ಸಚಿವ ಹಾಗೂ ಹಿರಿಯೂರು ಶಾಸಕ ಡಿ ಸುಧಾಕರ್ ಅವರ ನಿಧನದಿಂದ ಎದುರಾಗಿರುವ ಬೈ-ಎಲೆಕ್ಷನ್ ಜಿಲ್ಲೆಯ ರಾಜಕೀಯ ತಿರುವಿಗೆ ಕಾರಣವಾಗಿದೆ. ಚಿತ್ರದುರ್ಗ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿ ಸಚಿವರ ನಿಧನದಿಂದ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗುತ್ತಿರುವುದು ಈ ಚುನಾವಣೆಯ ಮಹತ್ವವನ್ನು ಹೆಚ್ಚಿಸಿದೆ.
ಇನ್ನೂ ಚುನಾವಣಾ ದಿನಾಂಕ ನಿಗದಿಯಾಗಲಿಲ್ಲ, ಕಾಂಗ್ರೆಸ್ ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೂ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಆಕಾಂಕ್ಷಿಗಳು ಮತದಾರರ ಮನ ಗೆಲ್ಲುವ ಪ್ರಯತ್ನ ಆರಂಭಿಸಿದ್ದಾರೆ.
ಕುತೂಹಲಕಾರಿ ಅಂಶವೆಂದರೆ, ಕ್ಷೇತ್ರದೊಂದಿಗೆ ನೇರ ರಾಜಕೀಯ ಸಂಬಂಧವಿಲ್ಲದ ಹಲವು ಉದ್ಯಮಿಗಳು, ಚಿನ್ನದ ವ್ಯಾಪಾರಿಗಳು, ನಿವೃತ್ತ ಅಧಿಕಾರಿಗಳು ಹಾಗೂ ಹೊಸ ಮುಖಗಳು ಏಕಾಏಕಿ ಹಿರಿಯೂರು ರಾಜಕೀಯದಲ್ಲಿ ಸಕ್ರಿಯರಾಗಿರುವುದು.
ದೇವಾಲಯಗಳಿಗೆ ಭೇಟಿ, ಮಠಾಧೀಶರ ಆಶೀರ್ವಾದ, ಮದುವೆ ಸಮಾರಂಭಗಳಲ್ಲಿ ಭಾಗವಹಿಸುವುದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳುವುದು ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳ ಮೂಲಕ ತಾವು ಅಭ್ಯರ್ಥಿಗಳೆಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿದ್ದಾರೆ. ಆದರೆ ಇವರಲ್ಲಿ ಹಲವರು ಹಿಂದಿನ ಚುನಾವಣೆಗಳಲ್ಲೂ ಇದೇ ರೀತಿಯ ಪ್ರಯತ್ನ ನಡೆಸಿ ನಂತರ ರಾಜಕೀಯದಿಂದ ದೂರ ಉಳಿದ ಉದಾಹರಣೆಗಳಿವೆ.
ಕ್ಷೇತ್ರದ ರಾಜಕೀಯ ವಲಯದಲ್ಲಿ ಕೆಲವರು ಇದನ್ನು “ಒತ್ತಡದ ರಾಜಕೀಯ” ಮತ್ತು “ಬ್ಲ್ಯಾಕ್‌ಮೇಲ್ ರಾಜಕಾರಣ” ಎಂದು ಟೀಕಿಸುತ್ತಿದ್ದು, ಜನರು ಕೂಡ ಇಂತಹ ಆಕಸ್ಮಿಕ ರಾಜಕೀಯ ಚಟುವಟಿಕೆಗಳನ್ನು ಗುಮಾನಿಯಿಂದಲೇ ಗಮನಿಸುತ್ತಿದ್ದಾರೆ.
ಕಾಂಗ್ರೆಸ್‌ನಲ್ಲಿ ಡಿ ಸುಧಾಕರ್ ಅವರ ಪುತ್ರ ಸುಹಾಸ್ ಸುಧಾಕರ್ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಹಾಲಿ ಶಾಸಕರ ನಿಧನದ ಬಳಿಕ ಕುಟುಂಬ ಸದಸ್ಯರಿಗೆ ಅವಕಾಶ ನೀಡುವುದು ಕಾಂಗ್ರೆಸ್ ಹಿಂದಿನ ಹಲವು ಉಪಚುನಾವಣೆಗಳಲ್ಲಿ ಅನುಸರಿಸಿದ ಸಂಪ್ರದಾಯವಾಗಿದೆ.
ಆದರೆ, ಮೂರು ಬಾರಿ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದ ಡಿ ಸುಧಾಕರ್ ಅವರ ಜನಪ್ರಿಯತೆ ಸುಹಾಸ್‌ಗೆ ವರ್ಗಾವಣೆಯಾಗಿ ಅನುಕಂಪದ ಅಲೆ ಮತವಾಗಿ ಪರಿವರ್ತನೆಯಾದರೆ ಚುನಾವಣೆಯ ನಿರ್ಣಾಯಕ ಅಂಶವಾಗಬಹುದು.
ಇದರ ಜೊತೆಗೆ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಯಾದವ ಹಾಗೂ ಒಕ್ಕಲಿಗ (ಕುಂಚಿಟಿಗ) ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಒತ್ತಾಯವೂ ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿದೆ. ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಹಲವು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿರುವುದು ಅಭ್ಯರ್ಥಿ ಆಯ್ಕೆಯನ್ನು ಅಸುಲಭವಾಗಿಸಿದೆ.
ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೂ ಅಭ್ಯರ್ಥಿ ಆಯ್ಕೆ ಸುಲಭದ ಕೆಲಸವಲ್ಲ. ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಅವರ ಪುತ್ರ ಡಾ. ಸಿದ್ಧಾರ್ಥ ಗುಂಡಾರ್ಪಿ ಹೆಸರು ಸೇರಿದಂತೆ ಹಲವರ ಹೆಸರು ಕೇಳಿಬರುತ್ತಿವೆ. ಇತ್ತೀಚೆಗೆ ಬಿಜೆಪಿ ಸೇರಿರುವ ಕಾಡುಗೊಲ್ಲ ಸಮುದಾಯದ ನಾಯಕನ ಹೆಸರೂ ಚರ್ಚೆಯಲ್ಲಿದೆ.
ಇನ್ನೊಂದೆಡೆ, ಕ್ಷೇತ್ರದಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಮತಗಳಿರುವ ಕಾರಣ ಜೆಡಿಎಸ್ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಮೇಲೆ ಭರವಸೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳ ಪ್ರಚಾರವೂ ಕುತೂಹಲ ಮೂಡಿಸಿದೆ. ಆದರೆ ಇದುವರೆಗೆ ಮೈತ್ರಿಕೂಟದಿಂದ ಯಾವುದೇ ಅಧಿಕೃತ ಸೂಚನೆ ಹೊರಬಂದಿಲ್ಲ.
ಹಿರಿಯೂರು ಕ್ಷೇತ್ರದಲ್ಲಿ ಯಾವುದೇ ಒಂದು ಸಮುದಾಯದ ಮತಗಳಿಂದ ಮಾತ್ರ ಗೆಲುವು ಸಾಧಿಸುವುದು ಕಷ್ಟ. ಡಿ ಸುಧಾಕರ್ ಜೈನ ಸಮುದಾಯಕ್ಕೆ ಸೇರಿದವರಾಗಿದ್ದರೂ, ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸಿ ಮೂರು ಬಾರಿ ಶಾಸಕರಾಗಿದ್ದಾರೆ.
ಈ ಬಾರಿ ಅನುಕಂಪದ ಅಲೆ, ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು, ಜಾತಿ ಸಮೀಕರಣ, ಪಕ್ಷದ ಸಂಘಟನೆ ಹಾಗೂ ಸ್ಥಳೀಯ ಸ್ವೀಕಾರಾರ್ಹತೆ ಈ ಐದು ಅಂಶಗಳು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ.
ಹಿರಿಯೂರು ಉಪಚುನಾವಣೆ ಕೇವಲ ಖಾಲಿಯಾದ ಸ್ಥಾನವನ್ನು ಭರ್ತಿ ಮಾಡುವ ಚುನಾವಣೆಯಾಗಿ ಮಾತ್ರವಲ್ಲದೆ ಕಾಂಗ್ರೆಸ್‌ಗೆ ಅನುಕಂಪದ ಅಲೆ ಎಷ್ಟರ ಮಟ್ಟಿಗೆ ನೆರವಾಗುತ್ತದೆ ಎಂಬ ಪರೀಕ್ಷೆಯ ಜೊತೆಗೆ, ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ಸಂಘಟನಾ ಶಕ್ತಿಯ ಪರೀಕ್ಷೆಯೂ ಆಗಿದೆ.
ಪಕ್ಷೇತರರ ಸದ್ದು ಸದ್ಯಕ್ಕೆ ಸಾಮಾಜಿಕ ಜಾಲತಾಣಗಳ ಮಟ್ಟಕ್ಕೆ ಮಾತ್ರ ಸೀಮಿತವಾಗಿರುವಂತೆ ಕಂಡರೂ, ಅಂತಿಮವಾಗಿ ಸ್ಪರ್ಧೆ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ನಡುವೆ ನೇರ ಹಣಾಹಣಿಯಾಗುವ ಸಾಧ್ಯತೆ ಹೆಚ್ಚಿದೆ. ಅಭ್ಯರ್ಥಿಗಳ ಅಧಿಕೃತ ಘೋಷಣೆಯ ನಂತರವೇ ಚುನಾವಣೆಯ ನಿಜವಾದ ಚಿತ್ರಣ ಸ್ಪಷ್ಟವಾಗಲಿದ್ದು, ಸದ್ಯಕ್ಕೆ ಹಿರಿಯೂರು ರಾಜ್ಯದ ಅತ್ಯಂತ ಕುತೂಹಲಕಾರಿ ಉಪಚುನಾವಣಾ ಕ್ಷೇತ್ರವಾಗಿ ಬಿಂಬಿತವಾಗಿದೆ.




