ಸಂಘರ್ಷ ನಡೆಯುತ್ತಿರುವ ಸಮಯದಲ್ಲೇ ಇರಾನ್‌ನ ನಾಶದ ಬಗ್ಗೆ ಟ್ರಂಪ್ ಮಾತನಾಡಿದ್ದಾರೆ. ಇರಾನಿನ ಯುದ್ಧೋತ್ತರ ಪುನರ್‌ನಿರ್ಮಾಣ ಮತ್ತು ತೈಲ ಸಂಪನ್ಮೂಲಗಳ ಕುರಿತು ಹೇಳಿಕೆಗಳನ್ನು ನೀಡಿದ್ದಾರೆ. “ಇರಾನ್ ಧ್ವಂಸಗೊಂಡರೆ, ಅದರ ಪುನರ್‌ನಿರ್ಮಾಣಕ್ಕೆ ಅಮೆರಿಕವೇ ಬರಬೇಕಾಗುತ್ತದೆ. ನಾವು ವ್ಯಯಿಸುವ ಹಣಕ್ಕೆ ಪ್ರತಿಯಾಗಿ ಇರಾನ್‌ನಲ್ಲಿನ ತೈಲದಲ್ಲಿ ಅರ್ಧದಷ್ಟು ಪಾಲನ್ನು ಅಮೆರಿಕ ಪಡೆಯಲಿದೆ” ಎಂದು ಹೇಳಿದ್ದಾರೆ.
ಇತ್ತೀಚೆಗೆ, ABC ನ್ಯೂಸ್ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, “ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳೊಂದಿಗಿನ ಸಂಘರ್ಷದಲ್ಲಿ ಇರಾನ್‌ನ ಮೂಲಸೌಕರ್ಯಗಳು ಧ್ವಂಸಗೊಂಡರೆ, ಅದನ್ನು ಪುನರ್‌ನಿರ್ಮಿಸಲು ಸುಮಾರು ಒಂದು ಟ್ರಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಹಣ ಬೇಕಾಗಬಹುದು. ಈ ಪುನರ್‌ನಿರ್ಮಾಣಕ್ಕೆ ಅಮೆರಿಕವೇ ಮುಂದೆ ಬರಬೇಕಾಗುತ್ತದೆ. ನಾವು ಅವರಿಗೆ (ಇರಾನ್) ಸಹಾಯ ಮಾಡಲಿದ್ದೇವೆ” ಎಂದು ಹೇಳಿದ್ದಾರೆ.
ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ವರದಿಗಾರರು, ‘ಇದು ಇರಾನ್ ಪಾಲಿಗೆ ಅಮೆರಿಕ ತರಲಿರುವ ಮಾರ್ಷಲ್ ಯೋಜನೆ ಶೈಲಿಯೇ’ ಎಂದು ಪ್ರಶ್ನಿಸಿದ್ದಾರೆ. ತಕ್ಷಣವೇ ಉತ್ತರಿಸಿದ ಟ್ರಂಪ್, “ಹೌದು, ಈ ಯೋಜನೆಗೆ ಪ್ರತಿಯಾಗಿ ನಾವು ಅವರ ಅರ್ಧದಷ್ಟು ತೈಲವನ್ನು ಪಡೆಯಲಿದ್ದೇವೆ” ಎಂದಿದ್ದಾರೆ.
