ಎಸ್ಐಆರ್(ಸಮಗ್ರ ಮತದಾನ ಪರಿಷ್ಕರಣೆ) ಹೆಸರಿನಲ್ಲಿ ಮತದಾನದ ಹಕ್ಕು ಕಸಿಯಲು ಬಿಜೆಪಿ ಹಾಗೂ ಚುನಾವಣಾ ಆಯೋಗ ಜೊತೆಯಾಗಿ ಸಾಗುತ್ತಿವೆ. ಕರ್ನಾಟಕದ ಮೇಲೆ ಬಿಜೆಪಿ ಎಸ್‌ಐಆರ್ ಮೂಲಕ ದಮನಕಾರಿ ನೀತಿಯನ್ನು ಪ್ರಯೋಗಿಸುತ್ತಿದೆ ಎಂದು ಪ್ರಗತಿಪರ ಸಂಘಟನೆಯ ಮುಖಂಡ ಚನ್ನು ಕಟ್ಟಿಮನಿ ಹೇಳಿದರು.
ವಿಜಯಪುರ ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಮತದಾನದ ಹಕ್ಕು ಕಸಿಯಲು ನಡೆಸುತ್ತಿರುವ ಸಂಚಿನ ವಿರುದ್ಧ ಜಾತ್ಯತೀತ ಮತ್ತು ಜನಪರವಾಗಿ ಮೇ 30ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ವಿಜಯಪುರದಲ್ಲಿಯೂ ಕೂಡ ಸಿದ್ದೇಶ್ವರ ದೇವಾಲಯದಿಂದ ಮೆರವಣಿಗೆ ಆರಂಭಗೊಳ್ಳಲಿದೆ. ಜಿಲ್ಲೆಯ ಪ್ರಗತಿಪರ ಸಾಹಿತಿಗಳು, ಚಿಂತಕರು, ಹೋರಾಟಗಾರರು ಸೇರಿದಂತೆ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ” ಎಂದರು.
ಎದ್ದೇಳು ಕರ್ನಾಟಕದ ರಾಜ್ಯ ಮುಖಂಡ ಲಕ್ಷ್ಮಣ ಮಂಡಲಗೇರಿ ಮಾತನಾಡಿ, “ಪ್ರತಿಯೊಬ್ಬ ನಾಗರಿಕ ಎಸ್ಐಆರ್ ವಿರೋಧಿಸಬೇಕಿದೆ. ನಾಗರಿಕತ್ವ ರದ್ದುಗೊಳಿಸುವ ಸಂಚನ್ನು ಹಿಮ್ಮಟ್ಟಿಸಬೇಕಿದೆ. ಮತ ಪರಿಷ್ಕರಣೆ ಮಾತ್ರವಲ್ಲ, ಇದರ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ಸಂವಿಧಾನದ ಒಂದೊಂದು ಆಶಯಗಳನ್ನು ದಮನ ಮಾಡಲು ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ಬಳಸಿಕೊಳ್ಳುತ್ತಿದೆ. ಸಂವಿಧಾನಬದ್ಧವಾದ ಎಸ್ಐಆರ್‌ಗೆ ನಮ್ಮ ವಿರೋಧವಿಲ್ಲ. ಆದರೆ ಷಡ್ಯಂತ್ರ ಆಧರಿಸಿದ ಈ ಎಸ್ಐಆರ್ ಅಪಾಯಕಾರಿ, ಆತಂಕಕಾರಿ” ಎಂದು ಅಭಿಪ್ರಾಯಸಿದರು.
ಶ್ರೀನಾಥ ಪೂಜಾರಿ ಮಾತನಾಡಿ, “ವರ್ಗವೊಂದು ತಮ್ಮ ಸಮುದಾಯದ ಮತಗಳು ಯಾವುದೇ ಕಾರಣಕ್ಕೂ ತಿರಸ್ಕೃತವಾಗಬಾರದೆಂದು ಬೇರೆ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಇದು ಒಂದೇ ಕ್ಷೇತ್ರಕ್ಕೆ ಸೀಮಿತವಾಗಿಲ್ಲ, ಇದು ನಿಜವಾಗಿಯೂ ಅಪಾಯಕಾರಿ ಬೆಳವಣಿಗೆ” ಎಂದರು.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭಗವಾನ್ ರೆಡ್ಡಿ ಮಾತನಾಡಿ, “ಸಿಬಿಐ, ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆ ರೀತಿ ವರ್ತಿಸುತ್ತಿವೆ. ಮತ ಪರಿಷ್ಕರಣೆಗೆ ನಮ್ಮ ವಿರೋಧವಿಲ್ಲ. ಈಗಿನ ಕೇಂದ್ರ ಸರ್ಕಾರ ಮತದಾರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಬಿಜೆಪಿಗೆ ಬಾರದೇ ಇರುವ ಮತಗಳನ್ನು ಗುರುತಿಸಿ ಅವಗಳನ್ನು ಮತ ಪಟ್ಟಿಯಿಂದಲೇ ತೆಗೆಯುವ ಷಡ್ಯಂತ್ರವನ್ನು ಖಂಡಿಸಬೇಕು” ಎಂದರು.
ಇದನ್ನೂ ಓದಿದ್ದೀರಾ? ಉಡುಪಿ | ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್; ಶಾಂತಿ, ಸೌಹಾರ್ದತೆಗೆ ಧರ್ಮಗುರುಗಳ ಕರೆ
ಎದ್ದೇಳು ಕರ್ನಾಟಕದ ಜಿಲ್ಲಾ ಕೋ-ಆರ್ಡಿನೇಟರ್ ಮಹಮ್ಮದ್ ಅಬ್ದುಲ್ ಖದೀರ್, ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ಅತಾವುಲ್ಲಾ ದ್ರಾಕ್ಷಿ, ಅಕ್ರಂ ಮಾಶಾಳಕರ, ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೊಲ್ಲಾಪುರ, ಸುರೇಶ ಬಿಜಾಪುರ, ಫಯಾಜ ಕಲಾದಗಿ ಇದ್ದರು.




