ಆವ ಕಾಯಕವಾದಡೂ ಸ್ವಕಾಯಕವ ಮಾಡಿ ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ?
12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶಿವಶರಣರಲ್ಲಿ ಲದ್ದೆಯ ಸೋಮಯ್ಯ ಒಬ್ಬರು. ಸೋಮಯ್ಯ ಮೂಲತಃ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಇಂದಿನ ಲಾಧಾ ಗ್ರಾಮದವನಾಗಿದ್ದನೆಂದು ಊಹಿಸಲಾಗಿದೆ. ಹುಲ್ಲು ಕೊಯ್ದು ತಂದು ಮಾರಾಟ ಮಾಡುವ ಕಾಯಕದ ಮೂಲಕ ಜೀವನ ಸಾಗಿಸುತ್ತಿದ್ದ ಸೋಮಯ್ಯನು, ತನ್ನ ಕಾಯಕವನ್ನೇ ಧರ್ಮವೆಂದು ಭಾವಿಸಿ ಬದುಕಿದ ನಿಷ್ಠವಂತ ಶರಣ.
ಸೋಮಯ್ಯ ಅನೇಕ ವಚನಗಳ ರಚಿಸಿರಬಹುದು. ಆದರೆ ನಮಗೆ ಲಭ್ಯ ಇರುವುದು ಆತನ ಒಂದೇ ವಚನ. ಈ ಒಂದೇ ವಚನದಲ್ಲಿ ಮಾನವನ ಇಡೀ ಬದುಕಿನ ಮೌಲ್ಯಗಳು, ಕಾಯಕದ ಮಹತ್ವ ಮತ್ತು ಜೀವನದ ವಾಸ್ತವ ಸತ್ಯ ಅಡಕವಾಗಿವೆ. ಈ ಒಂದು ವಚನದಲ್ಲಿ ಸೋಮಯ್ಯ ಗ್ರಹಿಸಿದ ಪರಿಯನ್ನು ಗಮನಿಸಿದರೆ ಆತ ಕಾಯಕನಿಷ್ಠ ಶರಣ ಅಷ್ಟೇ ಅಲ್ಲದೆ ಅನುಭಾವಿ ವಚನಕಾರನಾಗಿದ್ದ ಎಂಬುದು ಸ್ಪಷ್ಟವಾಗುತ್ತದೆ.
ಲದ್ದೆಯ ಸೋಮಯ್ಯನ ವಚನದ ಕೇಂದ್ರಬಿಂದು ಕಾಯಕ. ಮಾನವನ ಬದುಕಿಗೆ ಕಾಯಕವೇ ಮೂಲಾಧಾರ. ಯಾವುದೇ ಕೆಲಸವಾಗಿರಲಿ, ಅದನ್ನು ಶ್ರದ್ಧೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನಿರ್ವಹಿಸುವುದು ಪ್ರತಿಯೊಬ್ಬರ ಕರ್ತವ್ಯ. ನಿಷ್ಠೆಯ ಕಾಯಕವು ಬದುಕಿಗೆ ಪಾಠ ಕಲಿಸುವುದಲ್ಲದೆ, ಅದರೊಳಗೆ ಸಮಾಜದ ಹಿತವೂ ಅಡಗಿದೆ. ಕಾಯಕ ಹೊಸ ಜೀವಾನುಭವವನ್ನು ನೀಡುತ್ತದೆ. ಸ್ವಹಿತ ಜತೆಗೆ ಸಮಾಜದಹಿತ ಕಾಪಾಡುವ ಸತ್ಯಶುದ್ಧ ಕಾಯಕ ಮಾಡುವವರ ಬದುಕು ಸಾರ್ಥಕವಾಗುತ್ತದೆ ಎಂಬುದನ್ನು ಸೋಮಯ್ಯ ಮನದಟ್ಟು ಮಾಡಿದ್ದಾರೆ.