ಎರಡನೇ ಮಹಾಯುದ್ಧದ ಬಳಿಕ ಧ್ವಂಸಗೊಂಡಿದ್ದ ಪಶ್ಚಿಮ ಯುರೋಪನ್ನು ಪುನಶ್ಚೇತನಗೊಳಿಸಲು 1948 ರಲ್ಲಿ ಅಮೆರಿಕ ತನ್ನ ಸ್ವಂತ ಹಣವನ್ನು ಧನಸಹಾಯವಾಗಿ ನೀಡಿತ್ತು. ಬಳಿಕ, ಯುರೋಪ್ ಮೇಲೆ ತನ್ನ ಹಿಡಿತವನ್ನೂ ಹೆಚ್ಚಿಸಿಕೊಂಡಿತ್ತು. ಅಂತೆಯೇ, ಇರಾಕ್ ಮತ್ತು ಸಿರಿಯಾ ಯುದ್ಧಗಳ ಸಮಯದಲ್ಲೂ ಅಮೆರಿಕ ತನ್ನ ಮಿಲಿಟರಿ ಶಕ್ತಿಯನ್ನು ಒದಗಿಸಿತ್ತು. ಅದಕ್ಕೆ ಪ್ರತಿಯಾಗಿ ಆ ದೇಶಗಳ ತೈಲ ಬಾವಿಗಳನ್ನು ಅಮೆರಿಕ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಅಮೆರಿಕದ ಈ ನೆರವು ಮತ್ತು ಪ್ರತಿಫಲವನ್ನು ಮಾರ್ಷಲ್ ಯೋಜನೆ ಎಂದು ಕರೆಯಲಾಗಿತ್ತು.
ಆದರೆ, ಟ್ರಂಪ್ ಲೆಕ್ಕಾಚಾರದಲ್ಲಿ ಮಾರ್ಷಲ್ ಯೋಜನೆ ಶೈಲಿ ವಿಭಿನ್ನವಾಗಿರಲಿದೆ ಎಂದು ಹೇಳಲಾಗಿದೆ. ಅಮೆರಿಕವು ಇರಾನ್‌ನ ಪುನರ್ನಿರ್ಮಾಣಕ್ಕೆ ನೆರವಾದರೆ, ಅದಕ್ಕೆ ಪ್ರತಿಯಾಗಿ ಇರಾನ್‌ನ ಅತಿ ದೊಡ್ಡ ನೈಸರ್ಗಿಕ ಸಂಪತ್ತಾದ ತೈಲದ ಮೇಲೆ ಅಮೆರಿಕ ಸಂಪೂರ್ಣ ಹಕ್ಕನ್ನು ಸ್ಥಾಪಿಸಬೇಕು. ಅಂದರೆ, ಇರಾನ್‌ನ ಅರ್ಧದಷ್ಟು ತೈಲದ ಆದಾಯ ಅಥವಾ ನಿಯಂತ್ರಣ ಅಮೆರಿಕದ ಪಾಲಾಗಬೇಕು ಎಂಬುದು ಅವರ ಹುನ್ನಾರವಾಗಿದೆ.
ಈ ಲೇಖನ ಓದಿದ್ದೀರಾ?: ಗೋವು ರಾಷ್ಟ್ರೀಯ ಪ್ರಾಣಿಯಲ್ಲ, ತಾಯಿಯಲ್ಲ; ಬಿಜೆಪಿಯ ಮತಬ್ಯಾಂಕ್
ಆದರೆ, ಅಮೆರಿಕವನ್ನು ಇರಾನ್ ಪ್ರಬಲವಾಗಿ ಎದುರಿಸುತ್ತಿದೆ. ಅಮೆರಿಕವೇ ಮಣಿಯುವಂತೆ ಮಾಡುತ್ತಿದೆ. ಆದ್ದರಿಂದ, ಟ್ರಂಪ್ ಅವರ ಈ ದುರಾಲೋಚನೆ ಫಲಿಸುವುದಿಲ್ಲ ಎನ್ನುತ್ತಾರೆ ವಿಶ್ಲೇಷಕರು.
ಮತ್ತೊಂದು ವಿಚಾರವೆಂದರೆ, ಯಾವುದೇ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ಬಲವಂತವಾಗಿ ಅಥವಾ ಪುನರ್‌ನಿರ್ಮಾಣದ ಹೆಸರಿನಲ್ಲಿ ವಶಪಡಿಸಿಕೊಳ್ಳುವುದು ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ‘ಸಂಪತ್ತಿನ ಲೂಟಿ’ ಎಂದು ಪರಿಗಣಿತವಾಗುತ್ತದೆ.




