ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೆರಿಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಾಳೆ (ಮೇ 4) ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ. 824 ವಿಧಾನಸಭಾ ಸ್ಥಾನಗಳ ಭವಿಷ್ಯ ನಿರ್ಧಾರವಾಗಲಿದೆ. ಎಲ್ಲಾ ಕ್ಷೇತ್ರಗಳಲ್ಲೂ ಏಕಕಾಲದಲ್ಲಿ ಎಣಿಕೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ತಿಳಿಸಿದೆ.
ಮೊದಲ ಒಂದರಿಂದ ಎರಡು ಗಂಟೆಗಳಲ್ಲಿ ಬಹುತೇಕ ಚುನಾವಣಾ ಫಲಿತಾಂಶದ ಅಂದಾಜು ಸಿಗಲಿರುವ ನಿರೀಕ್ಷೆಯಿದೆ. ಸಂಜೆಯ ವೇಳೆಗೆ ಅಂತಿಮ ಫಲಿತಾಂಶ ಹೊರಬರುವ ಸಾಧ್ಯತೆಯಿದೆ. ಮತದಾರರು ಇಸಿಐ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್‌ಗಳನ್ನು ನೋಡಬಹುದು.
ಇದನ್ನು ಓದಿದ್ದೀರಾ? ತಮಿಳುನಾಡು, ಕೇರಳ ಚುನಾವಣೆ: ಬಿಜೆಪಿಗೆ ಕಬ್ಬಿಣದ ಕಡಲೆಯಂತಿರುವ ರಾಜ್ಯಗಳು
ಅಸ್ಸಾಂ, ಕೇರಳ, ಪುದುಚೆರಿಯಲ್ಲಿ ಏಪ್ರಿಲ್ 9ಕ್ಕೆ ಚುನಾವಣೆ ನಡೆದಿದೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಮತದಾನ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು ಹೊರಬಂದ ಒಂದು ದಿನದ ಬಳಿಕ ಮೇ 2ರಂದು 15 ಪೋಲಿಂಗ್ ಬೂತ್‌ಗಳಲ್ಲಿ ಮರು ಮತದಾನ ನಡೆದಿದೆ.
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ತಾ (Falta) ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನಾಳೆ ಮತ ಎಣಿಕೆ ನಡೆಯುವುದಿಲ್ಲ. ಫಾಲ್ತಾ ಕ್ಷೇತ್ರದಲ್ಲಿ ಏಪ್ರಿಲ್ 29ರಂದು ನಡೆದ ಎರಡನೇ ಹಂತದ ಮತದಾನದ ವೇಳೆ ಗಂಭೀರವಾದ ಚುನಾವಣಾ ಅಕ್ರಮಗಳು ನಡೆದಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಚುನಾವಣಾ ಆಯೋಗವು (ECI) ಆ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮತದಾನವನ್ನು ರದ್ದುಗೊಳಿಸಿದೆ. ಮೇ 21ರಂದು ಮರುಮತದಾನ ನಡೆಯಲಿದ್ದು, ಮೇ 24ರಂದು ಫಲಿತಾಂಶ ಹೊರಬೀಳಲಿದೆ. ಉಳಿದೆಲ್ಲ ಕ್ಷೇತ್ರಗಳ ಚುನಾವಣಾ ಫಲಿತಾಂಶ ಮೇ4ರಂದು ಹೊರ ಬೀಳಲಿದೆ.
ಪಶ್ಚಿಮ ಬಂಗಾಳ ಟಿಎಂಸಿ ಮತ್ತೆ ಗೆಲ್ಲುತ್ತಾ?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಪೈಪೋಟಿ ಇದೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿವೆ. ಆದರೆ ಕೆಲವು ಎಕ್ಸಿಟ್ ಪೋಲ್‌ಗಳು ಬಂಗಾಳದಲ್ಲಿ ಮತ್ತೊಮ್ಮೆ ಮಮತಾ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಗದ್ದುಗೆ ಏರಲಿದೆ ಎಂದು ಹೇಳಿದೆ.
ಕೇರಳದಲ್ಲಿ ಎಲ್‌ಡಿಎಫ್ ಉಳಿಸಿಕೊಳ್ಳುತ್ತಾ ಅಧಿಕಾರ?
