ಚುನಾವಣೆ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಸೋಮವಾರ ಮುಕ್ತಾಯಗೊಂಡಿದ್ದು, ನಾಲ್ವರು ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ಸು ಪಡೆದಿದ್ದು, ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂತಿಮ ಕಣದಲ್ಲಿ 20 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ
ಮಾರ್ಚ್ 28ರಿಂದ ಪ್ರಾರಂಭವಾದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಎಪ್ರಿಲ್ 4ಕ್ಕೆ ಮುಗಿದಿದೆ. ಪರಿಶೀಲನೆ ಎಪ್ರಿಲ್ 5ರಂದು ಮುಗಿದಿದ್ದು, ವಾಪಾಸ್ ಪಡೆಯಲು ಎಪ್ರಿಲ್ 8ರ ಮಧ್ಯಾಹ್ನ 3ರವರೆಗೆ ಸಮಯ ನಿಗದಿಯಾಗಿತ್ತು.
ನಾಲ್ವರು ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ಸು ಪಡೆದಿದ್ದು, ಅಂತಿಮ ಕಣದಲ್ಲಿ 20 ಅಭ್ಯರ್ಥಿಗಳು ಉಳಿದುಕೊಂಡಿದ್ದು ಅಧಿಕೃತವಾಗಿ ಮತದಾರರ ಮನವೊಲಿಕೆಗೆ ಕಸರತ್ತು ಪ್ರಾರಂಭವಾಗಿದೆ.
ಭಾರತೀಯ ಜನತಾ ಪಾರ್ಟಿಯ ಗೋವಿಂದ ಎಂ ಕಾರಜೋಳ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಿ.ಎನ್.ಚಂದ್ರಪ್ಪ, ಬಹುಜನ ಸಮಾಜ ಪಾರ್ಟಿಯ ಅಶೋಕ ಚಕ್ರವರ್ತಿ, ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ನರಸಿಂಹರಾಜು ಸಿ.ಎನ್, ಉತ್ತಮ ಪ್ರಜಾಕೀಯ ಪಾರ್ಟಿಯ ರಮೇಶ್ ನಾಯ್ ಟಿ, ಇಂಡಿಯನ್ ಮೂವ್‌ಮೆಂಟ್ ಪಾರ್ಟಿಯ ಬಿ.ಟಿ.ರಾಮಸುಬ್ಬಯ್ಯ, ಕರುನಾಡ ಸೇವಕರ ಪಕ್ಷದ ಶಬರೀಶ್ ಆರ್, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಸುಜಾತ ಡಿ, ಪಕ್ಷೇತರ ಅಭ್ಯರ್ಥಿಗಳಾದ ಅಮೃತ ರಾಜ, ಗಣೇಶ್, ತುಳಸಿ ಹೆಚ್, ಎಂ.ಪಿ.ದಾರಕೇಶ್ವರಯ್ಯ, ಕೆ.ನರಸಿಂಹಮೂರ್ತಿ, ನಾಗರಾಜಪ್ಪ, ಭೂತರಾಜ ವಿ.ಎಸ್. ಮಂಜುನಾಥ ಸ್ವಾಮಿ ಟಿ, ರಘುಕುಮಾರ್ ಎಸ್, ಬಿ.ವೆಂಕಟೇಶ್, ಶ್ರೀನಿವಾಸ ಎಸ್.