ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ ಮಾಡಬೇಕು" ಎಂಬುದು ಈ ಪ್ರಶಸ್ತಿಯ ಧ್ಯೇಯವಾಕ್ಯ.
ಸದ್ಯದಲ್ಲೇ ನೊಬೆಲ್ ಪ್ರಶಸ್ತಿಗಳು ಘೋಷಣೆಗೊಳ್ಳಲಿದೆ. ಹಾಗೆಯೇ ಇಗ್ ನೊಬೆಲ್ ಎಂಬ ಪ್ರಶಸ್ತಿಯು ಇದೆ ಅನ್ನುವುದು ಹಲವರಿಗೆ ಗೊತ್ತಿಲ್ಲದೇ ಇರಬಹುದು. ಈ ವಿಶಿಷ್ಟವಾದ ಪ್ರಶಸ್ತಿ ನೊಬೆಲ್ ಪ್ರಶಸ್ತಿಯ ಲೇವಡಿಯಾಗಿ ಕಾಣುವ ಒಂದು ರೂಪಾಂತರ. ಇದನ್ನು 1991ರಲ್ಲಿ ಮಾರ್ಕ್ ಅಬ್ರಹಾಮ್ಸ್ ಆರಂಭಿಸಿದರು. ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. “ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ ಮಾಡಬೇಕು” (First make people laugh, and then make them think) ಎಂಬುದು ಈ ಪ್ರಶಸ್ತಿಯ ಧ್ಯೇಯವಾಕ್ಯ. ಇಲ್ಲಿ ನೀಡಲಾಗುವ ಪ್ರಶಸ್ತಿಗಳ ಉದ್ದೇಶ ಕೇವಲ ಗೇಲಿ ಮಾಡುವುದಲ್ಲ; ವಿಜ್ಞಾನಿಗಳು ಕೈಗೊಂಡ ನಿಜವಾದ, ಆದರೆ ಮೇಲುನೋಟಕ್ಕೆ ತೀರಾ ವಿಚಿತ್ರವೆನಿಸುವ ಸಂಶೋಧನೆಗಳನ್ನು ಇದು ಗೌರವಿಸುತ್ತದೆ. ಇಂಗ್ಲಿಷಿನ ‘ಇಗ್ ನೊಬೆಲ್’ (Ig noble- ಅಪ್ರತಿಷ್ಠಿತ ಅಥವಾ ಸಾಮಾನ್ಯ) ಎಂಬ ಪದದ ಧ್ವನಿಯನ್ನಿಟ್ಟುಕೊಂಡು, ಆಲ್ಫ್ರೆಡ್ ನೊಬೆಲ್ ಅವರ ಹೆಸರಿಗೆ ಪ್ರಾಸಬದ್ಧವಾಗಿ ಈ ಪ್ರಶಸ್ತಿಯನ್ನು ‘ಇಗ್ನೊಬೆಲ್’ ಎಂದು ಕರೆಯಲಾಗಿದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (ಅರ್ವಿನ್) ಮನಶ್ಶಾಸ್ತ್ರಜ್ಞ ಪಾಲ್ ಕೆ. ಪಿಫ್ ಮತ್ತು ಅವರ ತಂಡ ಕೈಗೊಂಡ ಸಂಶೋಧನೆಗಳಿಗೆ ಅರ್ಥಶಾಸ್ತ್ರ ವಿಭಾಗದ ಇಗ್ ನೊಬೆಲ್ ಪ್ರಶಸ್ತಿ ಲಭಿಸಿದೆ. ಸಂಪತ್ತು ಮತ್ತು ಉನ್ನತ ಸಾಮಾಜಿಕ ಅಂತಸ್ತುಗಳು ಮನುಷ್ಯನ ನೈತಿಕತೆ, ಸಹಾನುಭೂತಿ ಹಾಗೂ ಸಾಮಾಜಿಕ ನಡವಳಿಕೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಇವರ ಅಧ್ಯಯನ ಪರಿಶೀಲಿಸುತ್ತದೆ. ಈ ಬಗ್ಗೆ ಅವರು 2012ರಲ್ಲಿ Higher Social Class Predicts Increased Unethical Behavior ಎಂಬ ಹೆಸರಿನಲ್ಲಿ ಪ್ರಕಟಿಸಿದ ಸಂಶೋದನಾ ಲೇಖನ ವಿಶ್ವಾದ್ಯಂತ ಗಮನ ಸೆಳೆದಿತ್ತು.
