- ನಮ್ಮ ತಂದೆಯ ಕೊನೆ ಚುನಾವಣೆ – ಇಲ್ಲಿಂದಲೇ ಸ್ಪರ್ಧಿಸಬೇಕೆಂಬುದು ಕ್ಷೇತ್ರದ ಜನರ ಬಯಕೆ
- ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳಿಗೆ ತೆರೆ ಎಳೆದ ಯತೀಂದ್ರ ಸಿದ್ದರಾಮಯ್ಯ
ನಾನು ಈ ಬಾರಿ ವರುಣಾ ಸೇರಿದಂತೆ ರಾಜ್ಯದ ಯಾವ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವುದಿಲ್ಲ ಎಂದು ವರುಣಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿಗೆ ಕಾರ್ಯಕ್ರಮ ನಿಮಿತ್ತ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಈ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರ ಮಾತ್ರವಲ್ಲದೇ ರಾಜ್ಯದ ಯಾವ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವುದಿಲ್ಲ, ಕೇವಲ ತಂದೆ ಪರವಾಗಿ ಪ್ರಚಾರ ಶುರು ಮಾಡುತ್ತೇನೆ. ಕಳೆದ ಜನವರಿಯಿಂದಲೇ ಪ್ರಚಾರ ನಡೆಸಿದ್ದೇನೆ” ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ವರುಣಾದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವಿಷಯ ಬಂದ ಮೇಲೆ ಅಲ್ಲಿನ ಹಾಲಿ ಶಾಸಕ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು.
ಇದಕ್ಕೆ ಸ್ಪಷ್ಟನೆ ನೀಡಿರುವ ಯತೀಂದ್ರ ಸಿದ್ದರಾಮಯ್ಯ, ನಾನು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? : ನನ್ನನ್ನ ಅಸಿಂಧುಗೊಳಿಸಲಾಗಿದೆಯೇ ಹೊರತು, ಅನರ್ಹಗೊಳಿಸಿಲ್ಲ: ಶಾಸಕ ಗೌರಿಶಂಕರ್ ಸ್ಪಷ್ಟನೆ
“ವರುಣಾ ಕ್ಷೇತ್ರವು ಈ ಕ್ಷೇತ್ರದ ಮತದಾರರಿಗೆ ಸೇರಿದೆಯೇ ವಿನಃ, ಯಾವುದೇ ವ್ಯಕ್ತಿಗೆ ಸೇರಿಲ್ಲ. ನಾನು ನನ್ನ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿಲ್ಲ. ಇದು ನಮ್ಮ ತಂದೆಯ ಕೊನೆ ಚುನಾವಣೆ ಆಗಿರುವುದರಿಂದ ಇಲ್ಲಿಯೇ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂಬುದು ಇಲ್ಲಿನ ಜನರ ಅಭಿಪ್ರಾಯವಾಗಿದೆ” ಎಂದು ತಿಳಿಸಿದರು.
ಬಿ ವೈ ವಿಜಯೇಂದ್ರ ಅವರು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ವಿಚಾರದ ಬಗ್ಗೆ ಮಾತನಾಡಿ, “ವಿಜಯೇಂದ್ರ ಸೇರಿದಂತೆ ಯಾರೇ ಸ್ಪರ್ಧಿಸಿದರೂ ನಾವು ಎದುರಿಸಲು ಸಿದ್ಧರಾಗಿದ್ದೇವೆ. ವರುಣಾ ಕ್ಷೇತ್ರದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಈ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದೆ” ಎಂದು ತಿಳಿಸಿದರು.