ದೇಶದಲ್ಲಿ ಮುಂಬರುವ ಜನಗಣತಿ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ಚರ್ಚೆಗಳು ಬಿರುಸುಗೊಂಡಿರುವ ಬೆನ್ನಲ್ಲೇ, ದೇಶಾದ್ಯಂತ ‘ರಾಷ್ಟ್ರೀಯ ಪೌರತ್ವ ನೋಂದಣಿ’ (NRC) ಜಾರಿಗೆ ತರಬೇಕೆಂದು RSS ಒತ್ತಾಯಿಸಿದೆ. ಜನಸಂಖ್ಯೆಯ ಅಸಮತೋಲನವನ್ನು ಸರಿಪಡಿಸಲು ಮತ್ತು ದೇಶದ ಏಕತೆ, ಸಮಗ್ರತೆ ಹಾಗೂ ಭದ್ರತೆಯನ್ನು ಕಾಪಾಡಲು ಪ್ರತಿಯೊಬ್ಬ ನಾಗರಿಕನನ್ನು ಗುರುತಿಸುವುದು ಅತ್ಯಗತ್ಯ ಎಂದು ಸಂಘ ಹೇಳಿಕೊಂಡಿದೆ.
ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ (IGNCA) ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ RSS ಪ್ರಚಾರ ಉಸ್ತುವಾರಿ ಸುನೀಲ್ ಅಂಬೇಕರ್, ಮತದಾರರ ಪಟ್ಟಿಯಲ್ಲಿ ತಪ್ಪಾಗಿ ಸೇರ್ಪಡೆಗೊಂಡಿರುವ ವ್ಯಕ್ತಿಗಳನ್ನು ಗುರುತಿಸುವುದು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯ (CAA) ಅಡಿಯಲ್ಲಿ ನೆರೆಹೊರೆಯ ದೇಶಗಳಿಂದ ಭಾರತಕ್ಕೆ ಬಂದಿರುವವರಿಗೆ ಪೌರತ್ವ ಖಾತ್ರಿಪಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
1947ರಲ್ಲಿ ಮುಸ್ಲಿಂ ರಾಷ್ಟ್ರಗಳಾದ ನೆರೆಯ ದೇಶಗಳಲ್ಲಿ ಉಳಿದುಕೊಂಡ ಅಂದಿನ ಎಸ್‌ಸಿ/ಎಸ್‌ಟಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರು ನಿರಂತರ ಕಿರುಕುಳ ಎದುರಿಸುತ್ತಿದ್ದಾರೆ. ಅಂತಹವರಿಗೆ ಸಿಎಎ ಮೂಲಕ ಪೌರತ್ವ ನೀಡುವುದು ಮತ್ತು ಎನ್‌ಆರ್‌ಸಿ ಮೂಲಕ ಅವರನ್ನು ಗುರುತಿಸುವುದು ಮುಖ್ಯ. ಮುಸ್ಲಿಂ ಆಕ್ರಮಣಗಳ ಕಾಲದಿಂದಲೂ ಭಾರತದಲ್ಲಿ ಜನಸಂಖ್ಯಾ ಬದಲಾವಣೆಗಳು ನಡೆದುಕೊಂಡು ಬಂದಿವೆ. ಧರ್ಮ ಮತ್ತು ಜನಸಂಖ್ಯೆಯ ಆಧಾರದ ಮೇಲೆಯೇ ದೇಶ ವಿಭಜನೆಯಾಗಿರುವುದರಿಂದ, ದೇಶದ ಸಾಂಸ್ಕೃತಿಕ ಗುರುತು ಮತ್ತು ಬಹುಸಂಖ್ಯಾತರ ಜನಸಂಖ್ಯೆಯ ಸಮತೋಲನ ಕಾಪಾಡುವುದು ರಾಷ್ಟ್ರೀಯ ಭದ್ರತೆಗೆ ಅನಿವಾರ್ಯ ಎಂದರು.
