‘ವಿಮಲ್ ಏಲಕ್ಕಿ’ ಜಾಹೀರಾತಿನಲ್ಲಿ ನಟಿಸಿದ್ದಕ್ಕಾಗಿ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಇಲಾಖೆ (ಎಫ್‌ಡಿಎ) ನೋಟಿಸ್ ಕೊಟ್ಟಿರೋದನ್ನು ಪ್ರಶ್ನಿಸಿ ಬಾಲಿವುಡ್ ನಟ ಅಜಯ್ ದೇವಗನ್ ಮುಂಬೈ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಈ ಜಾಹೀರಾತಿನಲ್ಲಿ ಅಜಯ್ ದೇವಗನ್ ಜೊತೆ ಕಾಣಿಸಿಕೊಂಡಿದ್ದ ಶಾರುಖ್ ಖಾನ್ ಮತ್ತು ಟೈಗರ್ ಶ್ರಾಫ್ ಅವರಿಗೂ ನೋಟಿಸ್ ನೀಡಲಾಗಿದೆ.
ಮಹಾರಾಷ್ಟ್ರದಲ್ಲಿ ಪಾನ್ ಮಸಾಲಾ ಮತ್ತು ಗುಟ್ಕಾ ಮಾರಾಟಕ್ಕೆ ನಿಷೇಧ ಇದೆ. ಆದ್ರೆ, ‘ವಿಮಲ್ ಏಲಕ್ಕಿ’ ಅಂತ ಜಾಹೀರಾತು ತೋರಿಸಿ, ಅಡ್ಡದಾರಿಯಲ್ಲಿ ನಿಷೇಧಿತ ‘ವಿಮಲ್ ಪಾನ್ ಮಸಾಲಾ’ ಬ್ರಾಂಡ್ ಅನ್ನು ಪ್ರಚಾರ ಮಾಡ್ತಿದ್ದಾರೆ ಅಂತ ಎಫ್‌ಡಿಎ ಆರೋಪ ಮಾಡಿದೆ. ಎಫ್‌ಡಿಎ ಅಧಿಕಾರಿ ತುಕಾರಾಮ್ ಮುಂಧೆ ಹೇಳೋ ಪ್ರಕಾರ, ಈ ಮೂವರು ನಟರ ಮೇಲಿನ ತನಿಖೆ ಮುಗಿದಿದೆ ಮತ್ತು ಇವರು ನಿಯಮ ಮೀರಿರೋದು ಸ್ಪಷ್ಟವಾಗಿದೆ. ಹಾಗಾಗಿ ಈ ಕೇಸನ್ನು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ. ಎಫ್‌ಡಿಎ ಕಡೆಯಿಂದ ತನಿಖೆ ನಡೀತಿದ್ರೂ, ಅಜಯ್ ದೇವಗನ್ ಮಾತ್ರ ತಮಗೆ ಬಂದಿರೋ ನೋಟಿಸ್ ಅನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೋಗಿದ್ದಾರೆ.
ಅಜಯ್ ದೇವಗನ್ ವಾದ ಏನು?
ಜಾಹೀರಾತು ಮಾಡೋದು ಅಥವಾ ಪ್ರಾಡಕ್ಟ್ ತಯಾರಿಸೋದು ಕಂಪನಿ. ಅದೆಲ್ಲಕ್ಕೂ ನಟರಿಗೂ ಏನು ಸಂಬಂಧ? ಕಂಪನಿಯನ್ನು ಬಿಟ್ಟು ನಟರನ್ನು ಮಾತ್ರ ನೇರವಾಗಿ ಗುರಿ ಮಾಡಿ ನೋಟಿಸ್ ಕೊಟ್ಟಿರೋದು ತಪ್ಪು ಅಂತ ದೇವಗನ್ ವಾದ ಮಾಡಿದ್ದಾರೆ. ಎಫ್‌ಡಿಎ ಇಲಾಖೆಯ ಕೆಲವು ನಿಯಮಗಳ ವಿರುದ್ಧವೇ ಅವರು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಿದ್ದಾರೆ. ಈ ಕೇಸಿನಲ್ಲಿ ಅಜಯ್ ದೇವಗನ್ ಪರವಾಗಿ ವಕೀಲರಾದ ಪರಾಗ್ ಖಂಧಾರ್ ಮತ್ತು ಚಂದ್ರಿಮಾ ಮಿತ್ರ ವಾದ ಮಾಡುತ್ತಿದ್ದಾರೆ.
