ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ, ಸುಟ್ಟರೇ ನೊಸಲಿಗೆ ವಿಭೂತಿಯಾದೆ ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ, ಆದರೆ ನೀವಾರಿಗಾದಿರೋ ಬಿಜೆಪಿ ಸಂಸದರೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಖ್ಯಾತ ಕವಿ ಎಸ್ ಜಿ. ನರಸಿಂಹಾಚಾರ್ ಅವರ ಕವನವನ್ನು ಹಿನ್ನೆಲೆಯನ್ನಾಗ ಇಟ್ಟುಕೊಂಡು ಅವರು ರಾಜ್ಯದ ಸಮಸ್ಯೆಗಳ ಪ್ರಶ್ನೆ ಎದುರಾದಾಗ ಬಿಜೆಪಿ ಸಂಸದರು ಮೌನಕ್ಕೆ ಶರಣಾಗಿದ್ದಾರೆ ಎಂದು ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡು ಬಿಜೆಪಿ ಸಂಸದರನ್ನು ಕಟುವಾಗಿ ಟೀಕಿಸಿದ್ದಾರೆ.
“ನೆರೆ ಬಂದಾಗ ಯಡಿಯೂರಪ್ಪನವರು ವೇದಿಕೆ ಮೇಲೆಯೇ ನೆರೆ ಪರಿಹಾರಕ್ಕೆ ಪ್ರಧಾನಿಗೆ ಆಗ್ರಹಿಸಿದ್ದಾಗಲೂ ಬಿಜೆಪಿ ಸಂಸದರು ಕರ್ನಾಟಕದ ಪರ ಬಾಯಿ ಬಿಡಲಿಲ್ಲ. ಜಿಎಸ್‌ಟಿ ಪರಿಹಾರ, ವಿಶೇಷ ಅನುದಾನದಲ್ಲಿನ ಅನ್ಯಾಯದ ಕುರಿತು ಬೊಮ್ಮಾಯಿಯವರು ಮಾತಾಡಿದಾಗಲೂ ಬಿಜೆಪಿ ಸಂಸದರು ಬಾಯಿ ಬಿಡಲಿಲ್ಲ.ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕವನ್ನು ಕಡೆಗಣಿಸಿದಾಗಲೂ ಬಿಜೆಪಿ ಸಂಸದರು ತುಟಿ ಬಿಚ್ಚಲಿಲ್ಲ” ಎಂದು ವಾಗ್ದಾಳಿ ನಡೆಸಿದರು.
https://x.com/PriyankKharge/status/1777200754656526632
“ಕೋವಿಡ್ ಸಮಯದಲ್ಲಿ ಆಕ್ಸಿಜನ್, ರೆಮಿಡಿಸಿವಿರ್, ವ್ಯಾಕ್ಸಿನ್ ಹಂಚಿಕೆಯಲ್ಲಿ ರಾಜ್ಯವನ್ನು ಕಡೆಗಣಿಸಿದಾಗಲೂ ಬಿಜೆಪಿ ಸಂಸದರು ಮಾತಾಡಲಿಲ್ಲ. ಯಾವುದೇ ವಿಷಯದಲ್ಲೂ ಕರ್ನಾಟಕದ ಪರವಾಗಿ ಸಂಸದರ ನಿಯೋಗ ಕೇಂದ್ರ ಸರ್ಕಾರವನ್ನು ಭೇಟಿಯಾದ ಉದಾಹರಣೆಯೇ ಇಲ್ಲ.ಈಗ ಭೀಕರ ಬರ ಎದುರಿಸುತ್ತಿರುವ ರಾಜ್ಯಕ್ಕೆ ಬರ ಪರಿಹಾರ ಕೇಳುವುದಕ್ಕೂ ಬಿಜೆಪಿ ಸಂಸದರ ಧ್ವನಿ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ವಾಧಿಕಾರದತ್ತ ದೇಶ ದಾಪುಗಾಲು ಹಾಕುತ್ತಿಲ್ಲವೇ? ಅವರಿಗಾದದ್ದು ನಮಗಾಗುವುದಿಲ್ಲವೇ?
“ಜಗತ್ತಿನಲ್ಲಿ ಪ್ರತಿ ವಸ್ತುವೂ ಒಂದಿಲ್ಲೊಂದು ಉಪಯೋಗಕ್ಕೆ ಬರುತ್ತವೆ, ಆದರೆ ಯಾವುದೇ ಪ್ರಯೋಜನಕ್ಕೆ ಬಾರದ ಬಿಜೆಪಿ ಸಂಸದರು ಕನ್ನಡಿಗರ ಪಾಲಿಗೆ ಇದ್ದೂ ಇಲ್ಲದಂತಿರುವ ನಿರುಪಯೋಗಿ ಜೀವಿಗಳು! ಎಂದು ಖರ್ಗೆ ಜರಿದರು.