ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಕ್ಕಾಗಿ ‘ಪೋಕ್ಸೊ’ ಕಾಯ್ದೆಯಡಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬ, ಅದೇ ಸಂತ್ರಸ್ತೆಯನ್ನು ಆಕೆ ಪ್ರಾಪ್ತ ವಯಸ್ಸಿಗೆ ಬಂದ ಬಳಿಕ ವಿವಾಹವಾಗಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆತನ ಮೇಲಿನ ಶಿಕ್ಷೆಯನ್ನು ರದ್ದುಗೊಳಿಸಿದೆ. ಯಾವುದೇ ಪ್ರಕರಣದಲ್ಲಿ ‘ಸಂಪೂರ್ಣ ನ್ಯಾಯ’ ಒದಗಿಸುವ ಉದ್ದೇಶದಿಂದ ಸಂವಿಧಾನದ 142ನೇ ವಿಧಿಯಡಿ ತಮಗಿರುವ ವಿಶೇಷಾಧಿಕಾರವನ್ನು ಬಳಸಿ ಸುಪ್ರೀಂ ಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಸಂತ್ರಸ್ತೆ 12ನೇ ತರಗತಿಯಲ್ಲಿ ಓದುತ್ತಿದ್ದಾಗ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಆತ ಮದುವೆಯಾಗಲು ನಿರಾಕರಿಸಿದಾಗ ಯುವತಿ ನೀಡಿದ ದೂರಿನ ಆಧಾರದ ಮೇಲೆ, ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಕ್ಕಾಗಿ ಆರೋಪಿಗೆ ಪೋಕ್ಸೊ ಕಾಯ್ದೆಯಡಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಂತರ ಯುವತಿಯು ಬೇರೊಬ್ಬನೊಂದಿಗೆ ವಿವಾಹವಾಗಿದ್ದಳು. ಆದರೆ, ಆಕೆಯ ಹಿಂದಿನ ಪ್ರೇಮ ಪ್ರಕರಣದ ಬಗ್ಗೆ ತಿಳಿದು ಆಕೆಯ ಪತಿ ಕೆಲವೇ ದಿನಗಳಲ್ಲಿ ಆಕೆಯನ್ನು ತೊರೆದಿದ್ದ.
ಈ ನಡುವೆ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯು ಯುವತಿಯೊಂದಿಗೆ ರಾಜಿ ಮಾಡಿಕೊಂಡಿದ್ದ. ಬಳಿಕ ಇಬ್ಬರೂ ವಿವಾಹವಾಗಿ, ಒಟ್ಟಾಗಿ ಜೀವಿಸಲು ಆರಂಭಿಸಿದ್ದರು. ಮದುವೆಯ ನಂತರ ಯುವತಿಯು, ತನ್ನ ಪತಿಗೆ ವಿಧಿಸಲಾಗಿರುವ ಪೋಕ್ಸೊ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಳು. ಆದರೆ, ಹೈಕೋರ್ಟ್ ಆಕೆಯ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ದಂಪತಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.
ಇದನ್ನು ಓದಿದ್ದೀರಾ? ಇಂಡಿಯಾ ಒಕ್ಕೂಟ ಸಭೆ: ಕಾಂಗ್ರೆಸ್ಸೇತರ ಪಕ್ಷಗಳ ಆತಂಕ ನಿವಾರಿಸಿದ ರಾಹುಲ್ ಗಾಂಧಿ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ಪೀಠವು, ‘ಮೇಲ್ಮನವಿದಾರ (ಪತಿ) ಮತ್ತು ಸಂತ್ರಸ್ತೆ (ಪತ್ನಿ) ಸಮಾಜದಲ್ಲಿ ಪತಿ-ಪತ್ನಿಯರಾಗಿ ಶಾಂತಿಯುತವಾಗಿ ಬದುಕಲು ಸ್ವತಂತ್ರರು’ ಎಂದು ತಿಳಿಸಿದೆ.
“ಪ್ರಕರಣದ ಗುಣಾವಗುಣಗಳ (Merits) ಬಗ್ಗೆ ಚರ್ಚಿಸದೆ, ಈ ಪ್ರಕರಣದ ವಿಶಿಷ್ಟ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡು, ಪೋಕ್ಸೊ ಕಾಯ್ದೆಯ ಸೆಕ್ಷನ್ 5(1)ರ ಅಡಿ ವಿಧಿಸಲಾಗಿರುವ ಶಿಕ್ಷೆಯನ್ನು ರದ್ದುಪಡಿಸಲು ಮತ್ತು ಆತನನ್ನು ಆರೋಪಮುಕ್ತಗೊಳಿಸಲು ಸಂವಿಧಾನದ 142ನೇ ವಿಧಿಯಡಿ ನಮ್ಮ ಪರಮಾಧಿಕಾರವನ್ನು (Plenary Power) ಚಲಾಯಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ” ಎಂದು ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ನ್ಯಾಯಾಲಯದಲ್ಲಿ ಬಾಕಿ ಇರುವ ಯಾವುದೇ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಒದಗಿಸಲು ಅಗತ್ಯವಾದ ಆದೇಶವನ್ನು ಹೊರಡಿಸಲು ಸಂವಿಧಾನದ 142ನೇ ವಿಧಿಯು ಸುಪ್ರೀಂ ಕೋರ್ಟ್‌ಗೆ ಅಧಿಕಾರ ನೀಡುತ್ತದೆ. ಆದಾಗ್ಯೂ, ಈ ಆದೇಶವನ್ನು ಕೇವಲ ಈ ಪ್ರಕರಣದ ವಿಶಿಷ್ಟ ಸನ್ನಿವೇಶಗಳನ್ನು ಮಾತ್ರ ಆಧರಿಸಿ ನೀಡಲಾಗಿದ್ದು, ಇದನ್ನು ಇತರ ಪ್ರಕರಣಗಳಿಗೆ ‘ಪೂರ್ವಾಪರ ಉದಾಹರಣೆ’ (Precedent) ಎಂದು ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಲ್ಲದೆ, 2019ರ ಜೂನ್ 3ರಂದೇ ಹೈಕೋರ್ಟ್ ಆರೋಪಿಯ ಜೈಲು ಶಿಕ್ಷೆಯನ್ನು ಅಮಾನತಿನಲ್ಲಿಟ್ಟಿರುವುದರಿಂದ, ಆತ ಬೇರಾವುದೇ ಪ್ರಕರಣದಲ್ಲಿ ಅಗತ್ಯವಿಲ್ಲದಿದ್ದರೆ ಶರಣಾಗುವ ಅವಶ್ಯಕತೆಯಿಲ್ಲ ಎಂದು ಪೀಠ ತಿಳಿಸಿದೆ.