ಕಾಯಕದಲ್ಲಿ ಯಾವುದೇ ರೀತಿಯ ಮೇಲು-ಕೀಳು ಭಾವನೆ ಇರಬಾರದು. ಕಾಯಕ ಮಾಡುವ ಕೈಗಳಿಗಿಂತ ಕಾಯಕದ ಹಿಂದಿರುವ ಶುದ್ಧ ಮನಸ್ಸು ಮುಖ್ಯ. ಕಾಯಕದಲ್ಲಿಯೇ ಗುರು, ಲಿಂಗ ಮತ್ತು ಜಂಗಮನ ದರ್ಶನವಾಗುತ್ತದೆ ಎಂಬುದು ಶರಣರ ನಂಬಿಕೆ. ಹೀಗಾಗಿ ಕಾಯಕಕ್ಕಿಂತ ಪ್ರಧಾನವಾದುದು ಮತ್ತೊಂದಿಲ್ಲ. ‘ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದಡೂ ಮರೆಯಬೇಕು’ ಎಂದು ಆಯ್ದಕ್ಕಿ ಮಾರಯ್ಯ ಹೇಳಿರುವ ಮಾತು ಸೋಮಯ್ಯನ ವಚನಕ್ಕೆ ಪೂರಕವಾಗಿದೆ.
ಬಸವಾದಿ ಶರಣರು ಶ್ರಮವಿಲ್ಲದ ಸಂಪಾದನೆ ನೀತಿ ಒಪ್ಪಲಿಲ್ಲ. ಪ್ರತಿಯೊಬ್ಬ ಶರಣರು ತಮ್ಮ ಕುಲಕಸುಬು ವೃತ್ತಿ ಮುನ್ನಡೆಸಿಕೊಂಡಿದ್ದರು. ಅವರು ಕರ್ಮ ಸಿದ್ಧಾಂತ ಬದಲಿಗೆ ಕಾಯಕ ಸಿದ್ಧಾಂತ ಪರಿಕಲ್ಪನೆ ಜಾರಿಗೊಳಿಸಿದರು. ಹೀಗಾಗಿ ಬಸವಣ್ಣನವರಿಗೆ ಕಾಯಕ ಸಿದ್ಧಾಂತ ರೂಪಿಸಿದ ಸಮೂಹ ಸಂಘಟಕ, ಕಾರ್ಮಿಕರನ್ನು ಒಗ್ಗೂಡಿಸಿದ ನಾಯಕ ಎಂದು ಕರೆದರೂ ತಪ್ಪಾಗಲಾರದು. ಶರಣ ಸಂಕುಲ ತಮ್ಮ ಕಾಯಕ ಸ್ವಾತಂತ್ರ್ಯ ಜೊತೆಗೆ ವಚನಸಾರ ತತ್ವದ ಮೂಲಕ ಸಮಸಮಾಜ ನಿರ್ಮಾಣದ ಕನಸು ಕಂಡಿದ್ದರು.
ಕಸ ಗುಡಿಸುವ ಕೆಲಸದಿಂದ ಉನ್ನತ ಹುದ್ದೆಯವರೆಗೆ ಯಾವುದೇ ಜವಾಬ್ದಾರಿ ಅಥವಾ ಕೆಲಸವಾಗಿರಲಿ, ಅದನ್ನು ಸತ್ಯ, ಶುದ್ಧ, ನಿಷ್ಠೆ ಪ್ರಾಮಾಣಿಕವಾಗಿ ನಿರ್ವಹಿಸುವುದೇ ನಿಜವಾದ ಆಧ್ಯಾತ್ಮ. ತಾನು ಮಾಡುವ ಕೆಲಸದ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆಪಡಬೇಕು. ತನ್ನ ಕಾಯಕ ತಾನೇ ಪ್ರೀತಿಸುತ್ತಲೇ ಮತ್ತೊಬ್ಬರು ಅದನ್ನು ಪ್ರೀತಿಸುವ ಹಾಗೇ ರೂಪಿಸುವ ಕಲೆಗಾರಿಕೆ ಇಂಬಿಟ್ಟುಕೊಳ್ಳಬೇಕು. ವೃತ್ತಿ ಕೇವಲ ಜೀವನೋಪಾಯಕಷ್ಟೇ ಸೀಮಿತವಲ್ಲ. ಅದು ಸ್ವಾಲಂಬನೆ, ಸ್ವಾಭಿಮಾನ ಬದುಕಿನ ಪ್ರತೀಕ ಎಂಬ ಸಂದೇಶ ಸೋಮಯ್ಯ ಮನದಟ್ಟು ಮಾಡುತ್ತಾರೆ.
