ಕೆಲವು ನಿರುದ್ಯೋಗಿ ಯುವಕರನ್ನು ಜಿರಳೆಗಳಿಗೆ ಹೋಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್, “ಈ ನಿರುದ್ಯೋಗಿ ಯುವಕರು ಮಾಧ್ಯಮ, ಸಾಮಾಜಿಕ ಮಾಧ್ಯಮ ಮತ್ತು ಆರ್‌ಟಿಐ ಕಾರ್ಯಕರ್ತರಾಗುತ್ತಾರೆ. ಬಳಿಕ ವ್ಯವಸ್ಥೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ” ಎಂದಿದ್ದಾರೆ.
ವಕೀಲರೊಬ್ಬರಿಗೆ ‘ಹಿರಿಯ ವಕೀಲ’ ಹುದ್ದೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠ ನಡೆಸುತ್ತಿತ್ತು. ಈ ವಿಚಾರಣೆ ವೇಳೆ ವ್ಯವಸ್ಥೆ ಮತ್ತು ನ್ಯಾಯಾಂಗದ ಮೇಲಿನ ನಿರಂತರ ದಾಳಿಗಳ ಬಗ್ಗೆ ಸಿಜೆಐ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾರತದ ನಿರುದ್ಯೋಗಿ ಯುವಜನರಲ್ಲಿ 67% ಮಂದಿ ಪದವೀಧರರು
ಅರ್ಜಿ ಸಲ್ಲಿಸಿದ್ದ ವಕೀಲರು ಫೇಸ್‌ಬುಕ್‌ನಲ್ಲಿ ಬಳಸಿದ್ದ ಭಾಷೆ ಹಾಗೂ ಹಿರಿಯ ವಕೀಲ ಹುದ್ದೆಗಾಗಿ ಸತತವಾಗಿ ಒತ್ತಡ ಹೇರುತ್ತಿದ್ದ ರೀತಿಯನ್ನು ನ್ಯಾಯಾಲಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. “ಇಡೀ ಜಗತ್ತು ಹಿರಿಯ ವಕೀಲ ಆಗಲು ಅರ್ಹರಾಗಿರಬಹುದು, ಆದರೆ ನೀವು ಅರ್ಹರಲ್ಲ” ಎಂದು ಪೀಠವು ಅರ್ಜಿದಾರರ ವಕೀಲರಿಗೆ ತಿಳಿಸಿದೆ.
ವಿಚಾರಣೆ ವೇಳೆ ಸಮಾಜದಲ್ಲಿ ವ್ಯವಸ್ಥೆಯ ಮೇಲೆ ದಾಳಿ ಮಾಡುವವರನ್ನು ‘ಪರಾವಲಂಬಿಗಳು’ ಎಂದು ಕರೆದ ಸಿಜೆಐ, ವಕೀಲನಿಗೆ “ನೀವು ಕೂಡ ಅವರ ಜೊತೆ ಕೈಜೋಡಿಸಲು ಬಯಸುತ್ತೀರಾ” ಎಂದು ಪ್ರಶ್ನಿಸಿದರು.
ಇದಾದ ಬಳಿಕ ಅರ್ಜಿದಾರರು ಪೀಠಕ್ಕೆ ಕ್ಷಮೆಯಾಚಿಸಿದ್ದು, ಅರ್ಜಿಯನ್ನು ಹಿಂಪಡೆಯಲು ಅನುಮತಿ ಕೋರಿದರು. ಪೀಠವು ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿದೆ.




