ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆ ಇದೆ ಎಂದು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯಾದ್ಯಂತ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಆಗಸ್ಟ್ 30 ರೊಳಗೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೆಪ್ಟೆಂಬರ್ ವೇಳೆಗೆ ಸರ್ಕಾರವು ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯಿದೆ” ಎಂದು ಹೇಳಿದ್ದಾರೆ.
“ಸುಮಾರು 130 ತಾಲೂಕುಗಳು ಬರಗಾಲದ ಪರಿಸ್ಥಿತಿ ಎದುರಿಸುತ್ತಿವೆ. ಬೆಳೆ ಸಮೀಕ್ಷೆ ನಡೆಸದೆ ಅವುಗಳನ್ನು ಬರಪೀಡಿತ ಎಂದು ಘೋಷಿಸಲು ಸಾಧ್ಯವಿಲ್ಲ. ಅಧಿಕಾರಿಗಳು ರಾಜ್ಯಾದ್ಯಂತ ಸಮೀಕ್ಷೆ ನಡೆಸುತ್ತಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ” ಎಂದು ಹೇಳಿದ್ದಾರೆ.
35,000 ರೈತರಿಗೆ 35.9 ಕೋಟಿ ರೂಪಾಯಿ ಬೆಳೆ ಪರಿಹಾರ
ಬೀಜ ಅಥವಾ ರಸಗೊಬ್ಬರಗಳ ಕೊರತೆಯಿಲ್ಲದಿದ್ದರೂ, ಈಗ ಮಳೆಯ ಕೊರತೆಯಿಂದ ರೈತರು ಬೆಳೆ ನಷ್ಟ ಎದುರಿಸುತ್ತಿದ್ದಾರೆ. ಜಲಾಶಯಗಳು, ಬೋರ್‌ವೆಲ್‌ಗಳು ಮತ್ತು ಕೃಷಿ ಹೊಂಡಗಳಂತಹ ನೀರಾವರಿ ಸೌಲಭ್ಯಗಳು ಇರುವಲ್ಲೆಲ್ಲ ಸಮಸ್ಯೆಗಳಿಲ್ಲ. ಮಳೆಯನ್ನೇ ಅವಲಂಬಿಸಿರುವವರು ಮಾತ್ರ ಸಂಕಷ್ಟದಲ್ಲಿದ್ದಾರೆ. ಮುಂದಿನ ವಾರದಲ್ಲಿ ಉತ್ತಮ ಮಳೆಯಾದರೆ ಕನಿಷ್ಠ ಶೇ.50ರಷ್ಟು ಬೆಳೆದ ಬೆಳೆಗಳನ್ನು ಉಳಿಸಬಹುದು. ಆದರೆ, ಅಂತಹ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಅವರು ಹೇಳಿದ್ದಾರೆ.
”ಹಲವು ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದೆ. ಫಸಲ್ ಬಿಮಾ ಯೋಜನೆಯಡಿ ಬಾಗಲಕೋಟೆ, ಗದಗ, ಬೆಳಗಾವಿ ಮತ್ತು ತುಮಕೂರಿನ 194 ಗ್ರಾಮ ಪಂಚಾಯಿತಿಗಳ 35 ಸಾವಿರಕ್ಕೂ ಹೆಚ್ಚು ರೈತರಿಗೆ 35.9 ಕೋಟಿ ರೂ.ಗಳ ಪರಿಹಾರ ಸಿಗಲಿದೆ” ಎಂದು ತಿಳಿಸಿದ್ದಾರೆ.