ಕೇರಳವು 140 ಶಾಸಕರನ್ನು ಆಯ್ಕೆ ಮಾಡಲು ಏಪ್ರಿಲ್ 9 ರಂದು ಚುನಾವಣೆ ನಡೆದಿದೆ. ಎಲ್‌ಡಿಎಫ್ ಸತತ ಮೂರನೇ ಅವಧಿಗೆ ಅಧಿಕಾರ ಪಡೆಯುವ ಪ್ರಯತ್ನ ನಡೆಸಿದೆ. ಆದರೆ ಯುಡಿಎಫ್ ಮಾತ್ರ ಕೇರಳಿಗರು ಮತ್ತೆ ಎಲ್‌ಡಿಎಫ್‌ಗೆ ಅವಕಾಶ ನೀಡುವವರಲ್ಲ, ಗೆಲುವು ನಮ್ಮದೇ ಎಂಬ ಧೈರ್ಯದಲ್ಲಿದೆ. ಇವೆಲ್ಲವುದರ ನಡುವೆ ಬಿಜೆಪಿ ನೇತೃತ್ವದ ಎನ್‌ಡಿಎ ಕೇರಳದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಯತ್ನದಲ್ಲಿದೆ.
ಇದನ್ನು ಓದಿದ್ದೀರಾ? ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳಕ್ಕೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ
ತಮಿಳುನಾಡು ಡಿಎಂಕೆ ಗೆಲುವು?
ಏಪ್ರಿಲ್ 23ರಂದು ಒಂದೇ ಹಂತದಲ್ಲಿ ಎಲ್ಲ 234 ಕ್ಷೇತ್ರಗಳಲ್ಲೂ ಮತದಾನ ಪೂರ್ಣಗೊಂಡಿದ್ದು, ತಮಿಳುನಾಡು ತನ್ನ ಇದುವರೆಗಿನ ಅತ್ಯಧಿಕ ಮತದಾರವನ್ನು ದಾಖಲಿಸಿದೆ. ತಮಿಳುನಾಡಿನಲ್ಲಿ ಈ ಬಾರಿ 84.80% ಮತದಾನವಾಗಿದೆ. ಎಕ್ಸಿಟ್ ಪೋಲ್‌ನಲ್ಲಿ ವಿವಿಧ ಸಂಸ್ಥೆಗಳು ಭಿನ್ನವಾದ ಮುನ್ಸೂಚನೆಗಳನ್ನು ನೀಡಿವೆ. ಈ ಬಾರಿ ಆಡಳಿತಾರೂಢ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ತೀವ್ರ ಪೈಪೋಟಿ ಇದ್ದು, ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ‘ಕಿಂಗ್ ಮೇಕರ್’ ಆಗುವ ಸಾಧ್ಯತೆಯಿದೆ ಎಂದು ಹಲವು ಸಮೀಕ್ಷೆಗಳು ತಿಳಿಸಿವೆ.
ಅಸ್ಸಾಂ ಮತ್ತೆ ಬಿಜೆಪಿ ಪಾಳಾಗುತ್ತಾ?
2026ರ ಅಸ್ಸಾಂ ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ರಾಜ್ಯದ ಒಟ್ಟು 126 ಸ್ಥಾನಗಳಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದ್ದು, ಹೆಚ್ಚಿನ ಸಮೀಕ್ಷೆಗಳು ಎನ್‌ಡಿಎಗೆ ಭರ್ಜರಿ ಬಹುಮತ ಸಿಗಲಿದೆ ಎಂದಿದೆ.
ಪುದುಚೆರಿಯಲ್ಲಿ ಏನಾಗಬಹುದು?
ಪುದುಚೆರಿಯ ಎಕ್ಸಿಟ್ ಪೋಲ್‌ಗಳಲ್ಲಿ ಬಹುತೇಕ ಎಕ್ಸಿಟ್ ಪೋಲ್‌ಗಳು ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಬರಲಿದೆ ಎಂದಿವೆ. ಒಟ್ಟು 30 ಸ್ಥಾನಗಳಿರುವ ಪುದುಚೇರಿ ವಿಧಾನಸಭೆಯಲ್ಲಿ ಬಹುಮತಕ್ಕೆ 16 ಸ್ಥಾನಗಳ ಅವಶ್ಯಕತೆಯಿದೆ. ಹೆಚ್ಚಿನ ಸಮೀಕ್ಷೆಗಳ ಪ್ರಕಾರ ಮುಖ್ಯಮಂತ್ರಿ ಎನ್. ರಂಗಸ್ವಾಮಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ.