ರಸ್ತೆ ಸಂಚಾರ ಮತ್ತು ನಡವಳಿಕೆ ಅಧ್ಯಯನ
ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ ಹೋಲಿಸಿದರೆ, ಸಮಾಜದ ಉನ್ನತ ವರ್ಗದ ಹಿನ್ನೆಲೆಯಿಂದ ಬಂದವರು ಸ್ವಾರ್ಥ ಮತ್ತು ಅನೈತಿಕತೆಯಿಂದ ವರ್ತಿಸುವ ಸಾಧ್ಯತೆ ಹೆಚ್ಚು ಎಂಬುದನ್ನು ಪಿಫ್ ಅವರ ಸಂಶೋಧನೆ ಪ್ರಾಯೋಗಿಕವಾಗಿ ದಾಖಲಿಸಿದೆ. ಅದಕ್ಕಾಗಿ ಅವರು ರಸ್ತೆಸಂಚಾರಕ್ಕೆ ಸಂಬಂಧಿಸಿದಂತೆ ಸಮಾಜದ ವಿವಿಧ ಸ್ತರದವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಗಮನಿಸಿದ್ದಾರೆ.
ಜನನಿಬಿಡವಾದ ನಾಲ್ಕು ರಸ್ತೆಗಳ ವೃತ್ತಗಳಲ್ಲಿ ಸಂಶೋಧಕರು ಪೊದೆಗಳ ಹಿಂದೆ ನಿಂತು ವಿವಿಧ ವಾಹನಗಳ ಚಾಲಕರ ವರ್ತನೆಗಳನ್ನು ಗಮನಿಸಿದರು. ಅದಕ್ಕಾಗಿ ವಾಹನದ ಬೆಲೆ ಮತ್ತು ಮಾದರಿಯನ್ನು ಆಧಾರವಾಗಿಟ್ಟುಕೊಂಡರು. ಬಿಎಂಡಬ್ಲ್ಯು, ಮರ್ಸಿಡಿಸ್-ಬೆಂಝ್‌ನಂತಹ ದುಬಾರಿ ಐಷಾರಾಮಿ ಕಾರುಗಳ ಚಾಲಕರು ಇತರ ವಾಹನಗಳ ಹಕ್ಕನ್ನು ಕಸಿದುಕೊಂಡು, ತಮ್ಮ ಸರದಿಯನ್ನು ಮುರಿದು ನುಗ್ಗುವ ಸಾಧ್ಯತೆ ಸಾಮಾನ್ಯ ಕಾರುಗಳ ಚಾಲಕರಿಗಿಂತ ನಾಲ್ಕು ಪಟ್ಟು ಹೆಚ್ಚಾಗಿತ್ತು.