ಹೆಚ್, ಸುಧಾಕರ. ಆರ್ ಅವರು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಪರಿಶಿಷ್ಟ ಜಾತಿಗೆ ಮೀಸಲಾದ ಕ್ಷೇತ್ರದಲ್ಲಿ ಕಳೆದ ಮೂರ್ನಾಲ್ಕು ಸಾರ್ವತ್ರಿಕ ಚುನಾವಣೆಗಳಂತೆ ಜಿಲ್ಲೆಯ ಹೊರಗಿನ ಅಭ್ಯರ್ಥಿಗಳೇ ಪ್ರಮುಖ ರಾಷ್ಟ್ರೀಯ ಪಕ್ಷಗಳ ಹುರಿಯಾಳುಗಳಾಗಿ ಕಣಕ್ಕಿಳಿದಿದ್ದು, ಕಾಂಗ್ರೆಸ್‌ನಿಂದ ಮಾಜಿ ಸಂಸದ ಬಿ ಎನ್ ಚಂದ್ರಪ್ಪ, ಭಾರತೀಯ ಜನತಾ ಪಕ್ಷದಿಂದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಚಂದ್ರಪ್ಪ ಅವರು ಟಿಕೆಟ್ ಹಂಚಿಕೆ ಮುನ್ನ ಸಾಕಷ್ಟು ಪೈಪೋಟಿ ಎದುರಿಸಿದರೂ, ಬಿ ಫಾರಂ ಪಡೆದ ನಂತರ ಪಕ್ಷದ ಎಲ್ಲರೂ ಒಗ್ಗೂಡಿ ಪ್ರಚಾರ ಕಾರ್ಯ ಕೈಗೊಂಡಿದ್ದು ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುವುದು ಗೆಲುವಿಗೆ ಸಹಕಾರಿಯಾಗುತ್ತದೆ ಎನ್ನಲಾಗಿದೆ.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸಾಕಷ್ಟು ಪ್ರತಿರೋಧದ ನಡುವೆ ಟಿಕೆಟ್ ಪಡೆದಿದ್ದು, ಕ್ಷೇತ್ರಕ್ಕೆ ಆಗಮಿಸಿದ ವೇಳೆ ಸ್ವಪಕ್ಷೀಯರಿಂದಲೇ ಗೋಬ್ಯಾಕ್ ಘೋಷಣೆ ಎದುರಿಸಿದ್ದರು. ನಂತರ ರಾಜ್ಯ ನಾಯಕರು ಮಧ್ಯ ಪ್ರವೇಶಿಸಿ ಟಿಕೆಟ್ ಆಕಾಂಕ್ಷಿ ರಘು ಚಂದನ್ ಹಾಗೂ ತಂದೆ ಶಾಸಕ ಚಂದ್ರಪ್ಪ ಅವರ ಮನವೊಲಿಸಿ ಬಂಡಾಯ ಶಮನಗೊಳಿಸಿದ್ದರು. ಆದರೂ ಬಿಜೆಪಿಗೆ ಒಳ ಏಟಿನ ಭಯ ಕಾಡುತ್ತಿದೆ. ಆದರೂ ಗೆಲುವಿಗೆ ಬಿಜೆಪಿ ಯಾವ ತಂತ್ರ ಹೆಣೆಯುತ್ತದೆ ಎಂದು ಕಾದುನೋಡಬೇಕಾಗಿದೆ.
ಭೋವಿ ಸಮಾಜದ ಮಾಜಿ ಸಚಿವ ಹೊಸದುರ್ಗದ ಗೂಳಿಹಟ್ಟಿ ಶೇಖರ್ ಪ್ರತಿ ಬಾರಿಯಂತೆ ಈ ಬಾರಿಯೂ ವಿರೋದ ವ್ಯಕ್ತಪಡಿಸಿದ್ದು, ಸಮುದಾಯದ ಮತಗಳ ವಿಂಗಡನೆಯಾಗಲಿದೆ ಎನ್ನಲಾಗಿದೆ.
ಪಕ್ಷೇತರ ಹಾಗೂ ಇತರ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಇತರೆ ಹದಿನೆಂಟು ಅಭ್ಯರ್ಥಿಗಳು ಕಣದಲ್ಲಿದ್ದು , ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸವಾಲೆಸೆಯುವ ಸಾಮರ್ಥ್ಯ ಯಾವುದೇ ಅಭ್ಯರ್ಥಿಗಳ ಬಳಿಯಿಲ್ಲ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ.
ಈ ಬಾರಿ ಚಿತ್ರದುರ್ಗದ ಮತದಾರರ ಚಿತ್ತ ಯಾರತ್ತ ಎನ್ನುವುದನ್ನು ತಿಳಿಯಲು ಜೂನ್ 4ರವರೆಗೆ ಕಾಯಲೇಬೇಕಾಗಿದೆ. ಏನೇ ಆಗಲಿ ಕ್ಷೇತ್ರದ ಮತ್ತು ಮತದಾರರ ಹಿತ ಕಾಯುವ ಅಭ್ಯರ್ಥಿ ಸಂಸದರಾಗಿ ಆಯ್ಕೆಯಾಗಿ ಬರಲಿ ಎನ್ನುವುದು ಚಿತ್ರದುರ್ಗದ ಸಾಮಾನ್ಯರ ಅಭಿಪ್ರಾಯ.
ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು