ದೆಹಲಿ ಭೇಟಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಬಿ ಕೆ ಹರಿಪ್ರಸಾದ್ ಅವರನ್ನು ಆಹ್ವಾನಿಸಿ ಮಾತನಾಡಿದ್ದಾರೆ ಎಂದರೆ ವಿಷಯ ಆಳವಾಗಿದೆ. ಆ.09ರಂದು ಮೈಸೂರಿನಲ್ಲಿ ನಡೆಯುವ ಜನಾಂದೋಲನ ಸಭೆಗೆ ಹರಿಪ್ರಸಾದ್ ಅವರನ್ನು ಖುದ್ದು ಸಿದ್ದರಾಮಯ್ಯನವರೇ ಆಹ್ವಾನಿಸಿರುವುದರ ಹಿಂದೆ ಏನಿದೆ?
ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದ ಬಳಿಕ ಪರಸ್ಪರ ಮುನಿಸು ಮರೆತು ಮುಖಾಮುಖಿಯಾದ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಮತ್ತು ಸಿಎಂ ಸಿದ್ದರಾಮಯ್ಯ ಸುದೀರ್ಘ ಹೊತ್ತು ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ದು, ಕಾಂಗ್ರೆಸ್ ಪಡಸಾಲೆಯಲ್ಲಿ ಮಹತ್ವ ಪಡೆದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ವಿಷಯ ಇಟ್ಟುಕೊಂಡು ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ತಮ್ಮ ನೇರ ಮಾತುಗಳಿಂದ ಹರಿಪ್ರಸಾದ್ ತಿವಿಯುತ್ತಿದ್ದರು. ಆ ಕಡೆ ಹರಿಪ್ರಸಾದ್ ವಿಚಾರದಲ್ಲಿ ‘ಡೋಂಟ್ ಕೇರ್’ ಎನ್ನುವ ರೀತಿಯಲ್ಲೇ ನಡೆದುಕೊಂಡು ಬಂದರು. ಆದರೆ, ಈಗ ಏಕಾಏಕಿ ಹರಿಪ್ರಸಾದ್‌ರಿಗೆ ಖುದ್ದು ದೂರವಾಣಿ ಮೂಲಕ ಕರೆ ಮಾಡಿ, ಸಿದ್ದರಾಮಯ್ಯ ಕಾವೇರಿ ನಿವಾಸಕ್ಕೆ ಕರೆಯಿಸಿಕೊಂಡು ಚರ್ಚಿಸಿದ್ದಾರೆ. ಸಿದ್ದರಾಮಯ್ಯ ಅವರ ಈ ನಡೆ ಗಮನಿಸಿದರೆ, ಹರಿಪ್ರಸಾದ್ ಅವರ ಅಗತ್ಯ ಕಂಡಿರಬೇಕು, ಇಲ್ಲ ಸಿಎಂ ಸಂಕಷ್ಟದಲ್ಲಿರಬೇಕು ಎಂಬುದು ಅರ್ಥವಾಗುತ್ತದೆ.
ಸಿದ್ದರಾಮಯ್ಯ ಮತ್ತು ಹರಿಪ್ರಸಾದ್ ಕಾಂಗ್ರೆಸ್‌ನೊಳಗೆ ಹಿಂದುಳಿದ ವರ್ಗದ ಮುಂಚೂಣಿ ನಾಯಕರು. 70ರ ದಶಕದಲ್ಲೇ ರಾಜಕೀಯ ಸೇರಿರುವ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಮೂಲ ಮನೆಯಾದರೆ, ಸಿದ್ದರಾಮಯ್ಯನವರಿಗೆ ವಲಸೆ ಮನೆ. ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ 2004ರ ಹೊತ್ತಿಗೆ ಸಿಎಂ ಅಭ್ಯರ್ಥಿಯಾಗಿ ಬಿಂಬಿತರಾಗಿ, ಕೊನೆಗೆ ಅತಂತ್ರ ವಿಧಾನಸಭೆ ರಚನೆಯಾದಾಗ ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾಗುತ್ತದೆ. ಆಗ ಉಪಮುಖ್ಯಮಂತ್ರಿ, ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ ಸಿದ್ದರಾಮಯ್ಯ 2005ರಲ್ಲಿ ಜೆಡಿಎಸ್‌ನಿಂದ ಹೊರಬಂದು, ಅಹಿಂದ ಚಳವಳಿ ಪ್ರಾರಂಭಿಸಿ 2006ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆ.
ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯನವರ ರಾಜಕೀಯ ದಾಳಕ್ಕೆ ಸದಾ ಬಲಿಯಾಗುತ್ತ ಬಂದ ಹಿಂದುಳಿದ ವರ್ಗದ ನಾಯಕರಲ್ಲಿ ಬಿ ಕೆ ಹರಿಪ್ರಸಾದ್ ಕೂಡ ಪ್ರಮುಖರು. ಈಡಿಗ ಸಮುದಾಯದ ಹರಿಪ್ರಸಾದ್ ರಿಗೆ ಸಿಗಬೇಕಾದ ಅವಕಾಶಗಳು ರಾಜ್ಯ ರಾಜಕಾರಣದಲ್ಲಿ ಸಿಗಲಿಲ್ಲ. 2023ರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಾಗ ಹರಿಪ್ರಸಾದ್‌ಗೆ ಪವರ್ ಫುಲ್ ಖಾತೆ ಸಿಗುತ್ತದೆ ಎಂದೇ ಜನ ಭಾವಿಸಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಈಡಿಗ ಸಮುದಾಯ ಕೋಟಾದಲ್ಲಿ ಮಧು ಬಂಗಾರಪ್ಪ ಅವರನ್ನು ಸಿದ್ದರಾಮಯ್ಯ ಸಚಿವರನ್ನಾಗಿ ಮಾಡಿ, ಹರಿಪ್ರಸಾದ್ ಅವರನ್ನು ಹೊರಗಿಟ್ಟ ಸಂಗತಿ ಗುಟ್ಟಾಗಿ ಉಳಿದಿಲ್ಲ.
ಮೂಲ ಕಾಂಗ್ರೆಸ್ಸಿಗರ ವಲಯದಲ್ಲಿ ಬಿ ಕೆ ಹರಿಪ್ರಸಾದ್ ಮತ್ತು ಡಿ ಕೆ ಶಿವಕುಮಾರ್ ಬಹಳ ಆಪ್ತರು. ಡಿಕೆ ಶಿವಕುಮಾರ್ ಅವರು ಹರಿಪ್ರಸಾದ್ ಪರ ಸಚಿವ ಸ್ಥಾನಕ್ಕೆ ಹಠ ಹಿಡಿಯುತ್ತಾರೆ ಎನ್ನಲಾಗಿತ್ತು. ಆದರೆ ತಮ್ಮ ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯರನ್ನು ಎದುರು ಹಾಕಿಕೊಳ್ಳುವುದು ಬೇಡ ಎಂದು ನಿರ್ಧರಿಸಿ, ಹರಿಪ್ರಸಾದ್ ವಿಚಾರದಲ್ಲಿ ಮೌನವಾಗಿ ಉಳಿದರು. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಕೈವಾಡದಿಂದ ಹರಿಪ್ರಸಾದ್ ಕಾಂಗ್ರೆಸ್‌ನಲ್ಲಿ ಬದಿಗೆ ತಳ್ಳಲ್ಪಟ್ಟ ನಾಯಕ ಎಂಬ ಪಟ್ಟ ಕಟ್ಟಿಕೊಳ್ಳಬೇಕಾಯಿತು.
ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಹೊಂದಾಣಿಕೆ ರಾಜಕಾರಣದ ಕುತಂತ್ರ ಅರಿತ ಹರಿಪ್ರಸಾದ್, ನಂತರ ಸರ್ಕಾರದ ವಿರುದ್ಧ ಚಾಟಿ ಬೀಸಲು ಆರಂಭಿಸಿದರು. ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದರು. ಅಲ್ಲಿಂದ ಸರ್ಕಾರ ಮತ್ತು ಪಕ್ಷದ ವಿಚಾರದಲ್ಲಿ ಅಂತರ ಕಾಯ್ದುಕೊಂಡು ದೂರ ಉಳಿದರು.
ಸರ್ಕಾರದಲ್ಲಿ ಕೇಳಿಬಂದ ನೌಕರರ ವರ್ಗಾವಣೆ ದಂಧೆ, ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಅಕ್ರಮ ವರ್ಗಾವಣೆ ಹಾಗೂ ಮುಡಾ ಹಗರಣವನ್ನು ಪ್ರತಿಪಕ್ಷಗಳು ಅಸ್ತ್ರವನ್ನಾಗಿ ಮಾಡಿಕೊಂಡು ಸಿದ್ದರಾಮಯ್ಯನವರ ತಲೆದಂಡಕ್ಕೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿವೆ. ಪ್ರತಿಪಕ್ಷಗಳು ಸಿದ್ದರಾಮಯ್ಯ ಅವರಿಗೆ ಎಷ್ಟು ಮಸಿ ಬಳಿಯಬೇಕೋ ಅಷ್ಟು ಮಸಿ ಬಳಿದಾಗಿದೆ. ದುರದೃಷ್ಟಕರ ಸಂಗತಿ ಎಂದರೆ, ಮುಖ್ಯಮಂತ್ರಿಯವರನ್ನು ಸಮರ್ಥಿಸಿಕೊಳ್ಳುವಲ್ಲಿ ಇಡೀ ಸಚಿವ ಸಂಪುಟ ವಿಫಲವಾಗಿದೆ. ಡಿಕೆಶಿಯಂತೂ ಕುಮಾರಸ್ವಾಮಿಯವರನ್ನು ಹಣಿಯುವುದಕ್ಕಷ್ಟೇ ಸೀಮಿತವಾಗಿದ್ದಾರೆ.
ಬಿಜೆಪಿ ಮತ್ತು ಸಂಘಪರಿವಾರದ ಜನವಿರೋಧಿ ಕೃತ್ಯಗಳನ್ನು ಖಡಕ್ ಆಗಿ ಮತ್ತು ತೀಕ್ಷ್ಣವಾಗಿ ವಿರೋಧಿಸುವ ಹಾಗೂ ಬಿಜೆಪಿ ಆರೋಪಗಳಿಗೆ ತಕ್ಕ ಉತ್ತರ ನೀಡುವ ನಾಯಕರಲ್ಲಿ ಸಿದ್ದರಾಮಯ್ಯರಷ್ಟೇ ಹರಿಪ್ರಸಾದ್ ಸಮರ್ಥರು.
ಮೈಸೂರಿನಲ್ಲಿ ಶುಕ್ರವಾರ ನಡೆಯಲಿರುವ ಜನಾಂದೋಲನ ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳುವ ಗಟ್ಟಿಧ್ವನಿಯೊಂದು ಬೇಕಿದೆ. ಹೀಗಾಗಿಯೇ ತಮ್ಮ ಪರವಾಗಿ ಬಿಜೆಪಿ ಆರೋಪಗಳಿಗೆ ಎದುರೇಟು ನೀಡಲು ಬಿ ಕೆ ಹರಿಪ್ರಸಾದ್ ಅರ್ಹರು ಎಂಬುದನ್ನು ಸಿದ್ದರಾಮಯ್ಯ ಅರಿತಂತಿದೆ. ಜೊತೆಗೆ ಹೈಕಮಾಂಡ್ ಕೂಡ ಹರಿಪ್ರಸಾದ್ ಪರವಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ಹರಿಪ್ರಸಾದ್ ರನ್ನು ಕರೆದು ಮಾತನಾಡಿಸಿದ್ದಾರೆ. ಅಲ್ಲದೇ, ಆ.09ರಂದು ನಡೆಯುವ ಜನಾಂದೋಲನ ಸಭೆಗೆ ಹರಿಪ್ರಸಾದ್ ಅವರನ್ನು ಖುದ್ದು ಆಹ್ವಾನಿಸಿದ್ದಾರೆ. ಮಾತನಾಡಿಸುವ ನಿಟ್ಟಿನಲ್ಲಿ ಪಕ್ಷ, ಸರ್ಕಾರ ಮತ್ತು ವಿರೋಧ ಪಕ್ಷಗಳ ಪಾದಯಾತ್ರೆಯಂತಹ ಹಲವು ವಿಚಾರಗಳನ್ನು ಕ್ಲೋಸ್ ಡೋರ್ ಮೀಟಿಂಗ್‌ನಲ್ಲಿ ಹಂಚಿಕೊಂಡಿದ್ದಾರೆ ಎಂಬ ಸಂಗತಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಬಿ ಕೆ ಹರಿಪ್ರಸಾದ್ ಶಕ್ತಿ ಏನು ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿದೆ. 45 ವರ್ಷದ ರಾಜಕೀಯ ಅನುಭವ ಇರುವ ಹರಿಪ್ರಸಾದ್ ಹೈಕಮಾಂಡ್ ಮತ್ತು ಗಾಂಧಿ ಕುಟುಂಬದ ನಂಬಿಕಸ್ಥ ನಾಯಕ. 19 ರಾಜ್ಯಗಳ ಎಐಸಿಸಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದವರು. ಹರಿಪ್ರಸಾದ್ ಶಿಫಾರಸ್ಸಿನ ಮೇರೆಗೆ ಬೇರೆ ಬೇರೆ ರಾಜ್ಯಗಳಲ್ಲಿ ಮುಖ್ಯಮಂತ್ರಿಯಾದವರೂ ಇದ್ದಾರೆ. ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಅಧಿಕಾರಕ್ಕಾಗಿ ಹರಿಪ್ರಸಾದ್ ಲಾಬಿ ಮಾಡಿದ್ದಿಲ್ಲ. ಕೈ-ಬಾಯಿ ಕೆಡಿಸಿಕೊಂಡವರು ಅಲ್ಲ. ಪಕ್ಷನಿಷ್ಠೆ, ಸೈದ್ದಾಂತಿಕ ಬದ್ಧತೆ ಇರುವ ವ್ಯಕ್ತಿ. ಶೋಷಿತರ ಪರವಾಗಿ ದಿಟ್ಟದನಿಯಾಗುವ ಹರಿಪ್ರಸಾದ್ ಅವರದು ಎಂದೂ ರಾಜಿಯಾಗದ ವ್ಯಕ್ತಿತ್ವ.
2004ರಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸೋನಿಯಾ ಗಾಂಧಿ ಅವರೇ ಮನಮೋಹನ್ ಸಿಂಗ್ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ ಹರಿಪ್ರಸಾದ್ ಹೆಸರು ಸೂಚಿಸಿದ್ದರು. ಆದರೆ, ಸೋನಿಯಾ ಗಾಂಧಿ ಇರದ ಸಚಿವ ಸಂಪುಟದಲ್ಲಿ ನಾನಿರಲ್ಲ ಎಂದು ಸಚಿವ ಸ್ಥಾನ ತಿರಸ್ಕರಿಸಿ ಹೊರಬಂದವರು.
