“ಅಯೋಧ್ಯೆ ರಾಮಮಂದಿರದಲ್ಲಿ ದೇಣಿಗೆ ದುರುಪಯೋಗ ನಡೆದಿರುವುದು ಬಹಿರಂಗಗೊಂಡಿದೆ. ಇದು ಆರ್‌ಎಸ್‌ಎಸ್-ಬಿಜೆಪಿಯ ‘ನಿಜವಾದ ಮುಖ’ವನ್ನು ಬಹಿರಂಗಪಡಿಸಿದೆ” ಎಂದು ಸಿಪಿಐ ಕೇರಳ ಕಾರ್ಯದರ್ಶಿ ಬಿನೋಯ್ ವಿಶ್ವಂ ಭಾನುವಾರ ಆರೋಪಿಸಿದ್ದಾರೆ.
ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಭಕ್ತರಿಂದ ಸಂಗ್ರಹಿಸಲಾದ ದೇಣಿಗೆ ಹಣ ಮತ್ತು ನಗದು ದುರುಪಯೋಗವಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಕುರಿತು ತನಿಖೆ ತೀವ್ರಗೊಂಡಿದೆ. ಉತ್ತರ ಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿಯ ಆಧಾರದ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ಲೂಟಿ; ಹಿಂದೂಗಳಿಗೆ ‘ದ್ರೋಹ’ ಬಗೆದ ಬಿಜೆಪಿ: ಉದ್ಧವ್ ಠಾಕ್ರೆ
ರಾಮಮಂದಿರ ಟ್ರಸ್ಟ್‌ನ ಎಲ್ಲ ಸದಸ್ಯರು, ಪದಾಧಿಕಾರಿಗಳು, ರಾಮಮಂದಿರ ಸಿಬ್ಬಂದಿ ಬಿಜೆಪಿ, ಆರ್‌ಎಸ್‌ಎಸ್ ಸಂಘಪರಿವಾರಕ್ಕೆ ಸೇರಿದವರು. ರಾಮನ ಹೆಸರು ಹೇಳಿ ರಾಜಕೀಯ ಮಾಡಿದ ಬಿಜೆಪಿ ಈಗ ರಾಮನ ಹೆಸರಲ್ಲಿ ಭಕ್ತರಿಂದ ದೇಣಿಗೆ ಲೂಟಿ ಮಾಡುತ್ತಿರುವುದು ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್, ಎಸ್‌ಪಿ, ಸಿಪಿಐಎಂ, ಸಿಪಿಐ ಸೇರಿದಂತೆ ಹಲವು ವಿರೋಧ ಪಕ್ಷಗಳು ವಾಗ್ದಾಳಿ ನಡೆಸುತ್ತಿದೆ.
ರಾಮಮಂದಿರ ಲೂಟಿ ವಿಚಾರದಲ್ಲಿ ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿಪಿಐ ಕೇರಳ ಕಾರ್ಯದರ್ಶಿ ಬಿನೋಯ್ ವಿಶ್ವಂ, “ರಾಜಕೀಯ ಲಾಭಕ್ಕಾಗಿ ಕೇಸರಿ ಪಕ್ಷ ಧರ್ಮ ಮತ್ತು ಶ್ರೀರಾಮನನ್ನು ಬಳಸುತ್ತಿದೆ” ಎಂದು ದೂರಿದ್ದಾರೆ.
“ರಾಜಕೀಯ ಲಾಭ ಪಡೆಯಲು ಸಂಘ ಪರಿವಾರ ಬಾಬರಿ ಮಸೀದಿಯನ್ನು ಕೆಡವಿತ್ತು. ಈಗ ರಾಮಮಂದಿರ ಸಂಘಪರಿವಾರಕ್ಕೆ ಸಂಪತ್ತನ್ನು ಸಂಗ್ರಹಿಸುವ ಸಾಧನವಾಗಿದೆ. ರಾಮಮಂದಿರದಲ್ಲಿ ಸಂಘಪರಿವಾರವು 1,400 ಕೋಟಿ ರೂ.ಗಳನ್ನು ಕಬಳಿಸಿದೆ. ಭಕ್ತರು ನೀಡಿದ ಚಿನ್ನ ಮತ್ತು ಬೆಳ್ಳಿ ಕಾಣಿಕೆಗಳು ಸಹ ಕಾಣೆಯಾಗಿವೆ” ಎಂದಿದ್ದಾರೆ.
ದೇವಾಲಯದಲ್ಲಿ ಪವಿತ್ರೀಕರಣ ಸಮಾರಂಭದ ನೇತೃತ್ವ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಈ ಸಂದರ್ಭದಲ್ಲೇ ಬಿನೋಯ್ ಟೀಕಿಸಿದ್ದಾರೆ. “ಈ ಕಾರ್ಯಕ್ರಮದ ಸಮಯದಲ್ಲಿ ಆಧ್ಯಾತ್ಮಿಕ ನಾಯಕರನ್ನು ಕಡೆಗಣಿಸಲಾಗಿದೆ” ಎಂದು ದೂರಿದ್ದಾರೆ.
“ದೇಶಾದ್ಯಂತ ಭಕ್ತರು ಈ ವಿವಾದದ ಬಗ್ಗೆ ಬಿಜೆಪಿಯನ್ನು ಪ್ರಶ್ನಿಸುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರು ಆರ್‌ಎಸ್‌ಎಸ್ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಹೇಳಿದ್ದಾರೆ.