ಪಾದಚಾರಿಗಳನ್ನು ಕುರಿತಂತೆ ಇವರ ವರ್ತನೆಗಳನ್ನು ಗಮನಿಸಲು ಪಾದಚಾರಿಗಳು ರಸ್ತೆ ದಾಟುವ ಜೀಬ್ರಾ ಕ್ರಾಸಿಂಗ್‌ಗಳಲ್ಲಿ ಸ್ವತಃ ಸಂಶೋಧಕರೇ ಪಾದಚಾರಿಗಳಾಗಿ ರಸ್ತೆಗಿಳಿದು ಇವರ ನಡವಳಿಕೆಗಳನ್ನು ಗಮನಿಸಿದರು. ದುಬಾರಿ ಕಾರುಗಳ ಚಾಲಕರಲ್ಲಿ ಶೇ. 46ರಷ್ಟು ಮಂದಿ ನಿಯಮ ಪಾಲಿಸದೆ ಪಾದಚಾರಿಗಳನ್ನು ಲೆಕ್ಕಿಸದೆ ಮುಂದೆ ಸಾಗಿದರು. ಆದರೆ ಅಗ್ಗದ ಮತ್ತು ಹಳೆಯ ಕಾರುಗಳ ಚಾಲಕರೆಲ್ಲರೂ ನಿಯಮಬದ್ಧವಾಗಿ ವಾಹನ ನಿಲ್ಲಿಸಿ, ಪಾದಚಾರಿಗಳಿಗೆ ದಾರಿ ಮಾಡಿಕೊಟ್ಟರು.
ಇದನ್ನು ಓದಿದ್ದೀರಾ?: ಪ್ರಜಾಪ್ರಭುತ್ವದ ಹೃದಯವೇ ಅಪಾಯದಲ್ಲಿದೆ: ಎಸ್‌ಐಆರ್ ವಿರುದ್ಧ ಸುಪ್ರೀಂ ನಿವೃತ್ತ ನ್ಯಾಯಮೂರ್ತಿ ನಾರಿಮನ್ ಕಳವಳ
ಅವರು ಮಾಡಿದ ಇನ್ನೊಂದು ಪ್ರಯೋಗ ಪ್ರಖ್ಯಾತವಾದ ಮಕ್ಕಳ ಕ್ಯಾಂಡಿ ಪರೀಕ್ಷೆ. ಈ ಪ್ರಯೋಗದಲ್ಲಿ ಭಾಗವಹಿಸುವುದಕ್ಕೆ ಪರೀಕ್ಷೆಗೆ ವಿವಿಧ ಸಾಮಾಜಿಕ ಮತ್ತು ಆರ್ಥಿಕ ವರ್ಗಗಳ ಜನರನ್ನು ಆಹ್ವಾನಿಸಲಾಗಿತ್ತು. ಪ್ರಯೋಗಾಲಯದಲ್ಲಿ ಒಂದು ಮೇಜಿನ ಮೇಲೆ ಒಂದು ಡಬ್ಬದಲ್ಲಿ ಕ್ಯಾಂಡಿಗಳನ್ನು ಇಡಲಾಗಿತ್ತು. ಅಧ್ಯಯನ ಮುಗಿಸಿದ ಮೇಲೆ ಮರಳಿಹೋಗುವಾಗ, “ಬೇಕಿದ್ದರೆ ಆ ಜಾಡಿಯಿಂದ ಒಂದೆರಡು ಕ್ಯಾಂಡಿ ತೆಗೆದುಕೊಳ್ಳಬಹುದು” ಎಂದು ಬಂದವರಿಗೆ ತಿಳಿಸಲಾಯಿತು.
ಜೊತೆಗೆ ಸಂಶೋಧಕರು ಇನ್ನೂ ಒಂದು ಮಾತನ್ನು ಬಂದವರಿಗೆ ಸ್ಪಷ್ಟವಾಗಿ ಹೇಳಿದ್ದರು: “ಈ ಡಬ್ಬದಲ್ಲಿರುವ ಕ್ಯಾಂಡಿಗಳು ಪಕ್ಕದ ಕೋಣೆಯಲ್ಲಿ ಮತ್ತೊಂದು ಸಂಶೋಧನೆಗಾಗಿ ಬರುವ ಪುಟ್ಟ ಮಕ್ಕಳಿಗಾಗಿ ಇಡಲಾಗಿದೆ.”