ನಾವು ಆಯ್ಕೆ ಮಾಡಿಕೊಂಡಿರುವ ವೃತ್ತಿ ಯಾವುದೇ ಆಗಿರಲಿ, ಅದನ್ನು ಸ್ವಕಾಯಕವೆಂದು ಭಾವಿಸಿ ಸತ್ಯಶುದ್ಧತೆಯಿಂದ ನಿರ್ವಹಿಸಬೇಕು. ಆ ಕಾಯಕದಿಂದ ದೊರೆಯುವ ಫಲವನ್ನು ಸ್ವಿಚ್ಛೆಯಿಂದ ಗುರು, ಲಿಂಗ, ಜಂಗಮರಿಗೆ ದಾಸೋಹ ಭಾವದಿಂದ ಅರ್ಪಿಸಿ, ಉಳಿದುದನ್ನು ಸ್ವೀಕರಿಸಿ ಬದುಕಬೇಕು. ಜೀವನದಲ್ಲಿ ರೋಗ-ರುಜಿನ ಬಂದರೆ ನರಳಬೇಕು, ಸಹಿಸಬೇಕು, ಕೊನೆಗೆ ಜೀವ ಹೋದಾಗ ಸಾಯಬೇಕು. ಇವೆಲ್ಲವೂ ಬದುಕಿನ ಸಹಜ ಸತ್ಯ, ಜೈವಿಕ ಪ್ರಕ್ರಿಯೆ ಅಲ್ಲವೇ!. ಇಂತಹ ವಾಸ್ತವಗಳ ಮುಂದೆ ಹೆದರಿ ಮತ್ತೊಬ್ಬರ ಹಂಗಿನಲ್ಲಿ ಬದುಕಬೇಕಾದ ಅಗತ್ಯವೇನು ಎಂದು ಶರಣ ಸೋಮಯ್ಯ ಪ್ರಶ್ನಿಸುತ್ತಾನೆ.
ಭೌತಿಕ ಬದುಕಿನ ಕಟು ವಾಸ್ತವಗಳನ್ನು ಲದ್ದೆಯ ಸೋಮಯ್ಯ ಯಾವುದೇ ಮುಚ್ಚುಮರೆಯಿಲ್ಲದೆ ತೆರೆದಿಡುತ್ತಾನೆ. ಜೀವನದಲ್ಲಿ ರೋಗ, ನೋವು, ಸಂಕಷ್ಟ ಹಾಗೂ ಸಾವು ಸಾಮಾನ್ಯ ಅಷ್ಟೇ ಅಲ್ಲದೆ ಖಚಿತವೇ ಸರಿ. ಅವುಗಳ ಭಯದಲ್ಲಿ ಬದುಕುವುದಕ್ಕಿಂತ, ಬಂದ ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು ಮುಖ್ಯ. ತನ್ನ ಕರ್ಮಗಳ ಫಲಕ್ಕಾಗಿ ಪ್ರತಿಯೊಂದಕ್ಕೂ ದೇವರ ಮೊರೆ ಹೋಗುವ ಅಗತ್ಯವೇಕೆ ಎಂಬ ಚಿಂತನೆಯನ್ನು ಶರಣ ಸೋಮ ಪ್ರತಿಪಾದಿಸುತ್ತಾನೆ.
