ತೆಲಂಗಾಣದ ಉತ್ತರ ಭಾಗದಲ್ಲಿರುವ ನಿರ್ಮಲ್ ಜಿಲ್ಲೆಯು ಭಾರತದ ಅನೌಪಚಾರಿಕ ವಲಯದ (Informal sector) ಮಹಿಳಾ ಕಾರ್ಮಿಕರ ಪ್ರಮಾಣದಲ್ಲಿ ಶೇಕಡ 78ರಷ್ಟು ಪಾಲು ಹೊಂದುವ ಮೂಲಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) ಬಿಡುಗಡೆ ಮಾಡಿರುವ ‘ವಾರ್ಷಿಕ ಅಸಂಘಟಿತ ವಲಯದ ಉದ್ದಿಮೆಗಳ ಸಮೀಕ್ಷೆ (ASUSE)-2025’ರ ದತ್ತಾಂಶದಲ್ಲಿ ಈ ಅಂಶ ಬಹಿರಂಗವಾಗಿದೆ.
ದೊಡ್ಡ ಮಟ್ಟದ ರಾಷ್ಟ್ರೀಯ ಸಮೀಕ್ಷೆಯೊಂದರ ಆಧಾರದಲ್ಲಿ ಸಚಿವಾಲಯವು ಜಿಲ್ಲಾವಾರು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿರುವುದು ಇದೇ ಮೊದಲು. ಈ ಪಟ್ಟಿಯಲ್ಲಿ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯು ಕೇವಲ ಶೇ 6.7ರಷ್ಟು ಮಹಿಳಾ ಕಾರ್ಮಿಕರೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಸಮೀಕ್ಷೆಯ ಪ್ರಕಾರ, ಅತಿ ಹೆಚ್ಚು ಮಹಿಳಾ ಕಾರ್ಮಿಕರನ್ನು ಹೊಂದಿರುವ ದೇಶದ ಟಾಪ್-10 ಜಿಲ್ಲೆಗಳು ದಕ್ಷಿಣ ಭಾರತ ಅಥವಾ ಈಶಾನ್ಯ ರಾಜ್ಯಗಳಿಗೆ (ತೆಲಂಗಾಣ, ಮಣಿಪುರ, ಮೇಘಾಲಯ, ಮಿಜೋರಾಂ) ಸೇರಿವೆ. ಒಟ್ಟು 25 ಜಿಲ್ಲೆಗಳಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣ ಶೇ 50ಕ್ಕಿಂತ ಹೆಚ್ಚಿದ್ದು, ಈ ಪೈಕಿ 22 ಜಿಲ್ಲೆಗಳು ದಕ್ಷಿಣ ಅಥವಾ ಈಶಾನ್ಯ ಭಾರತದಲ್ಲಿವೆ. ಉಳಿದ 3 ಜಿಲ್ಲೆಗಳು ಪೂರ್ವ ಭಾರತದಲ್ಲಿವೆ (ಜಾರ್ಖಂಡ್ನ ಚಂದೇಲ್, ಪಾಕುರ್ ಮತ್ತು ಒಡಿಶಾದ ದೇವಗಢ). ದೇಶದಲ್ಲಿ ಅನೌಪಚಾರಿಕ ವಲಯದ ಒಟ್ಟಾರೆ ಮಹಿಳಾ ಕಾರ್ಮಿಕರ ಸರಾಸರಿ ಪ್ರಮಾಣ ಶೇ 29ರಷ್ಟಿದ್ದು, 237 ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ 33ಕ್ಕಿಂತ ಹೆಚ್ಚಾಗಿದೆ.