ಸೋನಿಯಾ ಗಾಂಧಿ ಅವರಿಗೆ ಬಿ ಕೆ ಹರಿಪ್ರಸಾದ್ ಅಷ್ಟು ನಂಬಿಕಸ್ಥ ನಾಯಕರಾಗಿ ಹತ್ತಿರವಾಗಲು ಅವರು ಪಕ್ಷಕ್ಕೆ ನೀಡಿದ ಕೊಡುಗೆ ಮತ್ತು ಪಕ್ಷದ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ರೀತಿಯೇ ಕಾರಣ. 1978ರಲ್ಲಿ ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಲೋಕಸಭೆಗೆ ಸ್ಪರ್ಧಿಸಿದಾಗ, ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಬಿ ಕೆ ಹರಿಪ್ರಸಾದ್ ಮುಖ್ಯಮಂತ್ರಿ ದೇವರಾಜ ಅರಸು ಸೂಚನೆ ಮೇರೆಗೆ ಬೆಂಗಳೂರಿನಿಂದ ನೂರಾರು ಜನರನ್ನು ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಿ ಇಂದಿರಾ ಗಾಂಧಿ ಪರ ಚುನಾವಣೆಯಲ್ಲಿ ಕೆಲಸ ಮಾಡಿದ್ದರು.
ಆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಗೆದ್ದ ನಂತರ ಸ್ವತಃ ಸಂಜಯ್ ಗಾಂಧಿ ಅವರು ಹರಿಪ್ರಸಾದ್ ಕೆಲಸ ನೋಡಿ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದುಕೊಂಡು ಹೋಗುತ್ತಾರೆ. ಹರಿಪ್ರಸಾದ್‌ಗೆ ರಾಜಕೀಯ ಗುರು ಯಾರಾದರೂ ಇದ್ದರೆ ಅದು ಸಂಜಯ್ ಗಾಂಧಿ ಎಂಬುದು ಹರಿಪ್ರಸಾದ್ ಅವರೇ ಹೇಳುವ ಮಾತು.
ರಾಜೀವ್ ಗಾಂಧಿ 1991ರಲ್ಲಿ ಲೋಕಸಭೆ ಚುನಾವಣೆ ವೇಳೆ ತಮಿಳುನಾಡಿನ ಪೆರಂಬದೂರಿಗೆ ಬಹಿರಂಗ ಚುನಾವಣಾ ಭಾಷಣ ಮಾಡಲು ಹೋದ ವೇಳೆ ಶ್ರೀಲಂಕಾದ ಎಲ್.ಟಿ.ಟಿ.ಇ ಮಾನವ ಬಾಂಬ್ ದಾಳಿಗೆ ರಾಜೀವ್ ಗಾಂಧಿ ಕ್ರೂರವಾಗಿ ಸಾವನ್ನಪ್ಪುತ್ತಾರೆ. ರಾಜೀವ್ ಗಾಂಧಿ ಸಾಯುವ ನಾಲ್ಕು ದಿನ ಮುಂಚೆ ಕಾಂಗ್ರೆಸ್ ಪಾರ್ಟಿ ಫಂಡ್ ನೇರವಾಗಿ ಬಿ ಕೆ ಹರಿಪ್ರಸಾದ್ ಮನೆ ಸೇರಿರುತ್ತೆ. ಮೂರು ತಿಂಗಳು ನಂತರ ಆ ಹಣವನ್ನು ಸೋನಿಯಾ ಗಾಂಧಿಗೆ ತಲುಪಿಸಿ ಹರಿಪ್ರಸಾದ್ ಪ್ರಾಮಾಣಿಕತೆ ಮೆರೆಯುತ್ತಾರೆ. ಹೀಗೆ ತಮ್ಮ ಪ್ರಾಮಾಣಿಕ ನಡೆ ಮೂಲಕ ಗಾಂಧಿ ಕುಟುಂಬಕ್ಕೆ ಹರಿಪ್ರಸಾದ್ ಹತ್ತಿರವಾಗುತ್ತಾರೆ.
