ತೋತಾಪುರಿ ಮಾವಿನ ಹಣ್ಣಿಗೆ ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಅಡಿಯಲ್ಲಿ ನಿಗದಿತ ಪ್ರಮಾಣವನ್ನು ಹೆಚ್ಚಿಸುವಂತೆ ತೋತಾಪುರಿ ಮಾವಿನ ರೈತರು ನಡೆಸಿದ ಪ್ರತಿಭಟನೆಯ ನಂತರ ರಾಜ್ಯ ಸಹಕಾರ ಇಲಾಖೆ, ಅನುಮೋದಿತ ಪ್ರಮಾಣ ಹೆಚ್ಚಿಸುವಂತೆ ಕೋರಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯಕ್ಕೆ ಪತ್ರ ಬರೆದಿದೆ.
ಪ್ರಸ್ತುತ ಯೋಜನೆಯಡಿ ಗರಿಷ್ಠ ಪ್ರಮಾಣವನ್ನು 1.30 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಸೀಮಿತಗೊಳಿಸಲಾಗಿದೆ. ಸಹಕಾರ ಇಲಾಖೆ ಈಗ ಸಲ್ಲಿಸಿರುವ ಮನವಿ ಪತ್ರದಲ್ಲಿ 5.20 ಲಕ್ಷಕ್ಕೆ ಈ ಪ್ರಮಾಣವನ್ನು ಹೆಚ್ಚಿಸಬೇಕೆಂದು ಕೋರಿದೆ.
ಜೂನ್ 26, 2026ರಿಂದ 12,000ಕ್ಕೂ ಹೆಚ್ಚು ರೈತರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ರೈತರ ಸ್ಪಂದನೆಯನ್ನು ಗಮನದಲ್ಲಿರಿಸಿಕೊಂಡು ನಿಗದಿತ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಕೋಲಾರ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಸ್. ಆರ್. ಕುಮಾರಸ್ವಾಮಿ ಮಾತನಾಡಿ, “ತೋತಾಪುರಿ ಇಳುವರಿ ಕಳೆದ ವರ್ಷಕ್ಕಿಂತ ಉತ್ತಮವಾಗಿದ್ದು, ಸುಮಾರು 12,700 ರೈತರು ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ” ಎಂದಿದ್ದಾರೆ.
ಕೋಲಾರ ಜಿಲ್ಲೆಯ ಮಾವು ಬೆಳೆಗಾರರ ಕಲ್ಯಾಣ ಸಂಘದ ನೀಲತೂರು ಚಿನ್ನಪ್ಪ ರೆಡ್ಡಿ ಮಾತನಾಡಿ, “ಸಹಕಾರ ಇಲಾಖೆ ಕಾರ್ಯದರ್ಶಿ ಕೃಷಿ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ ನಾವು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಿಡಿಪಿಎಸ್ ಅಡಿಯಲ್ಲಿ ಪ್ರಮಾಣವನ್ನು ವಿಸ್ತರಿಸುವಂತೆ ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆಯುವಂತೆ ವಿನಂತಿಸಿದ್ದೇವೆ” ಎಂದು ಹೇಳಿದರು.




