ತಮಿಳುನಾಡು ವಿಧಾನಸಭೆ ಚುನಾವಣೆಗೆ ಮಹಿಳಾ ನಾಯಕಿಯರಿಗೆ ಟಿಕೆಟ್ ನೀಡಲು ನಿರ್ಲಕ್ಷ್ಯ ತೋರಿರುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಹಸೀನಾ ಸೈಯದ್ ಅವರು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಸೆಲ್ವಪೆರುಂತಗೈ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ನಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ಸಂಬಂಧಿಸಿದಂತೆ ANI ಸುದ್ಧಿಸಂಸ್ಥೆಯೊಂದಿಗೆ ಮಾತನಾಡಿದ ಹಸೀನಾ ಸೈಯದ್, “ಪಕ್ಷ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಭರವಸೆ ನೀಡಿದ್ದರೂ, ರಾಜ್ಯ ನಾಯಕತ್ವ ಮಹಿಳಾ ನಾಯಕಿಯರನ್ನು ಕಡೆಗಣಿಸಿದೆ” ಎಂದು ಆರೋಪಿಸಿದ್ದಾರೆ. ತಮಿಳುನಾಡು ಮತ್ತು ಪುದುಚೆರಿ ಎರಡೂ ಕಡೆಗಳಲ್ಲಿ ಟಿಕೆಟ್ ಆಯ್ಕೆ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದ್ದಾರೆ.
ಹಸೀನಾಸೈಯದ್ಮಾಡಿರುವ ಆರೋಪಗಳೇನು ?
ಕೃಷ್ಣಗಿರಿ ಕ್ಷೇತ್ರದ ವಿವಾದ: ಕೇಂದ್ರ ಚುನಾವಣಾ ಸಮಿತಿ (CEC) ಕೃಷ್ಣಗಿರಿ ಕ್ಷೇತ್ರದಿಂದ ತಮ್ಮ ಹೆಸರನ್ನು ಅಂತಿಮಗೊಳಿಸಿತ್ತು. ಆದರೆ “ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ” ಕೊನೆಯ ಕ್ಷಣದಲ್ಲಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಲಾಯಿತು ಎಂದು ಅವರು ಆರೋಪಿಸಿದ್ದಾರೆ.
ಮಹಿಳಾ ಪ್ರಾತಿನಿಧ್ಯದ ಕೊರತೆ: ಕಾಂಗ್ರೆಸ್ ಸ್ಪರ್ಧಿಸುತ್ತಿರುವ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 9 ಕ್ಷೇತ್ರಗಳಲ್ಲಿ ಮಹಿಳೆಯರನ್ನು ಯಾಕೆ ಸ್ಪರ್ಧೆಗಿಳಿಸುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಅವರು ಪ್ರಶ್ನಿಸಿದ್ದಲ್ಲದೆ, ಬಿಜೆಪಿ 5 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದನ್ನು ಅವರು ಉಲ್ಲೇಖಿಸಿ ಅವರು ರಾಜ್ಯ ಘಟಕದ ನಾಯಕತ್ವವನ್ನು ಟೀಕಿಸಿದ್ದಾರೆ.
ಹಿರಿಯ ನಾಯಕರ ಮಧ್ಯಪ್ರವೇಶ: ಎ. ಚೆಲ್ಲಕುಮಾರ್ ಅವರ ಮೇಲಿನ ಆರೋಪಗಳ ಹಿನ್ನೆಲೆಯಲ್ಲಿ ಅವರಿಗೆ ಕೃಷ್ಣಗಿರಿ ಕ್ಷೇತ್ರ ನೀಡಲು ಮಲ್ಲಿಕಾರ್ಜುನ ಖರ್ಗೆ ಮೊದಲು ವಿರೋಧಿಸಿದ್ದರು. ಆದರೆ ರಾಹುಲ್ ಗಾಂಧಿಯವರ ಕಾರಣದಿಂದ ಪರಿಸ್ಥಿತಿ ಬದಲಾಯಿತು. ಚೆಲ್ಲಕುಮಾರ್ ಕ್ಷಮೆಯಾಚಿಸುವ ಮೂಲಕ ಅದೇ ಸ್ಥಾನ ಉಳಿಸಿಕೊಳ್ಳುವ ಮತ್ತು ತಮಗೆ ಬೇರೆಡೆ ಅವಕಾಶ ನೀಡುವ ಪ್ರಸ್ತಾಪ ಮಾಡಲಾಗಿತ್ತು ಎಂದು ಸೈಯದ್ ಹೇಳಿದ್ದಾರೆ.
ಕಾರ್ತಿ ಚಿದಂಬರಂ ಬಗ್ಗೆ ಶ್ಲಾಘನೆ: ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತೆ ಪ್ರಿಯಾಂಕಾ ಗಾಂಧಿ ಅವರ ಬಳಿ ವಾದಿಸಿದ ಕಾರ್ತಿ ಪಿ. ಚಿದಂಬರಂ ಅವರ ಪ್ರಯತ್ನವನ್ನು ಸೈಯದ್ ಶ್ಲಾಘಿಸಿದ್ದಾರೆ. ಆದರೆ ಟಿಕೆಟ್ ಹಂಚಿಕೆ ಹೆಚ್ಚು ಕೇಂದ್ರೀಕೃತ(centralised)ವಾಗಿದ್ದರಿಂದ ಈ ಪ್ರಯತ್ನಗಳು ಫಲ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.




