ರಿಪೇರಿ ಮತ್ತು ಸ್ವಚ್ಛತೆಗಾಗಿ ನಿಲ್ಲಿಸಲಾಗಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್ ಒಂದರ ಅಡಿಯಲ್ಲಿ ಸುಮಾರು 10 ಅಡಿ ಉದ್ದದ ಬೃಹತ್ ಹೆಬ್ಬಾವು (Python) ಕಾಣಿಸಿಕೊಂಡು ಕೆಲ ಕಾಲ ಆತಂಕ ಮೂಡಿಸಿದ ಘಟನೆ ಉತ್ತರಾಖಂಡದ ಹರಿದ್ವಾರ ರೈಲು ನಿಲ್ದಾಣದ ವಾಷಿಂಗ್ ಲೈನ್‌ನಲ್ಲಿ ನಡೆದಿದೆ.
ಡೆಹ್ರಾಡೂನ್‌ಗೆ ಸಂಚರಿಸಲು ನಿಗದಿಯಾಗಿದ್ದ ವಂದೇ ಭಾರತ್ ರೈಲನ್ನು ನಿರ್ವಹಣೆಗಾಗಿ ಹರಿದ್ವಾರದ ವಾಷಿಂಗ್ ಲೈನ್‌ನಲ್ಲಿ ನಿಲ್ಲಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ರೈಲ್ವೇ ವರ್ಕ್‌ಶಾಪ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾಗ, ಕೋಚ್ ಒಂದರ ಕೆಳಭಾಗದಲ್ಲಿ ನೇತಾಡುತ್ತಾ ರೈಲಿನ ಒಳಗಡೆ ನುಗ್ಗಲು ಯತ್ನಿಸುತ್ತಿದ್ದ ಬೃಹತ್ ಹೆಬ್ಬಾವನ್ನು ಗಮನಿಸಿದ್ದಾರೆ. ಸಿಬ್ಬಂದಿ ತಕ್ಷಣವೇ ಧೈರ್ಯ ಮತ್ತು ಸಮಯಪ್ರಜ್ಞೆ ಮೆರೆದು, ಸ್ವತಃ ಹೆಬ್ಬಾವನ್ನು ಹಿಡಿಯಲು ಸಾಹಸ ಮಾಡದೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ಹೊಯಿಸಳ’ ಅವರ ಕತೆ | ಭಯನಿವಾರಣೆ
ಹೆಬ್ಬಾವು ಇರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹರಿದ್ವಾರ ವಲಯದ ಇನ್ಸ್‌ಪೆಕ್ಟರ್ ಆರತಿ ಪಂತ್, ಫಾರೆಸ್ಟ್ ಗಾರ್ಡ್ ರಾಹುಲ್ ಹಾಗೂ ಸಿಬ್ಬಂದಿ ಲಖನ್ ಅವರನ್ನೊಳಗೊಂಡ ಅರಣ್ಯ ಇಲಾಖೆಯ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿದೆ. ಸುಮಾರು ಎರಡು ಗಂಟೆಗಳ ಕಾಲ ಶ್ರಮಿಸಿ ಅದಾದ ಬಳಿಕ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದು, ಬಳಿಕ ಅದನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಸಮಯಕ್ಕೆ ಸರಿಯಾಗಿ ಈ ಹಾವು ಸಿಬ್ಬಂದಿಯ ಕಣ್ಣಿಗೆ ಬಿದ್ದಿದ್ದರಿಂದ ರೈಲಿನ ಬೋಗಿಯೊಳಗೆ ತೂರಿಕೊಳ್ಳುವುದು ತಪ್ಪಿದೆ. ಒಂದು ವೇಳೆ ರೈಲು ಪ್ರಯಾಣಿಕರೊಂದಿಗೆ ಸಂಚರಿಸುವಾಗ ಹಾವು ಒಳಗಡೆ ನುಗ್ಗಿದ್ದರೆ ದೊಡ್ಡ ಮಟ್ಟದ ಆತಂಕ ಸೃಷ್ಟಿಯಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.




