ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ 152 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮುರ್ಷಿದಾಬಾದ್ ಜಿಲ್ಲೆಯ ನೋಯ್ಡಾದಲ್ಲಿ ದುಷ್ಕರ್ಮಿಗಳು ಮತಕೇಂದ್ರದ ಬಳಿ ಕಚ್ಚಾ ಬಾಂಬ್ ಎಸೆದಿರುವ ಘಟನೆ ನಡೆದಿದೆ. ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಿಗ್ಗೆ 8 ಗಂಟೆ ಸುಮಾರಿಗೆ ನಮಾಜ್ ಮಾಡಲು ತೆರಳಿದ್ದೆ. ನಮಾಜ್ ಮುಗಿಸಿ ಹೊರಬಂದಾಗ ಇಬ್ಬರು ಯುವಕರು ಕಚ್ಚಾ ಬಾಂಬ್ ತಂದು ನನ್ನ ಕಾಲ ಬಳಿಗೆ ಎಸೆದರು. ಅವರು ಸ್ಥಳೀಯ ನಾಯಕ ಹುಮಾಯೂನ್ ಕಬೀರ್ ಬೆಂಬಲಿಗರಿರಬಹುದು ಎಂದು ಸ್ಥಳದಲ್ಲೇ ಇದ್ದ ಸಂತ್ರಸ್ತರೊಬ್ಬರು ಹೇಳಿದ್ದಾರೆ.
ಶಿವನಗರದ ಪ್ರಾಥಮಿಕ ಶಾಲೆ ಬಳಿ ಕಚ್ಚಾ ಬಾಂಬ್ ಎಸೆಯಲಾಗಿದೆ. ಈ ಸಂದರ್ಭ ಟಿಎಂಸಿ ಅಭ್ಯರ್ಥಿ ಸಾಹಿನಾ ಮುಮ್ರಾಜ್ ಸಹ ಸಮೀಪದಲ್ಲೇ ಇದ್ದರು. ಯಾವುದೇ ಅಪಾಯವಿಲ್ಲದೇ ಅವರು ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಘಟನೆಗೆ ಸಂಬಂಧಿಸಿದ ಪ್ರತಿಕ್ರಿಯಿಸಿದ ಟಿಎಂಸಿ ಸಂಸದ ಅಬು ತಹೇರ್ ಖಾನ್, ಹುಮಾಯುನ್ ಕಬೀರ್ ಅವರ ಆಮ್ ಜನತಾ ಉನ್ನಯನ್ ಪಕ್ಷದ ಕಾರ್ಯಕರ್ತರ ಕೈವಾಡವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಪೊಲೀಸರು ಮತ್ತು ಕೇಂದ್ರೀಯ ದಳಗಳನ್ನು ನಿಯೋಜಿಸುವ ಮೂಲಕ ಭದ್ರತೆ ಹೆಚ್ಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಅಗರ್ವಾಲ್ ತಿಳಿಸಿದ್ದಾರೆ.





