ಆಮ್ ಆದ್ಮಿ ಪಕ್ಷವು (ಎಎಪಿ) ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ತಮ್ಮನ್ನು ಕೆಳಗಿಳಿಸಿದ ಬೆನ್ನಲ್ಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಸಭಾ ಸಂಸದ ರಾಘವ್ ಚಡ್ಡಾ, ‘ನನ್ನನ್ನು ಮೌನಗೊಳಿಸಲಾಗಿದೆಯೇ ಹೊರತು, ನಾನು ಸೋತಿಲ್ಲ’ ಎಂದು ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಶುಕ್ರವಾರ ತಮ್ಮ ‘ಎಕ್ಸ್’ ಖಾತೆಯಲ್ಲಿ ವಿಡಿಯೊ ಸಂದೇಶವೊಂದನ್ನು ಹಂಚಿಕೊಂಡಿರುವ ಅವರು ನೇರವಾಗಿ ‘ಸಾಮಾನ್ಯ ಜನರನ್ನು’ (ಆಮ್ ಆದ್ಮಿ) ಉದ್ದೇಶಿಸಿ ಮಾತನಾಡಿದ್ದಾರೆ. “ಸಂಸತ್ತಿನಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಎತ್ತುವುದು ಅಪರಾಧವೇ? ನಾನು ಏನಾದರೂ ತಪ್ಪು ಮಾಡಿದ್ದೇನೆಯೇ? ನನಗೆ ಮಾತನಾಡಲು ಅವಕಾಶ ಸಿಕ್ಕಾಗಲೆಲ್ಲಾ, ನಾನು ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೇ ಮಾತನಾಡುತ್ತೇನೆ. ಸಂಸತ್ತಿನಲ್ಲಿ ವಿರಳವಾಗಿ ಚರ್ಚೆಯಾಗುವ ವಿಷಯಗಳನ್ನು ನಾನು ಪ್ರಸ್ತಾಪಿಸುತ್ತೇನೆ. ಹೀಗಿರುವಾಗ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಪ್ರಸ್ತಾಪಿಸದಂತೆ ನನ್ನನ್ನು ಏಕೆ ತಡೆಯಲಾಗುತ್ತಿದೆ?” ಎಂದು ಅವರು ಪಕ್ಷವನ್ನು ಪ್ರಶ್ನಿಸಿದ್ದಾರೆ.
“ನನ್ನನ್ನು ಮೌನಗೊಳಿಸಲಾಗಿದೆ, ಆದರೆ ನಾನು ಸೋತಿಲ್ಲ” ಎಂದಿರುವ ಚಡ್ಡಾ, “ನನ್ನ ಈ ಮೌನವನ್ನು ಶರಣಾಗತಿ ಎಂದು ತಪ್ಪಾಗಿ ಭಾವಿಸಬೇಡಿ. ನಾನೀಗ ಶಾಂತವಾಗಿ ಹರಿಯುವ ನದಿ, ಆದರೆ ಪ್ರವಾಹವಾಗಿ ಹೇಗೆ ಉಕ್ಕಬೇಕು ಎಂಬುದು ನನಗೆ ಚೆನ್ನಾಗಿ ತಿಳಿದಿದೆ,” ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಸಾರ್ವಜನಿಕರು ಎಂದಿನಂತೆ ತಮ್ಮ ಬೆಂಬಲಕ್ಕೆ ನಿಲ್ಲುವಂತೆಯೂ ಅವರು ಮನವಿ ಮಾಡಿದ್ದಾರೆ.
ಇದನ್ನು ಓದಿದ್ದೀರಾ? IPL ಅಂಗಳದಲ್ಲಿ ‘ಆರ್‌ಸಿಬಿ’ ಅತಿದೊಡ್ಡ ಬ್ರ್ಯಾಂಡ್ ಆಗಿ ಬೆಳೆದದ್ದೇ ಒಂದು ವಿಸ್ಮಯ
ರಾಜ್ಯಸಭೆಯ ಉಪನಾಯಕನ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ತೆಗೆದುಹಾಕುವಂತೆ ಕೋರಿ ಎಎಪಿ ಗುರುವಾರವಷ್ಟೇ ರಾಜ್ಯಸಭಾ ಕಾರ್ಯಾಲಯಕ್ಕೆ ಪತ್ರ ಬರೆದಿತ್ತು. ಅವರ ಸ್ಥಾನಕ್ಕೆ ಪಂಜಾಬ್‌ನ ಮತ್ತೊಬ್ಬ ಸಂಸದ ಅಶೋಕ್ ಮಿತ್ತಲ್ ಅವರನ್ನು ನೇಮಿಸುವಂತೆಯೂ ಪ್ರಸ್ತಾಪಿಸಿತ್ತು. ಇದರ ಜೊತೆಗೆ, ಪಕ್ಷದ ಕೋಟಾದಡಿ ಸಂಸತ್ತಿನಲ್ಲಿ ಚಡ್ಡಾ ಅವರಿಗೆ ಮಾತನಾಡಲು ಸಮಯ ನೀಡಬಾರದು ಎಂದೂ ಪಕ್ಷವು ಕಾರ್ಯಾಲಯವನ್ನು ಕೋರಿದೆ ಎನ್ನಲಾಗಿದೆ.
ಈ ಬೆಳವಣಿಗೆಗಳಿಗೂ ಮುನ್ನ, ಸಂಸತ್ತಿನಲ್ಲಿ ತಾವು ಪ್ರಸ್ತಾಪಿಸಿದ್ದ ಮಧ್ಯಮ ವರ್ಗದ ಮೇಲಿನ ತೆರಿಗೆ ಹೊರೆ, ಡೇಟಾ ಅವಧಿ ಮುಕ್ತಾಯದ ಸಮಸ್ಯೆ, ಭಾರತದಲ್ಲಿ ಪಿತೃತ್ವ ರಜೆ ಹಕ್ಕು ಮತ್ತು ವಿಮಾನ ನಿಲ್ದಾಣಗಳಲ್ಲಿನ ಹೆಚ್ಚುವರಿ ಲಗೇಜ್ ಶುಲ್ಕದಂತಹ ಪ್ರಮುಖ ವಿಷಯಗಳನ್ನೊಳಗೊಂಡ ವಿಡಿಯೊ ತುಣುಕೊಂದನ್ನೂ ರಾಘವ್ ಚಡ್ಡಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.




