ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ‘SAVE America Act’ ಜಾರಿಗೆ ತರಲು ಭಾರತದ ಮತದಾನ ವ್ಯವಸ್ಥೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ಭಾರತದಲ್ಲಿ ಪ್ರತಿಯೊಬ್ಬ ಮತದಾರನೂ ಕಡ್ಡಾಯವಾಗಿ ಅಧಿಕೃತ ಭಾವಚಿತ್ರವಿರುವ ಗುರುತಿನ ಚೀಟಿ ಹೊಂದಿದ್ದಾನೆ ಎಂದು ಶ್ಲಾಘಿಸಿದ್ದಾರೆ. ಆದರೆ, ಭಾರತೀಯ ಮತದಾನ ವ್ಯವಸ್ಥೆಯಲ್ಲಿ ಇತ್ತೀಚೆಗೆ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಮೂಲಕ ಕೋಟ್ಯಂತರ ಮತದಾರರ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿರುವ ಬಗ್ಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರಿಗೆ ತಿಳಿದಿಲ್ಲವೇ ಎಂಬ ಪ್ರಶ್ನೆ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಕೇಳಿಬರುತ್ತಿದೆ.
ಟ್ರಂಪ್ ಅಮೆರಿಕದಲ್ಲಿ ಮತದಾನ ಮಾಡಲು ಕಡ್ಡಾಯ ನಾಗರಿಕತ್ವ ಹಾಗೂ ಭಾವಚಿತ್ರವಿರುವ ಗುರುತಿನ ಚೀಟಿಯ ಅಗತ್ಯವನ್ನು ಪ್ರತಿಪಾದಿಸುತ್ತಿದ್ದಾರೆ. ಭಾರತೀಯ ಚುನಾವಣಾ ಆಯೋಗ ಪ್ರಕಾರ, ಭಾರತದಲ್ಲಿ ಪ್ರತಿಯೊಬ್ಬ ಮತದಾರನಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಅದೇ ಸಮಯದಲ್ಲಿ, ಆಯೋಗದ ನಿಯಮಾವಳಿಗಳಂತೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯವಾಗಿದ್ದು, ಮತದಾನದ ವೇಳೆ ಗುರುತಿನ ಚೀಟಿ ಇಲ್ಲದಿದ್ದರೆ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಪಾನ್ ಕಾರ್ಡ್ ಸೇರಿದಂತೆ 12 ಪರ್ಯಾಯ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಬಳಸಿ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಆದರೆ ಇತ್ತೀಚೆಗೆ ನಡೆಸಲಾಗುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಕೋಟ್ಯಂತರ ಮಂದಿ ತಮ್ಮ ಮತದಾನದ ಹಕನ್ನೇ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಎಸ್‌ಐಆರ್: ಮತದಾನದ ಹಕ್ಕು ಕಸಿಯುವ ಸಂಚಿನ ವಿರುದ್ಧ ಮೇ 30ಕ್ಕೆ ಬೃಹತ್ ಪ್ರತಿಭಟನೆ
ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ನಡೆದ ಪರಿಷ್ಕರಣೆಗಳ ವೇಳೆ ಅಂದಾಜು 5.29 ಕೋಟಿಯಿಂದ 5.6 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಉದಾಹರಣೆಗೆ ಉತ್ತರ ಪ್ರದೇಶವೊಂದರಲ್ಲೇ 2.04 ಕೋಟಿ ಹಾಗೂ ಪಶ್ಚಿಮ ಬಂಗಾಳದಲ್ಲಿ 83.86 ಲಕ್ಷ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.
ಆಂಧ್ರಪ್ರದೇಶ, ಹರಿಯಾಣ, ಒಡಿಶಾ, ಜಾರ್ಖಂಡ್ ಸೇರಿದಂತೆ 12 ರಾಜ್ಯಗಳ ಕರಡು ಪಟ್ಟಿಯಲ್ಲಿ 1.58 ಕೋಟಿಗೂ ಹೆಚ್ಚು (ಅಂದಾಜು 1.5 ಕೋಟಿ+) ಹೆಸರುಗಳನ್ನು ತೆಗೆದುಹಾಕಲಾಗಿದೆ. SIR ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಒಟ್ಟಾರೆಯಾಗಿ ದೇಶಾದ್ಯಂತ 6 ಕೋಟಿಗೂ ಅಧಿಕ (ಸರಿಸುಮಾರು 6.5 ರಿಂದ 7 ಕೋಟಿ) ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ.
ಅಮೆರಿಕದಲ್ಲಿ ನಕಲಿ ಮತದಾನ ತಡೆಯಲು ಭಾರತದ ಮಾದರಿ ಚರ್ಚೆಯಾಗುತ್ತಿದ್ದರೂ, ಭಾರತದ ಒಳಗಡೆ ಮತದಾರರ ಪಟ್ಟಿಯಿಂದ ಹೆಸರುಗಳು ಅಳಿಸಿಹೋಗುವ ಪ್ರಕ್ರಿಯೆ ಪ್ರಜಾಪ್ರಭುತ್ವದ ದೊಡ್ಡ ಸವಾಲಾಗಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷರಿಗೆ ತಿಳಿದಿಲ್ಲವೇ ಎಂಬ ಪ್ರಶ್ನೆ ಎತ್ತಲಾಗುತ್ತಿದೆ.




