ಬಿಸಿ ಬಿಸಿ ಚಹಾ ಕುಡಿದು 17 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಪ್ರತಿಷ್ಠಿತ ರಾಮಕೃಷ್ಣ ಮಿಷನ್ ವಿದ್ಯಾಲಯದಲ್ಲಿ ನಡೆದಿದೆ. ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮತ್ತು ಸಮಯಕ್ಕೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗದ ಕಾರಣ ಸಾವು ಸಂಭವಿಸಿದೆ ಎಂದು ಮೃತ ವಿದ್ಯಾರ್ಥಿಯ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದುರಂತದ ನೈತಿಕ ಹೊಣೆ ಹೊತ್ತು ಶಾಲೆಯ ಪ್ರಾಂಶುಪಾಲ ಸ್ವಾಮಿ ಇಷ್ಟೇಶಾನಂದ ಮಹಾರಾಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಏನಿದು ಘಟನೆ?
ಮೃತ ವಿದ್ಯಾರ್ಥಿಯನ್ನು ದೀಪ್ತಾಂಶು ಮಹತೋ ಎಂದು ಗುರುತಿಸಲಾಗಿದೆ. ಮಂಗಳವಾರ (ಜೂ.30) ಬೆಳಗ್ಗೆ ಹಾಸ್ಟೆಲ್‌ನಲ್ಲಿದ್ದ ಫ್ಲಾಸ್ಕ್‌ನಲ್ಲಿದ್ದ ಬಿಸಿಯಾದ ಚಹಾವನ್ನು ಅಕಸ್ಮಾತ್ತಾಗಿ ಕುಡಿದಿದ್ದರಿಂದ ದೀಪ್ತಾಂಶುವಿನ ಅನ್ನನಾಳ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಗಂಭೀರ ಗಾಯಗಳಾಗಿವೆ. ಕುಡಿದ ತಕ್ಷಣವೇ ನೋವು ಅನುಭವಿಸಿದರೂ, ಶಾಲೆಯ ಕಠಿಣ ಶಿಸ್ತಿನ ಭಯದಿಂದ ಅದನ್ನು ಹೊರಹಾಕಲು ಹಿಂಜರಿದ ವಿದ್ಯಾರ್ಥಿ, ನೋವನ್ನು ಸಹಿಸಿಕೊಂಡು ಎರಡು ಗಂಟೆಗಳ ಕಾಲ ತರಗತಿಯಲ್ಲೂ ಭಾಗವಹಿಸಿದ್ದಾನೆ ಎಂದು ತಿಳಿದುಬಂದಿದೆ.
ದೀಪ್ತಾಂಶುವಿನ ತಂದೆ ಮನೋರಂಜನ್ ಮಹತೋ ಅವರು ಕಲ್ಕತ್ತಾ ಹೈಕೋರ್ಟ್‌ನ ವಕೀಲರು. ಮಂಗಳವಾರ ಬೆಳಗ್ಗೆ 11:20ರ ಸುಮಾರಿಗೆ ಶಾಲೆಯಿಂದ ಕರೆ ಮಾಡಿ ತಮ್ಮ ಮಗ ಅಸ್ವಸ್ಥನಾಗಿರುವುದಾಗಿ ತಿಳಿಸಲಾಯಿತು. ಕೂಡಲೇ ಶಾಲೆಗೆ ಧಾವಿಸಿದಾಗ, ಮಗ ಮಾತನಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದನು ಮತ್ತು ನಿರಂತರವಾಗಿ ಕೆಮ್ಮುತ್ತಿದ್ದನು ಎಂದು ಅವರು ವಿವರಿಸಿದ್ದಾರೆ.
ವಿದ್ಯಾರ್ಥಿಯ ಸಹೋದರಿ ಮಂಜಿಮ್ ಮಹತೋ ಮಾತನಾಡಿ, “ಶಾಲೆಯ ಕಾರ್ಯಕ್ರಮವೊಂದರಲ್ಲಿ ಆಡಳಿತ ಮಂಡಳಿ ಬ್ಯುಸಿಯಾಗಿದ್ದರಿಂದ ಅವರು ನಮ್ಮ ಮಗನ ಆರೋಗ್ಯದ ಕಡೆ ಗಮನ ನೀಡಲಿಲ್ಲ. ಅವನಿಗೆ ಕೂಡಲೇ ಚಿಕಿತ್ಸೆ ಕೊಡಿಸುವ ಬದಲು, ಎಂಡೋಸ್ಕೋಪಿ ಮಾಡಿಸಿಕೊಳ್ಳಿ ಎಂದು ಶಾಲೆಯ ವೈದ್ಯರು ಹೇಳಿದ್ದರು. ಆಸ್ಪತ್ರೆಗೆ ಕೊಂಡೊಯ್ಯಲು ತಡವಾದ ಕಾರಣ ನನ್ನ ಸಹೋದರ ದಾರಿಯಲ್ಲೇ ಪ್ರಜ್ಞೆ ತಪ್ಪಿ ಸಾವನ್ನಪ್ಪಿದ್ದಾನೆ,” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಇಂಟರ್ನೆಟ್ ಇಲ್ಲದ ಬಾಲ್ಯದಿಂದ ಬಾಹ್ಯಾಕಾಶದವರೆಗೆ; ಚಿಕ್ಕಮಗಳೂರಿನ ಅವೈಸ್ ಮಾಡಿದ ಸಾಧನೆ ಎಂಥದ್ದು ಗೊತ್ತೇ?
ವಿದ್ಯಾರ್ಥಿಗಳಿಗೆ ಹಲ್ಲೆ ಮತ್ತು ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೌರವ್ ತರು ಬಿಸ್ವಾಸ್, ಸೋಮನಾಥ್ ಬೈರಾಗಿ ಮತ್ತು ಸಮರೇಶ್ ಧರಾ ಎಂಬ ಮೂವರು ಹಾಸ್ಟೆಲ್ ಸಿಬ್ಬಂದಿಯನ್ನು ಶಾಲಾ ಆಡಳಿತ ಮಂಡಳಿ ಅಮಾನತುಗೊಳಿಸಿದೆ.
ಬಾರೈಪುರ್ ಜಿಲ್ಲಾ ಪೊಲೀಸರು ನರೇಂದ್ರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ಶಾಲೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಿಸ್ತಿನ ಹೆಸರಿನಲ್ಲಿ ವಿದ್ಯಾರ್ಥಿ ಅನುಭವಿಸಿದ ನೋವು ಮತ್ತು ಶಾಲೆ ತೋರಿದ ಅಮಾನವೀಯ ನಿರ್ಲಕ್ಷ್ಯವು ಇದೀಗ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.