ದಕ್ಷಿಣ ಹಾಗೂ ಈಶಾನ್ಯದ ಜಿಲ್ಲೆಗಳಲ್ಲಿ ಮಹಿಳಾ ಪಾಲ್ಗೊಳ್ಳುವಿಕೆ ಹೆಚ್ಚಾಗಿದ್ದರೂ, ಇಲ್ಲಿ ವೇತನದ ಪ್ರಮಾಣ ತೀರಾ ಕಡಿಮೆಯಿರುವುದು ಕಳವಳಕಾರಿ ಅಂಶವಾಗಿದೆ. ಮಹಿಳಾ ಕಾರ್ಮಿಕರ ಪ್ರಮಾಣ ಶೇ 50ಕ್ಕಿಂತ ಹೆಚ್ಚಿರುವ ಟಾಪ್ 25 ಜಿಲ್ಲೆಗಳ ಪೈಕಿ ಅತಿ ಹೆಚ್ಚು ವೇತನ ನೀಡುವ ಮೇಘಾಲಯದ ಸೌತ್ ವೆಸ್ಟ್ ಖಾಸಿ ಹಿಲ್ಸ್ನಲ್ಲಿ ಕಾರ್ಮಿಕರಿಗೆ ವಾರ್ಷಿಕ ತಲಾ ₹1.7 ಲಕ್ಷ ವೇತನ ದೊರೆಯುತ್ತಿದೆ. ಇದು ಅಖಿಲ ಭಾರತ ಸರಾಸರಿಗಿಂತ (₹1.3 ಲಕ್ಷ) ಕೇವಲ ಶೇ 35ರಷ್ಟು ಮಾತ್ರ ಹೆಚ್ಚಾಗಿದೆ. ಆದರೆ, ಕಾರ್ಮಿಕರಿಗೆ ಅತಿ ಹೆಚ್ಚು ಅಂದರೆ ವಾರ್ಷಿಕ ₹4.6 ಲಕ್ಷ ವೇತನ ನೀಡುವ ಡೆಹ್ರಾಡೂನ್ನಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣ ಕೇವಲ ಶೇ 19ರಷ್ಟಿದೆ.
ಮಹಿಳೆಯರ ಒಡೆತನದ ಸ್ವಂತ ಉದ್ದಿಮೆಗಳ (Proprietary establishments) ವಿಚಾರದಲ್ಲೂ ನಿರ್ಮಲ್ ಜಿಲ್ಲೆ ಮುಂಚೂಣಿಯಲ್ಲಿದ್ದು, ಅಲ್ಲಿನ ಶೇ 80ರಷ್ಟು ಉದ್ದಿಮೆಗಳು ಮಹಿಳೆಯರ ಮಾಲೀಕತ್ವದಲ್ಲಿವೆ. ಆದರೆ ಒಟ್ಟಾರೆ ಕಾರ್ಮಿಕರು ಹಾಗೂ ಉದ್ದಿಮೆಗಳ ಸಂಖ್ಯೆಯನ್ನು ಪರಿಗಣಿಸಿದರೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆ 21.3 ಲಕ್ಷ ಕಾರ್ಮಿಕರು ಹಾಗೂ 16.6 ಲಕ್ಷ ಉದ್ದಿಮೆಗಳೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಎಷ್ಟು ಕೇಂದ್ರೀಕೃತವಾಗಿವೆ ಎಂಬುದಕ್ಕೆ ಸಾಕ್ಷಿಯಾಗಿ, ಅತಿ ಹೆಚ್ಚು ಉದ್ದಿಮೆಗಳನ್ನು ಹೊಂದಿರುವ ಟಾಪ್ 10 ಜಿಲ್ಲೆಗಳು ಒಟ್ಟು ಮೌಲ್ಯವರ್ಧನೆಗೆ (GVA) ಶೇ 11ರಷ್ಟು ಕೊಡುಗೆ ನೀಡುತ್ತಿದ್ದರೆ, ಟಾಪ್ 50 ಜಿಲ್ಲೆಗಳು ಜಿವಿಎಯ ಮೂರನೇ ಒಂದು ಭಾಗದಷ್ಟು ಪಾಲು ಹೊಂದಿವೆ.
ದೇಶದ 757 ಜಿಲ್ಲೆಗಳ ಕೃಷಿಯೇತರ ಅಸಂಘಟಿತ ವಲಯದ (ಉತ್ಪಾದನೆ, ವ್ಯಾಪಾರ ಮತ್ತು ಇತರ ಸೇವೆಗಳು) ಮಾಹಿತಿಯನ್ನು ಈ ವರದಿ ಒಳಗೊಂಡಿದೆ. ಕೇಂದ್ರ ಸಾಂಖ್ಯಿಕ ಸಚಿವಾಲಯದ ರಾಷ್ಟ್ರೀಯ ಮಾದರಿ ಸಮೀಕ್ಷೆಯ (NSS) ಮಹಾನಿರ್ದೇಶಕಿ ಗೀತಾ ಸಿಂಗ್ ರಾಥೋಡ್ ಅವರ ಪ್ರಕಾರ, ಉದ್ಯೋಗ ಸೃಷ್ಟಿ, ಜೀವನೋಪಾಯ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಈ ವಲಯದ ಪಾತ್ರ ಮಹತ್ವದ್ದಾಗಿದೆ. ದೇಶಾದ್ಯಂತ ಆರ್ಥಿಕ ಚಟುವಟಿಕೆಗಳು ಮತ್ತು ಸ್ಥಳೀಯ ಪರಿಸ್ಥಿತಿಗಳಲ್ಲಿರುವ ವೈವಿಧ್ಯತೆಯ ಹಿನ್ನೆಲೆಯಲ್ಲಿ, ಸಾಕ್ಷ್ಯಾಧಾರಿತ ನೀತಿ ನಿರೂಪಣೆಗಾಗಿ ಈ ವಲಯದ ಸೂಕ್ಷ್ಮ ಹಾಗೂ ನಿಖರವಾದ ಅಂಕಿ-ಅಂಶಗಳ ಅಗತ್ಯತೆ ಹೆಚ್ಚಿದೆ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ASUSE 2025ರ ಮುಖ್ಯ ವರದಿಯ ಪ್ರಕಾರ, ದೇಶದಲ್ಲಿನ ಅಸಂಘಟಿತ ಉದ್ದಿಮೆಗಳ ಸಂಖ್ಯೆ 2025ರಲ್ಲಿ 58.5 ಲಕ್ಷದಷ್ಟು ಹೆಚ್ಚಳ ಕಂಡು ಒಟ್ಟು 7.92 ಕೋಟಿಗೆ ತಲುಪಿದೆ. ಆದರೆ, ಸೆಪ್ಟೆಂಬರ್ 2024ಕ್ಕೆ ಅಂತ್ಯಗೊಂಡ ಹಿಂದಿನ 12 ತಿಂಗಳ ಅವಧಿಯಲ್ಲಿ ದಾಖಲಾಗಿದ್ದ 83.5 ಲಕ್ಷ ಏರಿಕೆಗೆ ಹೋಲಿಸಿದರೆ ಈ ಬಾರಿಯ ಬೆಳವಣಿಗೆಯ ವೇಗ ಗಣನೀಯವಾಗಿ ಕಡಿಮೆಯಾಗಿದೆ. ಇದರ ನೇರ ಪರಿಣಾಮ ಉದ್ಯೋಗ ಸೃಷ್ಟಿಯ ಮೇಲೂ ಆಗಿದ್ದು, ಅಕ್ಟೋಬರ್ 2023–ಸೆಪ್ಟೆಂಬರ್ 2024ರ ನಡುವೆ 1.1 ಕೋಟಿ ಉದ್ಯೋಗಗಳು ಸೃಷ್ಟಿಯಾಗಿದ್ದರೆ, 2025ರಲ್ಲಿ ಈ ಪ್ರಮಾಣ ಕೇವಲ 74.5 ಲಕ್ಷಕ್ಕೆ ಸೀಮಿತವಾಗಿದೆ.





