ಒಬ್ಬ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಗಳಿಸುವ ಸಂಪತ್ತು, ಆಸ್ತಿ-ಪಾಸ್ತಿಗಿಂತ ಒಂದು ಸಸಿಯನ್ನು ನೆಟ್ಟು ಅದನ್ನು ಪೋಷಿಸುವುದರಿಂದ ದೊರೆಯುವ ಸಂತೋಷ ಮತ್ತು ತೃಪ್ತಿ ಹೆಚ್ಚು ಮಹತ್ವದ್ದಾಗಿದೆ. ಬೆಳೆದ ಮರಗಳನ್ನು ಕಡಿದಾಗ ಜನರು ವ್ಯಕ್ತಪಡಿಸುವ ಆಕ್ರೋಶವು ಪರಿಸರ ಹಾಗೂ ಹಸಿರೀಕರಣದ ಕುರಿತು ಸಮಾಜದಲ್ಲಿ ಮೂಡಿರುವ ಜಾಗೃತಿಗೆ ಸಾಕ್ಷಿಯಾಗಿದೆ ಎಂದು ವಿಜಯಪುರ ಸೈಕ್ಲಿಂಗ್ ಗ್ರೂಪ್ ಅಧ್ಯಕ್ಷ ಡಾ. ಮಹಾಂತೇಶ ಬಿರಾದಾರ ಹೇಳಿದರು.
ವಿಜಯಪುರ ನಗರದ ಐಶ್ವರ್ಯ ನಗರದ ಉದ್ಯಾನವನದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ 75 ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿ, “ಗಣಪತಿ ಪೆಂಡಾಲ್ ಹಾಕುವ ಉದ್ದೇಶದಿಂದ ಉದ್ಯಾನವನದಲ್ಲಿದ್ದ ಮರಗಳನ್ನು ಕಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ತಾವು ಮಾಡಿದ್ದು ತಪ್ಪು ಎಂಬುದನ್ನು ಅರಿತು, ಕಡಿದ ನಾಲ್ಕು ಮರಗಳಿಗೆ ಪರ್ಯಾಯವಾಗಿ 75 ಸಸಿಗಳನ್ನು ನೆಟ್ಟು ಅವುಗಳ ರಕ್ಷಣೆಗೆ ಮುಂದಾಗಿರುವುದು ಸಂತಸದ ಸಂಗತಿ” ಎಂದು ಹೇಳಿದರು.
ಐಶ್ವರ್ಯ ನಗರದ ನಿವಾಸಿ ಜಯಪ್ರಕಾಶ ಸೊಡ್ಡಗಿ ಮಾತನಾಡಿ, “ಮನೆ-ಮಠಗಳಲ್ಲಿ ಹೋಮ-ಹವನ, ಮಂತ್ರಪಠಣ ಮಾಡುವುದರಿಂದ ದೊರೆಯುವ ಪುಣ್ಯದಷ್ಟೇ ಒಂದು ಸಸಿಯನ್ನು ನೆಟ್ಟು ಪೋಷಿಸುವ ಕಾರ್ಯಕ್ಕೂ ಮಹತ್ವವಿದೆ ಎಂಬ ಸಂದೇಶ ಅಗ್ನಿಪುರಾಣದಲ್ಲಿ ಕಾಣಬಹುದು” ಎಂದರು.
ಜನ್ಮದಿನ ಹಾಗೂ ಸಭೆ-ಸಮಾರಂಭಗಳಲ್ಲಿ ದುಂದು ವೆಚ್ಚ ಮಾಡುವ ಬದಲು ಮನೆ-ಮನೆಗಳಲ್ಲಿ, ರಸ್ತೆ ಬದಿಯಲ್ಲಿ ಹಾಗೂ ಉದ್ಯಾನಗಳಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು. ಇದರಿಂದ ಹಸಿರು ವಾತಾವರಣ ನಿರ್ಮಾಣವಾಗುವುದರ ಜೊತೆಗೆ ತಾಪಮಾನವೂ ಕಡಿಮೆಯಾಗಲಿದೆ. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ತಿಳಿದು ಅಥವಾ ತಿಳಿಯದೆ ಮಾಡಿದ ತಪ್ಪುಗಳಿಗೆ ಪ್ರಾಯಶ್ಚಿತ್ತವಾಗಿ ಒಂದು ಸಸಿಯನ್ನು ನೆಟ್ಟು ಪೋಷಿಸುವುದು ಉತ್ತಮ ಕಾರ್ಯವಾಗಿದೆ ಎಂದು ಹೇಳಿದರು.
ಐಶ್ವರ್ಯ ನಗರದ ನಿವಾಸಿ ಬಸವರಾಜ ಕೋರಿ ಮಾತನಾಡಿ, “ನೆಟ್ಟಿರುವ ಸಸಿಗಳಿಗೆ ಡ್ರಿಪ್ ನೀರಾವರಿ ವ್ಯವಸ್ಥೆ ಕಲ್ಪಿಸಿ ಅವುಗಳನ್ನು ನಿರಂತರವಾಗಿ ಪೋಷಿಸುವ ಜವಾಬ್ದಾರಿ ವಹಿಸಲಾಗುವುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾಪೌರ ಮಡಿವಾಳ ಕರಡಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಭೀಮಶಿ ಬಿರಾದಾರ, ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಅಜೂರ, ವಿಸಿಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ, ರಾಜ್ಯ ಗುತ್ತಿಗೆದಾರರ ಸಂಘದ ಸಂಘಟನಾ ಕಾರ್ಯದರ್ಶಿ ಹಣಮಂತ ಚಿಂಚಲಿ, ಐಶ್ವರ್ಯ ನಗರದ ನಿವಾಸಿಗಳಾದ ಅಶೋಕ ದೇಶಟ್ಟಿ, ಈರಣ್ಣ ಹುಳಸೂರ, ವಿವೇಕ ಹುಂಡೇಕಾರ, ಜಯಪ್ರಕಾಶ ಅಂಬಲಿ, ಎಸ್.ಎಸ್. ತೊದಲಬಾಗಿ, ಗಂಟನೂರ ಮಠ, ಸಿದ್ದು ತೇಜೂರ, ಗಿರೀಶ ಅಮತೆಪ್ಪ, ಎಂ.ಎಸ್. ಬಿರಾದಾರ ಸೇರಿದಂತೆ ವಿಜಯಪುರ ಸೈಕ್ಲಿಂಗ್ ಗ್ರೂಪ್‌ನ ಸದಸ್ಯರು ಇದ್ದರು.





