ಹತ್ತಿರದ ರಕ್ತಸಂಬಂಧಿಗಳ ನಡುವಿನ ವಿವಾಹಗಳನ್ನು ನಿಯಂತ್ರಿಸಲು ಅಥವಾ ತಡೆಯಲು ಸೂಕ್ತ ಕಾನೂನು ತರುವ “ಅಗತ್ಯತೆ”ಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ತಾನು ಸರ್ಕಾರಕ್ಕೆ ಯಾವುದೇ ನೇರ ಆದೇಶ ನೀಡುತ್ತಿಲ್ಲ, ಬದಲಾಗಿ ಈ ಗಂಭೀರ ವಿಚಾರದ ಬಗ್ಗೆ ಸರ್ಕಾರವನ್ನು ಜಾಗೃತಗೊಳಿಸಲು ಬಯಸುತ್ತಿರುವುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಶುಕ್ರವಾರ ಈ ಮಹತ್ವದ ಅವಲೋಕನ ಮಾಡಿದೆ.
ನ್ಯಾಯಾಲಯದ ಪ್ರಮುಖ ಅವಲೋಕನ:-
ರಕ್ತಸಂಬಂಧಿ ವಿವಾಹಗಳನ್ನು ನ್ಯಾಯಾಲಯದಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಸಾಮಾಜಿಕ ಸುಧಾರಣಾ ಕಾನೂನುಗಳನ್ನು ರೂಪಿಸುವುದು ಸಂಪೂರ್ಣವಾಗಿ ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ವಿವಾಹ ಎನ್ನುವುದು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ. ಎಚ್‌ಐವಿ ಪೀಡಿತ ವ್ಯಕ್ತಿಯ ವಿವಾಹಕ್ಕೆ ಸಂಬಂಧಿಸಿದ ಹಳೆಯ ತೀರ್ಪೊಂದನ್ನು ಉಲ್ಲೇಖಿಸಿದ ಪೀಠ, ವಿವಾಹದ ಕುರಿತು ಜನರು ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಲು ವ್ಯಾಪಕ ಸಾರ್ವಜನಿಕ ಜಾಗೃತಿಯ ಅಗತ್ಯವಿದೆ ಎಂದಿದೆ.
ರಕ್ತಸಂಬಂಧಿ ವಿವಾಹದಿಂದ ಮಕ್ಕಳಲ್ಲಿ ಉಂಟಾಗಬಹುದಾದ ಆನುವಂಶಿಕ ಕಾಯಿಲೆಗಳ ಬಗ್ಗೆ ಶಾಲಾ-ಕಾಲೇಜುಗಳ ಪಠ್ಯಕ್ರಮ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡುವ ಕುರಿತು ಪರಿಗಣಿಸುವಂತೆಯೂ ಕೇಂದ್ರಕ್ಕೆ ಸೂಚಿಸಲಾಗಿದೆ.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) 20 ವರ್ಷದ ಕಾನೂನು ವಿದ್ಯಾರ್ಥಿನಿ ಚಾರ್ವಿ ಎಸ್. ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರಾದ ಚಾರ್ವಿ ಅವರ ಪೋಷಕರು ಸ್ವಂತ ಸೋದರ ಸಂಬಂಧಿಗಳು . ಸಂಪ್ರದಾಯದ ಹೆಸರಿನಲ್ಲಿ ನಡೆದ ಈ ವಿವಾಹದ ಪರಿಣಾಮವಾಗಿ ತಾವು ಹುಟ್ಟಿನಿಂದಲೇ ಶೇ. 40ರಷ್ಟು ದೃಷ್ಟಿಹೀನತೆಗೆ (ಫೋಟೋಫೋಬಿಯಾ ಮತ್ತು ಕೋನ್ ಡಿಸ್ಟ್ರೋಫಿ ಎಂಬ ಅಪರೂಪದ ಆನುವಂಶಿಕ ಕಣ್ಣಿನ ಕಾಯಿಲೆ) ತುತ್ತಾಗಿರುವುದಾಗಿ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ವಕೀಲ ಅಂಜುಮನ್ ತ್ರಿಪಾಠಿ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಹತ್ತಿರದ ಸಂಬಂಧಿಗಳ ವಿವಾಹದಿಂದ ಮಕ್ಕಳಲ್ಲಿ ರಿಸೆಸಿವ್ ಜೆನೆಟಿಕ್ ಕಾಯಿಲೆಗಳು, ಅಂಗವೈಕಲ್ಯ, ಬೆಳವಣಿಗೆಯ ಕುಂಠಿತ ಮತ್ತು ಶಿಶು ಮರಣದ ಅಪಾಯ ಹೆಚ್ಚಾಗುತ್ತದೆ ಎಂದು ವೈದ್ಯಕೀಯ ಅಧ್ಯಯನಗಳನ್ನು ಉಲ್ಲೇಖಿಸಿ ವಾದಿಸಲಾಯಿತು.
ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 5(iv) ಮತ್ತು 5(v) ಹಾಗೂ ವಿಶೇಷ ವಿವಾಹ ಕಾಯ್ದೆ-1954ರಲ್ಲಿರುವ ವಿನಾಯಿತಿಗಳನ್ನು ಮರುಪರಿಶೀಲಿಸಬೇಕು. ಸಂವಿಧಾನದ 14, 15 ಮತ್ತು 21ನೇ ವಿಧಿಗಳ ಅಡಿಯಲ್ಲಿ ಮಕ್ಕಳ ಆರೋಗ್ಯಕರ ಜೀವನದ ಹಕ್ಕನ್ನು ರಕ್ಷಿಸಲು ಕಾನೂನು ತಿದ್ದುಪಡಿ ತರಬೇಕು ಎಂದು ಕೋರಲಾಗಿತ್ತು.
ಕಾನೂನು ಜಾರಿಯಾಗುವವರೆಗೆ, ರಕ್ತಸಂಬಂಧಿ ವಿವಾಹಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಮದುವೆಗೆ ಮುನ್ನ ಕಡ್ಡಾಯ ಆನುವಂಶಿಕ ಸಮಾಲೋಚನೆ, ವೈದ್ಯಕೀಯ ತಪಾಸಣೆ ಮತ್ತು ಅಪಾಯದ ಕುರಿತು ಮಾಹಿತಿ ನೀಡುವ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಈ ಕ್ರಮಗಳು ಈಗಾಗಲೇ ನಡೆದಿರುವ ವಿವಾಹಗಳನ್ನು ಅಪರಾಧೀಕರಿಸುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ಅರ್ಜಿಯಲ್ಲಿ ಉಲ್ಲೇಖಿಸಲಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ದತ್ತಾಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ವಿವಾಹಿತ ಮಹಿಳೆಯರ ಪೈಕಿ ಶೇ. 11ರಷ್ಟು ಮಂದಿ ರಕ್ತಸಂಬಂಧಿ ವಿವಾಹವಾಗಿದ್ದು, ಇದರಲ್ಲಿ ಶೇ. 8ರಷ್ಟು ಮದುವೆಗಳು ಸ್ವಂತ ಸೋದರ ಸಂಬಂಧಿಗಳ ನಡುವೆಯೇ ನಡೆದಿವೆ. ಪ್ರಾದೇಶಿಕವಾಗಿ ಗಮನಿಸಿದಾಗ, ಕೇರಳವನ್ನು ಹೊರತುಪಡಿಸಿ ಉಳಿದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ಪದ್ಧತಿ ಅತಿ ಹೆಚ್ಚಾಗಿದ್ದು, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಶೇ. 25ಕ್ಕಿಂತ ಹೆಚ್ಚು ಹಾಗೂ ತೆಲಂಗಾಣ ಮತ್ತು ಪುದುಚೇರಿಯಲ್ಲಿ ಸುಮಾರು ಶೇ. 20ರಷ್ಟು ಮಹಿಳೆಯರು ಹತ್ತಿರದ ಸಂಬಂಧಿಕರನ್ನು ವಿವಾಹವಾಗಿದ್ದಾರೆ. ಇನ್ನು ಧರ್ಮವಾರು ಅಂಕಿಅಂಶಗಳನ್ನು ನೋಡುವುದಾದರೆ, ಮುಸ್ಲಿಮರಲ್ಲಿ ಶೇ. 15.8, ಬೌದ್ಧರಲ್ಲಿ ಶೇ. 14.5, ಕ್ರೈಸ್ತರಲ್ಲಿ ಶೇ. 11.9 ಹಾಗೂ ಹಿಂದೂಗಳಲ್ಲಿ ಶೇ. 10.1ರಷ್ಟು ರಕ್ತಸಂಬಂಧಿ ವಿವಾಹಗಳು ನಡೆಯುತ್ತಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಈ ಪದ್ಧತಿ ಸರಿಸುಮಾರು ಒಂದೇ ಪ್ರಮಾಣದಲ್ಲಿದ್ದು, ಇದರ ವೈಜ್ಞಾನಿಕ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವಿಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.