ದೇಹ ದಂಡಿಸದೆ ಸಂಪಾದನೆ ಮಾಡುವುದು ಶರಣತತ್ವ ಅಲ್ಲ ಎಂದು ವಚನಕಾರರು ಗಟ್ಟಿಯಾಗಿ ಹೇಳಿದರು. ಆದಾಯ ಎಂಬುದು ಬೆವರಿನ ಶ್ರಮದಿಂದಲೇ ಬರಬೇಕೆಂಬ ಕಾಯಕತತ್ವ ರೂಪಿಸಿದವರು ಶರಣರು. ಹೀಗಾಗಿ ʼಕಾಯಕವೆಂದು ಕಾಯವ ಬಳಲಿಸದೆ, ತನು ಕರಗದೆ, ಮನ ನೋಯದೆ, ಕಾಡಿ ಬೇಡಿ ಮಾಡುವುದು ದಾಸೋಹವೆ?ʼ ಎಂದು ಶರಣ ಶಿವಲೆಂಕ ಮಂಚಣ್ಣ ಪ್ರಶ್ನಿಸುತ್ತಾನೆ. ಕೆಲವರು ಶ್ರಮವಿಲ್ಲದ ಆದಾಯ ಗಳಿಕೆಯತ್ತ ಚಿತ್ತ ಹರಿಸಿದರೆ, ಇನ್ನು ಕೆಲವರು ಮೋಸ, ವಂಚನೆ, ದರೋಡೆಯಂತಹ ಅನ್ಯಾಯ ಮಾರ್ಗದಿಂದ ಹಣ ಸಂಪಾದಿಸುವ ಕಲೆ ಕರಗತ ಮಾಡಿಕೊಳ್ಳುತ್ತಾರೆ.
ಅದಕ್ಕೆ ಬಸವಣ್ಣನವರು ʼಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ, ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾʼ ಎಂದು ಮಾರ್ಮಿಕವಾಗಿ ಹೇಳುತ್ತಾರೆ. ಆಸ್ತಿ, ಅಂತಸ್ತು, ವಜ್ರ, ಭಂಡಾರ, ಪದವಿಗಳೆಲ್ಲವೂ ನಮ್ಮ ಕಾಯಕ, ದಾಸೋಹ, ಜಂಗಮ ಸೇವೆಯಿಂದಲೇ ಬರಬೇಕು. ನಿಷ್ಠೆಯಿಲ್ಲದ ಕಾಯಕದಿಂದ ಬಂದದ್ದು ವ್ಯರ್ಥವಾಗುತ್ತದೆ ಎಂಬುದು ಒತ್ತಿ ಹೇಳುತ್ತಾರೆ.
ಲಿಂಗಾಯತ ಧರ್ಮದ ಪ್ರಮುಖ ತತ್ವಗಳಲ್ಲಿ ಕಾಯಕ ಮತ್ತು ದಾಸೋಹಕ್ಕೆ ವಿಶಿಷ್ಟ ಸ್ಥಾನವಿದೆ. ಶರಣರು ಕಾಯಕದ ಮೂಲಕ ಬದುಕಿಗೆ ಅರ್ಥ ಕಂಡುಕೊಂಡವರು. ಸತ್ಯಶುದ್ಧ ಕಾಯಕದಿಂದ ದೊರೆತ ಫಲವನ್ನು ನಿಸ್ವಾರ್ಥ ಭಾವದಿಂದ ಸಮಾಜಕ್ಕೆ ಅರ್ಪಿಸಿ, ಉಳಿದುದನ್ನು ಸ್ವೀಕರಿಸಿ ಜೀವನ ಸಾಗಿಸುವುದು ಶರಣರ ಆದರ್ಶ. ಈ ದೃಷ್ಟಿಯಿಂದ ನೋಡಿದಾಗ ಲದ್ದೆಯ ಸೋಮಯ್ಯನ ವಚನವು ಕಾಯಕದ ಮಹತ್ವವನ್ನು ಮಾತ್ರವಲ್ಲದೆ, ಸ್ವಾಭಿಮಾನ, ಸ್ವಾವಲಂಬನೆ, ನಿಷ್ಠೆ ಮತ್ತು ದಾಸೋಹದ ಮೌಲ್ಯಗಳನ್ನೂ ಸಾರುತ್ತದೆ.
