ಕಳೆದ ವರ್ಷ ತಮಿಳುನಾಡಿನ ಕರೂರಿನಲ್ಲಿ ನಡೆದಿದ್ದ ಭೀಕರ ಕಾಲ್ತುಳಿತ ಪ್ರಕರಣದ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಭೇಟಿಗೆ ತಡೆ ನೀಡಬೇಕೆಂದು ಕೋರಿ ಡಿಎಂಕೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಳ್ಳಿಹಾಕಿದೆ. “ಮುಖ್ಯಮಂತ್ರಿಯವರ ಪ್ರವಾಸ ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್ ನಿಯಂತ್ರಿಸಬೇಕೆಂದು ಮತ್ತು ಅವರ ವೇಳಾಪಟ್ಟಿಯನ್ನು ನಾವೇ ನಿಗದಿಪಡಿಸಬೇಕೆಂದು ನೀವು ಬಯಸುತ್ತೀರಾ?” ಎಂದು ಅರ್ಜಿದಾರರನ್ನು ನ್ಯಾಯಪೀಠ ತೀಕ್ಷ್ಣವಾಗಿ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠವು ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಸಲ್ಲಿಸಿದ್ದ ಈ ತುರ್ತು ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಡಿಎಂಕೆ ವಾದವನ್ನು ಆಲಿಸಿದ ಪೀಠವು, “ನ್ಯಾಯಾಲಯವನ್ನು ರಾಜಕೀಯ ವಾಕ್ಸಮರದ ವೇದಿಕೆಯನ್ನಾಗಿ ಮಾಡುವುದು ಹೇಗೆ ಸಾಧ್ಯ? ವಾಕ್ ಸ್ವಾತಂತ್ರ್ಯದ ಮೇಲೆ ನಾವು ನಿರ್ಬಂಧ ಹೇರಬೇಕೆ? ಅವರ ಹೇಳಿಕೆಗಳಿಗೆ ನಿಮ್ಮ ಹೇಳಿಕೆಗಳ ಮೂಲಕವೇ ರಾಜಕೀಯವಾಗಿ ತಿರುಗೇಟು ನೀಡಿ” ಎಂದು ಕಟ್ಟುನಿಟ್ಟಾಗಿ ಸೂಚಿಸಿತು.
ಬರುವ ಜುಲೈ 10ರಂದು ಮುಖ್ಯಮಂತ್ರಿ ವಿಜಯ್ ಅವರು ಕರೂರಿಗೆ ಭೇಟಿ ನೀಡಿ, ಕಾಲ್ತುಳಿತ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಪರಿಹಾರ ಹಾಗೂ ಅನುಕಂಪದ ಆಧಾರದ ನೇಮಕಾತಿ ಆದೇಶಗಳನ್ನು ವಿತರಿಸಲಿದ್ದಾರೆ. ಈ ಕಾಲ್ತುಳಿತ ಪ್ರಕರಣದ ತನಿಖೆಯನ್ನು ಪ್ರಸ್ತುತ ಸಿಬಿಐ ನಡೆಸುತ್ತಿದ್ದು, ಸಂತ್ರಸ್ತರ ಕುಟುಂಬಗಳೇ ಇದರಲ್ಲಿ ಪ್ರಮುಖ ಸಾಕ್ಷಿಗಳಾಗಿದ್ದಾರೆ. ತನಿಖೆ ನಡೆಯುತ್ತಿರುವಾಗಲೇ ಆರೋಪ ಹೊತ್ತಿರುವ ಸಚಿವರು ಹಾಗೂ ಮುಖ್ಯಮಂತ್ರಿಗಳು ಸಂತ್ರಸ್ತರನ್ನು ನೇರವಾಗಿ ಭೇಟಿಯಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಥವಾ ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆಯಿದೆ ಎಂದು ಡಿಎಂಕೆ ಪರ ಹಿರಿಯ ವಕೀಲ ರಂಜಿತ್ ಕುಮಾರ್ ವಾದಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಫ್ರಿಕನ್ ಕಪ್ಪುವಜ್ರಗಳಿಂದ ಭಾರತ ಕಲಿಯಬೇಕಾದ ಪಾಠವೇನು?
ವಾದದ ವೇಳೆ ಡಿಎಂಕೆ ಪರ ವಕೀಲರು, ‘ವಿಜಯ್ ಅವರು ಕಾರ್ಯಾಂಗದ ಮುಖ್ಯಸ್ಥರಾಗಿ ಹಾಗೂ ಪ್ರಕರಣದ ಒಂದನೇ ಆರೋಪಿಯಾಗಿ ದ್ವಿಪಾತ್ರ ಹೊಂದಿದ್ದಾರೆ. ಹೀಗಾಗಿ ಪರಿಹಾರ ವಿತರಣೆಯನ್ನು ಬೇರೆಯವರ ಮೂಲಕ ಮಾಡಿಸಬೇಕು’ ಎಂದರು. ಕೂಡಲೇ ಮಧ್ಯಪ್ರವೇಶಿಸಿ ತಪರಾಕಿ ನೀಡಿದ ನ್ಯಾಯಮೂರ್ತಿ ವಿಶ್ವನಾಥನ್ ಅವರು, “ಎಫ್‌ಐಆರ್‌ನಲ್ಲಿ ಮುಖ್ಯಮಂತ್ರಿಯವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿಲ್ಲ. ಹಿಂದಿನ ಸರ್ಕಾರ ದಾಖಲಿಸಿದ ನಿಮ್ಮದೇ ಎಫ್‌ಐಆರ್‌ನಲ್ಲೂ ಅವರ ಹೆಸರಿಲ್ಲ. ಮೊದಲು ನಿಮ್ಮ ವಾಸ್ತವಾಂಶಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ಕೆಲವು ಸಚಿವರು ಆರೋಪಿಗಳಾಗಿರಬಹುದು, ಆದರೆ ಖಂಡಿತಾ ಮುಖ್ಯಮಂತ್ರಿಯಲ್ಲ” ಎಂದು ಸ್ಪಷ್ಟಪಡಿಸಿದರು.
2025ರ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ಟಿವಿಕೆ ಆಯೋಜಿಸಿದ್ದ ರಾಜಕೀಯ ಸಮಾವೇಶದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿ, ಉಸಿರುಗಟ್ಟಿ ಹಾಗೂ ಕಾಲ್ತುಳಿತಕ್ಕೆ ಸಿಲುಕಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಭೀಕರ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ಕೋರಿ ಅಂದು ಟಿವಿಕೆ ಮುಖ್ಯಸ್ಥರಾಗಿದ್ದ ನಟ ವಿಜಯ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2025ರ ಅಕ್ಟೋಬರ್ 13ರಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದ ಸುಪ್ರೀಂ ಕೋರ್ಟ್, ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಮೂವರು ಸದಸ್ಯರ ಮೇಲುಸ್ತುವಾರಿ ಸಮಿತಿಯನ್ನು ರಚಿಸಿತ್ತು. ರಾಜ್ಯದ ಪೊಲೀಸರ ಬದಲಿಗೆ ಸಿಬಿಐ ಮೂಲಕವೇ ತನಿಖೆ ಮುಂದುವರಿಯುತ್ತಿದ್ದು, ಇದೀಗ ಮುಖ್ಯಮಂತ್ರಿ ಸ್ಥಾನದಲ್ಲಿರುವ ವಿಜಯ್ ಅವರ ಕರೂರು ಭೇಟಿ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ.




