ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಮತದಾನವಾಗಿದ್ದು, ಆಡಳಿತರೂಢ ಟಿಎಂಸಿ ಮತ್ತೆ ಅಧಿಕಾರಕ್ಕೇರುವ ದೃಢ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಬಿಜೆಪಿ ರಾಜ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ, ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಗುರಿ ಹೊಂದಿದೆ.
ಭಾರಿ ಬಿಗಿ ಭದ್ರತೆಯ ನಡುವೆ ನಡೆದ ಚುನಾವಣೆಯಲ್ಲಿ ಮತದಾರರು ಅತ್ಯುತ್ಸಾಹದಿಂದ ಪಾಲ್ಗೊಂಡು ದಾಖಲೆಯ ಮತದಾನ ಮಾಡಿದ್ದಾರೆ. ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ನಿರೀಕ್ಷೆಗೂ ಮೀರಿ ಮತದಾನವಾಗಿದ್ದು, ಇದು ಎರಡೂ ಪ್ರಮುಖ ಪಕ್ಷಗಳ ನಾಯಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಬಾರಿಯ ಚುನಾವಣಾ ಕಣವು ತೀವ್ರ ಪೈಪೋಟಿಯಿಂದ ಕೂಡಿದ್ದು, ದಾಖಲೆ ಪ್ರಮಾಣದ ಮತದಾನವು ಆಡಳಿತ ವಿರೋಧಿ ಅಲೆಯ ಸಂಕೇತವೋ ಅಥವಾ ಆಡಳಿತ ಪಕ್ಷದ ಪರವಾದ ಒಲವೋ ಎಂಬುದರ ಬಗ್ಗೆ ರಾಜಕೀಯ ಪಂಡಿತರಲ್ಲಿ ಚರ್ಚೆ ಹುಟ್ಟುಹಾಕಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ತಾನು ಜಾರಿಗೆ ತಂದಿರುವ ಮಹಿಳಾ ಮತ್ತು ಜನ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಯೋಜನೆಗಳ ಆಧಾರದ ಮೇಲೆ ಮತ್ತೆ ಜನಾದೇಶ ಪಡೆಯುವ ವಿಶ್ವಾಸ ಹೊಂದಿದೆ. ‘ಮಾ, ಮಾಟಿ, ಮಾನುಷ್’ (ತಾಯಿ, ತಾಯ್ನಾಡು, ಜನರು) ಘೋಷವಾಕ್ಯದೊಂದಿಗೆ ಕಣಕ್ಕಿಳಿದಿದ್ದ ಟಿಎಂಸಿ, ತನ್ನ ಗೆಲುವಿನ ಓಟವನ್ನು ಮುಂದುವರಿಸಿ ಪಶ್ಚಿಮ ಬಂಗಾಳದಲ್ಲಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಎದುರು ನೋಡುತ್ತಿದೆ.
ಇದನ್ನು ಓದಿದ್ದೀರಾ? ಪಂಚರಾಜ್ಯಗಳ ವಿಧಾನಸಭಾ ಚುನಾವಣೆ: ಮತಎಣಿಕೆ ಇಂದು, ಯಾರಿಗೆ ಒಲಿಯಲಿದೆ ಅಧಿಕಾರ?
ಇನ್ನೊಂದೆಡೆ, ರಾಷ್ಟ್ರೀಯ ನಾಯಕರ ಬಿರುಸಿನ ಪ್ರಚಾರದೊಂದಿಗೆ ಕಣಕ್ಕಿಳಿದಿದ್ದ ಬಿಜೆಪಿ, ಬಂಗಾಳದಲ್ಲಿ ‘ಅಸೋಲ್ ಪೊರಿಬೊರ್ತನ್’ (ನೈಜ ಬದಲಾವಣೆ) ತರುವ ಭರವಸೆ ನೀಡಿದೆ. ಆಡಳಿತ ವಿರೋಧಿ ಅಲೆ ಹಾಗೂ ಕಾನೂನು-ಸುವ್ಯವಸ್ಥೆ ಸಮಸ್ಯೆಗಳನ್ನು ಪ್ರಮುಖ ಅಸ್ತ್ರಗಳನ್ನಾಗಿ ಬಳಸಿಕೊಂಡಿರುವ ಕೇಸರಿ ಪಡೆ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಹುಮತ ಸಾಧಿಸಿ ಇತಿಹಾಸ ನಿರ್ಮಿಸುವತ್ತ ದೃಷ್ಟಿ ನೆಟ್ಟಿದೆ.
ಪಶ್ಚಿಮ ಬಂಗಾಳ ವಿಧಾನಸಭೆಯು ಒಟ್ಟು 294 ಕ್ಷೇತ್ರಗಳನ್ನು ಹೊಂದಿದ್ದು, ಸರ್ಕಾರ ರಚಿಸಲು ಯಾವುದೇ ಪಕ್ಷಕ್ಕೆ ಕನಿಷ್ಠ 148 ಸ್ಥಾನಗಳ (ಬಹುಮತದ) ಅಗತ್ಯವಿದೆ. ಕಳೆದ 2021ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು ಶೇ. 82.3 ರಷ್ಟು ಮತದಾನವಾಗಿತ್ತು. ಆ ಚುನಾವಣೆಯಲ್ಲಿ ಆಡಳಿತರೂಢ ಟಿಎಂಸಿ 215 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿ ಅಧಿಕಾರ ಉಳಿಸಿಕೊಂಡಿದ್ದರೆ, ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿಯ ದಾಖಲೆ ಪ್ರಮಾಣದ(ಶೇ 92) ಮತದಾನವು ಟಿಎಂಸಿ ತನ್ನ ಕೋಟೆಯನ್ನು ಕಾಯ್ದುಕೊಳ್ಳುವುದೇ ಅಥವಾ ಬಿಜೆಪಿ ಹೊಸ ಇತಿಹಾಸ ಬರೆಯುವುದೇ ಎಂಬುದನ್ನು ನಿರ್ಧರಿಸಲಿದ್ದು, ಅಂತಿಮ ಚಿತ್ರಣಕ್ಕಾಗಿ ಕೆಲವು ಗಂಟೆಗಳು ಕಾಯಬೇಕಿದೆ.




