- ಸಿಎಂ ವಿರುದ್ದ ಆಕ್ಷೇಪಾರ್ಹ ಹೇಳಿಕೆ ಹಿನ್ನೆಲೆಯಲ್ಲಿ ದೂರು
- ಬಿಜೆಪಿ ಕಾನೂನು ಘಟಕದಿಂದ ಚುನಾವಣಾ ಆಯೋಗಕ್ಕೆ ಮನವಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ‘ಆಧುನಿಕ ಶಕುನಿʼಎಂದು ಕರೆದಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ.
ಆಕ್ಷೇಪಾರ್ಹ ಪದ ಬಳಕೆಯಿಂದ ಮುಖ್ಯಮಂತ್ರಿಗಳ ಘನತೆಗೆ ಸುರ್ಜೇವಾಲ ಚ್ಯುತಿ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಚುನಾವಣಾ ಆಯುಕ್ತರಲ್ಲಿ ರಾಜ್ಯ ಬಿಜೆಪಿ ಮನವಿ ಮಾಡಿದೆ.
ಬಿಜೆಪಿ ನೀಡಿರುವ ದೂರಿನ ಸಾರಾಂಶ ಹೀಗಿದೆ.
ಸುರ್ಜೇವಾಲಾ ಅವರು “ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಧುನಿಕ ಶಕುನಿ, ಮೀಸಲಾತಿ ಮೂಲಕ ಜನರನ್ನು ಒಡೆದು ಸಂಘರ್ಷ ಸೃಷ್ಟಿಸಿದ್ದಾರೆʼಎಂದು ಹೇಳಿಕೆ ನೀಡಿದ್ದಾರೆ.
ಅದು ಪತ್ರಿಕೆಗಳಲ್ಲೂ ಪ್ರಕಟವಾಗಿದೆ. ಈ ಹೇಳಿಕೆಯಿಂದ ಮುಖ್ಯಮಂತ್ರಿಗಳ ಗೌರವಕ್ಕೆ ಚ್ಯುತಿ ಉಂಟಾಗಿದೆ. ಈ ಹೇಳಿಕೆಯಿಂದ ಪಕ್ಷದ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗುವ ಮತ್ತು ಕೆರಳುವ ಸಂಭವವಿದೆ.
ಆದ್ದರಿಂದ ಇಂತಹ ಹೇಳಿಕೆ ಕೊಟ್ಟ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಕೋರಿದೆ.
ಇದರ ಜೊತೆಗೆ ತಿರುಪತಿ ತಿರುಮಲ ದೇವಸ್ಥಾನದ ವಿಚಾರದಲ್ಲಿ ಆರ್ಬಿಐ ವಿಧಿಸಿದ ದಂಡ ವಿಚಾರವನ್ನೂ ಸುರ್ಜೇವಾಲ ತಿರುಚಿದ್ದಾರೆ ಎಂದು ಆರೋಪಿಸಿ ಮತ್ತೊಂದು ದೂರನ್ನು ಆಯುಕ್ತರಿಗೆ ಬಿಜೆಪಿ ದಾಖಲಿಸಿತು.
ಮೋದಿ ಸರಕಾರ ತಿರುಪತಿ ಮೇಲೆ ದಾಳಿ ಮಾಡಿಸಿದೆ ಎಂದು ಸುಳ್ಳು ಆರೋಪ ಮಾಡಿ ಪ್ರಧಾನಿಗಳಿಗೆ ಅಪಮಾನ ಮಾಡಿದ್ದಾರೆ. ಬಿಜೆಪಿ ವಿರುದ್ಧ ದುರುದ್ದೇಶಪೂರ್ವಕ ಹೇಳಿಕೆಯನ್ನು ಸುರ್ಜೇವಾಲ ನೀಡಿದ್ದಾರೆ ಎಂದು ಬಿಜೆಪಿ ದೂರಿದೆ.
ಈ ಸುದ್ದಿ ಓದಿದ್ದೀರಾ?:ಕೆಲವರಿಗೆ ಟಿಕೆಟ್ ತಪ್ಪಬಹುದು, ಪಕ್ಷ ಬಿಟ್ಟು ಹೋಗಲೂಬಹುದು: ಜಗದೀಶ್ ಶೆಟ್ಟರ್
ತಿರುಪತಿ ತಿರುಮಲ ದೇವಸ್ಥಾನಕ್ಕೆ ಆರ್ಬಿಐ ವಿಧಿಸಿದ್ದ ದಂಡವನ್ನು ಮೋದಿ ಸರಕಾರ ತಿರುಪತಿ ಮೇಲೆ ದಾಳಿ ಮಾಡಿಸಿ 3.10 ಕೋಟಿ ದಂಡ ವಿಧಿಸಿದೆ ಎಂದು ಸುರ್ಜೇವಾಲ ಸುಳ್ಳು ಆರೋಪ ಮಾಡಿದ್ದಾರೆ.
ಆ ಮೂಲಕ ಜನರ ಧಾರ್ಮಿಕ ಭಾವನೆಗಳು ಕೆರಳುವಂತೆ ಮಾಡಿದ್ದಾರೆ.ಜೊತೆಗೆ ಸರಕಾರ ಮತ್ತು ಪಕ್ಷದ ವಿರುದ್ಧ ಜನತೆಯನ್ನು ಎತ್ತಿ ಕಟ್ಟುವ ಹುನ್ನಾರ ಮಾಡಿದ್ದಾರೆ.
ಈ ರೀತಿಯ ಸುಳ್ಳು ಹೇಳಿಕೆಗಳು ಮುಂಬರುವ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಸಂಭವವಿದೆ. ಇದರಿಂದ ಸುರ್ಜೇವಾಲ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ನೀಡಿದ ದೂರಿನಲ್ಲಿ ತಿಳಿಸಿದೆ.