ಸ್ವಾತಂತ್ರ್ಯದ ನಂತರದ ಜಾತ್ಯತೀತ ನೀತಿಗಳು ಮತ್ತು ಸಮಾನ ನಾಗರಿಕ ಸಂಹಿತೆಯ ಕೊರತೆಯೇ ಜನಸಂಖ್ಯಾ ಅಸಮತೋಲನಕ್ಕೆ ಕಾರಣ ಎಂದು ಆರೋಪಿಸಿದ ಅಂಬೇಕರ್, ಬಹುಪತ್ನಿತ್ವದಂತಹ ವಿಷಯಗಳಲ್ಲಿ ಏಕರೂಪ ಕಾನೂನಿನ ಅಗತ್ಯತೆಯನ್ನು ಒತ್ತಿಹೇಳಿದರು. 2019ರ ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿ ಹೋರಾಟದ ಬಳಿಕ ಈ ವಿಷಯ ಹಿನ್ನೆಲೆಗೆ ಸರಿದಿದ್ದರೂ, ಪ್ರಸ್ತುತ ಜನಗಣತಿ ಮತ್ತು ಎನ್‌ಪಿಆರ್ (NPR) ಪ್ರಶ್ನಾವಳಿಗಳ ಪ್ರಕ್ರಿಯೆಯೊಂದಿಗೆ ಎನ್‌ಆರ್‌ಸಿ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಭಾರತದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಮೊದಲ ಬಾರಿಗೆ ತಯಾರಾಗಿದ್ದು 1951ರಲ್ಲಿ. ಸ್ವಾತಂತ್ರ್ಯದ ನಂತರ ದೇಶದಲ್ಲಿ ನಡೆದ ಮೊದಲ ಜನಗಣತಿಯ (Census) ಆಧಾರದ ಮೇಲೆ, 1951ರಲ್ಲಿ ಭಾರತ ಸರ್ಕಾರದ ನಿರ್ದೇಶನದಂತೆ ಅಸ್ಸಾಂ ಸೇರಿದಂತೆ ದೇಶದ ಇಲಾಖೆಗಳು ಈ ರಿಜಿಸ್ಟರ್ ಅನ್ನು ಸಿದ್ಧಪಡಿಸಿದ್ದವು. ದೇಶದ ಉಳಿದ ಭಾಗಗಳಲ್ಲಿ ಇದು ಮುಂದುವರಿಯದಿದ್ದರೂ, ಅಸ್ಸಾಂ ಒಪ್ಪಂದದ (Assam Accord, 1985) ಹಿನ್ನೆಲೆಯಲ್ಲಿ ಅಸ್ಸಾಂ ರಾಜ್ಯದಲ್ಲಿ ಮಾತ್ರ ಸುಪ್ರೀಂ ಕೋರ್ಟ್‌ನ ನೇರ ಮೇಲ್ವಿಚಾರಣೆಯಲ್ಲಿ ಎನ್‌ಆರ್‌ಸಿ ನವೀಕರಣ ಪ್ರಕ್ರಿಯೆ ನಡೆಯಿತು. ಇದರ ಅಂತಿಮ ಪಟ್ಟಿ 2019ರ ಆಗಸ್ಟ್ 31ರಂದು ಬಿಡುಗಡೆಯಾಯಿತು. ಇತಿಹಾಸದಲ್ಲಿ 1951ರ ಬಳಿಕ ಇದುವರೆಗೆ ಒಟ್ಟಾರೆಯಾಗಿ ಇಡೀ ದೇಶಕ್ಕೆ ಅನ್ವಯವಾಗುವಂತೆ ಯಾವುದೇ ಹೊಸ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (NRC) ಸರ್ಕಾರ ಅಧಿಕೃತವಾಗಿ ಜಾರಿಗೆ ತಂದಿಲ್ಲ.
ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ (Societies Registration Act) ಅಥವಾ ಟ್ರಸ್ಟ್ ಕಾಯ್ದೆಯಡಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟಿಲ್ಲ ಎನ್ನುವುದು ತಿಳಿದಿರುವ ಸಂಗತಿ. ಈ ದೇಶದ ಕಾನೂನಿನಡಿ ನೋಂದಣಿಯನ್ನೇ ಮಾಡಿಕೊಳ್ಳದ RSS ಈ ದೇಶದ ಜನರ ಪೌರತ್ವದ ಕುರಿತು ಮಾತನಾಡುತ್ತದೆ, ಅಸ್ಪೃಶ್ಯರನ್ನು, ಹಿಂದುಳಿದವರನ್ನು ಶತೃಗಳಂತೆ ನಡೆಸಿಕೊಳ್ಳುವ ಈ ಸಂಘದ ಸಂಚಾಲಕರು ಜಾತ್ಯತೀತ ನೀತಿ ಹಾಗೂ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡುತ್ತಿರುವುದು ಸಾರ್ವಜನಿಕವಾಗಿ ತೀವ್ರ ಟೀಕೆಗೆ ಗುರಿಯಾಗಿದೆ.
ಆರ್‌ಎಸ್‌ಎಸ್ ತನ್ನನ್ನು ತಾನು ಯಾವುದೇ ಔಪಚಾರಿಕ ಕಾನೂನು ಕಟ್ಟುಪಾಡುಗಳಿಲ್ಲದ, ದೇಶದಾದ್ಯಂತ ಹರಡಿರುವ ಒಂದು ಅನೌಪಚಾರಿಕ, ಸಾಂಸ್ಕೃತಿಕ ‘ಸ್ವಯಂಸೇವಕ ಸಂಘಟನೆ’ ಎಂದು ಗುರುತಿಸಿಕೊಳ್ಳುತ್ತದೆ. ಇದರ ಸದಸ್ಯತ್ವಕ್ಕೆ ಯಾವುದೇ ಬಲವಾದ ಕಾಗದಪತ್ರಗಳ ನೋಂದಣಿ ಇರುವುದಿಲ್ಲ. ಸಂಘವು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುವುದಿಲ್ಲ ಎಂದು ಪ್ರತಿಪಾದಿಸುತ್ತ, ಭಾರತದಲ್ಲಿ ಯಾವುದೇ ಸಂಘಟನೆಯು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು ಎಂದೇನಿಲ್ಲ, ಸಂಘಟನೆ ನಡೆಸುವುದು ಸಂವಿಧಾನದ ವಿಧಿ 19(1)(c)ರಡಿ ನೀಡಿರುವ ಮೂಲಭೂತ ಹಕ್ಕು (ಸಂಘಗಳನ್ನು ಕಟ್ಟುವ ಸ್ವಾತಂತ್ರ್ಯ) ಎಂದು ಸಮರ್ಥಿಸಿಕೊಳ್ಳಲಾಗುತ್ತದೆ. ಆದರೆ, ಆರ್‌ಎಸ್‌ಎಸ್ ನೂರಾರು ಕೋಟಿ ರೂಪಾಯಿಗಳ ದೇಣಿಗೆ ಪಡೆದುಕೊಳ್ಳುತ್ತದೆ ಮತ್ತು ದೇಶಾದ್ಯಂತ ಬೃಹತ್ ಜಾಲ ಹಾಗೂ ಆಸ್ತಿಗಳನ್ನು ಹೊಂದಿದೆ. ಹೀಗಿರುವಾಗ, ಯಾವುದೇ ಸರ್ಕಾರಿ ಕಾಯ್ದೆಯಡಿ (ಟ್ರಸ್ಟ್ ಅಥವಾ ಸೊಸೈಟಿ ಕಾಯ್ದೆ) ನೋಂದಣಿಯಾಗದೆ ಹೋದರೆ, ಇದರ ಆದಾಯ-ವೆಚ್ಚಗಳ ಲೆಕ್ಕಪತ್ರಗಳು, ತೆರಿಗೆ ವಿನಾಯಿತಿಗಳು ಮತ್ತು ಆರ್ಥಿಕ ಮೂಲಗಳ ಮೇಲೆ ಸಾರ್ವಜನಿಕ ಮತ್ತು ಸಾಂವಿಧಾನಿಕ ಹೊಣೆಗಾರಿಕೆ ಹೇಗೆ ಇರುತ್ತದೆ ಎಂಬುದು ಪ್ರಶ್ನೆ.