ಇಲ್ಲಿ ಸಂಶೋಧಕರ ಉದ್ದೇಶ ವ್ಯಕ್ತಿಗಳು ಎಷ್ಟು ಸಿಹಿ ತಿನ್ನುತ್ತಾರೆ ಎಂದು ನೋಡುವುದಾಗಿರಲಿಲ್ಲ; ಮಕ್ಕಳಿಗಾಗಿ ಮೀಸಲಿಟ್ಟ ತಿಂಡಿಯನ್ನು ಯಾರು ಎಷ್ಟು ತೆಗೆದುಕೊಳ್ಳುತ್ತಾರೆ ಎಂಬುದನ್ನು ಗಮನಿಸಿ ಅವರಲ್ಲಿರುವ ಸಾಮಾಜಿಕ ಸಂಕೋಚ ಮತ್ತು ಕಾಳಜಿಯನ್ನು ಅಳೆಯುವುದಾಗಿತ್ತು.
ಅಂತಿಮವಾಗಿ ಗಮನಿಸಿದಾಗ ತಾವು ಶ್ರೀಮಂತರೆಂದು ಗುರುತಿಸಿಕೊಂಡಿದ್ದ ವ್ಯಕ್ತಿಗಳು, ಸಾಮಾನ್ಯ ಮತ್ತು ಮಧ್ಯಮ ವರ್ಗದವರಿಗಿಂತ ಎರಡು ಪಟ್ಟು ಹೆಚ್ಚು ಕ್ಯಾಂಡಿಗಳನ್ನು ಎತ್ತಿಕೊಂಡರು. ಮಕ್ಕಳ ಪಾಲಿಗಿಟ್ಟ ತಿಂಡಿಯನ್ನು ಹೆಚ್ಚು ತೆಗೆದುಕೊಳ್ಳುವುದು ತಪ್ಪು ಎಂಬ ಹಿಂಜರಿಕೆಯಾಗಲಿ, ಸಂಕೋಚವಾಗಲಿ ಅವರಲ್ಲಿ ಕಂಡುಬರಲಿಲ್ಲ. ಸಾರ್ವಜನಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುವಾಗ, ಹೆಚ್ಚು ಸಂಪತ್ತಿರುವವರಲ್ಲಿ “ಇದು ನನಗೂ ಸಿಗಬೇಕು, ತೆಗೆದುಕೊಳ್ಳುವ ಹಕ್ಕು ನನಗಿದೆ” ಎಂಬ ಭಾವನೆ ಬೇಗನೆ ಮೂಡುತ್ತದೆ. ಪರಿಣಾಮವಾಗಿ, ಮಕ್ಕಳ ಹಿತಾಸಕ್ತಿಯನ್ನು ಕಡೆಗಣಿಸಿಯಾದರೂ ತಮ್ಮ ಸ್ವಾರ್ಥವನ್ನು ತೃಪ್ತಿಪಡಿಸಿಕೊಳ್ಳಲು ಅವರು ಹಿಂಜರಿಯುವುದಿಲ್ಲ ಎಂಬುದನ್ನು ಈ ಪರೀಕ್ಷೆ ತೋರಿಸಿತು.
ಸಂಪತ್ತು ನಡವಳಿಕೆಯನ್ನು ಏಕೆ ಬದಲಾಯಿಸುತ್ತದೆ?