ಸಾಮಾಜಿಕ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಅನೇಕ ಸವಾಲುಗಳು ಎದುರಾಗುತ್ತವೆ. ಆ ಸವಾಲುಗಳನ್ನು ಧೈರ್ಯ, ತಾಳ್ಮೆ ಮತ್ತು ಸಮಯೋಚಿತ ಬುದ್ಧಿಯಿಂದ ಎದುರಿಸಬೇಕು. ಮತ್ತೊಬ್ಬರ ಹಂಗಿನಲ್ಲಿ ಬದುಕುವುದಕ್ಕಿಂತ ಸ್ವಂತ ಕಾಯಕದ ಮೇಲೆ ನಂಬಿಕೆಯಿಟ್ಟು ಸ್ವಾವಲಂಬಿ ಬದುಕು ನಡೆಸಬೇಕು ಎಂಬುದು ಸೋಮಯ್ಯನವರ ವಚನ ಸಂದೇಶ. ನಡೆ-ನುಡಿಯಲ್ಲಿ ಸತ್ಯವನ್ನು ಅಳವಡಿಸಿಕೊಂಡು, ಕಾಯಕವನ್ನೇ ಬದುಕಿನ ಧರ್ಮವನ್ನಾಗಿ ಸ್ವೀಕರಿಸಿದಾಗ ಕಾಯಕದಲ್ಲಿ ಬದುಕಿನ ಸಾರ್ಥಕತೆ ಕಾಣಬಹುದು.
ಇದನ್ನೂ ಓದಿ : ವಚನ ಕಲ್ಯಾಣ | ಎನಗೆ ಗುರುವಾಗಿ ಬಂದನಯ್ಯಾ ಬಸವಣ್ಣನು!
ಕಾಯಕ ನಮ್ಮ ಬದುಕಿನ ಉಸಿರಾದಾಗ ಜ್ಞಾನವೂ ಸಹಜವಾಗಿ ವೃದ್ಧಿಸುತ್ತದೆ. ಕಾಯಕದಲ್ಲಿ ನಿರತನಾದ ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳುತ್ತಾನೆ; ಸಮಾಜದೊಂದಿಗೆ ತನ್ನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾನೆ. ಲದ್ದೆಯ ಸೋಮಯ್ಯನ ಒಂದು ವಚನವು ಬದುಕಿನ ಸತ್ಯ, ಕಾಯಕದ ಶ್ರೇಷ್ಠತೆ, ಸ್ವಾವಲಂಬನೆಯ ಅಗತ್ಯ ಮತ್ತು ದಾಸೋಹದ ಮಹತ್ವವನ್ನು ಒಳಗೊಂಡಿರುವ ಅಪೂರ್ವ ಜೀವನದರ್ಶನವಾಗಿ ಕಾಣುತ್ತದೆ. ʼಆವ ಕಾಯಕವಾದಡೂ ಒಂದೇ ಕಾಯಕವಯ್ಯಾ. ಆವ ವ್ರತವಾದಡೂ ಒಂದೇ ವ್ರತವಯ್ಯಾʼ ಎಂಬ ಅಲ್ಲಮಪ್ರಭುಗಳ ವಚನ ಸಾಲು ಕಾಯಕನಿಷ್ಠೆಗೆ ಸಾಕ್ಷಿಯಾಗಿದೆ.
ಲದ್ದೆಯ ಸೋಮ ಇಂದಿನ ತಾಲೂಕು ಕೇಂದ್ರವಾದ ಹುಲಸೂರು ಪಟ್ಟಣದಲ್ಲಿ ಹುಲ್ಲು ಮಾರುವ ಕಾಯಕವನ್ನು ಕೈಗೊಂಡಿದ್ದ ಕಾರಣಕ್ಕೆ ಆ ಊರಿಗೆ ʼಹುಲಸೂರುʼ ಎಂದು ಬಳಕೆಯಲ್ಲಿ ಬಂದಿರಬಹುದು ಎಂದು ಹೇಳಲಾಗುತ್ತದೆ. ಹುಲಸೂರಿನಲ್ಲಿ ಲದ್ದೆಯ ಸೋಮಯ್ಯನ ಗುಡಿ ಇದೆ. ಸರ್ಕಾರ ಇನ್ನಷ್ಟು ಅಭಿವೃದ್ಧಿಪಡಿಸಬೇಕಿದೆ ಎಂಬುದು ಸ್ಥಳೀಯರ ಆಗ್ರಹ. ಸೋಮಯ್ಯನ ಆರಾಧ್ಯದೈವ ಸೋಮೇಶ್ವರನ ಗುಡಿ ಹುಲಸೂರು ಸಮೀಪದಲ್ಲಿರುವ ಭಾಲ್ಕಿ ತಾಲೂಕಿನ ಲಾಧಾ ಗ್ರಾಮದಲ್ಲಿದೆ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