ಇತರರಿಗೆ ದೇಶದ ಕಾನೂನನ್ನು ಪಾಲಿಸಿ, ಎನ್‌ಆರ್‌ಸಿಯಂತಹ ದಾಖಲೆಗಳನ್ನು ನೀಡಿ ಪೌರತ್ವ ಸಾಬೀತುಪಡಿಸಿ ಎಂದು ಆಗ್ರಹಿಸುವವರು, ತಮ್ಮದೇ ಸಂಘಟನೆಯ ಅಸ್ತಿತ್ವ ಮತ್ತು ಆರ್ಥಿಕ ವ್ಯವಹಾರಗಳನ್ನು ಯಾವುದೇ ರಿಜಿಸ್ಟ್ರೇಷನ್ ಚೌಕಟ್ಟಿಗೆ ಒಳಪಡಿಸದೆ ಇರುವುದು ಎಷ್ಟು ಸರಿ ಎಂಬುದು ಸಮಾಜದಲ್ಲಿ ಕೇಳಿಬರುವ ಗಂಭೀರವಾದ ನೈತಿಕ ಮತ್ತು ಕಾನೂನುಬದ್ಧ ಟೀಕೆಯಾಗಿದೆ.
ಅಷ್ಟೇ ಯಾಕೆ? ಆರ್‌ಎಸ್‌ಎಸ್ ಪ್ರತಿಪಾದಿಸುವ, ಬೆಂಬಲಿಸುವ, ಅನುಸರಿಸುವ ಮನುವಾದಿ ವ್ಯವಸ್ಥೆ ಹಾಗೂ ಸನಾತನ ಹಿಂದೂ ಧರ್ಮದ ಜಾತಿ/ವರ್ಗ ವ್ಯವಸ್ಥೆಯ ಇತಿಹಾಸವನ್ನು ಗಮನಿಸಿದರೆ, ಈ ದೇಶದ ಬಹುಸಂಖ್ಯಾತರು, ಅಸ್ಪೃಶ್ಯರು (ದಲಿತರು), ಮತ್ತು ಹಿಂದುಳಿದವರು ಮೂಲತಃ ‘ಹಿಂದೂಗಳೇ ಅಲ್ಲ’ ಎಂದು ಅವರನ್ನು ಸಮಾಜದಿಂದ ಆಚೆಗೆ ಎಸೆದಿದ್ದದ್ದು ಕಾಣಿಸುತ್ತದೆ.
ಹಾಗಾದರೆ, RSS ಮತ್ತು ಅದರ ಸಿದ್ಧಾಂತಿಗಳು ಈಗ NRC ಮೂಲಕ “ದೇಶದ ನಾಗರಿಕರು” ಎಂದು ಯಾರನ್ನು ವರ್ಗೀಕರಿಸಲು ಹೊರಟಿದ್ದಾರೆ? ಶತಮಾನಗಳಿಂದ ಮನುಸ್ಮೃತಿ ಮತ್ತು ಜಾತೀಯತೆಯ ಆಧಾರದ ಮೇಲೆ ಅಸ್ಪೃಶ್ಯರೆಂದು ಪರಿಗಣಿಸಲ್ಪಟ್ಟು, ದೇವಾಲಯ ಪ್ರವೇಶ, ಶಿಕ್ಷಣ ಮತ್ತು ಆಸ್ತಿ ಹಕ್ಕುಗಳಿಂದ ವಂಚಿತರಾಗಿದ್ದ ಈ ದೇಶದ ಮೂಲನಿವಾಸಿಗಳು, ದಲಿತರು ಮತ್ತು ಶೂದ್ರರು ಈ ಹೊಸ ಪೌರತ್ವದ ಮಾಪನದಲ್ಲಿ ಎಲ್ಲಿ ನಿಲ್ಲುತ್ತಾರೆ ಎಂಬುದನ್ನು RSS ಸ್ಪಷ್ಟಪಡಿಸಬೇಕಲ್ಲವೇ?