ಇಂತಹ ಹರಿಪ್ರಸಾದ್‌ಗೆ ಸಚಿವ ಸ್ಥಾನ ಕೊಡಬೇಕು ಎಂಬುದು ಹೈಕಮಾಂಡ್ ನಿಲುವು. ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ದಿಲ್ಲಿಗೆ ತೆರಳಿ ಹೈಕಮಾಂಡ್ ಭೇಟಿಯಾದ ಸಂದರ್ಭದಲ್ಲೇ ಹರಿಪ್ರಸಾದ್ ಕೂಡ ಹೈಕಮಾಂಡ್ ಭೇಟಿ ಮಾಡಿ ರಾಜ್ಯ ರಾಜಕೀಯ ವಿದ್ಯಮಾನಗಳ ವರದಿ ಒಪ್ಪಿಸಿದ್ದರು. ಸಿಎಂ, ಡಿಸಿಎಂ ಕರ್ನಾಟಕಕ್ಕೆ ಮರಳಿದ್ದರೂ ಹರಿಪ್ರಸಾದ್ ಮಾತ್ರ ದಿಲ್ಲಿಯಲ್ಲೇ ಬೀಡು ಬಿಟ್ಟಿದ್ದರು. ಸ್ವತಃ ಸೋನಿಯಾ ಗಾಂಧಿ ಅವರೇ ಹರಿಪ್ರಸಾದ್ ಅವರನ್ನು ಕರೆಯಿಸಿಕೊಂಡಿದ್ದರು ಎನ್ನುವ ಮಾತಿದೆ. ರಾಹುಲ್ ಗಾಂಧಿ ಕೂಡ ಹರಿಪ್ರಸಾದ್‌ರಿಗೆ ಸಚಿಸ ಸ್ಥಾನ ಸಿಗದಿರುವುದಕ್ಕೆ ಕ್ಷಮೆ ಕೇಳಿ, ಬೇಸರ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಇದೆ.
ಈಗ ದೆಹಲಿ ಭೇಟಿ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಹರಿಪ್ರಸಾದ್ ಅವರನ್ನು ಆಹ್ವಾನಿಸಿ ಮಾತನಾಡಿದ್ದಾರೆ ಎಂದರೆ ವಿಷಯ ಆಳವಾಗಿದೆ. ಬಿ ಕೆ ಹರಿಪ್ರಸಾದ್‌ರಿಗೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಸ್ಥಾನಮಾನ ದೊರೆಯುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ರೀತಿ ಹರಿಪ್ರಸಾದ್ ನೇರ ಚುನಾವಣೆಗಳನ್ನು ಎದುರಿಸಿ ಗೆದ್ದವರಲ್ಲ. ತಮ್ಮದೇ ಆದ ಗುಂಪು ಕಟ್ಟಿಕೊಂಡವರೂ ಅಲ್ಲ. ಜನಪ್ರಿಯ ನಾಯಕರಾಗಿ ಹೊರಹೊಮ್ಮಿದವರೂ ಅಲ್ಲ. ಇದು ಹರಿಪ್ರಸಾದ್ ಅವರ ಲಿಮಿಟೇಷನ್. ಇದರಾಚೆಗೆ ಅವರ ಪಕ್ಷನಿಷ್ಠ, ಸೈದ್ಧಾಂತಿಕ ನಿಲುವು, ಬುದ್ಧಿವಂತಿಕೆ, ಯೋಗ್ಯತೆಗಳನ್ನು ಪ್ರಶ್ನಿಸುವಂತಿಲ್ಲ. ಇಂತಹವರನ್ನು ಮಂತ್ರಿ ಮಾಡುವುದರಿಂದ ಅಥವಾ ಪಕ್ಷದಲ್ಲಿ ಮುಖ್ಯಸ್ಥಾನ-ಮಾನ ನೀಡುವುದರಿಂದ ಪಕ್ಷಕ್ಕೆ ಲಾಭವಿದೆ. ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಗಮನಕ್ಕೂ ಬಂದಿರಬಹುದು.