ಇಂತಹ ನಡವಳಿಕೆಗಳು ಹುಟ್ಟು ದುಷ್ಟತನದಿಂದ ಬಂದಿದ್ದಲ್ಲ; ಬದಲಿಗೆ ಹಣ ಮತ್ತು ಸಹಾನುಭೂತಿಯ ನಡುವೆ ಬೆಳೆಯುವ ಕಂದಕದಿಂದ ಉಂಟಾಗುತ್ತವೆ ಎಂದು ಪಿಫ್ ವಿವರಿಸುತ್ತಾರೆ. ಶ್ರೀಮಂತ ವ್ಯಕ್ತಿಗಳು “ದುರಾಶೆ ಕೆಟ್ಟದ್ದಲ್ಲ, ಅದು ಪ್ರಗತಿಗೆ ಪೂರಕ” ಹಾಗೂ “ಸ್ವಾರ್ಥ ಸಾಧನೆಯೇ ಜೀವನದ ಪ್ರಮುಖ ಪ್ರೇರಕ ಶಕ್ತಿ” ಎಂಬ ಮನಸ್ಥಿತಿಯನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಹಣವಿದ್ದಾಗ ದಿನನಿತ್ಯದ ಸಮಸ್ಯೆಗಳನ್ನು ಹಣದ ಬಲದಿಂದಲೇ ಬಗೆಹರಿಸಿಕೊಳ್ಳಬಹುದು. ಹಾಗಾಗಿ ಶ್ರೀಮಂತರಿಗೆ ಬದುಕಿನ ಉಳಿವಿಗೆ ಸಮಾಜದ ಇತರರ ನೆರವಾಗಲಿ, ಪರಸ್ಪರ ಸಹಕಾರದ ಸಾಮಾಜಿಕ ವ್ಯವಸ್ಥೆಯಾಗಲಿ ಅಷ್ಟಾಗಿ ಬೇಕಾಗುವುದಿಲ್ಲ ಎನ್ನುವ ಮನಸ್ಥಿತಿಯಲ್ಲಿರುತ್ತಾರೆ. ಸಮಾಜದಿಂದ ಹೀಗೆ ಪ್ರತ್ಯೇಕವಾಗಿ ಬದುಕುವುದರಿಂದ, ಇತರರ ಕಷ್ಟ-ಸಂಕಷ್ಟಗಳಿಗೆ ಸ್ಪಂದಿಸುವ ಮಿಡಿತ ತಾನಾಗಿಯೇ ಕುಂಠಿತಗೊಳ್ಳುತ್ತದೆ.
ಸವಲತ್ತುಗಳು ಹೇಗೆ ವ್ಯಕ್ತಿಯಲ್ಲಿ ಅಹಂಕಾರ ಬೆಳೆಸುತ್ತವೆ ಎಂಬುದನ್ನು ಪಿಫ್ ತಮ್ಮ ಪ್ರಸಿದ್ಧ ‘ಮೊನೊಪಲಿ’ ಬೋರ್ಡ್ ಆಟದ ಪ್ರಯೋಗದ ಮೂಲಕ ತೋರಿಸಿಕೊಟ್ಟರು. ಪಿಫ್ ಅವರು ‘ಮೊನೊಪಲಿ’ ಎಂಬ ಜನಪ್ರಿಯ ಆಸ್ತಿ-ವ್ಯವಹಾರದ ಬೋರ್ಡ್ ಆಟವನ್ನು ಬಳಸಿಕೊಂಡು ಒಂದು ಕುತೂಹಲಕಾರಿ ಪ್ರಯೋಗ ಮಾಡಿದರು. ಇದರಲ್ಲಿ ಇಬ್ಬರು ಆಟಗಾರರ ನಡುವೆ ನಾಣ್ಯ ಚಿಮ್ಮಲಾಗುತ್ತದೆ. ಆದರೆ ಉದ್ದೇಶಪೂರ್ವಕವಾಗಿ ಒಬ್ಬ ಆಟಗಾರನಿಗೆ ಎಲ್ಲಾ ಆಟಗಾರರಿಗೆ ಮೊದಲೇ ಎಲ್ಲ ಸವಲತ್ತುಗಳು ಸಿಗುವಂತೆ ಆಟದ ನಿಯಮವನ್ನು ರೂಪಿಸಲಾಗಿರುತ್ತದೆ. ಇದು ಆ ಆಟಗಾರನಿಗೂ ತಿಳಿದಿರುತ್ತದೆ.
