ತಮಿಳುನಾಡಿನ ಕಲ್ಲಕುರಚಿ ಜಿಲ್ಲೆಯ ವಡತೊರಸಲೂರಿನಲ್ಲಿ ಹೈಟೆನ್ಷನ್ ವಿದ್ಯುತ್ ಟವರ್ ನಿರ್ಮಾಣಕ್ಕಾಗಿ, ರೈತ ಮಹಿಳೆಯೊಬ್ಬರು ದಶಕಗಳ ಕಾಲ ಅಕ್ಕರೆಯಿಂದ ಬೆಳೆಸಿದ್ದ ನೂರಕ್ಕೂ ಹೆಚ್ಚು ಮರಗಳನ್ನು ಶನಿವಾರ (ಆಗಸ್ಟ್ 8) ಕತ್ತರಿಸಿ ಹಾಕಲಾಗಿದ್ದು, ಮರಗಳ ಮಾರಣಹೋಮ ಕಂಡು ಆ ಮಹಿಳೆ ಕಣ್ಣೀರಿಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.
ರೈತ ಮಹಿಳೆ ಸೆಲ್ವಿ ಮತ್ತು ದಂತ ವೈದ್ಯರಾಗಿರುವ ಅವರ ಮಗ ಬಾಲಮುರುಗನ್, ತಮ್ಮ ಜಮೀನಿನಲ್ಲಿ ಮಾವು, ತೇಗ, ಮಹೋಗಾನಿ ಮತ್ತು ಪರಂಗಿ ಸೇರಿದಂತೆ 100ಕ್ಕೂ ಹೆಚ್ಚು ಮರಗಳನ್ನು ನೈಸರ್ಗಿಕವಾಗಿ ಬೆಳೆಸಿದ್ದರು. ಕಳೆದ 10 ವರ್ಷಗಳಿಂದ ಬೆಳೆಸಲಾಗಿದ್ದ ಈ ಮರಗಳನ್ನು ಸೆಲ್ವಿ ಅವರು ತಮ್ಮ ದಿವಂಗತ ಪತಿಯ ನೆನಪಿಗಾಗಿ ಪೋಷಿಸಿಕೊಂಡು ಬರುತ್ತಿದ್ದರು.
ತ್ಯಾಗದುರ್ಗಂ ಪ್ರದೇಶಕ್ಕೆ ಹೈಟೆನ್ಷನ್ ವಿದ್ಯುತ್ ಟವರ್ ಮತ್ತು ಪ್ರಸರಣ ಮಾರ್ಗವನ್ನು ನಿರ್ಮಿಸಲು ತಮಿಳುನಾಡು ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ನಿಗಮದ ಅಧಿಕಾರಿಗಳು ಇತ್ತೀಚೆಗೆ ಈ ಜಮೀನನ್ನು ಪರಿಶೀಲಿಸಿದ್ದರು. ಈ ವೇಳೆ ಮರಗಳಿಗೆ ಹಾನಿಯಾಗದಂತೆ ವಿದ್ಯುತ್ ಮಾರ್ಗವನ್ನು ಸ್ವಲ್ಪ ಬದಲಾಯಿಸುವಂತೆ ಸೆಲ್ವಿ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು, ಇದೀಗ ಏಕಾಏಕಿ ಮರಗಳನ್ನು ಕಡಿದು ಹಾಕಿದ್ದಾರೆ.
ಸೆಲ್ವಿ ಮತ್ತು ಬಾಲಮುರುಗನ್ ಅವರ ಕಣ್ಣೆದುರೇ ಯಂತ್ರಗಳನ್ನು ಬಳಸಿ ಮರಗಳನ್ನು ಧರೆಗುರುಳಿಸಲಾಗಿದೆ. ಈ ವೇಳೆ ಸೆಲ್ವಿ ಅವರು ಮರಗಳನ್ನು ಅಪ್ಪಿಕೊಂಡು ಕಣ್ಣೀರಿಡುತ್ತಿದ್ದರೂ, ಪೊಲೀಸರು ಅವರನ್ನು ಬಲವಂತವಾಗಿ ಅಲ್ಲಿಂದ ಎಳೆದುಕೊಂಡು ಹೋಗಿದ್ದಾರೆ. ಈ ಅಮಾನವೀಯ ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸೆಲ್ವಿ, ಅಧಿಕಾರಿಗಳು ಮತ್ತು ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಒಂದೆಡೆ ಸರ್ಕಾರವೇ ಮರ ನೆಡುವ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತದೆ, ಮತ್ತೊಂದೆಡೆ ನಾವು 10 ವರ್ಷಗಳಿಂದ ಮಕ್ಕಳಂತೆ ಪೋಷಿಸಿದ ಮರಗಳನ್ನು ಈ ರೀತಿ ನಾಶಪಡಿಸುತ್ತಿದೆ,” ಎಂದು ಅವರು ಕಣ್ಣೀರಿಟ್ಟರು.
”ಕಡಿದು ಹಾಕಲಾದ ಮರಗಳ ಅಂದಾಜು ಮೌಲ್ಯ ₹2 ಕೋಟಿಗೂ ಅಧಿಕ. ಆದರೆ, ಟ್ಯಾಂಜೆಡ್ಕೊ (TANGEDCO) ಅಧಿಕಾರಿಗಳು ಕೇವಲ 7,000 ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ,” ಎಂದು ಬಾಲಮುರುಗನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇತರ ಜಿಲ್ಲೆಗಳಲ್ಲಿ ನೀಡಿರುವಂತೆ ನಮಗೂ ನ್ಯಾಯಯುತವಾಗಿ ಪರಿಹಾರ ಪಾವತಿಸಬೇಕು ಹಾಗೂ ಕೃಷಿ ಭೂಮಿಯಲ್ಲಿರುವ ಮರಗಳಿಗೆ ಹಾನಿಯಾಗದಂತೆ ಪರ್ಯಾಯ ಮಾರ್ಗಗಳನ್ನು ರೂಪಿಸಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.




