ಬೆಂಗಳೂರಿನ ರಾಜಾಜಿನಗರದ ಬಿಜೆಪಿ ಹಿರಿಯ ಶಾಸಕ ಎಸ್. ಸುರೇಶ್ ಕುಮಾರ್ ಅವರ ವಿರುದ್ಧ 300 ಕೋಟಿ ರೂಪಾಯಿಗಳ ಟೆಂಡರ್ ಅಕ್ರಮದ ಗಂಭೀರ ಆರೋಪ ಕೇಳಿಬಂದಿದ್ದು, ಸೋಮವಾರ ರಾಜಾಜಿನಗರದ ಆರ್‌ಟಿಒ ಕಚೇರಿ ಆವರಣದಲ್ಲಿ ಅವರ ಮೇಲೆ ಕಾಂಗ್ರೆಸ್ ಬೆಂಬಲಿಗರು ಮುತ್ತಿಗೆ ಯತ್ನ ನಡೆಸಿರುವುದಾಗಿ ವರದಿಯಾಗಿದೆ.
ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಅನುದಾನ ಹಾಗೂ ಬಿಬಿಎಂಪಿ ವತಿಯಿಂದ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಶಾಸಕರು ನಿಯಮಬಾಹಿರವಾಗಿ ನಡೆದುಕೊಂಡಿದ್ದಾರೆ ಎಂಬುದು ಕಾಂಗ್ರೆಸ್‌ನ ಪ್ರಮುಖ ಆರೋಪ. ತಮ್ಮ ಆಪ್ತರು ಮತ್ತು ಬೇನಾಮಿ ಗುತ್ತಿಗೆದಾರರಿಗೆ ಅಕ್ರಮವಾಗಿ ಲಾಭ ಮಾಡಿಕೊಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ವಾಗ್ದಾಳಿ ನಡೆಸಿದ್ದಾರೆ.
ಶಾಸಕರು ಆರ್‌ಟಿಒ ಕಚೇರಿಯಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ ‘ಜನಸ್ಪಂದನ’ ಕಾರ್ಯಕ್ರಮ ನಡೆಸುತ್ತಿದ್ದ ಸಂದರ್ಭದಲ್ಲಿ, ಸ್ಥಳಕ್ಕೆ ನುಗ್ಗಿದ ಎನ್‌ಎಸ್‌ಯುಐ (NSUI) ಮತ್ತು ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಅಕ್ರಮದ ವಿರುದ್ಧ ಘೋಷಣೆ ಕೂಗುತ್ತಾ ಕಚೇರಿಯೊಳಗೆ ನುಗ್ಗಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯಲು ಬಿಜೆಪಿ ಬೆಂಬಲಿಗರು ಮುಂದಾದರು. ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ಮತ್ತು ಕೈಕೈ ಮಿಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಬಾಲಕಿಯ ಅತ್ಯಾಚಾರ-ಹತ್ಯೆ ಮತ್ತು ಗುಂಪುಹಲ್ಲೆ: ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದ ಆಕ್ರೋಶ
ಎಚ್ಚೆತ್ತ ಪೊಲೀಸರು ಆರ್‌ಟಿಒ ಕಚೇರಿಯ ಸುತ್ತಮುತ್ತಲಿನ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸುವ ಮೂಲಕ ಎರಡೂ ಗುಂಪುಗಳನ್ನು ಚದುರಿಸಿದ್ದಾರೆ. ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದ ಜಾಗದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿ, ಶಾಸಕರಿಗೆ ರಕ್ಷಣೆ ಕಲ್ಪಿಸಲಾಗಿದೆ.
ಈ ಘಟನೆಯು ರಾಜಕೀಯ ವಾತಾವರಣವನ್ನು ಮತ್ತಷ್ಟು ಕಾವೇರಿಸಿದೆ. ತಮ್ಮ ಮೇಲಿನ ಆರೋಪಗಳನ್ನು ಬಿಜೆಪಿ ಶಾಸಕರು ನಿರಾಕರಿಸುತ್ತಿದ್ದರೆ, ಕಾಂಗ್ರೆಸ್‌ನವರು ಸೂಕ್ತ ತನಿಖೆಯಾಗಬೇಕೆಂದು ಪಟ್ಟು ಹಿಡಿದಿದ್ದಾರೆ. “ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡಲಾಗಿದೆ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದರೆ, “ಇದು ರಾಜಕೀಯ ಪ್ರೇರಿತ ಪ್ರತಿಭಟನೆ” ಎಂದು ಬಿಜೆಪಿ ಆರೋಪಿಸಿದೆ.