ಮೊದಲು ಈ ವಿಮಲ್ ಪ್ರಾಡಕ್ಟ್ ತಯಾರಿಸುವ ‘ಪಿಬಿ ಅಗ್ರೋ’ ಕಂಪನಿಯು ಈ ನೋಟಿಸ್ ರದ್ದುಗೊಳಿಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಹೋಗಿತ್ತು. ಆದ್ರೆ, ಈ ಘಟನೆ ನಡೆದಿರೋದು ಮಹಾರಾಷ್ಟ್ರದಲ್ಲಿ, ಹಾಗಾಗಿ ಇದರ ಬಗ್ಗೆ ದೆಹಲಿಯಲ್ಲಿ ವಿಚಾರಣೆ ನಡೆಸೋಕಾಗಲ್ಲ, ಮಹಾರಾಷ್ಟ್ರದ ಕೋರ್ಟ್‌ನಲ್ಲೇ ಮಾತಾಡಿ ಅಂತ ದೆಹಲಿ ಹೈಕೋರ್ಟ್ ಆ ಅರ್ಜಿಯನ್ನು ತಳ್ಳಿಹಾಕಿತ್ತು. ಅದಾದ ಮೇಲೆಯೇ ಈಗ ಅಜಯ್ ದೇವಗನ್ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಮತ್ತು ನ್ಯಾಯಮೂರ್ತಿ ಅದ್ವೈತ್ ಸೇತ್ನಾ ಇವರನ್ನೊಳಗೊಂಡ ಬೆಂಚ್ ನವೆಂಬರ್ 4 ರಂದು ಈ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ. ನಿಷೇಧಿತ ಪ್ರಾಡಕ್ಟ್ ಹೆಸರಲ್ಲೇ ಬೇರೆ ಸಣ್ಣಪುಟ್ಟ ವಸ್ತುಗಳ (ಏಲಕ್ಕಿ, ಸೋಂಪು ಇತ್ಯಾದಿ) ಜಾಹೀರಾತಿನಲ್ಲಿ ನಟಿಸುವ ಸಿನಿಮಾ ನಟರ ಮೇಲೆ ಯಾವ ಮಟ್ಟಿಗೆ ತಪ್ಪು ಹೊರಿಸಬಹುದು? ಬ್ರಾಂಡ್ ಅಂಬಾಸಿಡರ್‌ಗಳನ್ನು ಕಾನೂನಿನ ಅಡಿಯಲ್ಲಿ ಎಷ್ಟು ದೂರ ಎಳೆದುಕೊಂಡು ಹೋಗಬಹುದು ಅನ್ನೋದಕ್ಕೆ ಈ ಕೇಸಿನ ತೀರ್ಪಿನಿಂದ ಸ್ಪಷ್ಟ ಉತ್ತರ ಸಿಗಲಿದೆ.
ಇನ್ನು ಸಿನಿಮಾ ನಟರು ಮತ್ತು ಜನಪ್ರಿಯ ವ್ಯಕ್ತಿಗಳು ಸಮಾಜದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುತ್ತಾರೆ. ಅದರಲ್ಲೂ ಯುವಜನತೆ ತಮ್ಮ ನೆಚ್ಚಿನ ನಟರನ್ನು ಮಾದರಿಯಾಗಿ ಸ್ವೀಕರಿಸುವುದರಿಂದ, ಅವರು ಅಭಿನಯಿಸುವ ಜಾಹೀರಾತುಗಳು ಜನರ ಮನಸ್ಸಿನ ಮೇಲೆ ನೇರ ಹಾಗೂ ತೀವ್ರವಾದ ಪರಿಣಾಮ ಬೀರುತ್ತವೆ. ಏಲಕ್ಕಿ ಅಥವಾ ಸೋಂಪಿನ ಹೆಸರಿನಲ್ಲಿ ಪರೋಕ್ಷವಾಗಿ ಸಿಗರೇಟ್, ಗುಟ್ಕಾ ಹಾಗೂ ಪಾನ್ ಮಸಾಲಾದಂತಹ ಹಾನಿಕಾರಕ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡಿದಾಗ, ಸಾರ್ವಜನಿಕರಲ್ಲಿ ಅದರಲ್ಲೂ ಮುಖ್ಯವಾಗಿ ಯುವಜನತೆಯಲ್ಲಿ ಇಂತಹ ಅಪಾಯಕಾರಿ ಅಭ್ಯಾಸಗಳ ಬಗ್ಗೆ ಇರುವ ಭಯ ಅಥವಾ ಹಿಂಜರಿಕೆ ಕಡಿಮೆಯಾಗುತ್ತದೆ.
ನಟರೇ ಇದನ್ನು ಬಳಸುತ್ತಿದ್ದಾರೆ ಎಂಬ ತಪ್ಪು ಭಾವನೆ ಜನರಲ್ಲಿ ಮೂಡಿ, ದುರಭ್ಯಾಸಗಳು ಸಮಾಜದಲ್ಲಿ ಸಹಜವೆನಿಸಲು ಕಾರಣವಾಗುತ್ತದೆ. ಹಣದ ಗಳಿಕೆಗಾಗಿ ಆರೋಗ್ಯಕ್ಕೆ ಹಾನಿಕರವಾದ ಬ್ರ್ಯಾಂಡ್‌ಗಳಿಗೆ ಪ್ರಚಾರ ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವುದಲ್ಲದೆ, ನಟರ ಮೇಲಿರುವ ಸಾಮಾಜಿಕ ಜವಾಬ್ದಾರಿಯನ್ನು ಪ್ರಶ್ನಿಸುವಂತೆ ಮಾಡುತ್ತದೆ. ಕೋಟಿ ಕೋಟಿ ದುಡ್ಡಿನ ಆಸೆಗೆ ಹಾನಿಕಾರಕ ಬ್ರ್ಯಾಂಡ್‌ಗಳಿಗೆ ಮುಖವಾಗುವುದು, ನಟರನ್ನ ಮಾದರಿಯಾಗಿ ನೋಡುವ ಕೋಟ್ಯಂತರ ಜನರ ಜೀವದ ಜೊತೆ ಚೆಲ್ಲಾಟವಾಡಿದಂತೆ. ಸಮಾಜವನ್ನು ಒಳ್ಳೆಯ ದಾರಿಯಲ್ಲಿ ನಡೆಸಬೇಕಾದ ಜನಪ್ರಿಯ ವ್ಯಕ್ತಿಗಳೇ ಹಣಕ್ಕಾಗಿ ದಾರಿ ತಪ್ಪಿಸುವುದು ಅತ್ಯಂತ ಬೇಜವಾಬ್ದಾರಿತನದ ಕೆಲಸ ಎಂಬುದು ಸಾಮಾನ್ಯ ಜನರ ಅಭಿಪ್ರಾಯ.



