ಲೀಗಲ್ ನೋಟಿಸ್ ಹೊರಡಿಸಿದ್ದಾರೆ.
ಇತ್ತೀಚೆಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿ.ಕೆ ಹರಿಪ್ರಸಾದ್, “ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳನ್ನು ಎದುರಿಸಲು ಮತ್ತು ಅಲ್ಲಿ ಸರ್ಕಾರ ರಚಿಸಲು ಬಿಜೆಪಿ ನಾಯಕ ರಾಮ್ ಮಾಧವ್ ಅವರು ನಿಷೇಧಿತ ಸಂಘಟನೆಗಳ ಬೆಂಬಲ ಪಡೆದಿದ್ದಾರೆ. ಅವರೊಂದಿಗೆ ಗುಪ್ತ ಒಪ್ಪಂದ ಮಾಡಿಕೊಂಡಿದ್ದಾರೆ. ಕೊಲಂಬೊ ಮತ್ತು ಲಂಡನ್‌ನಲ್ಲಿ ಪಾಕಿಸ್ತಾನದ ಪ್ರತಿನಿಧಿಗಳೊಂದಿಗೆ ರಾಮ್ ಮಾಧವ್ ನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಪಾಕಿಸ್ತಾನದ ಉನ್ನತ ಅಧಿಕಾರಿಗಳು, ಅಪಾಯಕಾರಿ ಐಎಸ್‌ಐನ ಮಾಜಿ ಮೇಜರ್ ಜನರಲ್ ಸೇರಿದಂತೆ ಹಲವರನ್ನು ಭೇಟಿಯಾಗಿದ್ದಾರೆ” ಎಂದು ಆರೋಪಿಸಿದ್ದರು.
ಈ ಬೆನ್ನಲ್ಲೇ, ರಾಮ್ ಮಾಧವ್ ಅವರ ಪರವಾಗಿ ಸುಪ್ರೀಂ ಕೋರ್ಟ್‌ನ ವಕೀಲ ವಿಕ್ರಾಂತ್ ಪಚ್‌ನಂದ ಅವರು ಬಿ.ಕೆ. ಹರಿಪ್ರಸಾದ್ ಅವರಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. ಮಾಧ್ಯಮ ಮತ್ತು ಅಂತರ್ಜಾಲ ತಾಣಗಳಲ್ಲಿ ರಾಮ್ ಮಾಧವ್ ಅವರನ್ನು ನೇರವಾಗಿ ಗುರಿಯಾಗಿಸಿ, ಅವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಹರಿಪ್ರಸಾದ್ ಅವರು ಸುಳ್ಳು ಆರೋಪಗಳನ್ನು ಹರಡುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ನೋಟಿಸ್‌ನಲ್ಲಿ; ಹರಿಪ್ರಸಾದ್ ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)-2023ರ ಸೆಕ್ಷನ್ 356ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಲಾಗಿದೆ. ರಾಮ್ ಮಾಧವ್ ವಿರುದ್ಧ ಮಾಡಲಾಗಿರುವ ಎಲ್ಲ ಸುಳ್ಳು ಆರೋಪಗಳು ಮತ್ತು ಹೇಳಿಕೆಗಳನ್ನು ಮಾಧ್ಯಮ ಮತ್ತು ಅಂತರ್ಜಾಲ ತಾಣಗಳಿಂದ ತಕ್ಷಣವೇ ತೆಗೆದುಹಾಕಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ.
This video cannot be played in your browser. Open the video directly
ಅಲ್ಲದೆ, ಹರಿಪ್ರಸಾದ್ ಅವರು ತಾವು ಮಾಡಿರುವ ಎಲ್ಲ ತಪ್ಪು ಆರೋಪಗಳನ್ನು ಸಾರ್ವಜನಿಕವಾಗಿ ಹಿಂಪಡೆಯಬೇಕು. ರಾಮ್ ಮಾಧವ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ನೋಟಿಸ್‌ನಲ್ಲಿ ಕೇಳಲಾಗಿದೆ.