ಆ ‘ಶ್ರೀಮಂತ’ ಆಟಗಾರನಿಗೆ ದುಪ್ಪಟ್ಟು ಆರಂಭಿಕ ಹಣ, ಎರಡು ದಾಳಗಳನ್ನು ಉರುಳಿಸುವ ಅವಕಾಶ ಮತ್ತು ಪ್ರತಿ ಸುತ್ತಿಗೂ ಸಾಮಾನ್ಯ ಆಟಗಾರನಿಗಿಂತ ದುಪ್ಪಟ್ಟು ಸಂಭಾವನೆ ಸಿಗುತ್ತಿತ್ತು. ಅಂದರೆ, ಆಟದ ವಿನ್ಯಾಸವೇ ಆ ಒಬ್ಬ ವ್ಯಕ್ತಿ ಗೆಲ್ಲುವಂತೆ ಪೂರ್ವಗ್ರಹಪೀಡಿತವಾಗಿತ್ತು. ಆಟ ಮುಂದುವರಿದಂತೆ ಆ ‘ಶ್ರೀಮಂತ’ ಆಟಗಾರನ ವರ್ತನೆಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡವು:
* ಆತ ಮೇಜಿನ ಮೇಲೆ ತನ್ನ ದಾಳ ಮತ್ತು ಕಾಯಿಗಳನ್ನು ಜೋರಾಗಿ ಶಬ್ದ ಮಾಡುತ್ತಾ ದರ್ಪದಿಂದ ಅಪ್ಪಳಿಸತೊಡಗಿದ.
* ಪಕ್ಕದಲ್ಲಿದ್ದ ಕುರುಕಲು ತಿಂಡಿಗಳನ್ನು ತನಗೆ ಮಾತ್ರ ಮೀಸಲೆಂಬಂತೆ ಹೆಚ್ಚು ಹೆಚ್ಚಾಗಿ ತಿನ್ನಲಾರಂಭಿಸಿದ.
* ಎದುರಾಳಿಯ ಆಟವನ್ನು ಹೀಯಾಳಿಸುತ್ತಾ, ಎಲ್ಲವೂ ತನ್ನ ನಿಯಂತ್ರಣದಲ್ಲಿದೆ ಎಂಬ ಎಂಬ ಉದ್ದಟತನವನ್ನು ತೋರತೊಡಗಿದ.
ಆಟ ಮುಗಿದ ನಂತರ, ”ನೀವು ಹೇಗೆ ಗೆದ್ದಿರಿ?” ಎಂದು ಕೇಳಿದಾಗ ಅಚ್ಚರಿಯ ಸಂಗತಿ ಹೊರಬಿತ್ತು. ಆಟ ಮೊದಲೇ ತನ್ನ ಪರವಾಗಿತ್ತು ಎಂಬ ಸತ್ಯ ತಿಳಿದಿದ್ದರೂ, ಆ ಗೆದ್ದ ಆಟಗಾರರಲ್ಲಿ ಯಾರೂ ತಮ್ಮ ಗೆಲುವಿಗೆ ‘ಟಾಸ್’ ಅಥವಾ ‘ಪಕ್ಷಪಾತದ ನಿಯಮಗಳು’ ಕಾರಣವೆಂದು ಹೇಳಲಿಲ್ಲ! ಬದಲಿಗೆ, ”ನಾನು ಎಂಥ ಚಾಣಾಕ್ಷ ತಂತ್ರಗಳನ್ನು ಬಳಸಿದೆ, ಎಷ್ಟು ಜಾಣತನದಿಂದ ಆಸ್ತಿ ಖರೀದಿಸಿದೆ” ಎಂದು ತಮ್ಮ ಸ್ವಂತ ಬುದ್ಧಿವಂತಿಕೆಯನ್ನೇ ಹಾಡಿಹೊಗಳಿಕೊಂಡರು.
ಇದನ್ನು ಓದಿದ್ದೀರಾ?: SIR | ಕೋಟಿಗಟ್ಟಲೆ ಭಾರತೀಯರ ಮತದ ಹಕ್ಕು ಕಸಿಯುವ ಪ್ರಕ್ರಿಯೆಯನ್ನು ಸಮರ್ಥಿಸಲು ಸಾಧ್ಯವೇ ಇಲ್ಲ: ನ್ಯಾ. ಉಜ್ಜಲ್ ಭುಯಾನ್
ಅಂದರೆ ಕೇವಲ ಆಕಸ್ಮಿಕವಾಗಿ ಅಥವಾ ಸನ್ನಿವೇಶದ ಲಾಭದಿಂದ ಸಿಕ್ಕ ಸವಲತ್ತುಗಳೂ ಸಹ ಮನುಷ್ಯನಲ್ಲಿ “ನಾನು ಯೋಗ್ಯ, ಹಾಗಾಗಿಯೇ ನನಗೆ ಇದು ಸಿಕ್ಕಿದೆ” ಎಂಬ ಹುಸಿ ಅರ್ಹತಾ ಭಾವವನ್ನು ಹುಟ್ಟಿಸುತ್ತವೆ. ಸಂಪತ್ತು ಹೆಚ್ಚಿದಂತೆ, ಯಶಸ್ಸಿಗೆ ಕಾರಣವಾದ ಅದೃಷ್ಟ ಹಾಗೂ ಸಾಮಾಜಿಕ ಅನುಕೂಲಗಳನ್ನು ಮರೆತು ಜನರು ಅಹಂಕಾರ ಬೆಳೆಸಿಕೊಳ್ಳುತ್ತಾರೆ.
ವರ್ಗ ಆಧಾರಿತ ಇಂತಹ ಸ್ವಕೇಂದ್ರಿತ ಧೋರಣೆಗಳು ಬದಲಿಸಲಾಗದ ಗುಣಗಳೇನಲ್ಲ ಎಂಬುದನ್ನೂ ಪಿಫ್ ಸ್ಪಷ್ಟಪಡಿಸುತ್ತಾರೆ. ಶ್ರೀಮಂತ ವ್ಯಕ್ತಿಗಳಿಗೆ ಸಮಾನತೆಯ ಮಹತ್ವವನ್ನು ನೆನಪಿಸಿದಾಗ, ಇತರರ ಸಂಕಷ್ಟಗಳನ್ನು ಅವರದೇ ದೃಷ್ಟಿಕೋನದಿಂದ ನೋಡುವಂತೆ ಪ್ರೇರೇಪಿಸಿದಾಗ, ಅವರಲ್ಲಿನ ದರ್ಪ ಕಡಿಮೆಯಾಗಿ, ಸಹಾನುಭೂತಿ ಮತ್ತು ಸಾಮಾಜಿಕ ಕಾಳಜಿ ಮತ್ತೆ ಮರುಕಳಿಸುವುದು ಎನ್ನುವುದೂ ಕೂಡ ಅವರ ಅಧ್ಯಯನದಲ್ಲಿ ಕಂಡುಬಂದಿದೆ.

ಟಿ.ಎಸ್. ವೇಣುಗೋಪಾಲ್
ಕನ್ನಡದ ಪ್ರಮುಖ ಅರ್ಥಶಾಸ್ತ್ರಜ್ಞರು, ಅಂಕಣಕಾರರು ಹಾಗೂ ಲೇಖಕರು. ಅವರು ದೇಶದ ಆರ್ಥಿಕತೆ, ಜಿಡಿಪಿ (GDP) ಬೆಳವಣಿಗೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತ್ಯಂತರಗಳ ಕುರಿತು ಪ್ರಮುಖ ಮಾಧ್ಯಮಗಳಲ್ಲಿ ನಿಯಮಿತವಾಗಿ ವಿಶ್ಲೇಷಣಾತ್ಮಕ ಲೇಖನಗಳನ್ನು ಬರೆಯುತ್ತಾರೆ.



