ರಾಜಸ್ಥಾನದ ಜಾಲೋರ್ ಜಿಲ್ಲೆಯ ಸಾಯ್ಲಾ ಉಪವಿಭಾಗದ ದಾದಲ್ ಗ್ರಾಮದಲ್ಲಿ ಸರ್ಕಾರಿ ಜಮೀನನ್ನು ಕೈಗಾರಿಕಾ ಪಾರ್ಕ್ ನಿರ್ಮಾಣಕ್ಕೆ ಹಂಚಿಕೆ ಮಾಡಿರುವುದನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಗ್ರಾಮಸ್ಥರು ಹಾಗೂ ಸ್ಥಳೀಯ ಆಡಳಿತದ ನಡುವೆ ನಡೆಯುತ್ತಿದ್ದ ಈ ಜಾಗದ ವಿವಾದವು ಇದೀಗ ಹಿಂಸಾಚಾರಕ್ಕೆ ತಿರುಗುವ ಆತಂಕ ಸೃಷ್ಟಿಯಾಗಿದೆ. ಪ್ರತಿಭಟನಾನಿರತ ಗ್ರಾಮಸ್ಥರ ಗುಂಪಿನ ಮೇಲೆ ಕಿಡಿಗೇಡಿಯೊಬ್ಬ ಟ್ರ್ಯಾಕ್ಟರ್ ಹರಿಸಲು ಯತ್ನಿಸಿರುವ ಭಯಾನಕ ಘಟನೆ ವರದಿಯಾಗಿದ್ದು, ಸ್ಥಳದಲ್ಲಿ ಭಾರೀ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ತಮ್ಮ ಗ್ರಾಮದ ಸರ್ಕಾರಿ ಜಮೀನನ್ನು ಕೈಗಾರಿಕೆಗಳಿಗೆ ನೀಡಿದರೆ ಆಗುವ ದುಷ್ಪರಿಣಾಮಗಳ ಬಗ್ಗೆ ಆತಂಕಗೊಂಡಿರುವ ದಾದಲ್ ಗ್ರಾಮಸ್ಥರು, ಸ್ಥಳೀಯ ಆಡಳಿತದ ನಿರ್ಧಾರದ ವಿರುದ್ಧ ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಂಚಿಕೆ ಪ್ರಕ್ರಿಯೆಯನ್ನು ಕೈಬಿಡುವಂತೆ ಆಗ್ರಹಿಸಿ ಸೇರಿದ ಜನರ ಗುಂಪನ್ನು ಚದುರಿಸಲು ಅಥವಾ ಬೆದರಿಸಲು ಈ ರೀತಿ ಟ್ರ್ಯಾಕ್ಟರ್ ನುಗ್ಗಿಸುವ ಯತ್ನ ನಡೆದಿದೆ ಎಂದು ಶಂಕಿಸಲಾಗಿದೆ. ಈ ಬೆಚ್ಚಿಬೀಳಿಸುವ ದೃಶ್ಯಾವಳಿಗಳುಳ್ಳ ವಿಡಿಯೊವೊಂದು ಟ್ವಿಟರ್ (X) ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಆಡಳಿತ ಹಾಗೂ ಸಾರ್ವಜನಿಕರ ನಡುವಿನ ಸಂಘರ್ಷದ ತೀವ್ರತೆಯನ್ನು ಎತ್ತಿತೋರಿಸುತ್ತಿದೆ.
ಇದನ್ಮು ಓದಿದ್ದೀರಾ? BCCI ಸರ್ಕಾರಿ ಸಂಸ್ಥೆಯಲ್ಲ, RTI ವ್ಯಾಪ್ತಿಗೆ ಬರುವುದಿಲ್ಲ: ಕೇಂದ್ರ ಮಾಹಿತಿ ಆಯೋಗ ತೀರ್ಪು
ಈ ಘಟನೆಯ ಬೆನ್ನಲ್ಲೇ ದಾದಲ್ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಸರ್ಕಾರಿ ಜಮೀನು ಹಂಚಿಕೆ ವಿವಾದ ಹಾಗೂ ಟ್ರ್ಯಾಕ್ಟರ್ ಹರಿಸಲು ಯತ್ನಿಸಿದ ಘಟನೆಯ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದು, ಗ್ರಾಮದಲ್ಲಿ ಸದ್ಯ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದೆ.




