ಉತ್ತರ ಪ್ರದೇಶದ ಆಗ್ರಾದಲ್ಲಿ ಬಿಜೆಪಿ ಕೌನ್ಸಿಲರ್ ಕಿಶನ್ ನಾಯಕ್ ಅವರು ತಮ್ಮ ಹುಟ್ಟುಹಬ್ಬವನ್ನು ಕೊಳಚೆ ಗುಂಡಿಯಲ್ಲಿ ನಿಂತು ಆಚರಿಸಿದ್ದಾರೆ. ಇದು ಅವರ ವಾರ್ಡ್‌ನಲ್ಲಿ ಮೋರಿಗಳನ್ನು ಸ್ವಚ್ಛಗೊಳಿಸದೇ ಇರುವುದರ ವಿರೋದ್ಧದ ಪ್ರತಿಭಟನೆಯಾಗಿ ಈ ರೀತಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಆಗ್ರಾ ನಗರದ ನಾಗ್ಲಾ ಧಾನಿಯ ನ್ಯೂ ವಿಜಯ್ ನಗರ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ; ಬಿಳಿ ಬಟ್ಟೆ ಹಾಸಿದ ವೃತ್ತಾಕಾರದ ಟೇಬಲ್ ಮೇಲೆ ಕೇಕ್ ಇಟ್ಟು, ಕೊಳಕು ನೀರು ತುಂಬಿದ ಮೋರಿಯ ಮಧ್ಯದಲ್ಲಿ ನಿಂತು ಕೌನ್ಸಿಲರ್ ಕೇಕ್ ಕತ್ತರಿಸಿದ್ದಾರೆ. ಸುತ್ತಲೂ ಜನರು ಕೈತಟ್ಟಿ ‘ಪರ್ಷದ್ ಜೀ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ.
ವಿಡಿಯೋದಲ್ಲಿ ‘ಪರ್ಷದ್ ಜೀ ಸಂಘರ್ಷ ಕರೋ, ಹಮ್ ತುಮ್ಹಾರೆ ಸಾಥ್ ಹೈ’ (ಪರ್ಷದ್ ಜೀ, ಹೋರಾಟ ಮುಂದುವರಿಸಿ, ನಾವು ನಿಮ್ಮ ಜೊತೆಗಿದ್ದೇವೆ) ಎಂಬ ಘೋಷಣೆಗಳೂ ಕೇಳಿಬಂದಿವೆ. ‘ಜೈ ಭೀಮ್’ ಘೋಷಣೆಗಳೂ ಮೊಳಗಿವೆ.
ಚರಂಡಿ ಸ್ವಚ್ಛಗೊಳಿಸುವಂತೆ 12 ಬಾರಿ ದೂರು ನೀಡಿದ್ದರೂ, ಅವರ ವಾರ್ಡ್‌ನಲ್ಲಿನ ಮೋರಿಗಳನ್ನು ಸ್ವಚ್ಛಗೊಳಿಸಲಾಗಿಲ್ಲ ಎಂದು ಕೌನ್ಸಿಲರ್ ಕಿಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆಯು ಮುಂಗಾರು ಮಳೆ ಆರಂಭಕ್ಕೂ ಮುನ್ನ ಎಲ್ಲ ಮೋರಿಗಳನ್ನು ಸ್ವಚ್ಛಗೊಳಿಸುವುದಾಗಿ ಹೇಳಿತ್ತು. ಆದರೂ, ತಮ್ಮ ವಾರ್ಡ್‌ನಲ್ಲಿ ಇನ್ನೂ ಸ್ವಚ್ಛತೆ ಮಾಡಲಾಗಿಲ್ಲ ಎಂದು ಅವರು ದೂರಿದ್ದಾರೆ.
So much “Vikas” has happened in the last 12 years of the Modi government and 9 years of the Yogi government that a BJP councillor in Agra has been forced to expose this “Vikas.”
— Saral Patel (@SaralPatel) June 26, 2026
BJP councillor Kishan Nayak in Agra celebrated his birthday inside a sewer after the Municipal… pic.twitter.com/UV4uHR3zNl
ಅವರು ಚರಂಡಿಯಲ್ಲಿ ನಿಂತು ಹುಟ್ಟುಹಬ್ಬ ಆಚರಿಸಿಕೊಂಡಿದ್ದನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಮೋದಿ ಸರ್ಕಾರದ ಕಳೆದ 12 ವರ್ಷಗಳು ಮತ್ತು ಯೋಗಿ ಸರ್ಕಾರದ 9 ವರ್ಷಗಳ ಆಡಳಿತದಲ್ಲಿ ಎಷ್ಟೊಂದು ‘ವಿಕಾಸಗಳು’ ನಡೆದಿವೆ ಎಂದರೆ ಆಗ್ರಾದ ಬಿಜೆಪಿ ಕೌನ್ಸಿಲರ್ ಈ ‘ವಿಕಾಸಗಳನ್ನು’ ಬಹಿರಂಗಪಡಿಸಿದ್ದಾರೆ” ಎಂದು ನೆಟ್ಟಿಗರು ಟೀಕಿಸಿದ್ದಾರೆ.



