ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಭಾರಿ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. ಒಂದೇ ದಿನದಲ್ಲಿ ದರ 993 ರೂ. ಏರಿಸಿರುವುದನ್ನು ‘ಚುನಾವಣಾ ಬಿಲ್’ ಎಂದು ಜರಿದಿರುವ ಅವರು, ಮುಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸರದಿ ಬರಲಿದೆ ಎಂದು ಎಚ್ಚರಿಸಿದ್ದಾರೆ.
ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಒಂದೇ ದಿನದಲ್ಲಿ ಬರೋಬ್ಬರಿ 993 ರೂ. ಹೆಚ್ಚಿಸಿವೆ. ಈ ಹೊಸ ಪರಿಷ್ಕರಣೆಯೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಇದೀಗ 3,071 ರೂಪಾಯಿಗೆ ತಲುಪಿದೆ. ಆದರೆ, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಾಗಿಲ್ಲ. ಫೆಬ್ರವರಿ ತಿಂಗಳಿನಿಂದ ಮೇ ತಿಂಗಳವರೆಗೆ ಕೇವಲ ಮೂರು ತಿಂಗಳ ಅಂತರದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಒಟ್ಟು ರೂ. 1,380 ಅಂದರೆ ಶೇಕಡಾ 81 ರಷ್ಟು ಏರಿಕೆಯಾಗಿದೆ ಎಂದು ಕಾಂಗ್ರೆಸ್ ಅಂಕಿ-ಅಂಶಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಚುನಾವಣೆ ಮುಗಿದ ಬಳಿಕ ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟಲಿದೆ ಎಂದು ತಾವು ಹಿಂದೆಯೇ ಹೇಳಿದ್ದಾಗಿ ನೆನಪಿಸಿದ್ದಾರೆ. ಇಂದು ವಾಣಿಜ್ಯ ಸಿಲಿಂಡರ್ ಬೆಲೆ 993 ರೂ. ದುಬಾರಿಯಾಗಿದ್ದು, ಇದು ಒಂದೇ ದಿನದಲ್ಲಿ ಆಗಿರುವ ಅತಿ ದೊಡ್ಡ ಬೆಲೆ ಏರಿಕೆಯಾಗಿದೆ. ಇದೇ ಜನರಿಗೆ ನೀಡುತ್ತಿರುವ ‘ಚುನಾವಣಾ ಬಿಲ್’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? IPL | ದಿಗ್ಗಜರ ದಾಖಲೆ ಧೂಳೀಪಟ ಮಾಡಿದ 15ರ ಪೋರ ವೈಭವ್ ಸೂರ್ಯವಂಶಿ
ಈ ದಿಢೀರ್ ಬೆಲೆ ಏರಿಕೆಯು ಸಣ್ಣ ವ್ಯಾಪಾರಿಗಳಾದ ಟೀ ಸ್ಟಾಲ್‌ಗಳು, ಢಾಬಾಗಳು, ಹೋಟೆಲ್‌ಗಳು, ಬೇಕರಿಗಳು ಹಾಗೂ ಸಿಹಿತಿಂಡಿ ಅಂಗಡಿಗಳ ಮೇಲೆ ನೇರ ಹಾಗೂ ತೀವ್ರ ಪರಿಣಾಮ ಬೀರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಮೇಲಿನ ಈ ಪ್ರಹಾರದ ನಂತರ, ಸರ್ಕಾರದ ಮುಂದಿನ ಗುರಿ ಪೆಟ್ರೋಲ್ ಮತ್ತು ಡೀಸೆಲ್ ಆಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಅಗ್ಗವಾಗಿದ್ದಾಗ ಲಾಭ ಮಾಡಿಕೊಂಡ ಕೇಂದ್ರ ಸರ್ಕಾರ, ಈಗ ಬೆಲೆ ದುಬಾರಿಯಾದಾಗ ಅದರ ಸಂಪೂರ್ಣ ಹೊರೆಯನ್ನು ಸಾರ್ವಜನಿಕರ ಮೇಲೆ ಹೊರಿಸುತ್ತಿದೆ ಎಂದು ರಾಹುಲ್ ಟೀಕಾಪ್ರಹಾರ ನಡೆಸಿದ್ದಾರೆ. ಬೆಲೆ ಏರಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷವು ಪ್ರಧಾನಿಯವರನ್ನು ‘ಇನ್‌ಫ್ಲೇಶನ್ ಮ್ಯಾನ್’ (ಹಣದುಬ್ಬರ ಪುರುಷ) ಎಂದು ಕರೆದು ತೀವ್ರವಾಗಿ ವ್ಯಂಗ್ಯವಾಡಿದೆ.