ಇದನ್ನೂ ಓದಿ: ವಚನಯಾನ | ಸನಾತನ ಧರ್ಮದ ಮೂಲವೇ ಜಾತಿವ್ಯವಸ್ಥೆ
RSS ನಾಯಕರು ಹೇಳುವ ‘ಸನಾತನ ಧರ್ಮದ ಸಾಂಸ್ಕೃತಿಕ ಏಕತೆ’ಯ ವ್ಯಾಖ್ಯಾನದಲ್ಲಿ, ಈ ದೇಶದ ಬಹುಜನರಾದ ಶ್ರಮಿಕರು, ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳು ಎಂದಿಗೂ ಸಮಾನರೆಂದು ಪರಿಗಣಿಸಲ್ಪಟ್ಟಿಲ್ಲ. ವರ್ಣಾಶ್ರಮ ಧರ್ಮದ ಕಟ್ಟುಪಾಡುಗಳಲ್ಲಿ ಇವರನ್ನು ಕೀಳಾಗಿ ಕಾಣಲಾಗಿದೆ. ಹೀಗಿರುವಾಗ, ಪೌರತ್ವವನ್ನು ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಧರ್ಮದ ಚೌಕಟ್ಟಿನಲ್ಲಿ ಅಳೆಯಲು ಹೊರಟಿರುವ ಸಂಘ, ಈ ದೇಶದ ಬಹುಸಂಖ್ಯಾತ ಶೋಷಿತ ಸಮುದಾಯಗಳನ್ನು ನಾಗರಿಕರೆಂದು ಪರಿಗಣಿಸುವಾಗ ಅವರಿಗೂ ಅದೇ ಮಾನದಂಡವನ್ನು ಅನ್ವಯಿಸುತ್ತದೆಯೇ? ಅಥವಾ ಕಾಗದಪತ್ರಗಳಿಲ್ಲದ ಬಡವರು, ಅಸಂಘಟಿತ ಕಾರ್ಮಿಕರು ಮತ್ತು ದಲಿತ-ಹಿಂದುಳಿದ ವರ್ಗದ ಲಕ್ಷಾಂತರ ಜನರನ್ನು NRC ಹೆಸರಿನಲ್ಲಿ ಮತ್ತೊಮ್ಮೆ ಪೌರತ್ವದಿಂದ ಹೊರಗಿಡುವ ಹುನ್ನಾರವೇ ಇದು?
ದೇಶದ ಬಹುಸಂಖ್ಯಾತ ಜನರನ್ನು ಅವರದೇ ಭೂಮಿಯಲ್ಲಿ ಪರಕೀಯರನ್ನಾಗಿ ಮಾಡುವ ಅಥವಾ ಅವರ ಪೌರತ್ವವನ್ನು ಪ್ರಶ್ನಿಸುವ ಇಂತಹ ರಾಜಕೀಯ ಅಜೆಂಡಾವು ಸಂವಿಧಾನದ ಮೂಲ ತತ್ವಗಳಿಗೆ ಮಸಿಬಳಿಯುವ ಕೆಲಸ. RSS ಪ್ರಾಮಾಣಿಕವಾಗಿ ಈ ನೆಲದ ಕಾನೂನನ್ನು, ಸಂವಿಧಾನವನ್ನು ಗೌರವಿಸುವುದಾದರೆ, ಮೊದಲು ತಾನು ನೋಂದಣಿ ಮಾಡಿಕೊಂಡು , ತನ್ನ ಎಲ್ಲಾ ಚಟುವಟಿಕೆಗಳಿಗೆ ಪಾರದರ್ಶಕತೆ ತಂದು, ಈ ದೇಶದ ನೋಂದಾಯಿತ ಸಂಘಟನೆ ಎಂದು ಸಾಬೀತುಪಡಿಸಿ ಬಳಿಕ ಜನರ ಪೌರತ್ವ ನೋಂದಣಿಗೆ ಆಗ್ರಹಿಸಿ ತನ್ನ ಜನಪರ ಕಾಳಜಿಯನ್ನು ಸಾಬೀತುಪಡಿಸಿಕೊಳ್ಳಲಿ.




